ADVERTISEMENT

Pv Web Exclusive | ಗೋಡೆಗಳೇ ಇಲ್ಲಿ ಸ್ಮಾರ್ಟ್‌ ಕ್ಲಾಸ್‌ಗಳು..!

ಗಾಣಧಾಳು ಶ್ರೀಕಂಠ
Published 12 ಸೆಪ್ಟೆಂಬರ್ 2020, 15:27 IST
Last Updated 12 ಸೆಪ್ಟೆಂಬರ್ 2020, 15:27 IST
ನೀಲಂನಗರದ ಮನೆಯೊಂದರ ಗೋಡೆಯ ಮೇಲೆ ಬರೆದಿರುವ ರೇಖಾಗಣಿತದ ಚಿತ್ರಗಳ ಪಾಠ ಮಾಡುತ್ತಿರುವ ಶಿಕ್ಷಕಎಎಫ್‌ಪಿ ಚಿತ್ರ
ನೀಲಂನಗರದ ಮನೆಯೊಂದರ ಗೋಡೆಯ ಮೇಲೆ ಬರೆದಿರುವ ರೇಖಾಗಣಿತದ ಚಿತ್ರಗಳ ಪಾಠ ಮಾಡುತ್ತಿರುವ ಶಿಕ್ಷಕಎಎಫ್‌ಪಿ ಚಿತ್ರ   
""

ಪಟ್ಟಣ, ನಗರಗಳಬಹುತೇಕ ಗೋಡೆಗಳೆಲ್ಲ ಸಿನಿಮಾ ಪೋಸ್ಟರ್‌ ಅಂಟಿಸಲು, ಘೋಷಣೆ ಬರೆಯಲು ಮೀಸಲಾಗಿರುತ್ತವೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ನೀಲಂ ನಗರದ ಮುನ್ನೂರು ಮನೆಗಳ ಗೋಡೆಗಳು ಮಕ್ಕಳಿಗೆ ಪಾಠ ಹೇಳಿಕೊಡುವ ಕಪ್ಪು ಹಲಗೆಗಳಾಗಿ ಪರಿವರ್ತನೆಯಾಗಿವೆ. ಆಶಾ ಮರಾಠಿ ವಿದ್ಯಾಲಯ ಹಾಕಿಕೊಟ್ಟಿರುವ ಗೋಡೆ ಬರಹದ ಕಲಿಕೆ ವಿಧಾನ ಮಾದರಿಯಾಗಿದೆ.

***

ಹರಿಯಾಣದ ರಾಜ್ಯದ ಗಡಿಭಾಗದ ಹಳ್ಳಿಯೊಂದರ ಸರ್ಕಾರಿ ಶಾಲೆ ಮಕ್ಕಳು ಆನ್‌ಲೈನ್‌ ಕ್ಲಾಸ್‌ಗಾಗಿ 50 ಕಿ.ಮೀ ದೂರು ಹೋಗಿಬರುತ್ತಿದ್ದರು. ಈ ಸುದ್ದಿ ತಿಳಿದ ಬಾಲಿವುಡ್ ನಟ ಸೋನು ಸೂದ್, ಆ ಮಕ್ಕಳಿಗೆ ಸ್ಮಾರ್ಟ್‌ಫೋನ್‌ ವ್ಯವಸ್ಥೆ ಮಾಡಿದರು.

ADVERTISEMENT

ಕೇರಳದಲ್ಲಿ ಕೇಬಲ್‌ ನೆಟ್‌ವರ್ಕ್‌ ಮೂಲಕ ಶಾಲಾ ಪಾಠಗಳನ್ನು ಪ್ರಸಾರ ಮಾಡುತ್ತಿದ್ದಾಗ, ಪಾಠಗಳನ್ನು ಕಲಿಯಲು ಕೆಲ ಸಿನಿಮಾ ತಾರೆಯರು ಬಡ ಮಕ್ಕಳಿರುವ ಕುಟುಂಬಗಳಿಗೆ ಉಚಿತವಾಗಿ ಸ್ಮಾರ್ಟ್ ಟಿವಿ ವಿತರಿಸಿದರು.‌ ನಮ್ಮ ರಾಜ್ಯದಲ್ಲೂ ಆನ್‌ಲೈನ್‌ ಕ್ಲಾಸ್‌ ಕಲಿಯುವ ಬಡಮಕ್ಕಳಿಗೆ ಸೆಕೆಂಡ್‌ಹ್ಯಾಂಡ್ ಸ್ಮಾರ್ಟ್‌ಫೋನ್ ಕೊಡಿಸುವ ಅಭಿಯಾನ ಕೂಡ ನಡೆಯುತ್ತಿದೆ.

ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ನೀಲಂನಗರದ ಆಶಾ ಮರಾಠಿ ವಿದ್ಯಾಲಯ ಶಾಲೆಯವರು ಮತ್ತಷ್ಟು ವಿಭಿನ್ನವಾಗಿ ಯೋಚಿಸಿ, ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿರುವ ವಿದ್ಯಾರ್ಥಿಗಳಿಗೆ ‘ಗೋಡೆ ಬರಹಗಳ‘ ಮೂಲಕ ಪಾಠ ಹೇಳಿಕೊಡಲು ಮುಂದಾಗಿದ್ದಾರೆ. ಪರಿಣಾಮವಾಗಿ, ತಮ್ಮ ಶಾಲೆಯ ಸುತ್ತಲಿರುವ ಮುನ್ನೂರು ಮನೆಗಳ ಗೋಡೆಗಳು ಮಕ್ಕಳಿಗೆ ಪಾಠ ಹೇಳಿಕೊಡುವ ಕಪ್ಪು ಹಲಗೆಗಳಾಗಿವೆ !

ಈ ಮುನ್ನೂರು ಮನೆಗಳ ಗೋಡೆಗಳ ಮೇಲೆ 1 ರಿಂದ 10ನೇ ತರಗತಿವರೆಗಿನ ಪಠ್ಯಗಳನ್ನು ಬರೆಸಿದ್ದಾರೆ. ಪ್ರತಿ ಗೋಡೆ ಮೇಲೆ ಒಂದೊಂದು ತರಗತಿಯ, ಒಂದೊಂದು ಪಠ್ಯದ ವಿಷಯವನ್ನು ಬರೆಸಿದ್ದಾರೆ. ಪುಸ್ತಕಗಳಲ್ಲಿರುವ ಮಾಹಿತಿಯನ್ನು ಸಂಕ್ಷಿಪ್ತಗೊಳಿಸಿ, ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಸರಳಗೊಳಿಸಿ, ಬರೆಸಿದ್ದಾರೆ. ಒಂದು ಮನೆಯ ಗೋಡೆಯ ಮೇಲೆ ಅಕ್ಷರಗಳು, ಅಂಕಿಗಳು, ಪದ, ವಾಖ್ಯರಚನೆ, ವ್ಯಾಕರಣದಂತಹ ಪಠ್ಯಗಳಿದ್ದರೆ, ಇನ್ನೊಂದು ಗೋಡೆಯ ಮೇಲೆ ಗಣಿತದ ರಚನೆಗಳಿವೆ. ಬೀಜಗಣಿತ, ಅಂಕಗಣಿತದ ಸಮೀಕರಣಗಳು, ವಿಜ್ಞಾನದ ಪ್ರಯೋಗಗಳನ್ನು ಬರೆಸಿದ್ದಾರೆ. ಸಮಾಜ, ಸಾಮಾನ್ಯ ಜ್ಞಾನದ ಅಂಶಗಳೂ ಆ ಗೋಡೆಗಳಲ್ಲಿ ಕಾಣಿಸುತ್ತವೆ.

