ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಬಿಸಿಎ– ಬಿ.ಇ ನಡುವೆ ಏನು ವ್ಯತ್ಯಾಸ ?

ವಿ.ಪ್ರದೀಪ್ ಕುಮಾರ್
Published 20 ಫೆಬ್ರುವರಿ 2022, 19:30 IST
Last Updated 20 ಫೆಬ್ರುವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

1. ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಬಿಸಿಎ ಕೂಡ ನಾಲ್ಕು ವರ್ಷ ಹಾಗೂ ಬಿಇ (ಕಂಪ್ಯೂಟರ್ ಸೈನ್ಸ್) ಕೂಡ 4 ವರ್ಷ. ಈ ಎರಡರಲ್ಲೂ ಇರುವ ವ್ಯತ್ಯಾಸವೇನು? ಉದ್ಯೋಗಾವಕಾಶಗಳಿಗೆ ಯಾವುದು ಉತ್ತಮ?

ಹೆಸರು, ಊರು ತಿಳಿಸಿಲ್ಲ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಬಿಸಿಎ ಪದವಿಯನ್ನು ಮೂರು ವರ್ಷಗಳಲ್ಲಿ ಪಡೆಯಬಹುದು. ಬಿಸಿಎ (ಆನರ್ಸ್) ಕೋರ್ಸಿನ ನಾಲ್ಕನೇ ವರ್ಷ ಸಂಶೋಧನೆಗೆ ಮೀಸಲಾಗಿದ್ದು ಪಿಎಚ್‌ಡಿ ಮಾಡುವ ಅರ್ಹತೆಯಿರುತ್ತದೆ. ಬಿಸಿಎ ಮತ್ತು ಬಿಇ ಕೋರ್ಸ್‌ಗಳಲ್ಲಿನ ವ್ಯತ್ಯಾಸಗಳ ಕುರಿತು ಈ ವರ್ಷದ ಜನವರಿ 3 ರ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ. ವೃತ್ತಿಯ ಅವಕಾಶಗಳ ದೃಷ್ಠಿಯಿಂದ ಬಿಇ ಕೋರ್ಸ್ ಉತ್ತಮವೆನ್ನುವುದು ನನ್ನ ಅಭಿಪ್ರಾಯ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ವಿಶ್ವವಿದ್ಯಾಲಯದಲ್ಲಿ ವಿಚಾರಿಸಿ.

ADVERTISEMENT

2.ನಾನು ದೂರ ಶಿಕ್ಷಣದ ಮೂಲಕ ಬಿಕಾಂ ಮಾಡಿದ್ದೇನೆ. ರಾಷ್ಟೀಕೃತ ಬ್ಯಾಂಕಿನ ಉದ್ಯೋಗ ಪಡೆಯಲು ತೊಡಕಾಗುತ್ತದೆಯೇ? ಸಂಜೆ ಕಾಲೇಜಿನ ಮೂಲಕ ಎಂಬಿಎ ಮಾಡಬಹುದೇ?

ಹೆಸರು, ಊರು ತಿಳಿಸಿಲ್ಲ.

ನಮಗಿರುವ ಮಾಹಿತಿಯಂತೆ, ಯುಜಿಸಿ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ದೂರ ಶಿಕ್ಷಣದ ಪದವಿ ಗಳಿಸಿದ ನಂತರ ರಾಷ್ಟ್ರೀಕೃತ ಬ್ಯಾಂಕ್ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ ಇರುತ್ತದೆ. ಸಂಜೆ ಕಾಲೇಜಿನ ಮೂಲಕ ಎಂಬಿಎ ಮಾಡಬಹುದು.

3. ನಾನು ಪದವಿಯಲ್ಲಿ ಚರಿತ್ರೆ, ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಷಯಗಳನ್ನು ಓದಿದ್ದೇನೆ. ಪ್ರಸ್ತುತ 2021-23 ರ ಬಿ.ಇಡಿ ತರಗತಿಗೆ ಪ್ರವೇಶ ಪಡೆದಿದ್ದೇನೆ. ಬಿ.ಇಡಿ ಕೋರ್ಸ್‌ನಲ್ಲಿ ನಾನು ಯಾವ ವಿಷಯವನ್ನು ಅಧ್ಯಯನ ಮಾಡಬೇಕಾಗುತ್ತದೆ. ಬಿ.ಇಡಿ ಮುಗಿಯುವುದಕ್ಕೂ ಮೊದಲು ನಾನು ಸಿಇಟಿ ಮತ್ತು ಟಿಇಟಿ ಬರೆಯಬಹುದೇ?

ಆಂಜನೇಯ, ಊರು ತಿಳಿಸಿಲ್ಲ.

ಬಿ.ಇಡಿ ಕೋರ್ಸ್ ಕುರಿತ ಸಮಗ್ರ ಮಾಹಿತಿಗಾಗಿ ಗಮನಿಸಿ:https://www.collegedekho.com/courses/bed/

4. ನಾನು ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ಸರ್ಕಾರಿ ಕೋಟಾದಲ್ಲಿ ಬಿಪಿಟಿ ಓದಬೇಕೆಂದಿದ್ದೇನೆ. ಇದಕ್ಕೆ ಅರ್ಜಿ ಸಲ್ಲಿಸುವುದು ಯಾವಾಗ?

