ADVERTISEMENT

ದೀದಿ ನಾಡಲ್ಲಿ ಮೋದಿ ಆಪರೇಷನ್?

ತೃಣಮೂಲ ಕಾಂಗ್ರೆಸ್‌ ಪಕ್ಷದ 40 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದ ಪ್ರಧಾನಿ

ಸೌಮ್ಯ ದಾಸ್
Published 29 ಏಪ್ರಿಲ್ 2019, 20:15 IST
Last Updated 29 ಏಪ್ರಿಲ್ 2019, 20:15 IST
ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪ್ರತಿಕೃತಿಗಳನ್ನು ಹೌರಾದ ಸಿಹಿ ತಿನಿಸಿನ ಅಂಗಡಿಯಲ್ಲಿ ಮಾರಾಟಕ್ಕೆ ಇಡಲಾಗಿದೆ – ಪಿಟಿಐ ಚಿತ್ರ
ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪ್ರತಿಕೃತಿಗಳನ್ನು ಹೌರಾದ ಸಿಹಿ ತಿನಿಸಿನ ಅಂಗಡಿಯಲ್ಲಿ ಮಾರಾಟಕ್ಕೆ ಇಡಲಾಗಿದೆ – ಪಿಟಿಐ ಚಿತ್ರ   

ಕೋಲ್ಕತ್ತ:ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಮಟ್ಟದ ಪಕ್ಷಾಂತರ ನಡೆಯಲಿದೆ ಎಂಬ ಸುಳಿವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (ದೀದಿ) ಅವರ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಪಕ್ಷದ (ಟಿಎಂಸಿ) 40 ಶಾಸಕರು ತಮ್ಮ ಜತೆ ಸಂಪರ್ಕದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಹೂಗ್ಲಿ ಜಿಲ್ಲೆಯ ಶ್ರೀರಾಂಪುರದಲ್ಲಿ ಸೋಮವಾರ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ ಅವರು, ‘ದೀದಿ ಅವರೇ ನಿಮ್ಮ ಕಾಲಡಿಯ ನೆಲ ಕುಸಿಯುತ್ತಿದೆ. ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾದಾಗ ಪಶ್ಚಿಮ ಬಂಗಾಳದಲ್ಲಿ ತಾವರೆ ಅರಳಿರುತ್ತದೆ. ನಿಮ್ಮ ಶಾಸಕರು ನಿಮ್ಮ ಕೈಬಿಡುವರು. ನಿಮ್ಮ ಪಕ್ಷದ 40 ಶಾಸಕರು ಈಗಲೂ ನನ್ನ ಸಂಪರ್ಕದಲ್ಲಿದ್ದಾರೆ. ದೀದಿ ಅವರೇ ಈ ಸಂಕಷ್ಟದಿಂದ ಪಾರಾಗಲು ನಿಮಗೆ ಸಾಧ್ಯವಾಗದು, ಯಾಕೆಂದರೆ ನೀವೊಬ್ಬ ವಿಶ್ವಾಸದ್ರೋಹಿ’ ಎಂದು ಟೀಕಿಸಿದರು.

ADVERTISEMENT

‘ಕೇಂದ್ರದಲ್ಲಿ ಹೊಸ ಸರ್ಕಾರ ರಚಿಸುವಲ್ಲಿ ಟಿಎಂಸಿ ಮುಖ್ಯ ಪಾತ್ರ ವಹಿಸಲಿದೆ’ ಎಂಬ ಮಮತಾ ಅವರ ಹೇಳಿಕೆಯನ್ನು ಮೋದಿ ಉಲ್ಲೇಖಿಸಿದರು. ‘ಬೆರಳೆಣಿಕೆಯಷ್ಟು ಸ್ಥಾನಗಳನ್ನು ಗೆದ್ದುಕೊಂಡು ದೇಶದ ಪ್ರಧಾನಿಯಾಗಲು ಸಾಧ್ಯವಾಗದು. ದೆಹಲಿ ತುಂಬಾ ದೂರವಿದೆ. ಮಮತಾ ಅವರ ಮೂಲ ಉದ್ದೇಶ ತಮ್ಮ ಸೋದರಳಿಯ ಅಭಿಷೇಕ್‌ ಬ್ಯಾನರ್ಜಿಯ ಭವಿಷ್ಯ ಭದ್ರಪಡಿಸುವುದಾಗಿದೆ’ ಎಂದರು.

