ADVERTISEMENT

ಅಧ್ಯಯನಶೀಲ ವ್ಯಕ್ತಿತ್ವ ನಿಮ್ಮದಾಗಬೇಕೇ?

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 0:53 IST
Last Updated 13 ಜನವರಿ 2025, 0:53 IST
   

ಪರೀಕ್ಷೆ  ಬಂತೆಂದರೆ  ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಪೋಷಕರಿಗೂ ಒತ್ತಡ. ಮಕ್ಕಳಿಗೆ ಪಠ್ಯದ ಓದು ಹಾಗೂ ಪರೀಕ್ಷೆ ಭಯವಿದ್ದರೆ, ಪೋಷಕರಿಗೆ ಮಕ್ಕಳು ಹೇಗೆ ಪರೀಕ್ಷೆ ಎದುರಿಸುತ್ತಾರೋ ಎಂಬ ಭಯವಿರುತ್ತದೆ.  ಪರೀಕ್ಷಾ ಸಮಯದಲ್ಲಿ ಅಧ್ಯಯನ ಮಾಡುವುದು ಹೇಗೆ? ಎಂಬುದು ಪ್ರತಿ ವಿದ್ಯಾರ್ಥಿಯ ಪ್ರಶ್ನೆ. ಮಹಾತ್ಮಗಾಂಧಿ ಒಂದು ಕಡೆ ಹೀಗೆ ಹೇಳಿದ್ದಾರೆ; ‘ನಾವು ಏನನ್ನು ಓದುತ್ತೇವೆಯೋ ಅದರ ಬಗ್ಗೆ ಚಿಂತಿಸಬೇಕು. ಅದನ್ನು ಜೀರ್ಣಿಸಿಕೊಳ್ಳಬೇಕು. ಅದು ನಿತ್ಯ ಜೀವನದ ಅವಿಭಾಜ್ಯ ಅಂಗವಾಗಬೇಕು’. ಒಮ್ಮೆ ಅಧ್ಯಯನಶೀಲ ವ್ಯಕ್ತಿತ್ವವನ್ನು ರೂಢಿಸಿಕೊಂಡರೆ ಎಂಥ ಪರೀಕ್ಷೆಯನ್ನಾದರೂ ಸುಲಭವಾಗಿ ಎದುರಿಸಬಹುದು. ಅಧ್ಯಯನಶೀಲ ವ್ಯಕ್ತಿತ್ವಕ್ಕಾಗಿ ಇಲ್ಲಿದೆ ಕೆಲವು ಸರಳ ಮಾರ್ಗಗಳು. 

  • ನಿಮ್ಮ ಬಗ್ಗೆ ನೀವೇ ಕೀಳು ಭಾವನೆಯನ್ನು ಇಟ್ಟುಕೊಳ್ಳಬೇಡಿ, ನನ್ನಿಂದಾಗದು ಎಂದುಕೊಳ್ಳಬೇಡಿ.

  • ಗಣಿತ ನಿಮಗೆ ಸುಲಭವಾಗಿರಬಹುದು ಮತ್ತು ವಿಜ್ಞಾನ ಕಷ್ಟವಾಗಿರಬಹುದು. ಇದಕ್ಕಾಗಿ ವಿಜ್ಞಾನದ ಅಭ್ಯಾಸದತ್ತ ನಿಮ್ಮ ಗಮನವನ್ನು ಮೊದಲು ಕೇಂದ್ರೀಕರಿಸಿ. 

    ADVERTISEMENT
  • ನೀವು ಒಂದು ವಿಷಯದಲ್ಲಿ ಪರಿಣತರಾಗಿರುತ್ತೀರಿ. ಆದರೂ ಕೂಡ ಅದರಲ್ಲಿ ಸಣ್ಣ ಸಣ್ಣ ತಪ್ಪುಗಳನ್ನು ಮಾಡುತ್ತಿರುತ್ತೀರಿ. ಇಂತಹ ಚಿಕ್ಕಪುಟ್ಟ ತಪ್ಪುಗಳತ್ತ ಹೆಚ್ಚು ಗಮನಕೊಡಿ. ಮತ್ತು ಆ ತಪ್ಪುಗಳಿಂದ ಹೊರಬರಲು ಪ್ರಾಮಾಣಿಕ ಪ್ರಯತ್ನ ಮಾಡಿ.

