ADVERTISEMENT

ಎಸ್ಸೆಸ್ಸೆಲ್ಸಿ ಭೌತಶಾಸ್ತ್ರ: ಕಣ್ಣಿನ ಹೊಂದಾಣಿಕೆಯ ಸಾಮರ್ಥ್ಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 19:30 IST
Last Updated 16 ಮಾರ್ಚ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಭೌತಶಾಸ್ತ್ರ
ಬೇರೆ ಬೇರೆ ದೂರದ ವಸ್ತುಗಳಿಂದ ಬಂದ ಬೆಳಕನ್ನು ಕೇಂದ್ರೀಕರಿಸಲು ಸಂಗಮ ದೂರ ಬದಲಾವಣೆ ಅವಶ್ಯವಾಗಿದ್ದು, ಅದನ್ನು ಮಾರ್ಪಡಿಸಲು ವಸ್ತುಗಳ ದೂರಕ್ಕನುಗುಣವಾಗಿ ವಕ್ರತೆಯನ್ನು ಬದಲಾಯಿಸಬೇಕಾಗುತ್ತದೆ. ದೂರದ ವಸ್ತುಗಳನ್ನು ನೋಡುವಾಗ ಸ್ನಾಯುಗಳು ವಿಶಾಲಗೊಂಡು ಮಸೂರವು ತೆಳ್ಳಗಾಗುತ್ತದೆ ಮತ್ತು ಸಂಗಮ ದೂರ ಹೆಚ್ಚಾಗುತ್ತದೆ. ಇದರಿಂದ ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಹುದು.

ಹತ್ತಿರದ ವಸ್ತುಗಳನ್ನು ನೋಡುವಾಗ ಕಣ್ಣಿನ ಸಿಲಿಯರಿ ಸ್ನಾಯುಗಳು ಕುಗ್ಗಿ ಮಸೂರದ ವಕ್ರತೆಯನ್ನು ಹೆಚ್ಚು ಮಾಡುತ್ತವೆ. ಇದರಿಂದ ಸಂಗಮ ದೂರವು ಕಡಿಮೆಯಾಗಿ ಹತ್ತಿರದ ವಸ್ತುಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಕಣ್ಣಿಗೆ ವಸ್ತುವು ಸ್ಪಷ್ಟವಾಗಿ ಹಾಗೂ ಒತ್ತಡ ರಹಿತವಾಗಿ ಕಾಣುವ ಕನಿಷ್ಠ ದೂರವನ್ನು ಸ್ಪಷ್ಟ ದೃಷ್ಟಿಯ ಕನಿಷ್ಠ ದೂರ ಎನ್ನುವರು. ಇದು ಸಾಮಾನ್ಯ ದೃಷ್ಟಿ ಹೊಂದಿರುವ ಪ್ರೌಢ ವಯಸ್ಕರಿಗೆ 25 ಸೆಂ.ಮೀ ಆಗಿದೆ.

ದೃಷ್ಟಿದೋಷ ಮತ್ತು ಪರಿಹಾರ

ADVERTISEMENT

1) ವಯಸ್ಸಾದವರಿಗೆ ಕಣ್ಣಿನ ಸ್ಫಟಿಕ ಮಸೂರವು ಹಾಲಿನಂತೆ ಬೆಳ್ಳಗೆ ಹಾಗೂ ಮೋಡ ಕವಿದಂತೆ ಆಗುತ್ತದೆ. ಇದನ್ನು ಕಣ್ಣಿನ ಪೊರೆ ಎನ್ನುವರು. ಇದು ಭಾಗಶಃ ಅಥವಾ ಪೂರ್ಣ ದೃಷ್ಟಿ ನಷ್ಟ ಉಂಟುಮಾಡಬಹುದಾಗಿದ್ದು, ಇದನ್ನು ಶಸ್ತ್ರಚಿಕಿತ್ಸೆಯ ಮೂಲಕ ಸರಿ ಹೋಗಿಸಬಹುದು.

