ADVERTISEMENT

ಶಾಲೆ ಆಯ್ಕೆ; ಇರಲಿ ಎಚ್ಚರ

ನೇಸರ ಕಾಡನಕುಪ್ಪೆ
Published 15 ಏಪ್ರಿಲ್ 2019, 19:46 IST
Last Updated 15 ಏಪ್ರಿಲ್ 2019, 19:46 IST
.
.   

ಮನೆಯಲ್ಲಿ ಮಗು ಬೆಳೆದು ಶಾಲೆಗೆ ಸೇರುವ ವಯಸ್ಸಿಗೆ ಬರುವುದು ಗೊತ್ತಾಗುವುದೇ ಇಲ್ಲ. ಆಗ ಪೋಷಕರ ಮುಂದೆ ನಿಲ್ಲುವ ಬಹುದೊಡ್ಡ ಪ್ರಶ್ನೆಯೆಂದರೆ ‘ಯಾವ ಶಾಲೆಗೆ ಸೇರಿಸುವುದು’ ಎಂದು.

ಅದರಲ್ಲೂ ಮಾರ್ಚ್‌ – ಏಪ್ರಿಲ್‌ ತಿಂಗಳೆಂದರೆ ಅದು ಶಾಲೆಗೆ ದಾಖಲಿಸುವ ಕಾಲ. ಎಲ್ಲ ಶಾಲೆಗಳ ಎದುರು ‘ದಾಖಲಾತಿ ಪ್ರಕ್ರಿಯೆ ಶುರುವಾಗಿದೆ’ ಎಂಬ ಫಲಕ ಹಾಗೂ ಜಾಹೀರಾತುಗಳು ರಾರಾಜಿಸುತ್ತವೆ. ಖಾಸಗಿ ಶಾಲೆ – ಸರ್ಕಾರಿ ಶಾಲೆ ಎನ್ನುವ ಭೇದ ಭಾವ ಚರ್ಚೆಯ ವಿಷಯವಾಗಿದೆ. ಏಕೆಂದರೆ, ಈಗ ಸಿಬಿಎಸ್‌ಇ ಪಠ್ಯಾಧಾರಿತ ಶಾಲೆಗಳು ಹೆಚ್ಚಾಗಿದ್ದು; ರಾಜ್ಯ ಪಠ್ಯ ಶಾಲೆಗಳನ್ನು ಲಘುವಾಗಿ ನೋಡುವ ಮನೋಭಾವವೂ ಹೆಚ್ಚುತ್ತಿದೆ.

ಈ ಹಿನ್ನೆಲೆಯಲ್ಲಿ ಎಲ್‌ಕೆಜಿ, ಯುಕೆಜಿಗೆ ಮಕ್ಕಳನ್ನು ಸೇರಿಸುವ ಪೋಷಕರಿಗೆ ಆಯ್ಕೆಗಳು ಸಾವಿರ ಸಾವಿರ ಇದ್ದರೂ ಗೊಂದಲವೂ ಅಷ್ಟೇ ಹಿರಿದಾಗಿದೆ. ಒಂದನೇ ತರಗತಿಗೆ ಸೇರಿಸುವ ಪೋಷಕರಿಗೆ ಶಾಲೆ ಪ್ರತಿಷ್ಠೆಯ ವಿಷಯವಾಗಿದೆ.

