ADVERTISEMENT

ಆರ್‌ಟಿಇ: ಕೇವಲ 18 ಅರ್ಜಿ ಸಲ್ಲಿಕೆ!

ಕೊಡಗು: ಮೂರು ಶೈಕ್ಷಣಿಕ ವಲಯದಲ್ಲಿ 6 ಶಾಲೆ, ಲಭ್ಯವಿದ್ದ ಸೀಟು 46

ಅದಿತ್ಯ ಕೆ.ಎ.
Published 28 ಏಪ್ರಿಲ್ 2019, 19:30 IST
Last Updated 28 ಏಪ್ರಿಲ್ 2019, 19:30 IST
   

ಮಡಿಕೇರಿ: ‘ಶಿಕ್ಷಣ ಹಕ್ಕು ಕಾಯ್ದೆ’ಯ (ಆರ್‌ಟಿಇ) ನಿಯಮಾವಳಿ ಬದಲಾಗಿದ್ದು ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಗಣನೀಯವಾಗಿ ಕುಸಿದಿದೆ.

ಕೊಡಗು ಜಿಲ್ಲೆಯ ಮೂರು ಶೈಕ್ಷಣಿಕ ವಲಯದಲ್ಲಿ 2019–20ನೇ ಸಾಲಿಗೆ ಕೇವಲ 46 ಸೀಟುಗಳು ಲಭ್ಯಯಿದ್ದವು. 46 ಸೀಟುಗಳಿದ್ದರೂ ಅರ್ಜಿ ಸಲ್ಲಿಸಿದ್ದವರ ಸಂಖ್ಯೆ ಮಾತ್ರ 18! ಇನ್ನೂ, 28 ವಿದ್ಯಾರ್ಥಿಗಳಿಗೆ ಅವಕಾಶವಿದ್ದರೂ ಅರ್ಜಿಗಳೇ ಸಲ್ಲಿಕೆಯಾಗಿಲ್ಲ ಎಂಬುದು ಗಮನಾರ್ಹ.

ಜಿಲ್ಲೆಯಲ್ಲಿ ಅರ್ಜಿಗಳು ಅಷ್ಟು ಕಡಿಮೆ ಪ್ರಮಾಣದಲ್ಲಿ ಸಲ್ಲಿಕೆಯಾಗಲು ಕಾರಣ ಆರ್‌ಟಿಇಗೆ ಹೊಸ ನಿಯಮಾವಳಿ ತಂದಿರುವುದು.

ತಮ್ಮ ನೆರೆಹೊರೆಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳು ಲಭ್ಯವಿಲ್ಲದಿದ್ದಲ್ಲಿ ಮಾತ್ರ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಅರ್ಜಿ ಸಲ್ಲಿಕೆ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ, ಅರ್ಜಿ ಸಲ್ಲಿಕೆಯಲ್ಲಿ ಭಾರಿ ಪ್ರಮಾಣದ ಕುಸಿತವಾಗಿದೆ.

ADVERTISEMENT

ಜಿಲ್ಲೆಯಲ್ಲಿ 5 ಕಿ.ಮೀ ಅಂತರದಲ್ಲಿಯೇ ಸರ್ಕಾರಿ ಶಾಲೆ, ಅನುದಾನಿತ ಶಾಲೆ ಹಾಗೂ ಅನುದಾನ ರಹಿತ ಶಾಲೆಗಳಿವೆ. ಅದೇ ಕಾರಣಕ್ಕೆ ಕಡಿಮೆ ಪ್ರಮಾಣದಲ್ಲಿಯೇ ಸೀಟು ನಿಗದಿಗೊಳಿಸಲಾಗಿತ್ತು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಈಗಾಗಲೇ ಅನುದಾನ ರಹಿತ ಹಾಗೂ ಅನುದಾನಿತ ಶಾಲೆಗಳಲ್ಲಿ ಸೀಟು ಪಡೆದು, ವಿದ್ಯಾಭ್ಯಾಸ ನಡೆಸುತ್ತಿದ್ದರೆ ಅವರು ಅದೇ ಶಾಲೆಯಲ್ಲಿ ಮುಂದುವರೆಯಲು ಯಾವುದೇ ಅಡ್ಡಿಯಿಲ್ಲ.

