ADVERTISEMENT

ಪದವಿ ಜೊತೆ ಕೌಶಲಕ್ಕೂ ಆದ್ಯತೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 19:30 IST
Last Updated 23 ಏಪ್ರಿಲ್ 2019, 19:30 IST
   

ಇಡೀ ಪ್ರಪಂಚದ ಮಾರುಕಟ್ಟೆಯಲ್ಲಿ ಈಗ ರಿಟೇಲ್ ಉದ್ಯಮಕ್ಕೆ ಆರ್ಥಿಕ ಉಚ್ಛ್ರಾಯದ ಪರ್ವಕಾಲ. ರಿಟೇಲ್ ಮಾರ್ಕೆಟ್ ಅಥವಾ ಚಿಲ್ಲರೆ ಮಾರುಕಟ್ಟೆ ಇಂದಿನ ವ್ಯಾಪಾರ ವಹಿವಾಟುಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿರುವ ಉದ್ಯಮ. ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬಕ್ಕೆ ದಿನನಿತ್ಯದ ಜೀವನಕ್ಕೆ ಅಗತ್ಯವಿರುವ ಸರಕು ಸೇವೆಗಳನ್ನು ವರ್ಷದ ಹನ್ನೆರಡು ತಿಂಗಳುಗಳ ಕಾಲ ನಿರಂತರವಾಗಿ ನೀಡುವ ಮಹತ್ತರ ಜವಾಬ್ದಾರಿ ಹಾಗೂ ವಹಿವಾಟು ಈ ಉದ್ಯಮದ್ದಾಗಿದೆ. ಹಾಗೆಯೇ ಒಂದು ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಹಾಗೂ ನಿವ್ವಳ ದೇಶೀಯ ಉತ್ಪನ್ನಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ.

ಈ ರೀಟೇಲ್ ಕ್ಷೇತ್ರ ಕೌಶಲ ಹೊಂದಿರುವ ವೃತ್ತಿಪರರನ್ನು ಕೈಬೀಸಿ ಕರೆಯುತ್ತಿದೆ. ಈ ಕ್ಷೇತ್ರದ ವೈಶಿಷ್ಟ್ಯವೇನೆಂದರೆ ಅತ್ಯಂತ ಕನಿಷ್ಠ ಮಟ್ಟದ ಕೌಶಲ ಹಾಗೂ ವಿದ್ಯಾರ್ಹತೆ ಹೊಂದಿರುವ ವ್ಯಕ್ತಿಗಳಿಂದ ಹಿಡಿದು, ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ಹಾಗೂ ರೀಟೇಲ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಹಾಗೂ ಉತ್ಕೃಷ್ಟ ಕೌಶಲಗಳನ್ನು ತಮ್ಮದಾಗಿಸಿಕೊಂಡ ವ್ಯಕ್ತಿಗಳಿಗೂ ಕೂಡ ಉದ್ಯೋಗಾವಕಾಶಗಳು ಸಿಗುವ ಭರವಸೆಯಿದೆ.

ಕೋರ್ಸ್‌ಗಳು

ADVERTISEMENT

ಕ್ಷೇತ್ರದಲ್ಲಿ ಪರಿಣಾಮಕಾರಿ ಕಾರ್ಯ ನಿರ್ವಹಿಸಿ ಕಂಪನಿಗಳಿಗೆ ಲಾಭ ತಂದುಕೊಡುವ ವ್ಯವಸ್ಥಾಪಕರನ್ನು ಬೆಳೆಸುವ ಮಹತ್ತರ ಜವಾಬ್ದಾರಿ ಎಂಬಿಎ ಇನ್‌ ರಿಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ನದ್ದಾಗಿದೆ. ಈ ಕೋರ್ಸ್‌ನಲ್ಲಿ ಚಿಲ್ಲರೆ ವಾಣಿಜ್ಯ ಸರಕುಗಳ ವ್ಯಾಪಾರ ಹಾಗೂ ಖರೀದಿ, ರೀಟೇಲ್‌ನಲ್ಲಿ ಮಾರುವ ಕೌಶಲ್ಯಗಳು, ರಿಟೇಲ್‌ನಲ್ಲಿ ಮಾಹಿತಿ ತಂತ್ರಜ್ಞಾನ, ಸರಕು ಸೇವೆಗಳನ್ನು ದೇಶೀಯವಾಗಿ ಉತ್ಪಾದಿಸುವ ಹಾಗೂ ಮಾರುವ ವಿಶೇಷ ಹಕ್ಕುಗಳಿಗೆ ಸಂಬಂಧಪಟ್ಟ ಕೌಶಲಗಳನ್ನು ಒಂದು ಪಠ್ಯಕ್ರಮದ ಮೂಲಕ ಅಭಿವೃದ್ಧಿಪಡಿಸಲಾಗುತ್ತದೆ.

