ADVERTISEMENT

‘ಸಂವೇದ’ದಲ್ಲಿ ಸಂಯಮದ ಶಿಕ್ಷಣ!

ರಮಾ ಎಸ್.ಅರಕಲಗೂಡು
Published 9 ಜುಲೈ 2018, 20:08 IST
Last Updated 9 ಜುಲೈ 2018, 20:08 IST
ವಿಜ್ಞಾನ ವಸ್ತು ಪ್ರದರ್ಶನ
ವಿಜ್ಞಾನ ವಸ್ತು ಪ್ರದರ್ಶನ   

ದಾವಣಗೆರೆಯ ಪಿ.ಜೆ. ಬಡಾವಣೆಯಲ್ಲಿರುವ ‘ಸಂವೇದ’ ವಿಶೇಷ ಮಕ್ಕಳ ತರಬೇತಿ ಮತ್ತು ಸಂಶೋಧನಾ ಕೇಂದ್ರ, ಕಲಿಕಾ ನ್ಯೂನತೆ ಹಾಗೂ ಕಲಿಕಾ ಸಮಸ್ಯೆಯುಳ್ಳ ಮಕ್ಕಳಿಗೆ ಪರ್ಯಾಯ ಶಿಕ್ಷಣ ನೀಡುತ್ತಿದೆ. ಹಾಗಾಗಿ ಇದನ್ನು ತರಬೇತಿ ಸಂಸ್ಥೆ ಎನ್ನುವ ಜತೆಗೆ, ಶಾಲೆ ಎಂದು ಗುರುತಿಸಲಾಗುತ್ತಿದೆ.

ಇದು ಶಾಲೆಯಾದರೂ, ಮಕ್ಕಳಿಗೆ ಹೋಮ್ ವರ್ಕ್‌ಕಡ್ಡಾಯ ಇಲ್ಲ. ಪ್ರಾಜೆಕ್ಟ್ ಮಾಡುವ ಒತ್ತಡವಿಲ್ಲ. ಪರೀಕ್ಷೆ ಭಯವೂ ಇಲ್ಲ. ಗ್ರೇಡ್, ಪರ್ಸೆಂಟೇಜ್ ಅಂತೂ ಇಲ್ಲವೇ ಇಲ್ಲ. ಶಿಕ್ಷೆಯಂತೂ ಇಲ್ಲವೇ ಇಲ್ಲ. ತರಗತಿಯಲ್ಲಿ ಒಂದೇ ಕಡೆ ಕೂತು ಪಾಠ ಕೇಳಬೇಕೆಂಬ ನಿಯಮವಿಲ್ಲ. ಆಟವಾಡುತ್ತಲೇ, ಪಾಠ ಕೇಳುವ ಈ ಶಾಲೆಯಲ್ಲಿ ಕಲಿತ ಮಕ್ಕಳು ಈಗ ಉನ್ನತ ಹುದ್ದೆಯಲ್ಲಿದ್ದಾರೆ. ಜೀವನದಲ್ಲೂ ಯಶಸ್ವಿಯಾಗಿದ್ದಾರೆ.

