ADVERTISEMENT

ಶತಮಾನೋತ್ಸವದ ಸಡಗರದಲ್ಲಿ ಸ್ಪೆಲ್ಲಿಂಗ್ ಬೀ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2025, 20:43 IST
Last Updated 2 ಫೆಬ್ರುವರಿ 2025, 20:43 IST
ಶತಮಾನೋತ್ಸವದ ಸಡಗರದಲ್ಲಿ ಸ್ಕಿಪ್ಸ್‌ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಪರ್ಧೆ
ಶತಮಾನೋತ್ಸವದ ಸಡಗರದಲ್ಲಿ ಸ್ಕಿಪ್ಸ್‌ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಪರ್ಧೆ   

‘ಏನು, ಇಂಗ್ಲಿಷ್ ಪದದ ಸ್ಪೆಲ್ಲಿಂಗ್ ಹೇಳಿದ್ರೆ ದುಡ್ಡು ಬರುತ್ತಾ?!’  ಆಶ್ಚರ್ಯವೇನಿಲ್ಲ, ಲಕ್ಷಗಟ್ಟಲೇ ಡಾಲರ್ ಬಹುಮಾನವೂ ಸಿಗುತ್ತದೆ. ಅಮೆರಿಕದ ಪ್ರತಿಷ್ಠಿತ ಸ್ಕಿಪ್ಸ್‌ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಇದುವರೆಗೆ ಗೆದ್ದಿರುವವರಲ್ಲಿ ಭಾರತೀಯ ಮೂಲದವರೇ ಅಧಿಕ!

2024ರ ಅಮೆರಿಕದ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ವಿಜೇತರಾದ ಫ್ಲೋರಿಡಾದ 12 ವರ್ಷದ ವಿದ್ಯಾರ್ಥಿ ಬೃಹತ್ ಸೋಮ, 2023ರಲ್ಲಿ ದೇವ್ ಶಾ,  2022ರಲ್ಲಿ ಹರಿಣಿ ಲೋಗನ್, 2019 ರಲ್ಲಿನ 8 ಜನ ವಿಜೇತರಲ್ಲಿ ರಿಶಿಕಾ ಗಂಧಶ್ರೀ, ಸಾಕೇತ್ ಸುಂದರ್, ಶ್ರುತಿಕಾ ಪಧ್ಯಾ, ಸೋಹಂ ಸುಖತಂಕರ್, ಅಭಿಜಯ್ ಕೊಡಲಿ,  ರೋಹನ್ ರಾಜಾ, 2018ರಲ್ಲಿ ಕಾರ್ತಿಕ್ ನಿಮ್ಮಾನಿ, 2017ರಲ್ಲಿ ಅನನ್ಯಾ ವಿನಯ್, 2016ರಲ್ಲಿ ನಿಹಾರ್ ಸಾಯಿರೆಡ್ಡಿ ಜಂಗಾ ಮತ್ತು ಜಯರಾಮ ಹತ್ವಾರ್, 2015ರಲ್ಲಿ   ವನ್ಯಾ ಶಿವಶಂಕರ್ ಮತ್ತು ಗೋಕುಲ್ ವೆಂಕಟಾಚಲಂ, 2014ರಲ್ಲಿ ಶ್ರೀರಾಮ್ ಜೆ. ಹತ್ವಾರ್, 2013ರಲ್ಲಿ ವಿಜೇತನಾದ ಅರವಿಂದ್ ಮಹಾಂಕಾಳಿ, 2012ರಲ್ಲಿ ಸ್ನಿಗ್ಧಾ ನಂದಿಪಟ್ಟಿ, 2011ರಲ್ಲಿ ಸುಕನ್ಯಾ ರಾಯ್, 2010ರಲ್ಲಿ ಚೆನ್ನೈ ಮೂಲದ ಅನಾಮಿಕಾ ವೀರಮಣಿ,  2009ರಲ್ಲಿ ಮೈಸೂರು ಮೂಲದ ಹುಡುಗಿ ಕಾವ್ಯ ಶಿವಶಂಕರ್, 2008ರಲ್ಲಿ ಸಮೀರ್ ಮಿಶ್ರಾ,  ಮೊದಲಾದ ಪ್ರಥಮಸ್ಥಾನ ಗಳಿಸಿದ ಭಾರತೀಯ ಮೂಲದ ಪುಟಾಣಿಗಳು ಭಾರತೀಯ ಬುದ್ಧಿಮತ್ತೆಯ ಅಪರೂಪದ ಪ್ರತೀಕಗಳಾಗಿದ್ದಾರೆ.  