ಮಕ್ಕಳು ಅನುಕೂಲವಾದ ಸಮಯದಲ್ಲಿ ತಮ್ಮ ತರಗತಿಯ ಪಠ್ಯಗಳಿರುವ ಗೋಡೆಯನ್ನು ಹುಡುಕಿ, ಅದರ ಎದುರಿಗೆ ನಿಂತು ಅಭ್ಯಾಸ ಮಾಡುತ್ತಾರೆ. ವ್ಯಕ್ತಿಗತ ಅಂತರ ಕಾಯ್ದುಕೊಂಡು, ಪಠ್ಯಗಳನ್ನು ಓದಿಕೊಳ್ಳುತ್ತಾರೆ. ’ಕೋವಿಡ್ ಮಾರ್ಗಸೂಚಿಯಂತೆ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಲೇ ಮಕ್ಕಳು ತಮ್ಮ ತಮ್ಮ ತರಗತಿಯ ಪಠ್ಯಗಳನ್ನು ಬರೆದಿರುವ ಗೋಡೆಗಳ ಎದುರು ನಿಂತು ಓದಿಕೊಳ್ಳುತ್ತಾರೆ’ ಎನ್ನುತ್ತಾರೆ ಅಶಾ ಮರಾಠಿ ವಿದ್ಯಾಲಯ ಪ್ರಾಥಮಿಕ ಶಾಲೆಯ ಶಿಕ್ಷಕ ರಾಮ್‌ ಗಾಯಕ್‌ವಾಡ್.

ಮಕ್ಕಳಿಗೆ ಬೀಜಗಣಿತದ ಸೂತ್ರಗಳನ್ನು ಹೇಳಿಕೊಡುತ್ತಿರುವ ಶಿಕ್ಷಕಿ

ಈ ಐಡಿಯಾ ಬಂದಿದ್ದು ಹೇಗೆ ?

ಆಶಾ ಮರಾಠಿ ವಿದ್ಯಾಲಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಎರಡೂ ವಿಭಾಗಕ್ಕೆ ಒಟ್ಟು 1700 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ. ಇವರಲ್ಲಿ ಬಹುತೇಕರು ಕೂಲಿಕಾರ್ಮಿಕರು ಮತ್ತು ಸಿದ್ಧ ಉಡುಪು ಘಟಕಗಳಲ್ಲಿ ಕೆಲಸ ಮಾಡುವವರ ಮಕ್ಕಳು.

ಕೋವಿಡ್‌ನಿಂದಾಗಿ ತರಗತಿಗಳನ್ನು ನಡೆಸುವಂತಿಲ್ಲ. ಆದರೆ, ಆನ್‌ಲೈನ್‌ ಕ್ಲಾಸ್ ಮಾಡುವುದು ಅನಿವಾರ್ಯವಾಗಿತ್ತು. ಆನ್‌ಲೈನ್ ತರಗತಿಗಳಿಗೆ ಸ್ಮಾರ್ಟ್‌ಫೋನ್ ಬೇಕು. ಕಡ್ಡಾಯವಾಗಿ ಉತ್ತಮ ಇಂಟರ್ನೆಟ್ ಸೌಕರ್ಯವಿರಬೇಕು. ಆದರೆ, ಇಂಥ ಸೌಲಭ್ಯಗಳನ್ನು ಪಡೆಯಲು ಆರ್ಥಿಕವಾಗಿ ದುರ್ಬಲರಾಗಿರುವ ಪೋಷಕರ ಬಳಿ ಹಣವಿರಲಿಲ್ಲ. ಹೀಗಾಗಿ ಅಂಥ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಎನ್ನುವುದು ಕನಸಿನ ಮಾತು. ಆದರೆ, ಹಣವಿರುವ ಮಕ್ಕಳು ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್ ಎದುರು ಕುಳಿತು ಆನ್‌ಲೈನ್ ಕ್ಲಾಸ್ ಕೇಳುತ್ತಿದ್ದಾಗ, ಈ ಮಕ್ಕಳು ಪೆಚ್ಚು ಮೋರೆ ಹಾಕಿಕೊಂಡು ಕುಳಿತುಕೊಳ್ಳುತ್ತಿದ್ದವು.