  • ನಿಮ್ಮ ಅಧ್ಯಯನಕ್ಕಾಗಿ ಒಂದು ವೇಳಾಪಟ್ಟಿಯನ್ನು ಮಾಡಿಕೊಳ್ಳಿ, ಯಾವುದೇ ಸಂದರ್ಭದಲ್ಲೂ ವೇಳಾಪಟ್ಟಿಯಿಂದ ವಿಚಲಿತರಾಗದಂತೆ ನೋಡಿಕೊಳ್ಳಿ.

  • ಭಾಷೆ ಮತ್ತು ಸಾಮಾಜಿಕ ಅಧ್ಯಯನಕ್ಕೆ ಸಂಬಂಧಿಸಿದ ವಿಷಯಗಳನ್ನು ಬೆಳಗಿನ (ಮುಂಜಾನೆ) ವೇಳೆಯಲ್ಲಿ ಅಭ್ಯಾಸ ಮಾಡಿ.

  • ಗಣಿತಕ್ಕೆ ಸಂಬಂಧಿಸಿದ ಸಮಸ್ಯೆ, ಚಿತ್ರ ಮತ್ತು ನಕಾಶೆಗಳನ್ನು ರಾತ್ರಿಯ ಸಮಯದಲ್ಲಿ ಮಾಡಿ. ಇವುಗಳನ್ನು ಮಾಡುವಾಗ ಬಳಪ ಇಲ್ಲವೇ ಉದ್ದವಾದ ಕರಿಹಲಗೆಯನ್ನು ಬಳಸಿಕೊಳ್ಳಿ.

  • ವಿಷಯವನ್ನು ಒಮ್ಮೆ ಸರಿಯಾಗಿ ಓದಿಕೊಳ್ಳಿ, ಬಳಿಕ ಪುಸ್ತಕ ಮುಚ್ಚಿಟ್ಟು ಏನನ್ನು ಓದಿರುವಿರೋ ಅದನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿ.  ನಿಮಗೆ ಜ್ಞಾಪಕಕ್ಕೆ ಬಂದ ಅಂಶಗಳನ್ನು ಒಂದು ಹಾಳೆಯಲ್ಲಿ ಬರೆಯಿರಿ.  ಪುನಃ ಪುಸ್ತಕವನ್ನು ಓದಿ, ನೀವು ಮರೆತಿರುವ ಅಂಶಗಳನ್ನು ಗುರುತಿಸಿಕೊಳ್ಳಿ, ಇದೇ ಕ್ರಮವನ್ನು ಪುನರಾವರ್ತಿಸಿ.

  • ಪಠ್ಯದ ಜತೆಗೆ ಪಠ್ಯೇತರ ಪುಸ್ತಕಗಳನ್ನು ಓದುವಂತೆ ಮಕ್ಕಳನ್ನು ಪ್ರೇರೇಪಿಸಿ. ಆಗ ಓದಿನಲ್ಲಿ ತನ್ನಿಂತಾನೆ ಆಸಕ್ತಿ ಮೂಡುತ್ತದೆ.

ಕಲಿಕೆ ಹೀಗಿರಲಿ
  • ಮೊದಲಿಗೆ ನಿಮ್ಮ ದೇಹದ ಆರೋಗ್ಯ ಮತ್ತು ಶುಚಿತ್ವವನ್ನು ಸರಿಯಾಗಿಟ್ಟುಕೊಳ್ಳಿ, ಶುಭ್ರವಾದ ಉಡುಪುಗಳನ್ನು ಧರಿಸಿಕೊಳ್ಳಿ, ಮನಸ್ಸಿನ ನೆಮ್ಮದಿಯನ್ನು ಕಾಪಾಡಿಕೊಳ್ಳಿ

  • ಒಂದು ವಿಷಯವನ್ನು ಅಭ್ಯಾಸ ಮಾಡುವಾಗ ಅದರ ಕಡೆಗೆ ಗಮನ ಕೊಡಿ. ಬೇರೆ ವಿಷಯಗಳತ್ತ ತಲೆಕೆಡಿಸಿಕೊಳ್ಳಬೇಡಿ

  • ನಾನು ಏನನ್ನೂ ಸಾಧಿಸಬಲ್ಲೆ (ಕಲಿಯಬಲ್ಲೆ) ಎಂಬ ಭಾವನೆಯನ್ನು ಇಟ್ಟುಕೊಳ್ಳಿ. ಇದಕ್ಕೆ ಸ್ವಲ್ಪ ಸಮಯ ತಗುಲಬಹುದು.

