ADVERTISEMENT

SSLC Results | ಕಲ್ಯಾಣ ಕರ್ನಾಟಕ: ಸೊನ್ನೆ ಸುತ್ತಿದ 44 ಶಾಲೆಗಳು

ಕಲಬುರಗಿ ಜಿಲ್ಲೆಯ 18 ಶಾಲೆಗಳಲ್ಲಿ ಒಬ್ಬರೂ ತೇರ್ಗಡೆಯಾಗಿಲ್ಲ

ಮಲ್ಲಿಕಾರ್ಜುನ ನಾಲವಾರ
Published 10 ಮೇ 2024, 0:10 IST
Last Updated 10 ಮೇ 2024, 0:10 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕಲಬುರಗಿ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಲಬುರಗಿ ವಿಭಾಗದ ಏಳು ಜಿಲ್ಲೆಗಳ 44 ಶಾಲೆಗಳು ‘ಶೂನ್ಯ’ ಫಲಿತಾಂಶ ದಾಖಲಿಸಿವೆ.

ರಾಜ್ಯದಾದ್ಯಂತ ಒಟ್ಟು 78 ಶಾಲೆಗಳು ‘ಸೊನ್ನೆ’ ಸುತ್ತಿದ್ದು, ಅವುಗಳಲ್ಲಿ ಕಲಬುರಗಿ ವಿಭಾಗದ್ದೇ 44 ಶಾಲೆಗಳಿವೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಕೆಆರ್‌ಡಿಬಿ) ‘ಅಕ್ಷರ ಮಿತ್ರ’ದಡಿ ಅತಿಥಿ ಶಿಕ್ಷಕರ ನೇಮಕ ಹಾಗೂ ಪರೀಕ್ಷೆಗೆ ನೆರವಾಗಲು ಮಕ್ಕಳಿಗೆ ‘ಕಲಿಕಾ ಆಸರೆ’ ಪುಸ್ತಕಗಳ ವಿತರಣೆಯಂತಹ ಉಪಕ್ರಮಗಳನ್ನು ಕೈಗೊಂಡಿದ್ದರೂ ಫಲಿತಾಂಶದಲ್ಲಿ ಸುಧಾರಣೆ ಕಂಡಿಲ್ಲ.

ADVERTISEMENT

ಕಲಬುರಗಿ ಜಿಲ್ಲೆಯಲ್ಲಿ 18 ಶಾಲೆಗಳು ‘ಶೂನ್ಯ’ ಸುತ್ತಿದ್ದು, ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಉಳಿದಂತೆ ಬೀದರ್‌ನಲ್ಲಿ 9, ಯಾದಗಿರಿಯಲ್ಲಿ 7, ರಾಯಚೂರಿನಲ್ಲಿ 5, ಕೊಪ್ಪಳ ಮತ್ತು ವಿಜಯನಗರದಲ್ಲಿ ತಲಾ ಎರಡು ಹಾಗೂ ಬಳ್ಳಾರಿಯಲ್ಲಿ ಒಂದು ಶಾಲೆ ‘ಶೂನ್ಯ’ ಫಲಿತಾಂಶ ಪಡೆದಿವೆ. ಜಿಲ್ಲಾವಾರು ಶ್ರೇಣಿಯಲ್ಲಿ ಕೊನೆಯ ಆರು ಸ್ಥಾನಗಳೂ ‘ಕಲ್ಯಾಣ ಕರ್ನಾಟಕ’ದ ಜಿಲ್ಲೆಗಳ ಪಾಲಾಗಿವೆ.

‘ಶೂನ್ಯ’ ಫಲಿತಾಂಶಕ್ಕೆ ಕಾರಣವೇನು?: ಸಾಮೂಹಿಕ ನಕಲು ತಡೆ ಹಾಗೂ ಪಾರದರ್ಶಕ ಪರೀಕ್ಷೆಗಾಗಿ ಇದೇ ಮೊದಲ ಬಾರಿಗೆ ಪರೀಕ್ಷಾ ಕೊಠಡಿಗಳಲ್ಲಿನ ವಿದ್ಯಮಾನಗಳ ಮೇಲೆ ಸಿಸಿಟಿವಿ ಕ್ಯಾಮೆರಾ ಹಾಗೂ ಸಿಸಿಟಿವಿ ವೆಬ್‌ಕಾಸ್ಟಿಂಗ್‌ ಕಣ್ಗಾವಲು ಇರಿಸಲಾಗಿತ್ತು. ಇದು ಸಾಮೂಹಿಕ ನಕಲು ತಡೆಯುವಲ್ಲಿ ಯಶಸ್ವಿಯಾಯಿತು. ಕಲಬುರಗಿ ಭಾಗದಲ್ಲಿ ಕನಿಷ್ಠ 10 ವರ್ಷ ನಿರಂತರವಾಗಿ ಸೇವೆ ಸಲ್ಲಿಸಿದ 2,504 ಅನುಭವಿ ಶಿಕ್ಷಕರು ಬೇರೆ ಬೇರೆ ವಿಭಾಗಗಳಿಗೆ ವರ್ಗಾವಣೆಯಾಗಿ ಹೋದರು. ಆದರೆ, ಅನ್ಯ ವಿಭಾಗಗಳಿಂದ ಕಲಬುರಗಿ ವಿಭಾಗಕ್ಕೆ ಮೂರಂಕಿಯಷ್ಟು ಶಿಕ್ಷಕರು ಮಾತ್ರ ಬಂದರು. ಹೀಗಾಗಿ, ಮಕ್ಕಳಿಗೆ ನುರಿತ ಶಿಕ್ಷಕರಿಂದ ಪಾಠ ಸಿಗಲಿಲ್ಲ. ಇವುಗಳ ಜತೆಗೆ ಮೂಲಸೌಕರ್ಯಗಳ ಕೊರತೆಯೂ ಫಲಿತಾಂಶದ ಹಿನ್ನೆಡೆಗೆ ಕಾರಣ’ ಎನ್ನುತ್ತಾರೆ ಶಿಕ್ಷಕರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ ಆಕಾಶ್ ಶಂಕರ್, ‘ಫಲಿತಾಂಶ ಕುಸಿತಕ್ಕೆ ವೆಬ್‌ಕಾಸ್ಟಿಂಗ್ ಮುಖ್ಯ ಕಾರಣವಾಗಿದ್ದು, ನಮ್ಮ ಭಾಗದ ಸತ್ಯಾಂಶ ಹೊರಗಡೆ ಬಂದಿದೆ. 10ನೇ ತರಗತಿಗೆ ಬಂದಾಗ ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕುವುದಕ್ಕಿಂತ 8ನೇ ತರಗತಿಯಿಂದಲೇ ಕಲಿಕಾ ಸುಧಾರಣೆಗೆ ಯೋಜನೆ ಹಾಕಿಕೊಳ್ಳುತ್ತೇವೆ. ಉತ್ತಮ ಫಲಿತಾಂಶ ಬಾರದ ಶಾಲೆಗಳು ಮತ್ತು ವಲಯಗಳನ್ನು ಗುರುತಿಸಿ, ಅಲ್ಲಿ ಬೋಧನಾ ಕ್ರಮಗಳನ್ನು ಚುರುಕುಗೊಳಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.