‘ಈ ಮಕ್ಕಳಿಗೆ ಏನಾದರೂ ಪರ್ಯಾಯ ಮಾರ್ಗ ಹುಡುಕಬೇಕು’ ಎಂದು ಶಾಲಾ ಸಿಬ್ಬಂದಿ ‘ವಿಷಯ ಮಂಥನ‘ದಲ್ಲಿ ತೊಡಗಿದ್ದಾಗ, ಗೋಡೆಗಳ ಮೇಲೆ ತರಗತಿಗಳ ಪಠ್ಯ ಪುಸ್ತಕದ ಮಾಹಿತಿಯನ್ನು ಬರೆಸುವಂತಹ ಐಡಿಯಾ ಹೊರಹೊಮ್ಮಿತು. ತಕ್ಷಣ ಕಾರ್ಯ ಪ್ರವೃತ್ತರಾದ ಶಿಕ್ಷಕರು ಗೋಡೆ ಮೇಲೆ ಏನು ಬರೆಸಬೇಕು, ಎಷ್ಟು ಬರೆಸಬೇಕು ಯಾವ ರೀತಿ ಬರೆಸಬೇಕೆಂದು ನೀಲನಕ್ಷೆ ತಯಾರಿಸಿದರು. ‘ಪಠ್ಯದಲ್ಲಿರುವ ಮಾಹಿತಿಯನ್ನು ಸಂಕ್ಷಿಪ್ತ ರೂಪಕ್ಕೆ ಇಳಿಸಿ, ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಗೋಡೆಗಳ ಮೇಲೆ ಬರೆಸಿದರು‘ ಎನ್ನುತ್ತಾ ಈ ಯೋಜನೆ ಕಾರ್ಯರೂಪಕ್ಕೆ ಬಂದಿದ್ದನ್ನು ರಾಮ್‌ ಗಾಯಕ್‌ವಾಡ್ ವಿವರಿಸಿದರು.

ಬೇರೆ ಶಾಲೆಗಳ ಮಕ್ಕಳಿಗೂ ಅನುಕೂಲ...

ಬಹುತೇಕ ಪಟ್ಟಣ, ನಗರಗಳ ಗೋಡೆಗಳೆಲ್ಲ ಸಿನಿಮಾ ಪೋಸ್ಟರ್‌ ಅಂಟಿಸುವುದಕ್ಕೋ, ಘೋಷಣೆ ಬರೆಯಲು ಮೀಸಲಾಗಿದ್ದರೆ, ನೀಲಂನಗರದ ಮನೆಯ ಗೋಡೆಗಳು ಮಕ್ಕಳಿಗೆ ಪಾಠ ಹೇಳುವ ಕಪ್ಪು ಹಲಗೆಗಳಂತಾಗಿವೆ.

ಶಾಲೆಯ ಸುತ್ತಲಿನ ಮನೆಗಳ ಗೋಡೆ ಗಳನ್ನೇ ಈ ಕಾರ್ಯಕ್ಕಾಗಿ ಬಳಸಿಕೊಂಡಿದ್ದಾರೆ. ಮಕ್ಕಳು ತಮಗೆ ಯಾವಾಗ ಆಸಕ್ತಿ ಮೂಡುತ್ತದೋ ಆಗ ಬಂದು, ಗೋಡೆಗಳ ಎದುರು ನಿಂತು ಓದಿಕೊಳ್ಳುತ್ತಾರೆ. ಕೆಲವು ಮಕ್ಕಳು ಗೋಡೆ ಪಕ್ಕದ ಕಲ್ಲಿನ ಮೇಲೆ ಕುಳಿತು ಆಸಕ್ತಿಯಿಂದ ಬರೆದುಕೊಳ್ಳುತ್ತಾರಂತೆ. ಬಿಳಿಯ ಗೋಡೆಯ ಮೇಲೆ ನೀಲಿ ಬಣ್ಣದ ಅಕ್ಷರ, ಚಿತ್ರಗಳು ಮೂಡಿರುವುದು ಮನೆಯ ಅಂದವನ್ನೂ ಹೆಚ್ಚಿಸಿದಂತಾಗಿದೆ.

