ಸಾಂದರ್ಭಿಕ ಚಿತ್ರ
ಕೃಪೆ: ಮೆಟಾ ಎಐ
‘ಸಮಯ ಮತ್ತು ಸಮುದ್ರದ ಅಲೆಗಳು ಯಾರಿಗೂ ಕಾಯುವುದಿಲ್ಲ’ ಎಂಬ ಮಾತನ್ನು ಎಲ್ಲರೂ ಕೇಳಿರುತ್ತೇವೆ. ಸಮಯವು ಒಮ್ಮೆ ಕಳೆದುಹೋದರೆ ಮತ್ತೆಂದೂ ತಿರುಗಿಬಾರದು. ಇರುವ ಸಮಯವನ್ನು ಸೂಕ್ತವಾಗಿ ಬಳಸುವ ಕಲೆ ತಿಳಿದಿದ್ದರೆ ಬದುಕು ಬಂಗಾರವಾಗುವುದರಲ್ಲಿ ಸಂಶಯವಿಲ್ಲ.
ಮಕ್ಕಳಿಗೆ ಸಮಯದ ಮೌಲ್ಯವನ್ನು ಅರ್ಥ ಮಾಡಿಸಿದರೆ ಹಾಗೂ ಅದನ್ನು ಬಳಸುವ ಬಗೆಯನ್ನು ಕಲಿಸಿಕೊಟ್ಟರೆ ಅವರ ಬದುಕಿಗೆ ಭದ್ರ ಅಡಿಪಾಯ ಹಾಕಿದಂತೆ ಆಗುತ್ತದೆ. ಚಿಕ್ಕವಯಸ್ಸಿನಿಂದಲೇ ಅವರು ಜವಾಬ್ದಾರಿಯನ್ನು ಮನದಟ್ಟು ಮಾಡಿಕೊಳ್ಳುತ್ತಾ ಹೋಗಲು ಸಾಧ್ಯವಾಗುತ್ತದೆ.
ಸಮಯ ನಿರ್ವಹಣೆ ಹೇಗೆ?
ಅಮೂಲ್ಯ ನಿಧಿಯಂತೆ ಇರುವ ಸಮಯವನ್ನು ವಿವಿಧ ಚಟುವಟಿಕೆಗಳಿಗೆ ಹೇಗೆ ವಿಂಗಡಿಸಬೇಕು ಎಂಬುದನ್ನು ಯೋಜಿಸುವ ಪ್ರಕ್ರಿಯೆಯೇ ಸಮಯ ನಿರ್ವಹಣೆ. ಮಕ್ಕಳಿಗೆ ಸಮಯದ ಮಹತ್ವವನ್ನು ಅರ್ಥ ಮಾಡಿಸುವ ಹಾಗೂ ಅದನ್ನು ಬುದ್ಧಿವಂತಿಕೆಯಿಂದ ಬಳಸುವುದನ್ನು ಕಲಿಸುವ ಜವಾಬ್ದಾರಿ ಪಾಲಕರ ಮೇಲಿರುತ್ತದೆ.
ಸಮಯ ನಿರ್ವಹಣೆ ಮಾಡುವಲ್ಲಿನ ಮೊದಲ ಹೆಜ್ಜೆ ಎಂದರೆ, ಸಮಯವು ಸೀಮಿತ ಸಂಪನ್ಮೂಲವಾಗಿದ್ದು ಅದನ್ನು ವಿವೇಚನೆಯಿಂದ ಬಳಸಬೇಕು ಎಂಬುದನ್ನು ಅರಿಯುವುದೇ ಆಗಿದೆ. ಮಕ್ಕಳು ಪ್ರತಿದಿನವೂ ತಮಗೆ ಲಭ್ಯವಾಗುವ ಸಮಯವನ್ನು ಆದ್ಯತೆಗೆ ಅನುಸಾರವಾಗಿ ಬಳಸುವಂತೆ ಕಲಿಸಬೇಕು. ಅದಕ್ಕಾಗಿ ಪಾಲಕರು ಕೆಲವು ತಂತ್ರಗಳನ್ನು ಅನುಸರಿಸಬಹುದು.
ಮಕ್ಕಳು ಶಾಲಾ ಕೆಲಸಗಳನ್ನು ನಿರ್ವಹಿಸುವುದಷ್ಟೇ ಸಮಯ ನಿರ್ವಹಣೆ ಎನಿಸಿಕೊಳ್ಳುವುದಿಲ್ಲ. ಅದರ ಜೊತೆಗೆ ಆಟ, ಹವ್ಯಾಸಗಳು ಮತ್ತು ವಿಶ್ರಾಂತಿಗಾಗಿ ಸಮಯವನ್ನು ಹೊಂದಿಸಿಕೊಳ್ಳಬೇಕು ಎಂಬುದನ್ನು ಅವರಿಗೆ ಕಲಿಸಬೇಕಾಗಿದೆ. ಒತ್ತಡರಹಿತ ಬದುಕಿಗೆ ಇದು ಅಗತ್ಯ.