ಅಗತ್ಯ ಸಾಮರ್ಥ್ಯ ಹಾಗೂ ಕೌಶಲಗಳು

* ವ್ಯಾಪಾರ ಕುರಿತ ನಿಗಾ

* ವೈಯಕ್ತಿಕ ಪರಿಣಾಮಕಾರಿತ್ವ

* ಸಂಬಂಧ ನಿರ್ವಹಣೆ

* ನಿರ್ಣಾಯಕ ಚಿಂತನೆ

ಈ ನಾಲ್ಕು ವಿಶೇಷ ಸಾಮರ್ಥ್ಯ ಇರುವ ಉದ್ಯೋಗಾಕಾಂಕ್ಷಿಗಳನ್ನು ರಿಟೇಲ್ ಕ್ಷೇತ್ರ ಸ್ವಾಗತಿಸುತ್ತದೆ.

ಇದಲ್ಲದೆ, ಉದ್ಯೋಗಾಕಾಂಕ್ಷಿಯು ಒತ್ತಡ ನಡುವೆಯೂ, ಬಿಗಿ ಸಮಯ ಮಿತಿಯೊಂದಿಗೆ ಕೆಲಸ ನಿರ್ವಹಿಸುವ ಕೌಶಲ, ಉತ್ತಮ ಸಂವಹನಾ ಕೌಶಲ, ಅಂತರ್ ವ್ಯಕ್ತಿ ಕೌಶಲಗಳು, ಅತ್ಯುತ್ತಮ ಮಾಹಿತಿ ತಂತ್ರಜ್ಞಾನದ ಜ್ಞಾನ, ಪರಿಣಾಮಕಾರಿ ಪ್ರಭಾವಿ ಹಾಗೂ ಸಮಾಲೋಚನಾ ಕೌಶಲ, ಪ್ರಬಲ ಗ್ರಾಹಕ ಕೇಂದ್ರೀಕೃತ, ವಿಶ್ಲೇಷಣಾತ್ಮಕ ಹಾಗೂ ಸಮಸ್ಯೆ ಬಗೆಹರಿಸುವ ಹಾಗೂ ಸಮಯ ನಿರ್ವಹಣೆ ಕೌಶಲಗಳನ್ನು ಹೊಂದಿರಬೇಕಾಗಿರುತ್ತದೆ.

ಯಾವ ಹುದ್ದೆಗಳನ್ನು ನಿರೀಕ್ಷಿಸಬಹುದು?

ಗ್ರಾಹಕರ ಮಾರಾಟ ಸಹಾಯಕ (ಕಸ್ಟಮರ್‌ ಸೇಲ್ಸ್‌ ಅಸೋಸಿಯೇಟ್‌), ಸ್ಟೋರ್ ನಿರ್ವಹಣಾ ವ್ಯವಸ್ಥಾಪಕ, ಚಿಲ್ಲರೆ ಕಾರ್ಯಾಚರಣೆ, ರಿಟೇಲ್ ಸರಕು ಖರೀದಿ ಹಾಗೂ ಮಾರಾಟ ವ್ಯವಸ್ಥಾಪಕ, ವಿಶುವಲ್‌ ಮರ್ಕೆಂಡೈಸರ್‌, ಬ್ಯಾಕ್ ಎಂಡ್ ಕಾರ್ಯಾಚರಣೆಗಳ ವ್ಯವಸ್ಥಾಪಕ, ಲಾಜಿಸ್ಟಿಕ್ ಮತ್ತು ಉಗ್ರಾಣ ವ್ಯವಸ್ಥಾಪಕರು, ರಿಟೇಲ್ ಸಂವಹನ ವ್ಯವಸ್ಥಾಪಕರು.. ಹೀಗೆ ಹಲವಾರು ಹುದ್ದೆಗಳನ್ನು ಗಿಟ್ಟಿಸಬಹುದು

ಚೆನ್ನಾಗಿ ತರಬೇತಿ ಪಡೆದ ಹಾಗೂ ಕಲಾತ್ಮಕ ರಿಟೇಲ್ ನಿರ್ವಹಣೆ ವೃತ್ತಿಪರರಿಗೆ ಯಾವಾಗಲೂ ಬೇಡಿಕೆಯಿದೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಇದೆ. ಬೃಹತ್ ಬ್ರಾಂಡ್‌ಗಳು ತಮ್ಮ ಚಿಲ್ಲರೆ ಸರಕು ಸೇವೆಗಳ ವ್ಯಾಪಾರವನ್ನು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿಯೂ ವಿಸ್ತರಿಸಿವೆ. ಇದು ಮತ್ತಷ್ಟು ಉದ್ಯೋಗಗಳ ಸೃಷ್ಟಿಗೆ ಕಾರಣವಾಗಿದೆ.