‘ಗೋಡೆ ಮೇಲೆ ಬರೆಸಿರುವ ಈ ಬರಹಗಳು ಕೇವಲ ನಮ್ಮ ಶಾಲೆಯ ಮಕ್ಕಳಿಗಲ್ಲದೇ ಸುತ್ತಲಿನ ಮೂರ್ನಾಲ್ಕು ಶಾಲೆಯ ಮಕ್ಕಳಿಗೂ ಅನುಕೂಲವಾಗಿದೆ'ಎನ್ನುತ್ತಾರೆಆಶಾ ಮರಾಠಿ ವಿದ್ಯಾಲಯದ ಪ್ರಾಚಾರ್ಯೆ ತಸ್ಲಿಮಾ ಪಠಾಣ್.

ಗೋಡೆ ಪಾಠ– ತುಂಬಾ ಅನುಕೂಲ

ನೀಲಂನಗರದ ಕ್ಯಾಂಟಿನ್‌ನಲ್ಲಿ ಕೆಲಸ ಮಾಡುವ ನಾಗೇಶ್ ಕಲ್ಲೂರ್‌, ತನ್ನ ಮಗನನ್ನು ಆಶಾ ಮರಾಠಿ ವಿದ್ಯಾಲಯಕ್ಕೆ ಸೇರಿಸಿದ್ದಾರೆ.

'ಸ್ಮಾರ್ಟ್‌ಪೋನ್ ಖರೀದಿಸಿ, ನನ್ನ ಮಗನಿಗೆ ಆನ್‌ಲೈನ್ ಶಿಕ್ಷಣ ಕೊಡಿಸುವ ಶಕ್ತಿ ಇಲ್ಲ. ಆದರೆ, ಈ ಗೋಡೆ ಮೇಲೆ ಬರೆದಿರುವ ಪಠ್ಯಗಳು ನನ್ನ ಮಗನಿಗೆ ತುಂಬಾ ನುಕೂಲವಾಗಿದೆ. ಈ ಶಾಲೆಯ ಅನೇಕ ಮಕ್ಕಳು ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಕಾಯ್ದು ಕೊಂಡು ಗೋಡೆಗಳ ಎದುರು ನಿಂತು ಪಠ್ಯಗಳನ್ನು ಓದುತ್ತಾರೆ’ ಎಂದು ಖುಷಿಯಿಂದ ಹೇಳುತ್ತಾರೆ ನಾಗೇಶ್.

'ಕೊರೊನಾ ಸೋಂಕು ಮತ್ತು ಲಾಕ್‌ಡೌನ್‌ನಿಂದಾಗಿ ನಮ್ಮ ಕುಟುಂಬದ ಆದಾಯ ಪೂರ್ಣ ಕಡಿಮೆಯಾಗಿದೆ. ಇಂಥ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಸ್ಮಾರ್ಟ್‌ಫೋನ್ ಖರೀದಿಸಿ, ಆನ್‌ಲೈನ್ ಕ್ಲಾಸ್ ಕೊಡಿಸುವುದು ಕಷ್ಟ. ಈಗ ಗೋಡೆ ಮೇಲಿನ ಬರಹಗಳಿಂದ ನನ್ನ ಮಗುವಿಗೆ ತುಂಬಾ ಅನುಕೂಲವಾಗಿದೆ’ ಎನ್ನುತ್ತಾರೆ ಮತ್ತೊಬ್ಬ ವಿದ್ಯಾರ್ಥಿಯ ತಾಯಿ ಸುರೇಖಾ ಕೋರೆ.

ಆನ್‌ಲೈನ್‌ ಕ್ಲಾಸ್‌ಗಾಗಿ ಡಿಜಿಟಲ್‌ ಪರಿಕರಗಳನ್ನು ಖರೀದಿಸಲಾಗದೇ, ಶಿಕ್ಷಣ ವಂಚಿತರಾಗುವ ಮಕ್ಕಳಿಗೆ, ನೀಲಂನಗರದ ಆಶಾ ಮರಾಠಿ ವಿದ್ಯಾಲಯದವರು ಅನುಸರಿಸಿರುವ ಗೋಡೆ ಬರಹದ ವಿಧಾನ ಒಂದು ಮಾದರಿಯಾಗುತ್ತದೆ.

(ಆಧಾರ: ಪಿಟಿಐ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.