ADVERTISEMENT

ನಿಮ್ಮ ಕಲಿಕಾ ಶೈಲಿ ಯಾವುದು?

ಆರ್.ಬಿ.ಗುರುಬಸವರಾಜ
Published 26 ಫೆಬ್ರುವರಿ 2020, 19:30 IST
Last Updated 26 ಫೆಬ್ರುವರಿ 2020, 19:30 IST
   

ಶಿಕ್ಷಕರು ವಿದ್ಯಾರ್ಥಿಗಳ ಕಲಿಕಾ ವೇಗ ಹಾಗೂ ಶೈಲಿಗೆ ಅನುಗುಣವಾಗಿ ತಮ್ಮ ಬೋಧನಾ ವಿಧಾನಗಳನ್ನು ಬದಲಿಸಿಕೊಂಡಿರುವುದುಇತ್ತೀಚಿನ ಬೆಳವಣಿಗೆ. ಇದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಲಿಕೆಯಲ್ಲಿ ತನ್ನದೇ ಆದ ರೀತಿಯಲ್ಲಿ ಮುಂದುವರಿಯಲು ಅವಕಾಶ ದೊರಕಿದೆ. ಕಲಿಕೆಯನ್ನು ಇನ್ನಷ್ಟು ಬಲಪಡಿಸಲು ಇರುವ ಪ್ರಮುಖ ಮಾರ್ಗವೆಂದರೆ ನಿಮ್ಮ ಕಲಿಕಾ ಶೈಲಿಯನ್ನು ಅನ್ವೇಷಿಸಿಕೊಂಡು ಮುಂದುವರಿಯುವುದು.

ಕೆಲವೊಮ್ಮ ಕೇಳುವ ಮೂಲಕ, ನೋಡುವ ಮೂಲಕ, ಓದುವ ಮೂಲಕ ನಿಮ್ಮ ಕಲಿಕೆಯನ್ನು ಮುಂದುವರಿಸುತ್ತೀರಿ. ಆದರೆ ನಿಮ್ಮದೇ ಆದ ಕಲಿಕಾ ಶೈಲಿಯನ್ನು ಬೆಳೆಸಿಕೊಳ್ಳುವಲ್ಲಿ ಹಿಂದೆ ಬಿದ್ದಿರಬಹುದು. ಜೈವಿಕ ಅಥವಾ ಅನುವಂಶೀಯ ಗುಣಲಕ್ಷಣಗಳು, ಸಂಸ್ಕೃತಿ, ವೈಯಕ್ತಿಕ ಅನುಭವಗಳು, ಪರಿಪಕ್ವತೆಯ ಮಟ್ಟ ಹಾಗೂ ಅನ್ವಯಿಕ ಗುಣಗಳು ಕಲಿಕಾ ಶೈಲಿಯ ಮೇಲೆ ಪ್ರಭಾವ ಬೀರುತ್ತವೆ. ಪ್ರತಿಯೊಬ್ಬ ಕಲಿಕಾರ್ಥಿಯು ಗ್ರಹಿಕೆ, ಸಂಘಟನೆ, ಧಾರಣ ಶಕ್ತಿ ಮತ್ತು ಆದ್ಯತೆಯ ಮಾರ್ಗಗಳನ್ನು ಹೊಂದಿರುತ್ತಾನೆ. ಅದು ಕಲಿಯುವವರು ಕಲಿಕೆಯ ಪರಿಸರವನ್ನು ಹೇಗೆ ಗ್ರಹಿಸುತ್ತಾರೆ, ಸಂವಹನ ನಡೆಸುತ್ತಾರೆ ಮತ್ತು ಪ್ರತಿಕ್ರಿಯಿಸುತ್ತಾರೆ ಎಂಬುದರ ಸೂಚಕ.

ಕಲಿಕಾ ಶೈಲಿಗಳ ಕುರಿತು ಹಲವಾರು ಅಧ್ಯಯನಗಳು ನಡೆದಿವೆ ಮತ್ತು ನಡೆಯುತ್ತಲೇ ಇವೆ. ಪ್ರತಿಯೊಂದು ಶೈಲಿಯೂ ತನ್ನದೇ ಆದ ಕಲಿಕಾ ಸಿದ್ಧಾಂತವನ್ನು ಒಳಗೊಂಡಿದೆ. ವರ್ಕ್ (VARK) ಎಂದು ಕರೆಯಲಾಗುವ ಮಾದರಿಯು ಅತ್ಯಂತ ಪ್ರಭಾವಶಾಲಿ ಕಲಿಕಾ ಶೈಲಿಯಾಗಿದೆ.

ADVERTISEMENT

ಏನಿದು ವರ್ಕ್ ಮಾದರಿ?
ಇದು ಹೆಚ್ಚು ವ್ಯಾಪಕವಾಗಿ ಬಳಸುವ ಮಾದರಿಯಾಗಿದ್ದು, ದೃಶ್ಯ, ಶ್ರವಣ, ಓದು, ಬರವಣಿಗೆ ಹಾಗೂ ಭೌತಿಕ ಕಲಿಕಾ ಶೈಲಿಯಾಗಿದೆ.

