ADVERTISEMENT

Prajavani Live: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ಕನ್ನಡಿಗರೊಂದಿಗೆ ಸಂವಾದ

ಪ್ರಜಾವಾಣಿ ವಿಶೇಷ
Published 25 ಸೆಪ್ಟೆಂಬರ್ 2021, 20:11 IST
Last Updated 25 ಸೆಪ್ಟೆಂಬರ್ 2021, 20:11 IST
ಲೈವ್‌ ಕಾರ್ಯಕ್ರಮ
ಲೈವ್‌ ಕಾರ್ಯಕ್ರಮ    

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ 77ನೇ ರ‍್ಯಾಂಕ್‌ ಪಡೆದಿರುವ ಅಕ್ಷಯ್‌ ಸಿಂಹ ಕೆ.ಜೆ. ಮತ್ತು 252ನೇ ರ‍್ಯಾಂಕ್‌ ಪಡೆದಿರುವ ಅನಿರುದ್ಧ ಜಿ. ಗಂಗಾವರಂ ‘ಪ್ರಜಾವಾಣಿ’ ಶನಿವಾರ ನಡೆಸಿದ ‘ಸೆಲೆಬ್ರಿಟಿ ಲೈವ್‌’ ನೇರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಅನುಭವಗಳನ್ನು ಹಂಚಿಕೊಂಡರು. ಇಬ್ಬರ ಮಾತಿನ ಸಂಕ್ಷಿಪ್ತ ರೂಪ ಇಲ್ಲಿದೆ.

ಗುಣಮಟ್ಟದ ಓದು, ಬರಹವೇ ಯಶಸ್ಸಿನ ಸಾಧನ
ನನ್ನ ತಂದೆ ಕಸ್ಟಮ್ಸ್‌ನಲ್ಲಿ ಸಹಾಯಕ ಆಯುಕ್ತರಾಗಿ ನಿವೃತ್ತರಾಗಿದ್ದಾರೆ. ಗೃಹಿಣಿಯಾಗಿರುವ ತಾಯಿ, ಅಣ್ಣ ಎಲ್ಲರ ನಿರಂತರ ಬೆಂಬಲ ಇತ್ತು. ದೊಡ್ಡಪ್ಪ ನಾಲ್ಕು ವರ್ಷಗಳಿಂದ ನನಗೆ ಮಾರ್ಗದರ್ಶನ ನೀಡಿದರು. ಮೊದಲ ಬಾರಿ ಅನುತ್ತೀರ್ಣನಾದರೂ ಎರಡನೇ ಪ್ರಯತ್ನದಲ್ಲಿ ಯಶಸ್ಸು ಲಭಿಸಿತು. ಕುಟುಂಬದಲ್ಲೇ ಅಧಿಕಾರಿಗಳಿದ್ದ ಕಾರಣ ಪದವಿ ಶಿಕ್ಷಣದ ಬಳಿಕ ನಾಗರಿಕ ಸೇವಾ ಪರೀಕ್ಷೆಯತ್ತ ಹೊರಳಿದೆ.

ಇನ್‌ಸೈಟ್ಸ್‌–ಐಎಎಸ್‌ ಸಂಸ್ಥೆಯ ವಿನಯಕುಮಾರ್‌ ಅವರ ತರಬೇತಿ ಮತ್ತು ಮಾರ್ಗದರ್ಶನ ನನ್ನ ಯಶಸ್ಸಿಗೆ ಮುಖ್ಯ ಕಾರಣ. ನಾನು ಕನ್ನಡವನ್ನು ಐಚ್ಛಿಕ ವಿಷಯವನ್ನಾಗಿ ಆಯ್ದುಕೊಂಡು ಪರೀಕ್ಷೆ ಬರೆದಿದ್ದೆ. ಮೊದಲು ವಾಸುದೇವ ನಾಡಿಗ್, ಜೈಸ್‌ ಅಕಾಡೆಮಿಯ ವೆಂಕಟೇಶಪ್ಪ ಅವರ ತರಬೇತಿಯೇ ಕನ್ನಡದಲ್ಲಿ ಗುರಿ ಮುಟ್ಟಲು ಮುಖ್ಯ ಕಾರಣ.

ADVERTISEMENT

ಚಿಕ್ಕ ವಯಸ್ಸಿನಿಂದಲೂ ದಿನಪತ್ರಿಕೆ ಓದುವುದು ಮತ್ತು ಸುದ್ದಿವಾಹಿನಿಗಳ ವೀಕ್ಷಣೆಯಿಂದ ನಮ್ಮ ಯೋಚನಾ ವಿಧಾನವೇ ಬದಲಾಗುತ್ತದೆ. ಪದವಿ ಮುಗಿಯುವ ಹೊತ್ತಿಗೆ ನಾವು ಮಾನಸಿಕವಾಗಿ ಪರೀಕ್ಷೆಗೆ ಸಿದ್ಧವಾಗಿರುತ್ತೇವೆ. ಆಸಕ್ತಿ ಮುಖ್ಯ. ಪದವಿ ಹಂತದಲ್ಲಿ ಓದದ ವಿಷಯವನ್ನು ಆಯ್ಕೆ ಮಾಡಿದರೆ ತೊಂದರೆ ಆಗುತ್ತದೆ ಎನ್ನುವುದು ನಿಜವಲ್ಲ. ಹೆಚ್ಚು ಸಮಯ ಮೀಸಲಿಡುವುದಕ್ಕಿಂತಲೂ ಗುಣಮಟ್ಟದ ಓದು ಈ ವಿಷಯದಲ್ಲಿ ಪ್ರಯೋಜನಕಾರಿ.