ADVERTISEMENT

ಸಿಬಿಎಸ್‌ಸಿ v/s ರಾಜ್ಯ ಪಠ್ಯ: ಸಿಬಿಎಸ್‌ಇ ಪಠ್ಯವನ್ನು ಕೇಂದ್ರ ಸರ್ಕಾರದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಸಮಿತಿ (ಎನ್‌ಸಿಇಆರ್‌ಟಿ) ಪ್ರಾರಂಭದಲ್ಲಿ ರೂಪಿಸಿದ್ದು, ಈಗ ಸಿಬಿಎಸ್‌ಇ ಸಮಿತಿಯೇ ರಚನೆಯಾಗಿದೆ. ರಾಷ್ಟ್ರಮಟ್ಟದಲ್ಲಿ ನಾಲ್ಕು ಡೆಮಾನ್‌ಸ್ಟ್ರೇಷನ್‌ ಶಾಲೆ (ಡಿಎಂಎಸ್) ಗಳನ್ನು ತೆರೆದಿದ್ದ ಎನ್‌ಸಿಇಆರ್‌ಟಿ ಶೈಕ್ಷಣಿಕ ಪ್ರಯೋಗಗಳನ್ನು ನಡೆಸಿ ಮಕ್ಕಳ ಸರ್ವತೋಮುಖ ವಿಕಸನಕ್ಕೆ ಶಿಕ್ಷಣ ಹೇಗೆ ಪೂರಕವಾಗಬಲ್ಲದು ಎಂಬುದನ್ನು ಪಠ್ಯರೂಪಕ್ಕೆ ತಂದಿತು. ಅಂತಹ, ಒಂದು ಶಾಲೆ ಮೈಸೂರಿನಲ್ಲೂ ಇದೆ. ಅದು ಬಳಿಕ ಸಿಬಿಎಸ್‌ಇಗೆ ಮಾರ್ಪಾಟುಗೊಂಡು ಕೇಂದ್ರೀಯ ವಿದ್ಯಾಶಾಲೆಗಳಲ್ಲಿ ಜಾರಿಗೆ ಬಂದಿತು. ಆರಂಭದಲ್ಲಿ ಸಿಬಿಎಸ್‌ಇ ಕಬ್ಬಿಣದ ಕಡಲೆ ಎಂದೇ ಪರಿಗಣಿತವಾಗುತ್ತಿತ್ತು. ಏಕೆಂದರೆ, ಎಸ್ಸೆಸ್ಸೆಲ್ಸಿ ಓದುವ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಮಟ್ಟಕ್ಕಿಂತಲೂ ದೊಡ್ಡ ಮಟ್ಟದ ಪಠ್ಯಗಳನ್ನು ಓದುತ್ತಿದ್ದರು. ಬಳಿಕ ಸಿಬಿಎಸ್‌ಇ ಪಠ್ಯಗಳನ್ನು ಖಾಸಗಿ ಶಾಲೆಗಳಿಗೆ ವಿಸ್ತರಿಸಲಾಯಿತು.

ಖಾಸಗಿ ಶಾಲೆಗಳ ಸಿಬಿಎಸ್‌ಇ ಪಠ್ಯಕ್ರಮ, ಕೇಂದ್ರೀಯ ಶಾಲೆಗಳ ಸಿಬಿಎಸ್‌ಇ ಭಿನ್ನವಾಗಿರುತ್ತದೆ. ಉದಾಹರಣೆಗೆ ಕೇಂದ್ರೀಯ ವಿದ್ಯಾಶಾಲೆಯಲ್ಲಿ ಕನ್ನಡ ಕಲಿಕೆಗೆ ಅವಕಾಶವೇ ಇಲ್ಲ. ಆದರೆ, ಖಾಸಗಿ ಸಿಬಿಎಸ್‌ಇ ಶಾಲೆಗಳಲ್ಲಿ ಕನ್ನಡವೂ ಸೇರಿದಂತೆ ಸ್ಥಳೀಯ ಭಾಷೆಗಳ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಅಂತೆಯೇ, ಕೇಂದ್ರೀಯ ವಿದ್ಯಾಲಯ ಶಾಲೆಗಳ ಜಾಲ ವಿಶಾಲವಾದುದು. ಇಡೀ ದೇಶದಾದ್ಯಂತ ಶಾಲೆಗಳಿವೆ.