* ವಿಶುವಲ್ - ನೋಡುವ ಮೂಲಕ ಕಲಿಯುವ ಮಾದರಿ.

* ಆಡಿಯೊ– ಕೇಳುವ ಮೂಲಕ ಕಲಿಯುವ ಮಾದರಿ

* ರೀಡಿಂಗ್– ಓದುವ ಮೂಲಕ ಕಲಿಯುವ ಮಾದರಿ

* ಕಿನೆಸ್ಥೆಟಿಕ್ - ಭೌತಿಕವಾದ ಅಂದರೆ ಕೆಲಸದ ಮೂಲಕ ಕಲಿಯುವ ಮಾದರಿ.

ವರ್ಕ್ ಸರ್ವವ್ಯಾಪಿ ಮಾದರಿಯಾಗಿದ್ದು ಎಲ್ಲಾ ಹಂತದ ಕಲಿಕಾರ್ಥಿಗಳು ಸುಲಭವಾಗಿ ಅಳವಡಿಸಿಕೊಳ್ಳಬಹುದು.

ವಿಶುವಲ್ ಕಲಿಕಾ ಮಾದರಿ

ಇದನ್ನು ಬಳಸುವುದು ತುಂಬಾ ಸರಳ. ಮುಖ್ಯ ಎನಿಸಿದ ಪಠ್ಯ ಅಥವಾ ಇನ್ನಿತರೇ ಅಂಶವನ್ನು ಕಲರ್ ಪೆನ್‌ಗಳಿಂದ ಹೈಲೈಟ್ ಮಾಡುವುದು. ವಿಜ್ಞಾನ, ಗಣಿತ ಹಾಗೂ ಭೂಗೋಳದಂತಹ ವಿಷಯಗಳ ಕಲಿಕಾಂಶಗಳನ್ನು ಚಿತ್ರ, ನಕ್ಷೆ, ರೇಖಾಚಿತ್ರ, ಚಾರ್ಟ್, ಗ್ರಾಫ್ ಮುಂತಾದ ವಿನ್ಯಾಸಗಳನ್ನು ರಚಿಸುವ ಮೂಲಕ ಕಲಿಯಲು ಸಾಕಷ್ಟು ಅವಕಾಶಗಳಿವೆ.

ಈ ಶೈಲಿ ಬಳಸುವವರು ಮಾಹಿತಿಯನ್ನು ಮನದಲ್ಲಿ ದೃಶ್ಯೀಕರಿಸಿಕೊಂಡು ಕಲಿಯುತ್ತಾರೆ. ಮಾನವನ ಮೆದುಳು ದೃಷ್ಟಿಗೋಚರ ಮಾಹಿತಿಯನ್ನು ಸರಳ ಪಠ್ಯಕ್ಕಿಂತ ವೇಗವಾಗಿ ಕಲಿಕೆಯಲ್ಲಿ ತೊಡಗಿಸುತ್ತದೆ.

ಆಡಿಯೊ ಮಾದರಿ
ಕೆಲವರು ಇತರರ ಮಾತನ್ನು ಕೇಳಲು ಅಥವಾ ತಮ್ಮ ಮಾತನ್ನು ಇತರರಿಗೆ ತಿಳಿಸಲು ತವಕಿಸುತ್ತಾರೆ. ಇವರೇ ಆಡಿಯೊ ಕಲಿಕಾ ಶೈಲಿಯನ್ನು ಅನುಸರಿಸುತ್ತಿರುವವರು. ಜೊತೆಗೆ ಚರ್ಚೆಗಳಲ್ಲಿ ಸಕ್ತಿಯವಾಗಿ ಭಾಗಿಯಾಗುತ್ತಾರೆ.

ಉಪನ್ಯಾಸ, ಚರ್ಚೆ, ಸಂವಾದ, ಕಥೆ ಹೇಳುವುದು/ ಕೇಳುವುದು, ಭಾಷಣಗಳಲ್ಲಿ ಹೆಚ್ಚು ಆಸಕ್ತಿ ವಹಿಸಿ ಭಾಗವಹಿಸುವುದರಿಂದ ಕಲಿಯಲು ಸಾಕಷ್ಟು ಅವಕಾಶಗಳಿವೆ. ಆಧುನಿಕ ತಂತ್ರಜ್ಞಾನದ ಆಡಿಯೊ ಬುಕ್ಸ್ ಬಳಕೆಯೂ ಸಹ ಈ ಕಲಿಕೆಯನ್ನು ಪ್ರಭಾವಿಸುತ್ತದೆ. ಇತರರೊಡನೆ ನಿರ್ದಿಷ್ಟ ವಿಷಯದೊಡನೆ ಸಂಭಾಷಣೆ ನಡೆಸುವುದೂ ಸಹ ಕಲಿಕೆಯ ಭಾಗವಾಗಿದೆ. ಟಿಪ್ಪಣಿಗಳನ್ನು ರೆಕಾರ್ಡ್ ಮಾಡಿ ಆಗಾಗ ಕೇಳುವ ಮೂಲಕ ಕಲಿಕೆಯನ್ನು ದೃಢಪಡಿಸಿಕೊಳ್ಳಬಹುದು.