ಬೇಗನೆ ಸಿಟ್ಟಿಗೇಳುವ ಮಮತಾ ಅವರ ಸ್ವಭಾವವನ್ನು ಟೀಕಿಸಿದರು. ‘ಚುನಾವಣೆಯಲ್ಲಿ ಸೋಲು ಖಚಿತವಾಗಿರುವುದರಿಂದ ದೀದಿ ಬೇಗನೆ ಸಿಟ್ಟಿಗೇಳುತ್ತಿದ್ದಾರೆ. ಇದರಿಂದಾಗಿ, ಎಲ್ಲಿ ಹೊಡೆದುಬಿಡುತ್ತಾರೋ ಎಂಬ ಭಯದಿಂದ ಅವರ ಪಕ್ಷದ ಶಾಸಕರೂ ದೂರ ಓಡುತ್ತಿದ್ದಾರೆ’ ಎಂದರು.

‘ಪ್ರಧಾನಿಯಿಂದ ಶಾಸಕರ ಖರೀದಿ’

ಮೋದಿ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಟಿಎಂಸಿ ಮುಖಂಡ ಡೆರೆಕ್‌ ಒ ಬ್ರಯಾನ್‌ ‘ಎಕ್ಸ್‌ಪೈರಿ ಬಾಬು’ ಪ್ರಧಾನಿಯವರೇ ಒಂದು ಅಂಶವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ, ನಮ್ಮ ಪಕ್ಷದ ಒಬ್ಬ ಪಾಲಿಕೆಯ ಸದಸ್ಯನೂ ನಿಮ್ಮ ಜೊತೆ ಬರುವುದಿಲ್ಲ. ನೀವು ಚುನಾವಣಾ ಪ್ರಚಾರ ಮಾಡುತ್ತಿರುವಿರೋ, ಶಾಸಕರ ಖರೀದಿ ನಡೆಸುತ್ತೀದ್ದೀರೋ’ ಎಂದು ಪ್ರಶ್ನಿಸಿದ್ದಾರೆ.

ಮೋದಿ ಭಾಷಣದ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿಯೂ ಅವರು ಟ್ವೀಟ್‌ ಮಾಡಿದ್ದಾರೆ.

ಬಿಜೆಪಿ ಬಲವರ್ಧನೆ

ಪಶ್ಚಿಮ ಬಂಗಾಳದಲ್ಲಿ 2016ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ 294 ಕ್ಷೇತ್ರಗಳ ಪೈಕಿ 211 ಕ್ಷೇತ್ರಗಳನ್ನು ಗೆದ್ದಿತ್ತು. ಲೋಕಸಭೆಯಲ್ಲಿ ಈ ಪಕ್ಷ 34 ಸಂಸದರನ್ನು ಹೊಂದಿದೆ.

ಕೆಲವೇ ವರ್ಷಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಅಸ್ತಿತ್ವವೇ ಇರಲಿಲ್ಲ. ಆದರೆ, ನಿಧಾನವಾಗಿ ನೆಲೆಯೂರಿರುವ ಈ ಪಕ್ಷ ಈಗ ಅಲ್ಲಿ ಟಿಎಂಸಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದೆ. ಮಮತಾ ಬ್ಯಾನರ್ಜಿ ಅವರ ನಿಕಟವರ್ತಿಯಾಗಿದ್ದ ಮುಕುಲ್‌ ರಾಯ್‌ ಅವರನ್ನು ಸೆಳೆಯುವುದರೊಂದಿಗೆ ಬಿಜೆಪಿ ಬಲವರ್ಧನೆಯಾಗಿದೆ. ರಾಜ್ಯದಲ್ಲಿ ಅಧಿಕಾರ ಹಿಡಿಯುವ ಬಿಜೆಪಿಯ ಪ್ರಯತ್ನಕ್ಕೆ ಮುಕುಲ್‌ ಅವರದ್ದೇ ನಾಯಕತ್ವ. ಟಿಎಂಸಿಯ ಆರು ಹಿರಿಯ ಮುಖಂಡರು ಈಗಾಗಲೇ ಬಿಜೆಪಿ ಸೇರಿದ್ದಾರೆ. ಲೋಕಸಭಾ ಸದಸ್ಯ ಸೌಮಿತ್ರ ಖಾನ್‌, ನಾಲ್ಕು ಬಾರಿಯ ಶಾಸಕ ಅರ್ಜುನ್‌ ಸಿಂಗ್‌, ದುಲಾಲ್‌ ಬ್ರಾರ್‌ ಮುಂತಾದವರು ಈಗ ಬಿಜೆಪಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.