ADVERTISEMENT

ಚುರುಕು ಪಡೆದ ಅಂಚೆ ಮತದಾನ: ಪೊಲೀಸ್, ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹಕ್ಕು ಚಲಾವಣೆ

​ಪ್ರಜಾವಾಣಿ ವಾರ್ತೆ
Published 3 ಮೇ 2019, 17:06 IST
Last Updated 3 ಮೇ 2019, 17:06 IST
ಅಂಚೆ ಮತದಾನಕ್ಕೆ ಮುಂದಾಗಿರುವ ಪೊಲೀಸರು, ಕೆಎಸ್‌ಆರ್‌ಟಿಸಿ ಸಿಬ್ಬಂದಿ.
ಅಂಚೆ ಮತದಾನಕ್ಕೆ ಮುಂದಾಗಿರುವ ಪೊಲೀಸರು, ಕೆಎಸ್‌ಆರ್‌ಟಿಸಿ ಸಿಬ್ಬಂದಿ.   

ಚಿತ್ರದುರ್ಗ: ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಪೊಲೀಸರು ಹಾಗೂ ಕೆಎಸ್‌ಆರ್‌ಟಿಸಿ ನೌಕರರು ಉಪವಿಭಾಗಾಧಿಕಾರಿ ಕಚೇರಿಯ ಮತಗಟ್ಟೆ ಕೇಂದ್ರದಲ್ಲಿಶುಕ್ರವಾರ ಅಂಚೆ ಮತ ಚಲಾಯಿಸಿದರು.

ಜಿಲ್ಲೆಯ ಆರೂ ತಾಲ್ಲೂಕುಗಳ ಪೊಲೀಸ್ ಸಿಬ್ಬಂದಿ ಸಮವಸ್ತ್ರದೊಂದಿಗೆ ಮತ ಚಲಾಯಿಸಲು ಬಹು ಉತ್ಸುಕರಾಗಿ ಬಂದಿದ್ದರು. ಚುನಾವಣಾ ಸಿಬ್ಬಂದಿಯಿಂದ ಬ್ಯಾಲೆಟ್‌ ಪೇಪರ್ ಪಡೆದು ಅಂಚೆ ಮತದಾನ ಮಾಡಿದರು.

ಬೆಳಿಗ್ಗೆ 11ರಿಂದ ಪ್ರಾರಂಭವಾದ ಅಂಚೆ ಮತದಾನ ಪ್ರಕ್ರಿಯೆ ಮಧ್ಯಾಹ್ನ 3ರವರೆಗೂ ನಡೆಯಿತು.ಹಕ್ಕು ಚಲಾಯಿಸುವವರ ಸಂಖ್ಯೆ ಹೆಚ್ಚಿದ್ದರಿಂದ ಗಂಟೆ, ಗಂಟೆಗೂ ಚುರುಕು ಪಡೆಯಿತು. ಅವಧಿ ಮುಗಿಯುವವರೆಗೂ ಸಾಲಿನಲ್ಲಿಯೇ ಅನೇಕರು ನಿಲ್ಲಬೇಕಾಯಿತು.

ADVERTISEMENT

ಪೊಲೀಸ್ ಸಿಬ್ಬಂದಿ ಸೇರಿ1,574 ಮತದಾರರಿದ್ದು, ಎರಡು ದಿನದಲ್ಲಿ 491 ಮಂದಿ ಮತ ಚಲಾಯಿಸಿದ್ದಾರೆ. ಕೆಎಸ್‌ಆರ್‌ಟಿಸಿಯ 273 ಸಿಬ್ಬಂದಿ ಪೈಕಿ 13 ಮಂದಿ ಹಕ್ಕು ಚಲಾಯಿಸಿದ್ದಾರೆ. ಇತರೆ 345 ಸೇರಿ ಒಟ್ಟು 3,992 ಅಂಚೆ ಮತದಾರರಿದ್ದಾರೆ.

ಏಪ್ರಿಲ್ 13ರವರೆಗೆ ಅಂಚೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದ್ದು, ಬೆಳಿಗ್ಗೆ 11ರಿಂದ ಪ್ರಾರಂಭವಾಗಿ ಮಧ್ಯಾಹ್ನ 3ರವರೆಗೂ ನಡೆಯಲಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 795 ಅಂಚೆ ಮತಗಳು ಚಲಾವಣೆಗೊಂಡಿದ್ದವು.

ಚುನಾವಣೆಗಾಗಿ ಕ್ಷೇತ್ರದಲ್ಲೇ ಕಾರ್ಯ ನಿರ್ವಹಿಸುವ ವಿವಿಧ ಇಲಾಖೆಗಳ ಒಟ್ಟು 11,030 ಸಿಬ್ಬಂದಿ ಇದ್ದಾರೆ.ಕರ್ತವ್ಯಕ್ಕೆ ನಿಯೋಜನೆಗೊಂಡ ಮತಗಟ್ಟೆಯಲ್ಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.

‘ಚುನಾವಣೆಗಾಗಿ ವಿಶೇಷ ಕರ್ತವ್ಯಕ್ಕೆ ಬೇರೆ ಜಿಲ್ಲೆ, ರಾಜ್ಯಕ್ಕೆ ಸಿಬ್ಬಂದಿ ಹೋಗಬೇಕಾದ ಕಾರಣ ಹಿಂದಿನ ಚುನಾವಣೆಗಳಲ್ಲಿ ಅಂಚೆ ಬ್ಯಾಲೆಟ್ ಕೊಟ್ಟರೆ ಅನೇಕರಿಗೆ ಮತ ಚಲಾಯಿಸಲು ಸಾಧ್ಯ ಆಗುತ್ತಿರಲಿಲ್ಲ. ಅದಕ್ಕಾಗಿ ಈ ಬಾರಿ ಸಿಬ್ಬಂದಿಯಿಂದ ಶೇ 100ಕ್ಕೆ ನೂರರಷ್ಟು ಅಂಚೆ ಮತದಾನ ನಡೆಯಬೇಕು ಎಂಬ ಉದ್ದೇಶದಿಂದ ಮುಂಚಿತವಾಗಿ ಹಕ್ಕು ಚಲಾಯಿಸಲು ಅವಕಾಶ ಮಾಡಿಕೊಡಲಾಗಿದೆ’ ಎಂದುಅಂಚೆ ಮತದಾನ ಪ್ರಕ್ರಿಯೆಯ ಜಿಲ್ಲಾ ನೋಡಲ್ ಅಧಿಕಾರಿ ನಾಗರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.