ADVERTISEMENT

‘ರೋಡ್‌’ಗಿಳಿದ ಶಾ; ಮೋದಿ ಹವಾ

ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾವಿರಾರು ಕಾರ್ಯಕರ್ತರಿಂದ ಜಯಘೋಷ

​ಪ್ರಜಾವಾಣಿ ವಾರ್ತೆ
Published 3 ಮೇ 2019, 14:01 IST
Last Updated 3 ಮೇ 2019, 14:01 IST
ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಬೆಂಗಳೂರಿನ ಬನಶಂಕರಿಯಲ್ಲಿ ಮಂಗಳವಾರ ರೋಡ್‌ ಶೋ ನಡೆಸಿದರು. ತೇಜಸ್ವಿನಿ ಅನಂತ್‌ಕುಮಾರ್, ಅಶ್ವತ್ಥ ನಾರಾಯಣ, ಬಿ.ಎಸ್‌. ಯಡಿಯೂರಪ್ಪ, ಆರ್‌.ಅಶೋಕ್‌ ಹಾಗೂ ತೇಜಸ್ವಿ ಸೂರ್ಯ ಇದ್ದಾರೆ   ಪ್ರಜಾವಾಣಿ ಚಿತ್ರ: ಮಂಜುನಾಥ್ ಎಂ.ಎಸ್.
ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಬೆಂಗಳೂರಿನ ಬನಶಂಕರಿಯಲ್ಲಿ ಮಂಗಳವಾರ ರೋಡ್‌ ಶೋ ನಡೆಸಿದರು. ತೇಜಸ್ವಿನಿ ಅನಂತ್‌ಕುಮಾರ್, ಅಶ್ವತ್ಥ ನಾರಾಯಣ, ಬಿ.ಎಸ್‌. ಯಡಿಯೂರಪ್ಪ, ಆರ್‌.ಅಶೋಕ್‌ ಹಾಗೂ ತೇಜಸ್ವಿ ಸೂರ್ಯ ಇದ್ದಾರೆ ಪ್ರಜಾವಾಣಿ ಚಿತ್ರ: ಮಂಜುನಾಥ್ ಎಂ.ಎಸ್.   

ಬೆಂಗಳೂರು: ಲೋಕಸಭೆ ಚುನಾವಣೆ ಪ್ರಚಾರದ ಅಂಗವಾಗಿ ಬೆಂಗಳೂರು ಗ್ರಾಮಾಂತರ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮಂಗಳವಾರ ರಾತ್ರಿ ಭರ್ಜರಿ ರೋಡ್ ಶೋ ನಡೆಸಿದರು.

ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾವಿರಾರು ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಜಯ ಘೋಷ ಮೊಳಗಿಸುತ್ತಾ ರ‍್ಯಾಲಿಯಲ್ಲಿ ಭಾಗವಹಿಸಿದರು.

ಬನಶಂಕರಿ ಬಸ್ ನಿಲ್ದಾಣದಿಂದ ರಾತ್ರಿ 7.30 ಗಂಟೆಗೆ ನಿಗದಿಯಾಗಿದ್ದ ರೋಡ್‌ ಶೋ ಸುಮಾರು ಒಂದೂವರೆ ಗಂಟೆ ವಿಳಂಬವಾಗಿ ಆರಂಭವಾಯಿತು. ಶಾ ಬರುತ್ತಿದ್ದಂತೆ ಅಲ್ಲಿ ಸೇರಿದ್ದ ಕಾರ್ಯಕರ್ತರು ಮೊಬೈಲ್ ಟಾರ್ಚ್‌ ಬೆಳಗಿಸಿ ಬಿಜೆಪಿ, ಮೋದಿ ಮತ್ತು ಶಾ ಅವರಿಗೆ ಜೈಕಾರ ಕೂಗಿದರು.

ADVERTISEMENT

ತೆರೆದ ವಾಹನದಲ್ಲಿ ಶೋ ನಡೆಸಿದ ಶಾ ಅವರು ‘ಮೋದಿ ಹವಾ’ ಎಬ್ಬಿಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಬೆಂಗಳೂರು ಗ್ರಾಮಾಂತರ ಕ್ಷೇತ್ರ ಅಭ್ಯರ್ಥಿ ಅಶ್ವತ್ಥನಾರಾಯಣ ಮತ್ತು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ. ಶಾಸಕರಾದ ವಿ. ಸೋಮಣ್ಣ, ಆರ್‌. ಅಶೋಕ, ಉದಯ ಗರುಡಾಚಾರ್‌ ಸೇರಿದಂತೆ ಪ್ರಮುಖರು ಇದ್ದರು. ರೋಡ್‌ ಶೋ ಕಾರಣಕ್ಕೆ ನಗರ ಪೂರ್ಣ ಕೇಸರಿಮಯವಾಗಿತ್ತು. ಮೆರವಣಿಗೆ ಉದ್ದಕ್ಕೂ ಬಿಜೆಪಿ ಕಾರ್ಯಕರ್ತರು ‘ಮೋದಿ... ಮೋದಿ...’ ಎಂಬ ಘೋಷಣೆಗಳನ್ನು ಮೊಳಗಿಸಿದರು. ಇದರ ಜತೆ ‘ಮತ್ತೊಮ್ಮೆ ಮೋದಿ’ ಎಂಬ ಘೋಷ ವಾಕ್ಯ ಮೊಳಗಿಸುವ ಮೂಲಕ ಜನರಲ್ಲಿ ಹುರುಪು ತುಂಬಿದರು. ಬಿಜೆಪಿ ಗೆಲ್ಲಿಸುವಂತೆ ಶೋ ಉದ್ದಕ್ಕೂ ಅಮಿತ್‌ ಶಾ ಜನರಲ್ಲಿ ಮನವಿ ಮಾಡಿದರು. ಪಕ್ಷದ ಪರವಾಗಿ ಘೋಷಣೆ ಕೂಗಿ, ಜಯಘೋಷ ಮೊಳಗುವಂತೆ ಮಾಡಿದರು.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್‌ ನಿರಾಕರಿಸಿದ್ದರಿಂದ ಬೇಸರಗೊಂಡಿದ್ದ ತೇಜಸ್ವಿನಿ ಇಲ್ಲಿಯವರೆಗೆ ಪಕ್ಷದ ಪರವಾಗಿ ಪ್ರಚಾರದಲ್ಲಿ ಪಾಲ್ಗೊಂಡಿರಲಿಲ್ಲ. ರೋಡ್ ಶೋಗಾಗಿ ಸಿದ್ಧಪಡಿಸಿದ್ದ ವಾಹನದಲ್ಲಿ ಮೊದಲ ಸಾಲಿನಲ್ಲೇ ತೇಜಸ್ವಿನಿ ಅನಂತಕುಮಾರ್ ಕಾಣಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.