2024ರ ವಿಜೇತನಿಗೆ ಸ್ಕಿಪ್ಸ್‌ ಕಪ್ ಟ್ರೋಫಿಯೊಂದಿಗೆ ಸಿಕ್ಕ ಒಟ್ಟು ಬಹುಮಾನದ ಮೊತ್ತ 50,000 ಡಾಲರ್ ನಗದು (ಸುಮಾರು 43.20 ಲಕ್ಷ ರೂಪಾಯಿಗಳು), ಮೆರಿಯಮ್ ವೆಬ್‌ಸ್ಟರ್ ಡಿಕ್ಷನರಿ ಮತ್ತು ಬ್ರಿಟಾನಿಕ ವಿಶ್ವಕೋಶ ಸೇರಿದಂತೆ ಹಲವು ಪುಸ್ತಕ ರೂಪದ ಬಹುಮಾನಗಳು, ಸ್ಮರಣಿಕೆಗಳು, ಇತ್ಯಾದಿ. ಒಳ್ಳೆಯ ಪ್ರೋತ್ಸಾಹ, ಅಲ್ಲವೇ?

ADVERTISEMENT

1925ರಲ್ಲಿ ಲೂಯಿಸ್‌ವಿಲ್ಲೆಯ  The Courier Journal ಆರಂಭಿಸಿದ ಸ್ಪೆಲ್ಲಿಂಗ್ ಬೀ ಸ್ಪರ್ಧೆಯನ್ನು E.W. Scripps Company ವಹಿಸಿಕೊಂಡು Scripps Howard National Spelling Bee ಎಂಬ ಹೆಸರಿನೊಂದಿಗೆ ಖ್ಯಾತಿಗಳಿಸಿ, ಈಗ Scripps National Spelling Bee ಎಂಬ ಅಮೆರಿಕದ ಮಕ್ಕಳ ಅಚ್ಚುಮೆಚ್ಚಿನ ಸ್ಪರ್ಧೆಯಾಗಿ ರೂಪುಗೊಂಡಿದೆ. 

ಶತಮಾನೋತ್ಸವ ಕಂಡ ಈ ಸ್ಪರ್ಧೆಗಳು ಪ್ರತಿವರ್ಷವೂ ಎಡೆಬಿಡದೆ ನಡೆಯುತ್ತಾ ಬಂದಿವೆ. (ದ್ವಿತೀಯ ವಿಶ್ವಯುದ್ಧ ಕಾಲದಲ್ಲಿ 1943-45 ರಲ್ಲಿ ಮತ್ತು ಮಹಾಮಾರಿ ಕೋವಿಡ್-19 ಪಿಡುಗಿನಿಂದಾಗಿ 2020 ರಲ್ಲಿ ಸ್ಪರ್ಧೆಗಳು ನಡೆದಿರಲಿಲ್ಲ.)  2025 ರಲ್ಲಿ ಆಯೋಜಿತವಾಗುತ್ತಿರುವುದು 97ನೇ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಪರ್ಧೆ.

ಅಮೆರಿಕದ ಸ್ಥಳೀಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಿಗೆ ಅಧಿಕೃತವಾದ ಪದಗಳ ಪಟ್ಟಿಯನ್ನು Webster’s Third New International Dictionary (Unabridged) ಪದಕೋಶ ಮತ್ತು Spell It ಸಂಕಲನದಿಂದ ಆಯ್ದುಕೊಳ್ಳಲಾಗುತ್ತಿದೆ. ಸ್ಪರ್ಧೆಯಲ್ಲಿ ಪದವೊಂದನ್ನು ಓದಿ ಹೇಳಲಾಗುತ್ತಿದ್ದು ಸ್ಪರ್ಧಿಗಳು ಆ ಪದದ ಸ್ಪೆಲ್ಲಿಂಗ್ ಅನ್ನು ತಿಳಿಸಬೇಕು. 

ಪದ ಯಾವುದು ಎಂಬುದನ್ನು ತಿಳಿದುಕೊಳ್ಳಲು ಸ್ಪರ್ಧಿಯು ಆ ಪದದ ವ್ಯಾಖ್ಯೆ (Definition), ವಾಕ್ಯಾಂಶ ( Part of speech), ವಾಕ್ಯದಲ್ಲಿ ಪದದ ಬಳಕೆ (Use in a sentence), ವ್ಯುತ್ಪತ್ತಿ (etymology), ಆ ಪದದ ಪರ್ಯಾಯ ಉಚ್ಚಾರಗಳು (Alternate pronunciations), ಪದದ ಮೂಲ (Root) ಮುಂತಾದ ವಿವರಗಳನ್ನು ಕೇಳಿ ತಿಳಿಯಲು ಅವಕಾಶವಿದೆ.