ಸಂವೇದ ಹುಟ್ಟಿದ್ದು ಹೀಗೆ: ದಾವಣಗೆರೆ ಮೂಲದ ಉದ್ಯಮಿ ಸುರೇಂದ್ರನಾಥ್ ನಿಶಾನಿಮಠ ಸಂವೇದ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ. ಇಪ್ಪತ್ತೈದು ವರ್ಷಗಳ ಹಿಂದಿನ ಘಟನೆ. ಒಮ್ಮೆ ಗೆಳೆಯರೊಬ್ಬರು ‘10 ವರ್ಷದ ತನ್ನ ಮಗನಿಗೆ ಕಲಿಕೆಯಲ್ಲಿ ತೊಂದರೆಯಿದೆ. ನೀವೇ ಪಾಠ ಹೇಳಿಕೊಡಿ’ ಎಂದು ಇವರಿಗೆ ದುಂಬಾಲು ಬಿದ್ದರು. ಬಾಲಕ ನೋಡಲು ಚೆನ್ನಾಗಿದ್ದ. ಚಟುವಟಿಕೆಯಲ್ಲೂ ಪರವಾಗಿಲ್ಲ ಎನ್ನುವಂತಿದ್ದ. ಇದನ್ನು ಕಂಡ ಸುರೇಂದ್ರನಾಥ್ ಆತನಿಗೆ ‘ನಿನ್ನ ಹೆಸರು ಬರೆಯಪ್ಪ’ ಎಂದು ಪರೀಕ್ಷಿಸಿದರು. ಆದರೆ, ಏನು ಮಾಡಿದರೂ ಆತನಿಗೆ ಹೆಸರು ಬರೆಯಲಾಗಲಿಲ್ಲ. ನೋಡಲು ಇಷ್ಟು ಚೆನ್ನಾಗಿರುವ ಈತನಿಗೆ ಕಲಿಕೆ ಏಕೆ ಸಾಧ್ಯವಾಗುತ್ತಿಲ್ಲ? ಎಂದು ಚಿಂತಿಸಿದರು ಸುರೇಂದ್ರನಾಥ. ಇದನ್ನೇ ಸವಾಲಾಗಿಸಿಕೊಂಡರು. ಸಂಶೋಧನೆ, ಬೋಧನೆ, ಇಂಗ್ಲಿಷ್ ಭಾಷೆಯಲ್ಲಿ ಉತ್ತಮ ಜ್ಞಾನ ಹೊಂದಿದ್ದ ಅವರು, ಒಂದಷ್ಟು ಬೋಧನಾ ತಂತ್ರಗಳನ್ನು ಬಳಸಿ ಎರಡು ತಿಂಗಳೊಳಗೆ ಆ ಬಾಲಕನಿಗೆ ತನ್ನ ಹೆಸರು ಬರೆಯಲು ಕಲಿಸಿದರು. ಈ ಬದಲಾವಣೆ ಪೋಷಕರಲ್ಲಿ ಅಚ್ಚರಿ ಉಂಟುಮಾಡಿತು. ಸುರೇಂದ್ರ ಅವರ ಮೇಲೂ ತೀವ್ರ ಪರಿಣಾಮಬೀರಿತು.

ADVERTISEMENT

ಇದನ್ನು ಇಷ್ಟಕ್ಕೆ ನಿಲ್ಲಿಸದೇ, ಸುರೇಂದ್ರನಾಥ್ ತಮ್ಮ ಉದ್ಯಮದ ಜತೆ ಜತೆಗೆ, ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಮನಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ.ಪ್ರಕಾಶ್ ಪದಕಣ್ಣಾಯ ಮತ್ತು ಡಾ. ಜಯರಾಂ ಅವರೊಂದಿಗೆ ಚರ್ಚಿಸುತ್ತಿದ್ದರು. ನಡುವೆ ಈ ಬಗೆಗಿನ ಸತತ ಓದು, ಸಂಶೋಧನೆಯ ಫಲವಾಗಿ, 1994ರಲ್ಲಿ ಕಲಿಕಾ ನ್ಯೂನತೆಯುಳ್ಳ ಮತ್ತಷ್ಟು ಮಕ್ಕಳಿಗೆ ತರಬೇತಿ ನೀಡುವ ‘ಸಂವೇದ’ ಸಂಸ್ಥೆ ಆರಂಭಿಸಿದರು. 1997ರಲ್ಲಿ ನೋಂದಣಿ ಮಾಡಿಸಿದರು. ನಂತರದಲ್ಲಿ ಅದು ‘ಸಂವೇದ’ ತರಬೇತಿ ಮತ್ತು ಸಂಶೋಧನಾ ಕೇಂದ್ರವಾಗಿ ಮಾರ್ಪಾಟಾಯಿತು. ಈಗ ಸಂಸ್ಥೆ ಬೆಳ್ಳಿ ಹಬ್ಬದ ಹೊಸ್ತಿಲಲ್ಲಿದೆ.