ರಿಲಾಯನ್ಸ್ ಗ್ರೂಪ್, ವಿ-ಮಾರ್ಟ್, ಕ್ಯಾಂಟಬೈಲ್ಸ್, ಲಿಬರ್ಟಿ, ಪ್ರೋವೋಗ್, ವಿ-2, ಟ್ರೈಸ್ಟಾರ್, ಭಾರತಿ, ಫ್ಯಾಬ್ ಇಂಡಿಯಾ, ಬಾಟಾ, ಷಾಪರ್ಸ್‌ ಸ್ಟಾಪ್, ಐಟಿಸಿ ರಿಟೇಲ್, ಆದಿತ್ಯ ಬಿರ್ಲಾಗ್ರೂಪ್, ಟಾಟಾ ಗ್ರೂಪ್ಸ್, ಲೈಫ್‌ಸ್ಟೈಲ್ ಇಂಟರ್ ನ್ಯಾಷನಲ್, ಸ್ಪೆನ್ಸರ್ಸ್, ಫ್ಯೂಚರ್ ಗ್ರೂಪ್ ಆಫ್ ಇಂಡಿಯಾ, ಸ್ಟಾರ್ ಬಜಾರ್, ವೆಸ್ಟ್ ಸೈಡ್ ಅಂಡ್ ಪ್ಯಾಂಟ್‌ಲೂನ್ಸ್, ಮೆಟ್ರೋ, ಖಾದಿಮ್ಸ್ ಹಾಗೂ ಅನೇಕ ನವನವೀನ ಡಿಪಾರ್ಟ್‌ಮೆಂಟಲ್ ಮಳಿಗೆಗಳಲ್ಲಿ ತರಬೇತಿ ಹೊಂದಿದ ಉದ್ಯೋಗಾಂಕ್ಷಿಗಳು ತಮ್ಮ ಅದೃಷ್ಟ ಪರೀಕ್ಷಿಸಬಹುದು.

ಎಂಥವರಿಗೆ ಹೆಚ್ಚು ಉಪಯೋಗ?

ನವನವೀನ ಸರಕುಗಳ ಬಗ್ಗೆ, ವಿಕ್ರಯ ಮಾರುಕಟ್ಟೆ, ಉದ್ಯಮ ವಿಸ್ತರಣೆ, ಜಾಹೀರಾತು ಹಾಗೂ ಅಭಿಯಾನ, ಹಾಗೂ ವ್ಯಾಪಾರೋದ್ಯಮದ ಸಂಶೋಧನೆಗಳ ಬಗ್ಗೆ ವಿಶೇಷ ಆಸಕ್ತಿ ಇರುವವರು, ಈ ಕ್ಷೇತ್ರದಲ್ಲಿ ತಮ್ಮ ಜೀವನ ಪಥವನ್ನು ಕಂಡುಕೊಳ್ಳಬಹುದು.

ಪಿ.ಯು.ಸಿ ಅಥವಾ 12ನೇ ತರಗತಿ ಓದಿರುವ ವಿದ್ಯಾರ್ಥಿಗಳು ರಿಟೇಲ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಹಾಗೆಯೇ ಇದೇ ವಿಷಯದಲ್ಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು, ಸ್ನಾತಕೋತ್ತರ ಪದವಿ ಪಡೆಯಬಹುದು. ಸ್ನಾತಕೋತ್ತರ ಪದವಿಯನ್ನು ಭಾರತದ ಅಥವಾ ವಿದೇಶದ ವಿಶ್ವವಿದ್ಯಾಲಯದಲ್ಲಿ ಪಡೆಯಬಹುದು.

ಪ್ರತಿಷ್ಠಿತ ಸಂಸ್ಥೆಗಳಾದಂತಹ ಐಐಎಂ ಹಾಗೂ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆಯಬೇಕಾದಲ್ಲಿ ಪ್ರವೇಶ ಪರೀಕ್ಷೆ ಹಾಗೂ ಹೆಚ್ಚಿನ ಶುಲ್ಕ ಅವಶ್ಯಕ. ರಿಟೇಲ್ ವಿಷಯದಲ್ಲಿ ಡಿಪ್ಲೊಮಾ ಪಡೆಯಲೂ ಕೂಡ ಅವಕಾಶವಿದೆ.

→ಲೇಖಕರು ಸಹಾಯಕ ಪ್ರಾಧ್ಯಾಪಕರು,ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯ, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.