  • ಒಂದು ವಿಷಯದ ಸಣ್ಣಭಾಗವನ್ನು ಓದಿಕೊಳ್ಳಿ. ಪುಸ್ತಕವನ್ನು ಮುಚ್ಚಿ ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿ.

  • ಮುಖ್ಯಾಂಶಗಳನ್ನು ಒಂದು ಹಾಳೆಯಲ್ಲಿ ಬರೆದಿಟ್ಟುಕೊಳ್ಳಿ.

  • ಸೂತ್ರಗಳ, ವ್ಯಾಖ್ಯೆಗಳ, ದಿನಾಂಕ ಮತ್ತು ಘಟನೆ (ಸಮಾಜವಿಜ್ಞಾನಕ್ಕೆ ಸಂಬಂಧಿಸಿದಂತೆ) ಪಟ್ಟಿ ಮಾಡಿಟ್ಟುಕೊಳ್ಳಿ.

  • ಅಭ್ಯಾಸವನ್ನು ಯಾವುದೇ ಕಾರಣಕ್ಕೂ ಮುಂದಕ್ಕೆ ಹಾಕಬೇಡಿ. ಯಾವುದೇ ವಿಷಯವನ್ನಾದರೂ ಕಲ್ಪಿಸಿಕೊಂಡು, ನೆನಪಿನಲ್ಲಿಟ್ಟುಕೊಳ್ಳಲು ಪ್ರಯತ್ನಿಸಿ.

  • ಎಲ್ಲಾ ವಿಷಯಗಳನ್ನು ಮುತುವರ್ಜಿಯಿಂದ ಓದಿ, ಏಕೆಂದರೆ ತೃತೀಯ ಭಾಷೆ, ಪ್ರಥಮ ಭಾಷೆಯಷ್ಟೇ ಮುಖ್ಯವಾದದ್ದು. ಸಮಾಜವಿಜ್ಞಾನ, ಗಣಿತದಷ್ಟೇ ಮುಖ್ಯವಾದದ್ದು.  ಕನ್ನಡ, ಸಂಸ್ಕೃತ, ತಮಿಳು, ತೆಲುಗು, ಇಂಗ್ಲಿಷ್‌ಗಳಷ್ಟೇ ಮುಖ್ಯವಾದದ್ದು.

  • ಶೇಕಡ ನೂರಕ್ಕೆ ನೂರು ಅಂಕಗಳಿಸಬೇಕು ಎಂದಾದರೆ ಭಾಷಾ ವಿಷಯಗಳನ್ನೂ ಇತರೆ ವಿಷಯಗಳಷ್ಟೇ ಮುತುವರ್ಜಿಯಿಂದ ಓದಬೇಕು.

ಪರೀಕ್ಷೆ ಎದುರಿಸಲು ಹೀಗೆ ಮಾಡಿ...
  • ಪರೀಕ್ಷೆಗೆ ತಯಾರಾಗುವುದು ಒಂದು ಕಲೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಪ್ರಯತ್ನಿಸುವುದು ಬಹಳ ಮುಖ್ಯ.

  • ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ನಿಗಿದಿತ ಸಮಯದಲ್ಲಿ ಬಿಡಿಸಲು ಪ್ರಯತ್ನಿಸಿ.

  • ನಿಮ್ಮ ಸಾಮರ್ಥ್ಯಗಳು ಹಾಗೂ ನ್ಯೂನತೆಗಳ ಬಗ್ಗೆ ಗಮನಹರಿಸಿ.

  • ಪರೀಕ್ಷಾ ಕೊಠಡಿಯನ್ನು ವಿಶ್ವಾಸದಿಂದ ಪ್ರವೇಶಿಸಿ ಮತ್ತು ಪರೀಕ್ಷೆಗೆ ಹತ್ತು-ಇಪ್ಪತ್ತು ನಿಮಿಷಗಳಿರುವಾಗ ಓದುವುದನ್ನು ನಿಲ್ಲಿಸಿ.

  • ಪ್ರತಿಯೊಂದು ಹಾಳೆಯಲ್ಲೂ ಸರಿಯಾದ ಮಾರ್ಜಿನ್ ಬಿಡಿ.

  • ಪ್ರಶ್ನೆಪತ್ರಿಕೆ ತೆಗೆದುಕೊಂಡ ಕ್ಷಣವೇ ಉತ್ತರಿಸಲು ಪ್ರಾರಂಭಿಸಬೇಡಿ.