ಕಲಿಕಾ ವಿಧಾನವೇ ವಿಶೇಷ: ಕಲಿಕಾ ನ್ಯೂನತೆ ಅಥವಾ ಬುದ್ಧಿಮಾಂದ್ಯ ಮಕ್ಕಳನ್ನು ಶಾಲೆಗೆ ಸೇರಿಸಿದ ಮೂರು ತಿಂಗಳು ಮಕ್ಕಳ ವರ್ತನೆ, ಸಾಮರ್ಥ್ಯ ಚಟುವಟಿಕೆ ಗಮನಿಸುತ್ತಾರೆ. ಮೊದಲು ಮಕ್ಕಳಿಗೆ ಆಟಿಕೆಗಳ ಬಣ್ಣ, ಆಕಾರ, ಗಾತ್ರ ಗುರುತಿಸುವುದನ್ನು ಕಲಿಸುತ್ತಾರೆ. ಬಳಿಕ ಒಂದೇ ಬಣ್ಣದ, ಗಾತ್ರದ ಆಟಿಕೆಗಳನ್ನು ಜೋಡಿಸುವುದು. ಒಂದೇ ಗಾತ್ರ ಮತ್ತು ಆಕಾರದ ಮಣಿಗಳನ್ನು ಪೋಣಿಸುವುದು. ಆಟಿಕೆಯ ಮುಖಾಂತರ ಅಂಕಿ ಸಂಖ್ಯೆಗಳನ್ನು ಹೇಳಿಕೊಡುವುದು.. ಹೀಗೆ ಹಂತ ಹಂತವಾಗಿ ಕಲಿಕೆ ಮುಂದುವರಿಯುತ್ತದೆ.

ಮಕ್ಕಳಿಗೆ ಶಬ್ಧಗಳ ಮುಖಾಂತರ ಉಚ್ಛಾರಣೆ, ಭಾಷೆ ಕಲಿಸುತ್ತಾರೆ. ನಂತರ ಬರವಣಿಗೆಯ ಹಂತ. ಅದಕ್ಕೂ ಮುನ್ನ ಮಕ್ಕಳಿಗೆ ಪೆನ್ಸಿಲ್ ಹಿಡಿಯುವುದನ್ನು ಅಭ್ಯಾಸ ಮಾಡಿಸುತ್ತಾರೆ. ಚುಕ್ಕೆಗಳ ಮೂಲಕ ಗೆರೆ ಎಳೆಸುತ್ತಾರೆ. ಈ ಯಾವ ಹಂತಗಳಲ್ಲೂ ಮಕ್ಕಳಿಗೆ ಪರೀಕ್ಷೆ, ರ‍್ಯಾಂಕ್, ಗ್ರೇಡ್ ಇಂಥ ಯಾವುದೇ ಸ್ಥಾನಮಾನಗಳಿಲ್ಲ. ಮಕ್ಕಳ ಕಲಿಕೆಯನ್ನು ಲೆವಲ್ 1,2,3 ಮತ್ತು 4 ಎಂದು ವಿಭಾಗಿಸುತ್ತಾರೆ. ‘ಪ್ರತಿ ದಿನ ಮುಂಜಾನೆ 5 ಗಂಟೆಗೆ ಯೋಗ ಧ್ಯಾನದೊಂದಿಗೆ ಸಂಸ್ಥೆಯ ಚಟುವಟಿಕೆಗಳು ಆರಂಭವಾಗುತ್ತವೆ. ಬಳಿಕ ಸೈಕಲಿಂಗ್ ಕಡ್ಡಾಯ. ಇವೆಲ್ಲ ಮಕ್ಕಳ ದೈಹಿಕ ಹಾಗೂ ಮಾನಸಿಕ ದೃಢತೆ ಕಾಪಾಡುವಲ್ಲಿ ಸಹಾಯಕ’ ಎನ್ನುತ್ತಾರೆ ಸುರೇಂದ್ರನಾಥ್.