ಬಾಂಧವ್ಯ, ಬೆಂಗಳೂರು.‌

2021-2022 ನೇ ಶೈಕ್ಷಣಿಕ ವರ್ಷದ ಪ್ರಕ್ರಿಯೆ 2021 ರ ಡಿಸೆಂಬರ್‌ನಲ್ಲಿ ಶುರುವಾಗಿತ್ತು. ಬಿಪಿಟಿ ಕೋರ್ಸ್ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಸೂಚನೆಯಂತೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಗಮನಿಸಿ: https://www.karnatakaphysio.org/

5. ನಾನು ದ್ವಿತೀಯ ಪಿಯುಸಿ ವಿದ್ಯಾರ್ಥಿ. ಕೆಸಿಇಟಿ 2022 ಪರೀಕ್ಷೆಗೆ ತಯಾರಾಗುತ್ತಿದ್ದೇನೆ. ಬಿವಿಎಸ್‌ಸಿ ಕೋರ್ಸ್‌ಗೆ ಭವಿಷ್ಯ ಇದೆಯೇ? ಸರ್ಕಾರಿ ಉದ್ಯೋಗ ಪಡೆಯಲು ಮಾರ್ಗದರ್ಶನ ನೀಡಿ.

ಚಿನ್ಮಯ್, ಮಂಡ್ಯ.

ವೆಟರ್ನರಿ ಸೈನ್ಸ್ ಈಗ ಬೇಡಿಕೆಯಲ್ಲಿರುವ ಕ್ಷೇತ್ರ. ಬಿವಿಎಸ್‌ಸಿ ಕೋರ್ಸ್ ನಂತರ ಕೃಷಿ ಮತ್ತು ಪಶುಪಾಲನಾ ಇಲಾಖೆಗಳು, ಕೋಳಿ ಸಾಕಣೆ ಕೇಂದ್ರಗಳು, ಪಶುವೈದ್ಯಕೀಯ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳು, ನಾಯಿ ತರಬೇತಿ ಕೇಂದ್ರಗಳು, ಮೃಗಾಲಯಗಳು, ವನ್ಯಜೀವಿ ಅಭಯಾರಣ್ಯಗಳು, ಸಂಶೋಧನಾ ಕೇಂದ್ರಗಳು, ಪ್ರಾಣಿಗಳ ಸಂತಾನೋತ್ಪತ್ತಿ ಕೇಂದ್ರಗಳು ಇತ್ಯಾದಿ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ. ಯುಪಿಎಸ್‌ಸಿ/ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಮುಖಾಂತರ ಸರ್ಕಾರಿ ಉದ್ಯೋಗಗಳನ್ನು ಪಡೆದುಕೊಳ್ಳಬಹುದು. ಹಾಗೂ, ಕರ್ನಾಟಕ ಸರ್ಕಾರದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪಶು ವೈದ್ಯಾಧಿಕಾರಿ ಹುದ್ದೆಗಳಿಗೂ ಪ್ರಯತ್ನಿಸಬಹುದು. ಹೆಚ್ಚಿನ ವಿವರಗಳಿಗೆ ಗಮನಿಸಿ: http://www.ahvs.kar.nic.in/kn-recruitment.html

6. ನನ್ನ ಮಗಳಿಗೆ 38 ವರ್ಷ. ಅವಳು ಅಂಗವಿಕಲೆ. ಬಿಎ ಪದವಿ ಮುಗಿಸಿ ಇಗ್ನೊ ವಿಶ್ವವಿದ್ಯಾಲಯದ ಮೂಲಕ ಜರ್ಮನ್ ಭಾಷೆಯಲ್ಲಿ ಸರ್ಟಿಫಿಕೇಟ್ ಕೋರ್ಸ್‌ಗೆ ಸೇರಿದ್ದಾಳೆ. ಈ ಕೋರ್ಸ್ ಮುಗಿದ ಮೇಲೆ ಅವಳಿಗೆ ಬೆಂಗಳೂರಿನಲ್ಲಿ ಯಾವ ರೀತಿಯ ಉದ್ಯೋಗ ಸಿಗಬಹುದು?

ಮದನ್ ಮೋಹನ್, ಬೆಂಗಳೂರು.

ಜರ್ಮನ್ ಭಾಷೆಯ ತಜ್ಞತೆಯ ಆಧಾರದ ಮೇಲೆ ವೈದ್ಯಕೀಯ ಮತ್ತು ಆರೋಗ್ಯ, ಶಿಕ್ಷಣ, ಲಾಜಿಸ್ಟಿಕ್ಸ್, ಆಟೋಮೊಬೈಲ್, ಮಾಧ್ಯಮ, ಮನರಂಜನೆ, ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ, ಹಣಕಾಸು ಸೇವೆಗಳು ಇತ್ಯಾದಿ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ನಿರೀಕ್ಷಿಸಬಹುದು. ಜರ್ಮನ್ ಭಾಷೆಯ ತಜ್ಞತೆಯಿದ್ದರೆ, ಮನೆಯಿಂದಲೇ ಮಾಡಬಹುದಾದ ವಿಷಯಾಭಿವೃದ್ಧಿ, ಅನುವಾದ, ಸಬ್‌ಟೈಟಲ್ಸ್, ಟ್ರಾನ್‌ಸ್ಕ್ರಿಪ್ಷನ್‌ಇತ್ಯಾದಿ ಅವಕಾಶಗಳೂ ಇವೆ.

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣ ತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್‌ ಕುಮಾರ್‌ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.inಗೆ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.