ವಕ್ರೀಭವನದ ದೋಷಗಳು

1) ಮಯೋಪಿಯ ಅಥವಾ ಸಮೀಪ ದೃಷ್ಟಿ :

ಸಮೀಪ ದೃಷ್ಟಿ ದೋಷವುಳ್ಳ ವ್ಯಕ್ತಿಯು ಕೇವಲ ಸಮೀಪದ ವಸ್ತುಗಳನ್ನು ಮಾತ್ರ ನೋಡಲು ಶಕ್ತನಾಗಿದ್ದು, ದೂರದ ವಸ್ತುಗಳನ್ನು ನೋಡಲಾರ. ಈ ದೋಷವಿರುವ ವ್ಯಕ್ತಿಗೆ V ವಸ್ತುವಿನ ಪ್ರತಿಬಿಂಬವು ರೆಟಿನಾದ ಮುಂಭಾಗದಲ್ಲಿ ರೂಪುಗೊಳ್ಳುತ್ತದೆ. ಇದಕ್ಕೆ ಕಾರಣಗಳು ಕಣ್ಣಿನ ಮಸೂರದ ವಿಪರೀತ ವಕ್ರತೆ ಅಥವಾ ಕಣ್ಣುಗುಡ್ಡೆಯು ಸಹಜಸ್ಥಿತಿಗಿಂತ ಬದ್ಧವಾಗಿರುವುದಾಗಿರಬಹುದು. ಸೂಕ್ತ ಸಾಮರ್ಥ್ಯವುಳ್ಳ ನಿಮ್ನ ಮಸೂರದಿಂದ ಪ್ರತಿಬಿಂಬವನ್ನು ರೆಟಿನಾದ ಮೇಲೆ ಉಂಟು ಮಾಡಿದ ದೃಷ್ಟಿದೋಷವನ್ನು ಸರಿಪಡಿಸಬಹುದು.

2) ದೂರದೃಷ್ಟಿ ಅಥವಾ ಹೈಪರ್ ಮೆಟ್ರೋಪಿಯ

ದೂರದೃಷ್ಟಿಯುಳ್ಳ ವ್ಯಕ್ತಿಯು ಕೇವಲ ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಶಕ್ತನಾಗಿದ್ದು, ಹತ್ತಿರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಲಾರ. ಈ ದೋಷವಿರುವ ವ್ಯಕ್ತಿ ಕಣ್ಣಿನಲ್ಲಿ ಪ್ರತಿಬಿಂಬವು ರೆಟಿನಾದ ಹಿಂಭಾಗದಲ್ಲಿ ಕೇಂದ್ರೀಕೃತಗೊಳ್ಳುತ್ತದೆ. ಈ ದೋಷವುಂಟಾಗಲು ಕಣ್ಣಿನ ಮಸೂರದ ಸಂಗಮ ದೂರವು ಉದ್ದವಾಗಿರುವುದು ಅಥವಾ ಕಣ್ಣುಗುಡ್ಡೆ ಚಿಕ್ಕದಾಗಿರುವುದು ಕಾರಣವಾಗಿರಬಹುದು. ಈ ದೋಷವನ್ನು ಸೂಕ್ತ ಸಾಮರ್ಥ್ಯವುಳ್ಳ ಪೀನ ಮಸೂರದ ಸಹಾಯದಿಂದ ಪ್ರತಿಬಿಂಬವನ್ನು ರೆಟಿನಾದ ಮೇಲೆ ಉಂಟು ಮಾಡಿ ಸರಿಪಡಿಸಬಹುದು.

3) ಪ್ರಿಸ್ ಬಯೋಪಿಯ

ವಯಸ್ಸಾದಂತೆ ಕಣ್ಣಿನ ಸಿಲಿಯರಿ ಸ್ನಾಯಗಳು ದುರ್ಬಲಗೊಂಡು ಕಣ್ಣಿನ ಮಸೂರವು ತನ್ನ ಸ್ಥಿತಿಸ್ಥಾಪಕತ್ವ ಗುಣವನ್ನು ಕಳೆದುಕೊಳ್ಳುತ್ತದೆ. ಇದರಿಂದ ವ್ಯಕ್ತಿಯು ಹತ್ತಿರದ ಅಥವಾ ದೂರದ ಅಥವಾ ಎರಡೂ ಬಗೆಯ ವಸ್ತುಗಳನ್ನು ಸ್ಪಷ್ಟವಾಗಿ ನೋಡಲಾರ. ಇದನ್ನು ಪ್ರಿಸ್ ಬಯೋಪಿಯ ಎನ್ನುವರು. ಇದನ್ನು ದ್ವಿಸಂಗಮ ಮಸೂರಗಳ ಸಹಾಯದಿಂದ ಸರಿಪಡಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.