ಓದುವುದರ ಜತೆಯಲ್ಲೇ ಬರೆಯುವುದನ್ನೂ ರೂಢಿಸಿಕೊಳ್ಳಬೇಕು. ನಾವು ಪರೀಕ್ಷೆ ಬರೆಯುವುದಕ್ಕಾಗಿ ಒಂದು ಭಾಷೆಯನ್ನು ಕಲಿತರೆ ಅನುಕೂಲವಾಗುವುದಿಲ್ಲ. ಸಹಜವಾಗಿ ನಮಗೆ ಹೆಚ್ಚು ಹಿಡಿತವಿರುವ ಮತ್ತು ಪ್ರಭಾವಶಾಲಿಯಾಗಿ ಅಭಿವ್ಯಕ್ತಿಸಲು ಸಾಧ್ಯವಿರುವ ಭಾಷೆಯಲ್ಲೇ ಪರೀಕ್ಷೆ ಬರೆಯುವುದು ಸೂಕ್ತ.

ದೆಹಲಿಯಲ್ಲೇ ತರಬೇತಿ ಪಡೆಯಬೇಕು ಎಂಬ ವಾದದಲ್ಲಿ ಹುರುಳಿಲ್ಲ. ಇನ್ನು ಕೆಲವು ವರ್ಷಗಳಲ್ಲಿ ಯಾವುದೇ ಭಾಗದಲ್ಲಿ ಕುಳಿತು ಬೇಕಿದ್ದರೂ ಪರೀಕ್ಷಾ ತಯಾರಿ ನಡೆಸಬಹುದು. ಸ್ವಂತ ಪರಿಶ್ರಮದಿಂದಲೇ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಇದ್ದಾರೆ. ಆದರೆ, ತರಬೇತಿ ಸಂಸ್ಥೆಯಲ್ಲಿ ಮಾರ್ಗದರ್ಶನ ಪಡೆದರೆ ಬೇಗ ಗುರಿ ತಲುಪಲು ಸಾಧ್ಯ ಎಂಬುದು ನನ್ನ ಅನುಭವ.

ಬೇರೆ ಬೇರೆ ದೇಶಗಳನ್ನು ಅರಿಯುವುದು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿನಿಧಿಯಾಗಿ ಕೆಲಸ ಮಾಡುವ ಇಚ್ಛೆಯಿಂದ ವಿದೇಶಾಂಗ ಸೇವೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಪಾರದರ್ಶಕವಾಗಿ, ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವುದೇ ನಮ್ಮ ಮುಂದಿರುವ ಆದರ್ಶ.

ಯುಪಿಎಸ್‌ಸಿ ರೀತಿಯಲ್ಲಿ ಕೆಪಿಎಸ್‌ಸಿ ಕೂಡ ಆಗಬೇಕು. ಆಯೋಗಕ್ಕೆ ಶುದ್ಧಹಸ್ತರು ಮತ್ತು ತಜ್ಞರನ್ನು ನೇಮಿಸಿದರೆ ಕಳಂಕರಹಿತವಾಗಿ ನೇಮಕಾತಿ ನಡೆಯಲು ಸಾಧ್ಯ.
– ಅಕ್ಷಯ್‌ ಸಿಂಹ ಕೆ.ಜೆ.

ಉಳಿದೆಲ್ಲವನ್ನೂ ಮರೆತು ತಯಾರಿ ನಡೆಸಬೇಕು
ನಮ್ಮದು ಪುಸ್ತಕ ವ್ಯಾಪಾರದಲ್ಲಿ ತೊಡಗಿರುವ ಕುಟುಂಬ. ಈಗ ಅಮ್ಮ ಅಂಗಡಿ ನಡೆಸುತ್ತಿದ್ದು, ಬಿಬಿಎ ಮುಗಿದ ಬಳಿಕ ನಾನು ಸಹಾಯಕ್ಕೆ ನಿಂತಿದ್ದೆ. ನಮ್ಮ ಕುಟುಂಬದಲ್ಲಿ ಯಾರೂ ಅಧಿಕಾರಿಗಳಿಲ್ಲ. ಸರ್ಕಾರಿ ಸೇವೆಗೆ ಸೇರುತ್ತಿರುವವರಲ್ಲಿ ನಾನು ಮೊದಲಿಗ. ಎಂಟನೇ ತರಗತಿಯಿಂದಲೇ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಪಿಯುಸಿ ಉಪನ್ಯಾಸಕಿ ವಾಣಿಶ್ರೀ ಅವರು ನನಗೆ ಯುಪಿಎಸ್‌ಸಿ ಪರೀಕ್ಷೆ ಬರೆಯುವಂತೆ ಸಲಹೆ ನೀಡಿದ್ದರು. ಅದೇ ಪ್ರೇರಣೆಯಿಂದ ತಯಾರಿ ನಡೆಸಿದೆ. ಅಮ್ಮ, ಕುಟುಂಬದವರು ಬೆಂಬಲವಾಗಿ ನಿಂತಿದ್ದರಿಂದ ಎರಡನೇ ಪ್ರಯತ್ನದಲ್ಲಿ ಯಶಸ್ಸು ಸಾಧ್ಯವಾಯಿತು.

