ADVERTISEMENT

ಶಿಕ್ಷಣ | ಸೈನಿಕ ಶಾಲೆ: ಶಿಸ್ತಿನ ನೆಲೆ

ಮಕ್ಕಳಲ್ಲಿ ನಾಯಕತ್ವ ಗುಣ, ಶಿಸ್ತು ರೂಪಿಸಲು ಆದ್ಯತೆ

ಪ್ರಜಾವಾಣಿ ವಿಶೇಷ
Published 12 ಅಕ್ಟೋಬರ್ 2025, 23:30 IST
Last Updated 12 ಅಕ್ಟೋಬರ್ 2025, 23:30 IST
<div class="paragraphs"><p>ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ವಿಜಯಪುರ ಸೈನಿಕ ಶಾಲೆ ವಿದ್ಯಾರ್ಥಿಗಳ ಸಂಗ್ರಹ ಚಿತ್ರ.</p></div>

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ವಿಜಯಪುರ ಸೈನಿಕ ಶಾಲೆ ವಿದ್ಯಾರ್ಥಿಗಳ ಸಂಗ್ರಹ ಚಿತ್ರ.

   

ಭಾರತೀಯ ಸಶಸ್ತ್ರ ಪಡೆಗಳಲ್ಲಿ ನಿಮ್ಮ ಮಕ್ಕಳು ಸೇವೆ ಸಲ್ಲಿಸಬೇಕೆ? ನಾಯಕತ್ವ ಗುಣ, ಶಿಸ್ತು, ದೈಹಿಕ ದೃಢತೆ ಅವರ ದಿನಚರಿಯ ಭಾಗವಾಗುವುದು ನಿಮ್ಮ ಬಯಕೆಯೇ? ಹಾಗಿದ್ದರೆ ಸೈನಿಕ ಶಾಲೆ ಅವರಿಗೆ ಸೂಕ್ತವಾಗಬಹುದು.

ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಮತ್ತು ಇತರ ಮಿಲಿಟರಿ ಸಂಬಂಧಿತ ಸಂಸ್ಥೆಗಳ ಪ್ರವೇಶಕ್ಕಾಗಿ ಅಗತ್ಯ ಕೌಶಲ ಮತ್ತು ಜ್ಞಾನ ಒದಗಿಸುವ ಸೈನಿಕ ಶಾಲೆಗಳು, ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುತ್ತವೆ.

ADVERTISEMENT

ರಕ್ಷಣಾ ಸಚಿವಾಲಯ‌ದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸೈನಿಕ ಶಾಲೆಗಳ ಸೊಸೈಟಿಯು ಇವುಗಳನ್ನು ಸ್ಥಾಪಿಸಿ ನಿರ್ವಹಿಸುತ್ತದೆ. ಸಾರ್ವಜನಿಕ– ಖಾಸಗಿ ಸಹಭಾಗಿತ್ವದಲ್ಲೂ ಕಾರ್ಯನಿರ್ವಹಿಸುತ್ತಿವೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸುವ ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆ (ಎಐಎಸ್ಎಸ್‌ಇಇ) ಮೂಲಕ ವಿದ್ಯಾರ್ಥಿಗಳ ಆಯ್ಕೆ ನಡೆಯುತ್ತದೆ. ಇಲ್ಲಿ ದೊರೆಯುವ ಶಿಕ್ಷಣವು ಸೈನ್ಯ ಮಾತ್ರವಲ್ಲದೆ ಐಎಎಸ್‌, ಐಪಿಎಸ್‌ನಂತಹ ಸೇವೆಗಳಿಗೂ ಉತ್ತಮ ಬುನಾದಿ ಒದಗಿಸುತ್ತದೆ.