ವೃತ್ತಿಪರ ತರಬೇತಿ: ಬೌದ್ಧಿಕ ಸವಾಲು ಎದುರಿಸುತ್ತಿರುವ ಮಕ್ಕಳಿಗೆ ವಿಶೇಷ ಶಿಕ್ಷಣ ನೀಡಿದರೆ, ದೈಹಿಕವಾಗಿ ಸದೃಢರಾಗಿರುವ ಮಕ್ಕಳಿಗೆ ಉದ್ಯೋಗ ತರಬೇತಿ, ವೃತ್ತಿ ಪರ ಶಿಕ್ಷಣ ನೀಡಲಾಗುತ್ತಿದೆ. ಇದಕ್ಕಾಗಿಯೇ ಸಂಸ್ಥೆಯಲ್ಲಿ 16 ಬೋಧಕ, 10 ಬೋಧಕೇತರ ಸಿಬ್ಬಂದಿ ಇದ್ದಾರೆ. ಒಟ್ಟು 55 ಮಕ್ಕಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಮಕ್ಕಳ ನ್ಯೂನತೆ ಮತ್ತು ಸಂಸ್ಥೆಯಲ್ಲಿರುವ ಕಲಿಕೆಯ ನಿಯಮಗಳನ್ನು ಪೋಷಕರು ಒಪ್ಪಿದರೆ ಮಕ್ಕಳನ್ನು ಸಂಸ್ಥೆಗೆ ಸೇರಿಸಿಕೊಳ್ಳುತ್ತಾರೆ.

‘ಇಲ್ಲಿ ಸೇರುವ ಕೆಲವು ಮಕ್ಕಳು ಕಲಿಯಲು ಮೂರ್ನಾಲ್ಕು ವರ್ಷ ತೆಗೆದುಕೊಂಡರೆ, ಇನ್ನೂ ಕೆಲವರು ಏಳೆಂಟು ವರ್ಷ ತೆಗೆದುಕೊಳ್ಳುತ್ತಾರೆ’ ಎಂದು ಶಿಕ್ಷಕಿ ಶಶಿಕಲಾ ವಿವರಿಸುತ್ತಾರೆ. ‘ನಾನು 3ನೇ ಕ್ಲಾಸ್‌ಗೆ ಇಲ್ಲಿಗೆ ಸೇರಿದೆ. ಆಗ ಓದು, ಬರಹ ಬರುತ್ತಿರಲಿಲ್ಲ. ಇಲ್ಲಿಗೆ ಬಂದ ಮೇಲೆ ಓದು, ಬರಹ ಕಲಿಯುವ ಜತೆಗೆ, ನನ್ನ ವರ್ತನೆಯಲ್ಲೂ ಸುಧಾರಣೆಯಾಯಿತು. ಕಳೆದ ವರ್ಷ ಎಸ್.ಎಸ್.ಎಲ್‌.ಸಿ ಪೂರೈಸಿದೆ. ಈಗ ಪಿಯುಸಿ ಓದುತ್ತಿದ್ದೇನೆ’ ಎಂದು ನೆನಪಿಸಿಕೊಳ್ಳುತ್ತಾರೆ ಸಂಸ್ಥೆಯ ಹಳೆಯ ವಿದ್ಯಾರ್ಥಿನಿ ಅಮೃತ. ‘ನಾನು ನಾಲ್ಕನೇ ತರಗತಿಯಲ್ಲಿ ಸಂಸ್ಥೆಗೆ ಸೇರಿದೆ. ಕಲಿಕೆ ಬಗ್ಗೆ ಆಸಕ್ತಿ ಇರಲಿಲ್ಲ. ಒಂದು ಕಡೆ ಕೂತು ಪಾಠ ಕೇಳಲು ಕಷ್ಟವಾಗುತ್ತಿತ್ತು. ತರಗತಿ ತುಂಬಾ ಓಡಾಡುತ್ತಿದ್ದೆ. ಇದು ನಿಯಂತ್ರಣಕ್ಕೆ ಬರಲು 3 ವರ್ಷ ಬೇಕಾಯಿತು. ಆರು ವರ್ಷ ಇಲ್ಲಿ ಓದಿದೆ. ಈಗ ಎಲ್ಲ ಮಕ್ಕಳಂತೆ ಎಲ್ಲ ಚಟುವಟಿಕೆಗಳಲ್ಲೂ ಭಾಗಿಯಾಗುತ್ತಿದ್ದೇನೆ’ ಎಂದು ಅನುಭವ ಹಂಚಿಕೊಂಡರು ವಿದ್ಯಾರ್ಥಿನಿ ಪಲ್ಲವಿ. ಈ ಎರಡು ದಶಕಗಳಲ್ಲಿ ಅಮೃತ, ಪಲ್ಲವಿಯವರಂತಹ ನೂರಾರು ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ.