ನಾನು ವಾಣಿಜ್ಯ ವಿಷಯ ಆಯ್ಕೆ ಮಾಡಿಕೊಂಡಿದ್ದೆ. ಇನ್‌ಸೈಟ್ಸ್‌–ಐಎಎಸ್‌ನಲ್ಲಿ ವಿನಯಕುಮಾರ್‌ ಮತ್ತು ಸುಧೀರ್‌ ಅವರ ತರಬೇತಿ, ಮಾರ್ಗದರ್ಶನದಿಂದ ಹೆಚ್ಚು ಅನುಕೂಲವಾಯಿತು. ವಾಣಿಜ್ಯ ವಿಷಯಕ್ಕೆ ಸೀಮಿತವಾಗಿ ದೆಹಲಿಯ ರ‍್ಯಾಂಕರ್ಸ್‌ ಕೋಚಿಂಗ್‌ ಸೆಂಟರ್‌ನಲ್ಲಿ ತರಬೇತಿ ಪಡೆದಿದ್ದೆ. ಇದರಿಂದ ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಾಧ್ಯವಾಯಿತು.

ಶಾಲಾ ಶಿಕ್ಷಣದ ಹಂತದಿಂದಲೇ ದಿನಪತ್ರಿಕೆಗಳನ್ನು ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಚರ್ಚೆ, ಸಂವಾದ, ಸಮಕಾಲೀನ ವಿಚಾರಗಳ ಕುರಿತು ವಿಶ್ಲೇಷಣಾತ್ಮಕವಾಗಿ ಯೋಚಿಸುವುದರಿಂದ ನಾವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಲು ಸಾಧ್ಯ. ಪದವಿ ಶಿಕ್ಷಣದ ಹಂತದಲ್ಲಿನ ಓದು ಬಹಳ ಮುಖ್ಯ. ಗಂಭೀರವಾಗಿ ಓದುವುದು ಅಭ್ಯಾಸವಾದರೆ ಪರೀಕ್ಷೆ ಎದುರಿಸುವುದುಸುಲಭ.

ನಮಗೆ ಹಿಡಿತವಿರುವ ಮತ್ತು ಸುಲಭವಾಗಿ ಬಳಕೆ ಮಾಡಲು ಸಾಧ್ಯವಿರುವ ಭಾಷೆಯಲ್ಲೇ ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕು. ವಿಷಯಗಳ ಆಯ್ಕೆಯಲ್ಲೂ ಇದೇ ಮಾನದಂಡ ಆಗಬೇಕು. ಪದವಿಯಲ್ಲಿ ಓದಿದ ವಿಷಯಗಳೇ ಆಗಿದ್ದರೆ ಹೆಚ್ಚು ಅನುಕೂಲ ಆಗುತ್ತದೆ. ಒಮ್ಮೆ ಪರೀಕ್ಷೆಗೆ ತಯಾರಿ ಆರಂಭಿಸಿದರೆ ಉಳಿದ ಎಲ್ಲವನ್ನೂ ಮರೆತು ಅದರಲ್ಲೇ ಮುಂದುವರಿಯುವ ಏಕಾಗ್ರತೆಯನ್ನು ಸಾಧಿಸಿಕೊಳ್ಳುವುದರಿಂದ ಯಶಸ್ಸು ಲಭಿಸಲು ಸಾಧ್ಯ.

ನನ್ನ ರ‍್ಯಾಂಕಿಂಗ್‌ ಆಧಾರದಲ್ಲಿ ಭಾರತೀಯ ಕಂದಾಯ ಸೇವೆ ಅಡಿಯಲ್ಲಿ ಕಸ್ಟಮ್ಸ್‌ ಇಲಾಖೆಯಲ್ಲಿ ಹುದ್ದೆ ದೊರಕುವ ಸಾಧ್ಯತೆ ಇದೆ. ಕಸ್ಟಮ್ಸ್‌ ಇಲಾಖೆಯಲ್ಲಿ ದೇಶದ ಒಳಿತಿಗಾಗಿ ಕೆಲಸ ಮಾಡಲು ಸಾಕಷ್ಟು ಅವಕಾಶಗಳಿವೆ. ಕಾನೂನಿನ ಚೌಕಟ್ಟಿನಲ್ಲಿ ಜನರ ಜೀವನಮಟ್ಟ ಸುಧಾರಣೆಗೆ ಪೂರಕವಾಗಿ ಕೆಲಸ ಮಾಡುವುದೇ ನನ್ನ ಗುರಿ.
– ಅನಿರುದ್ಧ ಜಿ. ಗಂಗಾವರಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.