ಸಾಂದರ್ಭಿಕ ಚಿತ್ರ
ಮೈಸೂರು: ‘ಪಠ್ಯಪುಸ್ತಕವನ್ನು ಚೆನ್ನಾಗಿ ಅಭ್ಯಾಸ ಮಾಡಿದರೆ ಹಾಗೂ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ವಿಶ್ಲೇಷಣಾತ್ಮಕವಾಗಿ ತಿಳಿದುಕೊಂಡಿದ್ದರೆ ವಿದ್ಯಾರ್ಥಿಗಳು ಇಂಗ್ಲಿಷ್ ವಿಷಯದಲ್ಲೂ ಗರಿಷ್ಠ ಅಂಕಗಳನ್ನು ಗಳಿಸಬಹುದು’ ಎಂದು ತಿಳಿಸುತ್ತಾರೆ ಮೈಸೂರಿನ ಕುಕ್ಕರಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ಬಿ.ಆರ್. ವಾಣಿ.
18 ವರ್ಷಗಳಿಂದ ಇಂಗ್ಲಿಷ್ ಬೋಧಿಸುತ್ತಿರುವ ಅವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಲವು ಸಲಹೆಗಳನ್ನು ಇಲ್ಲಿ ನೀಡಿದ್ದಾರೆ. ಇವುಗಳನ್ನು ಗಮನಿಸಿಕೊಂಡು ಸಿದ್ಧವಾದರೆ ಹೆಚ್ಚು ಅಂಕ ಪಡೆದುಕೊಳ್ಳಬಹುದು ಎನ್ನುತ್ತಾರೆ ಅವರು.
ಇಂಗ್ಲಿಷ್‌ನಲ್ಲಿ ಪ್ರೋಸ್ 8, ಪೊಯೆಟ್ರಿ 8 ಹಾಗೂ ಸಪ್ಲಿಮೆಂಟ್ರಿ ರೀಡಿಂಗ್ 4 ಪಾಠಗಳಿವೆ.
ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳು ನಮ್ಮ ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಇಂಗ್ಲಿಷ್ ಕಷ್ಟ ಎನ್ನುವ ಮನೋಭಾವ ಅವರಲ್ಲಿರುತ್ತದೆ. ಆದರೆ, ಚೆನ್ನಾಗಿ ಓದಿಕೊಂಡರೆ ಕಷ್ಟವೇನೂ ಆಗುವುದಿಲ್ಲ. ಅವರೆಲ್ಲರ ನೆರವಿಗೆಂದೇ ಇಲಾಖೆಯಿಂದ ‘ಪಾಸಿಂಗ್ ಪ್ಯಾಕೇಜ್’ ಮಾಡಲಾಗಿದೆ. ಅದರಂತೆ ಅಭ್ಯಾಸ ಮಾಡಿಸುತ್ತಿದ್ದೇವೆ.
ಒಟ್ಟು 100 ಅಂಕಗಳಲ್ಲಿ 20 ಅಂಕಗಳು ಆಂತರಿಕ ಅಂಕವಾಗಿರುತ್ತವೆ. ಉಳಿದ 80 ಅಂಕಗಳಿಗೆ ಲಿಖಿತ ಪರೀಕ್ಷೆಯನ್ನು ವಿದ್ಯಾರ್ಥಿಗಳು ಎದುರಿಸಬೇಕು. ಪಾಸಾಗಬೇಕೆಂದರೆ, ಅದರಲ್ಲಿ ಕನಿಷ್ಠ 28 ಅಂಕಗಳನ್ನು ಪಡೆಯಲೇಬೇಕು.
ಆ 28 ಅಂಕಗಳನ್ನು ತೆಗೆಯಲು ಸುಲಭವಾದ ದಾರಿಗಳಿವೆ. 2 ಪದ್ಯಗಳು ಕಂಠಪಾಠಕ್ಕೆ ಕಡ್ಡಾಯವಾಗಿ ಪ್ರಶ್ನೆಪತ್ರಿಕೆಯಲ್ಲಿ ಬರುವುದರಿಂದ ಒಂದನ್ನಾದರೂ ಕಂಠಪಾಠ ಮಾಡಿದ್ದರೆ ಅದರಲ್ಲಿ 4 ಅಂಕಗಳನ್ನು ಸುಲಭವಾಗಿ ಪಡೆಯಬಹುದು. ಲೆಟರ್ ರೈಟಿಂಗ್ ವಿಧಾನವನ್ನು ಸರಿಯಾಗಿ ಅಭ್ಯಾಸ ಮಾಡಿ ಕಲಿತಿದ್ದಲ್ಲಿ 5 ಅಂಕಗಳನ್ನು ಗಳಿಸಬಹುದು.
ಪ್ರೊಫೈಲ್ ರೈಟಿಂಗ್‌ನಲ್ಲಿ (ವ್ಯಕ್ತಿಯ ವಿವರವನ್ನು ಪ್ಯಾರಾಗ್ರಾಫ್ ರೂಪದಲ್ಲಿ ಬರೆಯಬೇಕು). ಅದರಲ್ಲಿ 3 ಅಂಕಗಳು ಬರುತ್ತವೆ; ಚೆನ್ನಾಗಿ ಬರೆದರೆ ಅಂಕಗಳನ್ನು ಪಡೆದುಕೊಳ್ಳಬಹುದು.