ಪ್ರವೇಶ ಪ್ರಕ್ರಿಯೆ ಹಂತ 

ಅರ್ಜಿ ಸಲ್ಲಿಕೆ: ಪ್ರತಿ ವರ್ಷ ಡಿಸೆಂಬರ್ ಆಸುಪಾಸಿನಲ್ಲಿ ಎನ್‌ಟಿಎ ವೆಬ್‌ಸೈಟ್‌– aissee.nta.nic.in ಮೂಲಕ ಪ್ರವೇಶ ಪರೀಕ್ಷೆಯ ಅರ್ಜಿ ಭರ್ತಿ ಮಾಡಬೇಕು. ಈ ಬಾರಿ ನವೆಂಬರ್‌ನಿಂದ ಪರೀಕ್ಷಾ ನೋಂದಣಿ ಆರಂಭಗೊಳ್ಳುವ ಸಾಧ್ಯತೆಯಿದ್ದು, 2026ರ ಜನವರಿ ಅಂತ್ಯದಲ್ಲಿ ಪರೀಕ್ಷೆ ನಡೆಯಬಹುದು ಎಂದು ತಾತ್ಕಾಲಿಕ ವೇಳಾಪಟ್ಟಿ ತಿಳಿಸುತ್ತಿದೆ.

ಅರ್ಹತೆ: 6 ಮತ್ತು 9ನೇ ತರಗತಿಗಳಿಂದ ಪ್ರವೇಶಾವಕಾಶ ಲಭ್ಯವಿರುತ್ತದೆ. 6ನೇ ತರಗತಿಗೆ ಪ್ರವೇಶ ಬಯಸುವವರು 10ರಿಂದ 12 ವರ್ಷದವರಾಗಿದ್ದು, 5ನೇ ತರಗತಿಯಲ್ಲಿ ಓದುತ್ತಿರಬೇಕು. 9ನೇ ತರಗತಿಗೆ ಅರ್ಜಿ ಸಲ್ಲಿಸುವವರು 13ರಿಂದ 15 ವರ್ಷದವರಾಗಿದ್ದು, ಎನ್‌ಟಿಎ ರೂಪಿಸುವ ಅಗತ್ಯ ಮಾನದಂಡಗಳನ್ನು ಹೊಂದಿರಬೇಕು.

ಪರೀಕ್ಷೆಯು ಗಣಿತ, ಸಾಮಾನ್ಯ ಜ್ಞಾನ ಮತ್ತು ಭಾಷೆಯ ವಿಷಯಗಳನ್ನು ಒಳಗೊಂಡಿರುತ್ತದೆ.

ವೈದ್ಯಕೀಯ ಪರೀಕ್ಷೆ: ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಇದು ದೃಷ್ಟಿ, ಶ್ರವಣ, ಎತ್ತರ ಮತ್ತು ತೂಕದ ಮೌಲ್ಯಮಾಪನ ಒಳಗೊಂಡಿರುತ್ತದೆ.

ಇ–ಕೌನ್ಸೆಲಿಂಗ್: ಪರೀಕ್ಷೆಯ ಫಲಿತಾಂಶ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಮೀಸಲಾತಿಯೂ ಲಭ್ಯವಿದ್ದು, ತವರು ರಾಜ್ಯ ಅಥವಾ ರಾಜ್ಯದ ನಿವಾಸಿಗಳಿಗೆ ಶೇ 67, ಇತರ ರಾಜ್ಯದ ಅಭ್ಯರ್ಥಿಗಳಿಗೆ ಶೇ 33ರಷ್ಟು ಸೀಟುಗಳನ್ನು ಕಾಯ್ದಿರಿಸಲಾಗುತ್ತದೆ. ಇದರಲ್ಲಿ ಮಾಜಿ ಸೈನಿಕರು ಮತ್ತು ಸೇನಾ ಸಿಬ್ಬಂದಿ ಮಕ್ಕಳಿಗೆ ಶೇ 25, ಪರಿಶಿಷ್ಟ ಜಾತಿ– ಶೇ 15, ಪರಿಶಿಷ್ಟ ಪಂಗಡ– ಶೇ 7.5 ಹಾಗೂ ಹಿಂದುಳಿದ ವರ್ಗಗಳಿಗೆ ಶೇ 27ರಷ್ಟು ಸೀಟುಗಳು ಲಭ್ಯವಿರುತ್ತವೆ. 6ನೇ ತರಗತಿಯ ಲಭ್ಯ ಸೀಟುಗಳಲ್ಲಿ ಶೇ 10 ಅಥವಾ ಕನಿಷ್ಠ 10 (ಯಾವುದು ಗರಿಷ್ಠವೋ) ಅಷ್ಟು ಪ್ರಮಾಣದಲ್ಲಿ ಬಾಲಕಿಯರಿಗೆ ಮೀಸಲಾತಿ ಇರುತ್ತದೆ.