ಹಾಗಾಗಿ, ಈ ಶಾಲೆಗಳಲ್ಲಿ ಶೈಕ್ಷಣಿಕ ಪ್ರಯೋಗ ವಿಫುಲವಾಗಿರುತ್ತದೆ. ವಿವಿಧ ಬಗೆಯ ಪಠ್ಯೇತರ ಚಟುವಟಿಕೆಗಳು, ಸಮಾವೇಶಗಳು, ಕ್ರೀಡಾಕೂಟಗಳು ನಡೆಯುತ್ತಿರುತ್ತವೆ. ಆದರೆ, ಸಿಬಿಎಸ್‌ಇ ಪಠ್ಯಕ್ರಮ ಹೊಂದಿರುವ ಖಾಸಗಿ ಶಾಲೆಗಳಲ್ಲಿ ಶುಲ್ಕ ಗಗನ ಕುಸುಮವಾಗಿದ್ದರೆ, ಕೇಂದ್ರೀಯ ವಿದ್ಯಾಲಯಗಳ ಶುಲ್ಕ ಶ್ರೀಸಾಮಾನ್ಯರ ಕೈಗೂ ಎಟಕುವಂತೆ ಇದೆ. ಅದರಲ್ಲೂ ‘ಡಿಎಂಎಸ್‌’ನಲ್ಲಿ ವಾರ್ಷಿಕ ಶುಲ್ಕ ₹ 2 ಸಾವಿರ ದಾಟುವುದಿಲ್ಲ!

ಆದರೆ, ಈಗ ರಾಜ್ಯ ಪಠ್ಯಕ್ರಮ ಶಾಲೆಗಳಿಗೂ ಸಿಬಿಎಸ್‌ಇ ಪಠ್ಯಕ್ರಮ ಶಾಲೆಗಳಿಗೂ ಇರುವ ವ್ಯತ್ಯಾಸ ಕ್ಷೀಣಿಸಿದೆ. ಏಕೆಂದರೆ, ರಾಜ್ಯ ಪಠ್ಯಕ್ರಮದಲ್ಲೂ ಈಗ ಬಹುತೇಕ ಸಿಬಿಎಸ್‌ಇ ಮಾದರಿಯನ್ನೇ ಅಳವಡಿಸಿಕೊಳ್ಳಲಾಗಿದೆ.

ರಾಜ್ಯಕ್ಕೆ ಸಂಬಂಧಿಸಿದ ಪಠ್ಯಗಳನ್ನು ಸೇರಿಸಲಾಗಿರುತ್ತದೆ ಎನ್ನುವುದನ್ನು ಬಿಟ್ಟರೆ ಮಿಕ್ಕಂತೆ ಎಲ್ಲ ವಿಷಯಗಳೂ ಏಕ ಸ್ವರೂಪದಲ್ಲೇ ಇರುತ್ತವೆ. ವಿಜ್ಞಾನ, ಗಣಿತ ವಿಷಯಗಳು ಬಹುತೇಕ ಒಂದೇ ಮಾದರಿಯಲ್ಲಿ ಇರುತ್ತವೆ. ಹಾಗಾಗಿ, ಸಿಬಿಎಸ್‌ಇಗೆ ಸೇರಿಸುತ್ತಿದ್ದ ಹಲವು ಪೋಷಕರು ರಾಜ್ಯ ಪಠ್ಯಕ್ರಮ ಶಾಲೆಗಳಿಗೇ ಮಕ್ಕಳನ್ನು ಸೇರಿಸಲು ಆರಂಭಿಸಿದ್ದಾರೆ.

ಅಲ್ಲದೇ, ಸಿಬಿಎಸ್‌ಇ ಪಠ್ಯಕ್ರಮವು ಮಕ್ಕಳಿಗೆ ಅತೀವ ಹೊರೆಯನ್ನು ಹೇರುವ ಕಾರಣ ಮಕ್ಕಳ ಮೇಲೆ ಒತ್ತಡ ಹೇರಿದಂತೆ ಆಗುತ್ತದೆ ಎಂಬ ವಾದವೂ ಇದೆ. ಹಾಗಾಗಿ, ಮಕ್ಕಳಿಗೆ ಪಠ್ಯ– ಪಠ್ಯೇತರ ಎರಡೂ ಚಟುವಟಿಕೆಗಳಿಗೆ ಆದ್ಯತೆ ನೀಡುವ ರಾಜ್ಯ ಪಠ್ಯಕ್ರಮ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪರಿಪಾಠವೂ ಈಚಿನ ದಿನಗಳಲ್ಲಿ ಹೆಚ್ಚುತ್ತಿದೆ.