‘ಸ್ಟೋರಿ ಡೆವಲಪ್‌ಮೆಂಟ್’ನಲ್ಲಿ ‘ಕ್ಲೂ’ ಕೊಟ್ಟಿರಲಾಗುತ್ತದೆ. ಅವುಗಳ ಸಹಾಯದಿಂದ ವಾಕ್ಯ ರಚನೆ ಮಾಡಿದರೆ 3 ಅಂಕ ಸಿಗುತ್ತದೆ.
‘ಪಿಕ್ಚರ್ ಡಿಸ್ಕ್ರಿಪ್ಶನ್’ ವಿಭಾಗದಲ್ಲಿ ಕೊಡಲಾಗುವ ಚಿತ್ರವನ್ನು ಗಮನಿಸಿ ಚಿತ್ರಕ್ಕೆ ಸಂಬಂಧಿಸಿದಂತೆ ವಾಕ್ಯಗಳನ್ನು ರಚಿಸಿದರೆ 3 ಅಂಕಗಳನ್ನು ಪಡೆಯಬಹುದು.
2 ಅಥವಾ 3 ಪದ್ಯಗಳ ಸಮ್ಮರಿ (ಸಾರಾಂಶ) ಕಡ್ಡಾಯವಾಗಿ ಕೇಳಲಾಗುತ್ತದೆ. ಅವು ಗೊತ್ತಿದ್ದರೆ 7ರಿಂದ 9 ಅಂಕಗಳವರೆಗೂ ಪಡೆಯಬಹುದು.
ಎಂಸಿಕ್ಯೂಗಳು ಗ್ರಾಮರ್‌ಗೆ ಸಂಬಂಧಿಸಿದಂತೆ ಬರುತ್ತವೆ. ತುಂಬಾ ಸುಲಭವಾಗಿರುತ್ತವೆ. ಅವುಗಳನ್ನು ಕಲಿತುಕೊಳ್ಳಬೇಕು. ಅದರಲ್ಲಿ 4 ಅಂಕಗಳನ್ನು ಗಳಿಸಬಹುದು.
ಬಿ.ಆರ್. ವಾಣಿ
ಇನ್ನೂ ಹೆಚ್ಚು ಸ್ಕೋರ್ ಮಾಡುವುದಕ್ಕೆ ಹೆಚ್ಚು ಶ್ರಮಪಡಬೇಕು. ಮಂಡಳಿಯಿಂದ ನೀಡಲಾಗಿರುವ 4 ಮಾದರಿ (ಮಾಡೆಲ್) ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಬೇಕು. ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಸಾಲ್ವ್ ಮಾಡಬೇಕು. ಆಗ, ಎಂತಹ ಪ್ರಶ್ನೆಗಳು ಬರಬಹುದು ಎಂಬುದನ್ನು ಅಂದಾಜಿಸಬಹುದು.
2, 3 ಅಂಕದ ಪ್ರಶ್ನೆಗಳಿಗೆ ಹಾಗೂ 3 ಅಂಕದ ಎಕ್ಸ್‌ಟ್ರ್ಯಾಕ್ಟ್‌ಗಳಿಗೆ ಉತ್ತರ ಬರೆಯಲು ಪ್ರತಿ ಪಾಠವನ್ನೂ ಚೆನ್ನಾಗಿ ಓದಿಕೊಂಡಿರಬೇಕು. 4 ಎಕ್ಸ್‌ಟ್ರ್ಯಾಕ್ಟ್‌ಗಳಲ್ಲಿ ಮೂರು ಪ್ರೋಸ್‌ನಿಂದ ಹಾಗೂ ಒಂದು ಪದ್ಯದಿಂದ (ಪೊಯೆಟ್ರಿ) ಬಂದಿರುತ್ತದೆ. ಇವುಗಳಿಗೆ ಸಿದ್ಧವಾಗಲು ಪಠ್ಯಪುಸ್ತಕವನ್ನು ಕನಿಷ್ಠ 5ರಿಂದ 6 ಬಾರಿಯಾದರೂ ಓದಿಕೊಂಡಿರಬೇಕು. ಅದರಲ್ಲೇ ಪ್ರಶ್ನೆಗಳನ್ನು ಆಯ್ಕೆ ಮಾಡಲಾಗುತ್ತದೆ.
ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಗಮನಿಸಿದರೆ, ಪ್ರಬಂಧವನ್ನು ಸಾಮಾನ್ಯವಾಗಿ ಯಾವ ವಿಷಯದ ಮೇಲೆ ಕೇಳಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಬಹುದು. 3 ಟಾಪಿಕ್‌ಗಳಲ್ಲಿ ಒಂದಕ್ಕೆ ಮಾತ್ರ ಉತ್ತರ ಬರೆಯಬೇಕಾಗುತ್ತದೆ. ವಿದ್ಯಾರ್ಥಿಗಳು ತಮಗೆ ಹೆಚ್ಚು ವಿಷಯ ಗೊತ್ತಿರುವ ಟಾಪಿಕ್ ಆಯ್ಕೆ ಮಾಡಿಕೊಳ್ಳಬೇಕು.
ಗರಿಷ್ಠ ಅಂಕ ಗಳಿಸಲು ಪ್ರಸಂಟೇಷನ್ ಬಹಳ ಮುಖ್ಯ. ಉತ್ತಮವಾದ ಕೈಬರಹ ಇರಬೇಕು. ಪ್ರಶ್ನೆಯ ಸಂಖ್ಯೆಯನ್ನು ಸರಿಯಾಗಿ ನಮೂದಿಸಬೇಕು.
(ನಿರೂಪಣೆ: ಎಂ.ಮಹೇಶ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.