ಪರೀಕ್ಷಾ ಪ್ರಕ್ರಿಯೆ ಬಳಿಕ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ರ್‍ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದ ವಿದ್ಯಾರ್ಥಿಗಳು ತಮ್ಮ ಅರ್ಹತೆಯಂತೆ, ಅಗತ್ಯ ಸೈನಿಕ ಶಾಲೆಗೆ ಪ್ರವೇಶಕ್ಕಾಗಿ ಅರ್ಜಿ  ಸಲ್ಲಿಸಬಹುದು. ಶುಲ್ಕವು ಆಯಾ ಸಂಸ್ಥೆಯಲ್ಲಿನ ವಿವಿಧ ಸೌಲಭ್ಯಗಳಿಗೆ ತಕ್ಕಂತೆ ಭಿನ್ನವಾಗಿ ಇರುತ್ತದೆ. ರನ್ನಿಂಗ್, ಫೈರಿಂಗ್, ಸ್ವಿಮ್ಮಿಂಗ್‌, ಕ್ಯಾನೋಯಿಂಗ್, ಪರ್ವತಾರೋಹಣದಂತಹ ಕೋರ್ಸ್‌ ಹಾಗೂ ಕ್ರೀಡಾ ಸೌಲಭ್ಯಗಳನ್ನೂ ಒದಗಿಸುವುದು ಈ ಶಾಲೆಗಳ ವಿಶೇಷ.

ರಾಜ್ಯದಲ್ಲಿ ಇರುವ ಶಾಲೆಗಳು

ಸೈನಿಕ್ ಶಾಲೆ ಬಿಜಾಪುರ, ಕೊಡಗು ಮತ್ತು ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ, ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ವಿವೇಕ ಸ್ಕೂಲ್ ಆಫ್ ಎಕ್ಸಲೆನ್ಸ್ ಸೈನಿಕ ಶಾಲೆ, ಬೀದರ್‌ನ ನ್ಯಾಷನಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸೈನಿಕ ಶಾಲೆ . ಬೀದರ್‌ನ ಶಾಲೆಯು ಈಚೆಗೆ ಸೇರ್ಪಡೆಗೊಂಡಿದೆ.

ಸರಗೂರಿನಲ್ಲಿ ಎನ್‌ಜಿಒ ನಿರ್ವಹಣೆ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನಲ್ಲಿ 2022ರಲ್ಲಿ ಆರಂಭವಾದ ವಿವೇಕ ಸ್ಕೂಲ್‌ ಆಫ್‌ ಎಕ್ಸಲೆನ್ಸ್‌ ಸೈನಿಕ ಶಾಲೆಯು ರಾಜ್ಯದಲ್ಲಿ ಸ್ವಯಂಸೇವಾ ಸಂಸ್ಥೆ ನಡೆಸುತ್ತಿರುವ ಏಕೈಕ ಸೈನಿಕ ಶಾಲೆ.

ಇದು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಘಟಕ. ‘ಸೂಕ್ತ ಮಾರ್ಗದರ್ಶನ ಹಾಗೂ ಅಗತ್ಯ ತರಬೇತಿಯನ್ನು ಪಡೆದರೆ ಗ್ರಾಮೀಣ ಮಕ್ಕಳು ಪ್ರವೇಶ ಪರೀಕ್ಷೆ ಬರೆದು ಆಯ್ಕೆ ಆಗಬಹುದು. ಭವಿಷ್ಯದಲ್ಲಿ ಬಹಳಷ್ಟು ಅವಕಾಶ ದೊರೆಯಲಿದೆ’ ಎನ್ನುವುದು ಘಟಕದ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.