ಸಾಮಾನ್ಯವಾಗಿ ರಾಜ್ಯಪಠ್ಯಕ್ರಮ ಹೊಂದಿರುವ ಖಾಸಗಿ ಶಾಲೆಗಳ ಶುಲ್ಕವು ₹ 12 ಸಾವಿರದಿಂದ ಶುರುವಾಗುತ್ತದೆ. ಶಾಲಾ ಅಭಿವೃದ್ಧಿ ಶುಲ್ಕವು ಆಯಾ ಶಾಲೆಯ ಮೇಲೆ ಅವಲಂಬಿತವಾಗಿರುತ್ತದೆ. ಕೊಂಚ ಉತ್ತಮವಾಗಿರುವ ಮೈಸೂರಿನ ಖಾಸಗಿ ಶಾಲೆಗಳ ಪೈಕಿ ಈ ಶುಲ್ಕವು ₹ 10 ಸಾವಿರದಿಂದ ಶುರುವಾಗುತ್ತದೆ. ಇನ್ನು ಸಿಬಿಎಸ್‌ಇ ಪಠ್ಯಕ್ರಮ ಖಾಸಗಿ ಶಾಲೆಗಳ ಶುಲ್ಕವು ರಾಜ್ಯ ಪಠ್ಯಕ್ರಮ ಖಾಸಗಿ ಶಾಲೆಗಳಿಗೆ ಹೋಲಿಸುವಂತಿಲ್ಲ. ಪ್ರತಿಷ್ಠಿತ ಶಾಲೆಗಳ ಶುಲ್ಕವು ₹ 1 ಲಕ್ಷ ದಾಟುತ್ತದೆ. ಮಿಕ್ಕಂತೆ ₹ 70 ಸಾವಿರ ಸರಾಸರಿ ಶುಲ್ಕ. ಅತಿ ಕಡಿಮೆ ಶುಲ್ಕ ಸ್ವೀಕರಿಸುವ ಮೈಸೂರಿನ ಸಿಬಿಎಸ್‌ಇ ಖಾಸಗಿ ಶಾಲೆಯ ಶುಲ್ಕ ವರ್ಷಕ್ಕೆ ₹ 38 ಸಾವಿರ ಇರುತ್ತದೆ (ಮೊದಲ ವರ್ಷ ಸ್ವೀಕರಿಸುವ ಶಾಲಾ ಅಭಿವೃದ್ಧಿ ಶುಲ್ಕ ಬಿಟ್ಟು).

ಸರ್ಕಾರಿ ಶಾಲೆಗಳೇನು ಕಳಪೆಯಲ್ಲ: ರಾಜ್ಯ ‍ಪಠ್ಯಕ್ರಮ ಪಾಲಿಸುತ್ತಿರುವ ಸರ್ಕಾರಿ ಶಾಲೆಗಳ ಗುಣಮಟ್ಟವೇನೂ ಕಳಪೆಯಾಗಿಲ್ಲ. ಉದಾಹರಣೆಗೆ ಮೈಸೂರು ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳ ಫಲಿತಾಂಶ ಶೇ 70 ದಾಟಿದೆ. ಅಂದರೆ, 100ಕ್ಕೆ 70ಕ್ಕೂ ಹೆಚ್ಚು ಮಂದಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ವಿಶಾಲವಾದ ಆಟದ ಮೈದಾನ, ವಿವಿಧ ಹಂತದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಆಯ್ಕೆಗೊಂಡ ಶಿಕ್ಷಕರು, ಉತ್ತಮ ಕಟ್ಟಡಗಳು ಈಗ ಇವೆ. ಅಲ್ಲದೇ, ನಗಣ್ಯ ಎನ್ನುವಷ್ಟು ಕಡಿಮೆ ಶುಲ್ಕ. ಜತೆಗೆ ಎಲ್ಲ ಜಾತಿ, ವರ್ಗಗಳ ಮಕ್ಕಳೂ ಓದುವ ಕಾರಣ ಸಾಮಾಜಿಕ ಮನಸ್ಥಿತಿಯನ್ನು ಮಕ್ಕಳು ಬೆಳೆಸಿಕೊಳ್ಳುವುದು ಈ ಶಾಲೆಗಳಲ್ಲಿ ಸಿಗುವ ದೊಡ್ಡ ಅವಕಾಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.