‘ಶಿಕ್ಷಣ ಹಕ್ಕು ಕಾಯ್ದೆ’ ಜಾರಿಗೊಂಡ ಸಂದರ್ಭದಲ್ಲಿ ಸೀಟಿಗೆ ಭಾರಿ ಬೇಡಿಕೆಯಿತ್ತು. ಅವಕಾಶ ವಂಚಿತರಿಗೆ ಶಿಕ್ಷಣದಲ್ಲಿ ಪ್ರಾಶಸ್ತ್ಯ, ಸಾಮಾಜಿಕ– ಆರ್ಥಿಕ ದುರ್ಬಲ ವರ್ಗದವರ ಶಿಕ್ಷಣಕ್ಕೆ ವಿಶೇಷ ಕಾಳಜಿ, ಎಲ್ಲ ಮಕ್ಕಳಿಗೂ 8ನೇ ತರಗತಿ ತನಕ ಶಿಕ್ಷಣ ಮೂಲಭೂತ ಹಕ್ಕು, ಗುಣಮಟ್ಟದ ಶಿಕ್ಷಣಕ್ಕೆ ಪ್ರಾಧಾನ್ಯತೆ, ಶಾಲೆಬಿಟ್ಟ ಅಥವಾ ಶಾಲೆಯಿಂದ ಹೊರಗುಳಿದ ಹಾಗೂ 14 ವರ್ಷ ವಯಸ್ಸಿನ ಒಳಗಿನ ಎಲ್ಲ ಮಕ್ಕಳಿಗೆ ವಯಸ್ಸಿಗೆ ಅನುಗುಣವಾಗಿ ತರಗತಿಗೆ ದಾಖಲಾಗಿ ಶಿಕ್ಷಣ ಪಡೆಯಬೇಕು ಎನ್ನುವ ಆಶಯ ಇರಿಸಿಕೊಂಡು ಆರ್‌ಟಿಇ ಜಾರಿಗೊಂಡಿತ್ತು.

ಜಿಲ್ಲೆಯಲ್ಲಿ ಯಾವೆಲ್ಲ ಶಾಲೆಗಳು: 2019–20ನೇ ಸಾಲಿಗೆ ಮಡಿಕೇರಿ ತಾಲ್ಲೂಕಿನಿಂದ ‘ಬಲ್ಲಮಾವಟಿ ನೇತಾಜಿ ಪ್ರಾಥಮಿಕ ಶಾಲೆ’ಯಲ್ಲಿ ಮಾತ್ರ 5 ಸೀಟುಗಳಿವೆ. ಅಲ್ಲಿ ಎಸ್‌ಸಿ ವರ್ಗಕ್ಕೆ 2, ಇತರೆ ವರ್ಗಕ್ಕೆ 3 ಸೀಟುಗಳು ಲಭ್ಯಯಿದ್ದವು.

ಅದೇ ಸೋಮವಾರಪೇಟೆ ತಾಲ್ಲೂಕಿನಲ್ಲಿ ಕುಶಾಲನಗರದ ‘ಜ್ಞಾನಭಾರತಿ ಹಿರಿಯ ಪ್ರಾಥಮಿಕ ಶಾಲೆ’ ಹಾಗೂ ಸೋಮವಾರಪೇಟೆ ಪಟ್ಟಣದ ‘ಎಸ್‌ಜೆಎಂ ಶಾಲೆ’ಯಲ್ಲಿ ಒಟ್ಟು 16 ಸೀಟುಗಳಿವೆ. ಎಸ್‌ಸಿ ವರ್ಗಕ್ಕೆ 5, ಎಸ್‌ಟಿಗೆ 1, ಇತರೆ ವರ್ಗಕ್ಕೆ 10 ಸೀಟು ಲಭ್ಯವಿದ್ದವು.

ವಿರಾಜಪೇಟೆ ತಾಲ್ಲೂಕಿನಲ್ಲಿ ಕಡಂಗದ ‘ವಿಜಯ ಹಿರಿಯ ಪ್ರಾಥಮಿಕ ಶಾಲೆ’, ಕುಕ್ಲೂರು ‘ಕಾವೇರಿ ಹಿರಿಯ ಪ್ರಾಥಮಿಕ ಶಾಲೆ’, ಅದೇ ಗ್ರಾಮದ ‘ತ್ರಿವೇಣಿ ಹಿರಿಯ ಪ್ರಾಥಮಿಕ ಶಾಲೆ’ಯಲ್ಲಿ ಒಟ್ಟಾರೆ 25 ಸೀಟುಗಳಿದ್ದವು. ಎಸ್‌ಸಿ ವರ್ಗಕ್ಕೆ 9, ಎಸ್‌ಟಿಗೆ 1, ಸಾಮಾನ್ಯ ವರ್ಗಕ್ಕೆ 15 ಸೀಟು ಹಂಚಿಕೆ ಮಾಡಲಾಗಿತ್ತು.

ಕಳೆದ ಸಾಲಿನಲ್ಲಿ ಎಷ್ಟು ಸೀಟುಗಳು?

2018–19ನೇ ಸಾಲಿನಲ್ಲಿ ಕೊಡಗಿನಲ್ಲಿ 87 ಶಾಲೆಗಳಲ್ಲಿ ಆರ್‌ಟಿಇ ಮೂಲಕ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ, ಶಿಕ್ಷಣ ಪಡೆಯುತ್ತಿದ್ದರು. ಹೊಸ ನಿಮಯದಂತೆ ಅವರ್‍ಯಾರಿಗೂ ಶಿಕ್ಷಣ ಮುಂದುವರೆಸಲು ತೊಂದರೆ ಇಲ್ಲ. ಆದರೆ, ಹೊಸದಾಗಿ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಇಚ್ಛಿಸಿದ್ದ ಪೋಷಕರಿಗೆ ನಿರಾಸೆ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.