  • ಪ್ರತಿಯೊಂದು ಪ್ರಶ್ನೆಯನ್ನು ಎಚ್ಚರಿಕೆಯಿಂದ ಓದಿ ಸರಿಯಾಗಿ ಉತ್ತರಿಸಲು ಸಾಧ್ಯವಾಗುವ ಪ್ರಶ್ನೆಗೆ ಮೊದಲು ಉತ್ತರಿಸಿ.

  • ಕ್ಲಿಷ್ಟವಾದ ಪ್ರಶ್ನೆಗಳನ್ನು ಮತ್ತೊಮ್ಮೆ ಓದಿಕೊಳ್ಳಿ.

  • ನೀವು ಉತ್ತರಿಸುವ ಪ್ರಶ್ನೆಗಳ ಸಂಖ್ಯೆಯನ್ನು ಸರಿಯಾಗಿ ಬರೆಯಿರಿ.

  • ಪ್ರತಿಯೊಂದು ಉತ್ತರದ ನಡುವೆ ಸರಿಯಾದ ಅಂತರವನ್ನು ಬಿಡಿ. ಸಮಯವಿದ್ದಲ್ಲಿ ಒಂದು ಗೆರೆ ಎಳೆಯಿರಿ.

  • ಉತ್ತರಿಸುವಾಗ ಆಗಾಗ ಅಳಿಸಿಹಾಕುವುದು ಅಥವಾ ತಿದ್ದುವುದನ್ನು ತಪ್ಪಿಸಿ, ಅಂದವಾಗಿ ಬರೆಯಿರಿ.

  • ಮುಖ್ಯವಾದ ಪದಗಳ ಕೆಳಗೆ ಗೆರೆಯನ್ನು ಹಾಕಿ.

  • ಪ್ರಶ್ನೆಗಳನ್ನು ಉತ್ತರಿಸುವಾಗ ಆತುರ ಪಡಬೇಡಿ.

  • ಯಾವ ಪ್ರಶ್ನೆಗಳನ್ನು ಉತ್ತರಿಸಲು ಕಷ್ಟವಾಗುವುದೋ ಅದನ್ನು ಕಡೆಯಲ್ಲಿ ಉತ್ತರಿಸಿ.

  • ಎಲ್ಲಾ ಪ್ರಶ್ನೆಗಳನ್ನು ತಪ್ಪದೇ ಉತ್ತರಿಸಿ. ಯಾವ ಪ್ರಶ್ನೆಯನ್ನು ಉತ್ತರಿಸದೇ ಬಿಡಬೇಡಿ.

  • ಯಾವುದೇ ಪ್ರಶ್ನೆಗಳನ್ನು ಉತ್ತರಿಸುವಾಗ ಹೆಚ್ಚಿನ ಸಮಯವನ್ನು ವ್ಯಯಮಾಡಬೇಡಿ..

  • ಪರೀಕ್ಷೆಯ ನಿಗದಿತ ಸಮಯದ ಬಗ್ಗೆ ಗಮನವಿರಲಿ.

  • ಉತ್ತರ ಪತ್ರಿಕೆಯಲ್ಲಿ ನಿರೀಕ್ಷಕರಿಗೆ ಕೊಡುವ ಮೊದಲು ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಲಾಗಿದೆಯೇ ಎಂದು ಒಮ್ಮೆ ಪರೀಕ್ಷಿಸಿ.

  • ಒಂದು ವಿಷಯದ ಪ್ರಶ್ನೆ ಪತ್ರಿಕೆಯನ್ನು ಉತ್ತರಿಸಿದ ನಂತರ ಅದರ ಬಗ್ಗೆ ಹೆಚ್ಚು ಚಿಂತಿಸಬೇಡಿ. ಮುಂದಿನ ವಿಷಯಕ್ಕೆ ತಯಾರಾಗಿ.

ಪರೀಕ್ಷೆ ಬರೆಯುವುದು ಒಂದು ಕಲೆ. ಬಳಸುವ ಭಾಷೆ, ವಿಷಯ  ಮಂಡನೆ, ಮೌಲ್ಯಮಾಪಕರಿಗೆ ಇದು ಅರ್ಥವಾಗಬೇಕು. ಶ್ರಮವಹಿಸಿ ಅಧ್ಯಯನದಲ್ಲಿ ತೊಡಗಿ, ಆಸಕ್ತಿಯಿಂದ ಕಲಿತು, ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸಬೇಕು. ಆತ್ಮವಿಶ್ವಾಸವಿದ್ದರೆ ಆನೆಯನ್ನು ಪಳಗಿಸಬಹುದು ಎಂಬುದನ್ನು ಮರೆಯದಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.