ಓದುವ ಕಲಿಕಾ ಶೈಲಿ
ಕಲಿಕೆಯ ಅಂಶ ಅಥವಾ ಮಾಹಿತಿಯನ್ನು ಓದುವ ಮೂಲಕ ಹಾಗೂ ಅದನ್ನು ಬರೆಯುವ ಮೂಲಕ ಕಲಿಯುವ ಶೈಲಿಯಾಗಿದೆ. ಪಠ್ಯಪುಸ್ತಕಗಳು, ನಿಘಂಟುಗಳು, ಪುಸ್ತಕಗಳು, ಟಿಪ್ಪಣಿಗಳು ಇತ್ಯಾದಿಗಳನ್ನು ಓದುವ ಮೂಲಕ ಕಲಿಕೆ ಮುಂದುವರಿಯುತ್ತದೆ. ಓದಿದ್ದನ್ನು ಬರೆಯುವ ಹಾಗೂ ಬರೆದಿದ್ದನ್ನು ಪುನಃ ಓದುವ ಮೂಲಕ ಕಲಿಕೆ ದೃಢೀಕರಣಗೊಳ್ಳುತ್ತದೆ.

ಮೇಲಿನ ಕಲಿಕಾ ಶೈಲಿಗಳು ಕೇವಲ ಉದಾಹರಣೆಗಳಷ್ಟೇ. ಇಂತಹ ಅನೇಕ ಕಲಿಕಾಶೈಲಿಗಳನ್ನು ನೀವು ಗಮನಿಸಿರಬಹುದು. ಕೇವಲ ಒಂದೇ ಶೈಲಿಯನ್ನು ಅನುಸರಿಸದೇ ನಿಮ್ಮ ಪರಿಸರಕ್ಕೆ ಅನುಗುಣವಾದ ಶೈಲಿಯನ್ನು ಅನುಸರಿಸಿ ಅದರ ಲಾಭ ಪಡೆಯಬಹುದು.

ಕಿನೆಸ್ಥೆಟಿಕ್ ಕಲಿಕೆ
ಚಿತ್ರಕಲೆ, ಸಂಗೀತ ವಾದನ, ನೃತ್ಯ, ನಟನೆ, ಸಾಹಸ ಪ್ರದರ್ಶನ ಇತ್ಯಾದಿ ಕೌಶಲಗಳನ್ನು ಇತರರ ಎದುರಿನಲ್ಲಿ ಪ್ರದರ್ಶಿಸುವ ಕಲಿಕಾ ಮಾದರಿಯಿದು. ಕೈನ್‌ ಎಂದರೆ ಚಲನೆ. ದೇಹವನ್ನು ಸಕ್ರಿಯವಾಗಿ ಚಲಿಸುತ್ತಾ ಮಾಹಿತಿಯನ್ನು ಆಂತರಿಕಗೊಳಿಸಿ ಕಲಿಯುವ ಪ್ರಕ್ರಿಯೆಯಿದು.

ಪ್ರಯೋಗಗಳು, ಕ್ಷೇತ್ರಭೇಟಿ, ಯೋಜನಾ ಕಾರ್ಯಗಳು, ಪ್ರದರ್ಶನಗಳ ಮೂಲಕ ನಡೆಯುವ ಕಲಿಕಾ ಶೈಲಿಯಿದು. ವಿಜ್ಞಾನದ ಪ್ರಯೋಗಗಳು, ಶೈಕ್ಷಣಿಕ ಪ್ರವಾಸಗಳು, ಯೋಜನೆಗಳು, ರಂಗ ಪ್ರದರ್ಶನ, ಛಾಯಾಚಿತ್ರ ತೆಗೆಯುವುದು, ಪ್ರಕೃತಿಯೊಂದಿಗಿನ ಪಾಠ, ವಿವಿಧ ಕ್ಷೇತ್ರಗಳಲ್ಲಿ ಖ್ಯಾತರಾದವರೊಂದಿಗಿನ ಸಂದರ್ಶನ, ವ್ಯಾಯಾಮ, ಆಟಗಳು ಮುಂತಾದವುಗಳ ಮೂಲಕ ನಡೆಯುವ ಎಲ್ಲಾ ಕಲಿಕೆಯು ಕಿನೆಸ್ಥೆಟಿಕ್ ಕಲಿಕೆಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.