ಎರಡೂವರೆ ನಿಮಿಷ ಕಾಲಾವಕಾಶದಲ್ಲಿ ಇಷ್ಟೆಲ್ಲಾ ಕಸರತ್ತು ನಡೆದು ಸರಿಯಾದ ಸ್ಪೆಲ್ಲಿಂಗ್ ಹೇಳಿದ ಮಗು ಗೆಲ್ಲುತ್ತದೆ, ಮುಂದಿನ ಸುತ್ತಿಗೆ ಅವಕಾಶ ಗಿಟ್ಟಿಸುತ್ತದೆ.  ಅಂತಿಮ ಹಂತದ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನದ ಜೊತೆಗೆ ಹಲವು ಗಿಫ್ಟ್ ಹ್ಯಾಂಪರ್‌ಗಳ ಸುರಿಮಳೆ. 

ಹದಿನೈದು ವರ್ಷ ದಾಟಿರದ, ಮೂರನೇ ಗ್ರೇಡ್‌ನಿಂದ ಎಂಟನೇ ಗ್ರೇಡ್‌ವರೆಗಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು ಆಯಾಯ ಗ್ರೇಡಿನ ಮಕ್ಕಳಿಗಾಗಿಯೇ ಪ್ರತ್ಯೇಕ ಮಾದರಿ ಪದಪಟ್ಟಿಯನ್ನು ನೀಡಲಾಗುತ್ತದೆ.  ನಿರ್ದಿಷ್ಟ ಪದವನ್ನು ಉಚ್ಚರಿಸಿದಾಗ ಸರಿಯಾದ ಸ್ಪೆಲ್ಲಿಂಗ್ ಹೇಳಿದ ಮಕ್ಕಳು ಮುಂದಿನ ಹಂತಕ್ಕೆ ಆಯ್ಕೆಯಾಗುತ್ತಾರೆ. 

ಅಂತಿಮ ಹಂತದ ಸ್ಪರ್ಧಿಗಳಿಗೂ ಪೂರ್ವ ಸಿದ್ಧತೆಗಾಗಿ ಪದಪಟ್ಟಿಯನ್ನು ನೀಡಲಾಗಿರುತ್ತದೆಯಾದರೂ ಪದಗಳ ಆಯ್ಕೆ ಕಠಿಣವಾಗಿರುತ್ತದೆ. ನಮ್ಮ ಪದ ಸಂಪತ್ತಿನ ಅಳತೆಗೋಲು ಇದು!

ಶಿಕ್ಷಕರು ಪಾಠಮಾಡುವಾಗ ಮಕ್ಕಳಿಗೆ ಈ ರೀತಿಯ ಸ್ಪರ್ಧೆಗಳ ಬಗ್ಗೆ ತಿಳಿಸಿದಲ್ಲಿ, ಪೋಷಕರು ಪ್ರೋತ್ಸಾಹಿಸಿದಲ್ಲಿ ಕಲಿಕೆಯಲ್ಲಿ ಸ್ಪರ್ಧೆ ಏರ್ಪಟ್ಟು ಮಕ್ಕಳು ಹೆಚ್ಚು ಹೆಚ್ಚು ಓದಲು, ಬೌದ್ಧಿಕ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಪ್ರೇರೇಪಣೆ ದೊರೆತಂತಾಗುತ್ತದೆ. 

ಈ ರೀತಿಯ ಸ್ಪರ್ಧೆಗಳನ್ನು ಅಕಾಡೆಮಿಕ್ ಡೆಕಾಥ್ಲಾನ್ ರೀತಿ ಆಡಿಸಬಹುದು.  ಶಾಲಾ ಕಾಲೇಜುಗಳ ವಾರ್ಷಿಕ ಸ್ಪರ್ಧೆಗಳಲ್ಲಿ ಸೇರಿಸಿ ತರಬೇತಿ ಕೊಡಬಹುದು.  ಭಾರತೀಯ ಸ್ಪೆಲ್ಲಿಂಗ್ ಬೀ ಇತ್ತೀಚೆಗೆ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಇಂಗ್ಲಿಷ್ ಅಲ್ಲದೆ ಇತರೆ ಭಾಷೆಗಳಲ್ಲಿಯೂ ಸ್ಪರ್ಧೆಗಳು ನಡೆಯುತ್ತಿವೆ. ಹೆಚ್ಚಿನ ಮಾಹಿತಿಗೆ ಭೇಟಿ ಮಾಡಿ: 

https://spellingbee.com/ https://indiaspellingbee.com

https://en.wikipedia.org/wiki/Scripps_National_Spelling_Bee

ಶತಮಾನೋತ್ಸವದ ಸಡಗರದಲ್ಲಿ ಸ್ಕಿಪ್ಸ್‌ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಪರ್ಧೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.