‘ಸಂವೇದ’ ಕೇಂದ್ರದಲ್ಲಿ ಚಟುವಟಿಕೆ ಆಧಾರಿತ ಕಲಿಕೆಯ ಒಂದು ನೋಟ

ಸುಧಾರಿತ ತಂತ್ರಜ್ಞಾನ ಬಳಕೆ: ಕಾಲಕ್ಕೆ ತಕ್ಕಂತೆ ಕಲಿಕೆಯ ವಿಧಾನ ಸುಧಾರಿಸಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಕೆ, ಸಂಶೋಧನೆಗಳ ಮೂಲಕ ವಿಶೇಷ ಮಕ್ಕಳಿಗೆ ತರಬೇತಿ ನೀಡಲು ಸಂಸ್ಥೆ ಮುಂದಾಗಿದೆ. ಈಗ ಸಂವೇದ ಪರ್ಯಾಯ ಶಿಕ್ಷಣ ಮತ್ತು ಪುನಶ್ಚೇತನ ಸಂಪನ್ಮೂಲ ಕೇಂದ್ರ, ಹಾಗೂ 2014ರಿಂದ ಸಂವೇದ ಶಿಕ್ಷಕರ ತರಬೇತಿ ಕೇಂದ್ರವನ್ನೂ ಆರಂಭಿಸಿದೆ. ಸಂವೇದ ಶೈಕ್ಷಣಿಕ ಸಂಶೋಧನಾ ಕೇಂದ್ರ ಮತ್ತು ಸಂವೇದ ವಿಶೇಷ ಶಾಲೆಯನ್ನು ನಡೆಸಲಾಗುತ್ತಿದೆ.

‘ಸಂವೇದ’ ತರಬೇತಿ ಮತ್ತು ಸಂಶೋಧನ ಕೇಂದ್ರದಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳು ಹೆಚ್ಚಿದ್ದರು. ರಾಜ್ಯದ ಬೇರೆ ಭಾಗಗಳಿಂದ ಮಕ್ಕಳು ಈ ಸಂಸ್ಥೆಯಲ್ಲಿ ಕಲಿಯುತ್ತಿದ್ದಾರೆ. ಕಲಿಕಾ ಸಮಸ್ಯೆಯುಳ್ಳ ಮಕ್ಕಳಿಗೆ ಸಂಸ್ಥೆ 20 ಮಕ್ಕಳಿಗೆ ವಸತಿ ಸೌಲಭ್ಯ ಕಲ್ಪಿಸುತ್ತಿದೆ. ಉಳಿದ ಮಕ್ಕಳು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಇರುತ್ತಾರೆ. ಹಾಗೆಯೇ ಬುದ್ಧಿ ಮಾಂದ್ಯ ಮಕ್ಕಳು ಈ ಸಂಸ್ಥೆಯಲ್ಲಿ ಕಲಿಯುತ್ತಿದ್ದಾರೆ.
*

ಉದ್ಯೋಗ ಕೌಶಲ ತರಬೇತಿ

ಸಂವೇದ ಸಂಸ್ಥೆಯಲ್ಲಿ ಕಲಿಕೆ ಜತೆಗೆ, ಮಕ್ಕಳಿಗೆ ಜೀವನಕ್ಕೆ ನೆರವಾಗುವ ಉದ್ಯೋಗ ಕೌಶಲವನ್ನು ಹೇಳಿಕೊಡುತ್ತಿದೆ. ಅಡುಗೆ ಮಾಡುವುದು, ಸೈಕಲ್ ರಿಪೇರಿ, ಟೇಲರಿಂಗ್, ಜೆರಾಕ್ಸ್ ಮಶೀನ್ ರಿಪೇರಿ ತರಬೇತಿ ಸೇರಿದಂತೆ ಜೀವನ ನಿರ್ವಹಣೆಗೆ ಬೇಕಾಗುವ ಉದ್ಯೋಗ ತರಬೇತಿ ನೀಡುತ್ತಿದ್ದಾರೆ.

ಶಾಲೆಯ ಕಚೇರಿ ಸಂಪರ್ಕ : 08192-237057, ವೆಬ್‌ಸೈಟ್: www.samveda.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.