ಮರುಪ್ರಯತ್ನಕ್ಕೆ ಅವಕಾಶ ಇರಲಿ
ಕೆಲವೊಮ್ಮೆ ಮಕ್ಕಳು ಸಮಯ ನಿರ್ವಹಣೆ ಸಾಧ್ಯವಾಗದೆ ತಮ್ಮ ಕೆಲಸದಲ್ಲಿ ವಿಳಂಬ ಮಾಡಿದಾಗ, ಸಮಯವನ್ನು ವ್ಯರ್ಥ ಮಾಡಿದಾಗ ಅಥವಾ ಬೇರೇನೂ ಮಾಡಲಾಗದ ರೀತಿಯಲ್ಲಿ ಒಂದೇ ಕೆಲಸದಲ್ಲಿ ಮುಳುಗಿಹೋದಾಗ, ಆಗಬೇಕಾದ ಕೆಲಸಗಳು ಸಕಾಲದಲ್ಲಿ ಆಗದೆ ನಿರಾಶರಾಗುವುದು ಸಹಜ. ಇಂತಹ ಹಿನ್ನಡೆಯ ಸನ್ನಿವೇಶದಲ್ಲಿ ಪಾಲಕರು ಮತ್ತೊಮ್ಮೆ ಪ್ರಯತ್ನಿಸಲು ಅವರಿಗೆ ಅವಕಾಶ ನೀಡಬೇಕು. ಇದು ಮಕ್ಕಳಲ್ಲಿನ ಅಪರಾಧಪ್ರಜ್ಞೆಯನ್ನು ಕಡಿಮೆ ಮಾಡುತ್ತದೆ ಮತ್ತು ತಾವು ಅವಮಾನಕರ ಪರಿಸ್ಥಿತಿಯಲ್ಲಿ ಇದ್ದೇವೆ ಎಂಬಂಥ ಭಾವನೆಯಿಂದ ಹೊರಬರಲು ಸಹಾಯ ಮಾಡುತ್ತದೆ.
ಹೀಗೆ ಮಾಡಿ...
ಸಮಯ ನಿಗದಿಪಡಿಸಿ: ಸಮಯ ನಿರ್ವಹಣೆಯ ಮೊದಲ ಹಂತ ಎಂದರೆ, ಬೆಳಿಗ್ಗೆ ಏಳುವ ಮತ್ತು ರಾತ್ರಿ ಮಲಗುವ ಸಮಯವನ್ನು ನಿಗದಿಪಡಿಸುವುದಾಗಿದೆ. ನಿಗದಿತ ಸಮಯಕ್ಕೆ ಏಳುವುದು ಒತ್ತಡರಹಿತ ಕೆಲಸಕ್ಕೆ ನಾಂದಿಯಾಗಿದೆ. ಅಂತೆಯೇ ನಿಗದಿತ ಸಮಯಕ್ಕೆ ಮಲಗುವುದು ಮರುದಿನದ ಚಟುವಟಿಕೆಗೆ ಮಾನಸಿಕ ಸಿದ್ಧತೆಯಾಗಿರುತ್ತದೆ.
ವೇಳಾಪಟ್ಟಿಯನ್ನು ರಚಿಸಿ: ಮಕ್ಕಳು ದೈನಂದಿನ ಅಥವಾ ಸಾಪ್ತಾಹಿಕ ವೇಳಾಪಟ್ಟಿಯನ್ನು ರಚಿಸಲು ಪ್ರೋತ್ಸಾಹಿಸಿ. ಪಾಲಕರ ಸಹಾಯದಿಂದ ಮಕ್ಕಳೇ ವೇಳಾಪಟ್ಟಿ ರಚಿಸಲಿ. ಇದು ಪ್ರತಿ ಚಟುವಟಿಕೆಗೂ ಅವರು ಸಮಯವನ್ನು ನಿಗದಿಪಡಿಸಲು ಸಹಾಯ ಮಾಡುತ್ತದೆ.
ಆದ್ಯತೆಗಳನ್ನು ಹೊಂದಿಸಿ: ತುರ್ತಿನ ಕಾರ್ಯಗಳಿಗೆ ಆದ್ಯತೆ ನೀಡಲು ಕಲಿಸಿ. ಆದ್ಯತೆಗೆ ಅನುಗುಣವಾಗಿ ವೇಳಾಪಟ್ಟಿ ತಯಾರಿಸಲು ಮಾರ್ಗದರ್ಶನ ಮಾಡಿ.
ಕಾರ್ಯಗಳನ್ನು ವಿಭಜಿಸಿ: ಮಕ್ಕಳು ನಿರ್ವಹಿಸುವ ಕೆಲಸಗಳನ್ನು ವಿಭಜಿಸಿ. ದೊಡ್ಡ ಕೆಲಸಗಳನ್ನು ಅಂದರೆ ಹೆಚ್ಚು ಸಮಯ ತೆಗೆದುಕೊಳ್ಳುವ ಕೆಲಸಗಳನ್ನು ಸಣ್ಣ ಸಣ್ಣ ಕೆಲಸಗಳನ್ನಾಗಿ ವಿಭಜಿಸಿ. ಇದರಿಂದ ಮಕ್ಕಳು ಒತ್ತಡರಹಿತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.
ವಿಳಂಬವನ್ನು ತಪ್ಪಿಸಿ: ಮಕ್ಕಳು ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸಲು ಮತ್ತು ಕೊನೆಯ ನಿಮಿಷದವರೆಗೂ ಅವುಗಳನ್ನು ಉಳಿಸಿಕೊಳ್ಳದೇ ಇರಲು ಪ್ರೋತ್ಸಾಹಿಸಿ.
ಆಟ ಮತ್ತು ವಿರಾಮವೂ ಇರಲಿ: ದೀರ್ಘಾವಧಿಯ ಕೆಲಸಗಳು ಅವರಲ್ಲಿ ನಿರುತ್ಸಾಹವನ್ನು ಉಂಟುಮಾಡುತ್ತವೆ. ನಿರುತ್ಸಾಹ ತಡೆದು, ಉತ್ಪಾದಕತೆಯನ್ನು ಕಾಪಾಡಿಕೊಳ್ಳಲು ವಿರಾಮ ಅಗತ್ಯ. ಹಾಗಾಗಿ, ವಿರಾಮವನ್ನೂ ವೇಳಾಪಟ್ಟಿಯಲ್ಲಿ ಸೇರಿಸಿ.
ಅರ್ಥಪೂರ್ಣ ಪ್ರಶಂಸೆ ನೀಡಿ: ಮಕ್ಕಳು ಸಮಯ ಪಾಲನೆ ಮಾಡಿದಾಗ ಮತ್ತು ಉತ್ತಮವಾಗಿ ಸಮಯ ನಿರ್ವಹಣೆ ಮಾಡಿದಾಗ ಅವರನ್ನು ಪ್ರಶಂಸಿಸಿ. ಇದು ಸಮಯ ಪಾಲನೆಯ ಅಭ್ಯಾಸಗಳನ್ನು ಉತ್ತಮವಾಗಿ ರೂಢಿಸಿಕೊಳ್ಳಲು ನೆರವಾಗುತ್ತದೆ.
ಸ್ಕ್ರೀನ್‌ಟೈಂ ಮಿತಿಗೊಳಿಸಿ: ಮಕ್ಕಳಿಗೆ ಆರೋಗ್ಯಕರ ಅಭ್ಯಾಸಗಳನ್ನು ಪರಿಚಯಿಸದ ವಿನಾ ಸಾಮಾಜಿಕ ಮಾಧ್ಯಮ ಅಥವಾ ವಿಡಿಯೊಗೇಮ್‌ಗಳ ಅಭ್ಯಾಸದಿಂದ ಅವರನ್ನು ಹೊರತರುವುದು ಕಷ್ಟದ ಕೆಲಸ. ಹಾಗಾಗಿ, ಸ್ಕ್ರೀನ್‌ಟೈಂಗೆ ಮಿತಿ ಇರಲಿ.
ಪ್ರಯೋಜನ
ಜವಾಬ್ದಾರಿ ಮತ್ತು ಶಿಸ್ತು ಮೂಡುತ್ತದೆ
ಶೈಕ್ಷಣಿಕ ಕಾರ್ಯಕ್ಷಮತೆ ಬಲಗೊಳ್ಳುತ್ತದೆ
ಒತ್ತಡ ಮತ್ತು ಆತಂಕ ನೀಗುತ್ತದೆ
ಆಲಸ್ಯವನ್ನು ತೊಡೆದುಹಾಕಿ ಕ್ರಿಯಾಶೀಲತೆ ಬೆಳೆಸುತ್ತದೆ
ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ
ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಗಟ್ಟಿಗೊಳಿಸುತ್ತದೆ
ವೈಯಕ್ತಿಕ ಸ್ವಾತಂತ್ರ‍್ಯವನ್ನು ಪ್ರೋತ್ಸಾಹಿಸುತ್ತದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.