ADVERTISEMENT

ಸಂದರ್ಶನ | ಯಡಿಯೂರಪ್ಪ ಹೈಕಮಾಂಡ್‌ಗೆ ಮಂಕುಬೂದಿ ಎರಚಿದ್ದಾರೆ - KS ಈಶ್ವರಪ್ಪ

ವೆಂಕಟೇಶ ಜಿ.ಎಚ್.
Published 19 ಮಾರ್ಚ್ 2024, 23:34 IST
Last Updated 19 ಮಾರ್ಚ್ 2024, 23:34 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   
ಲೋಕಸಭಾ ಚುನಾವಣೆಗೆ ಪುತ್ರ ಕೆ.ಈ.ಕಾಂತೇಶ್‌ಗೆ ಹಾವೇರಿ–ಗದಗ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದಕ್ಕೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮುನಿಸಿಕೊಂಡಿದ್ದಾರೆ. ಬಂಡಾಯದ ಕಹಳೆ ಊದಿ ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಸ್ಪರ್ಧೆ ಎಂದು ಘೋಷಿಸಿದ್ದಾರೆ. ಚುನಾವಣೆ ತಯಾರಿ ಆರಂಭಿಸಿರುವ ಈಶ್ವರಪ್ಪ ಮಂಗಳವಾರ ಬೆಳಿಗ್ಗೆ ಸಿಗಂದೂರು ಕ್ಷೇತ್ರಕ್ಕೆ ತೆರಳುವ ವೇಳೆ ‘ಪ್ರಜಾವಾಣಿ’ಯೊಂದಿಗೆ ಮಾತಿಗೆ ಸಿಕ್ಕರು.

ಕರ್ನಾಟಕದ ಬಿಜೆಪಿಯ ಮಟ್ಟಿಗೆ ನೀವಿಬ್ಬರೂ (ಯಡಿಯೂರಪ್ಪ–ಈಶ್ವರಪ್ಪ) ಜೋಡೆತ್ತುಗಳು. ಮುನಿಸು ಶುರುವಾಗಿದ್ದು ಏಕೆ? ಬಿರುಕು ಮೂಡಿಸಿದ್ದು ಯಾರು?

ಬಿರುಕು ಯಾರೂ ಮೂಡಿಸಿಲ್ಲ. ಬದಲಿಗೆ ಯಡಿಯೂರಪ್ಪ ಮುಂಚಿನಿಂದಲೂ ತಾವು ಮಾತ್ರ ಬೆಳೆಯಬೇಕು, ಬೇರೆ ಯಾರೂ ಬೆಳೆಯಬಾರದು ಎಂಬ ಲೆಕ್ಕದಲ್ಲಿ ಬಂದವರು. ಅವರೊಂದಿಗೆ ವೈಚಾರಿಕ ಭಿನ್ನಾಭಿಪ್ರಾಯ ಏನೂ ಇಲ್ಲ. ಆದರೆ, ಈಶ್ವರಪ್ಪ ಪಕ್ಷದಲ್ಲಿ ಬೆಳೆಯುತ್ತಿದ್ದಾನೆ. ನನಗೆ ಪರ್ಯಾಯ ನಾಯಕ ಆಗುತ್ತಾನೆ ಎಂಬುದು ತಲೆಯಲ್ಲಿ ಹೊಕ್ಕಿತು. ಅದರ ಭಾಗವಾಗಿ ಅಮಿತ್ ಶಾ ಮೇಲೆ ಒತ್ತಡ ಹಾಕಿ ಹಿಂದುಳಿದವರು, ಪರಿಶಿಷ್ಟರನ್ನು ಸಂಘಟಿಸಿ ಆಗ ನಾನು ಕಟ್ಟಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬರ್ಕಾಸ್ತು ಮಾಡಿಸಿದರು. ಆಗಲೂ ಪಕ್ಷದ ಸೂಚನೆ ಪಾಲಿಸಿದ್ದೆ. ಅದು ಯಡಿಯೂರಪ್ಪ ಅವರಿಂದ ನನಗಾದ ಮೊದಲ ತುಳಿತದ ಅನುಭವ.

ಗೆಲ್ಲುವುದು ಕಷ್ಟ. ಬೇಡ ಎಂದು ಹೇಳಿದರೂ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಕನಕಪುರದಲ್ಲಿ ದೇವೇಗೌಡರ ಎದುರು ಚುನಾವಣೆಗೆ ನಿಲ್ಲಿಸಿದ್ದರು. ಗುತ್ತಿಗೆದಾರ ಸಂತೋಷ ಪಾಟೀಲ ‍ಪ್ರಕರಣದಲ್ಲಿ ನನಗೆ ಕ್ಲೀನ್‌ಚಿಟ್ ಸಿಕ್ಕರೂ ಸಂಪುಟಕ್ಕೆ ತೆಗೆದುಕೊಳ್ಳಲು ಬಿಡಲಿಲ್ಲ. ನನಗೆ ಮಂತ್ರಿ ಮಾಡಿದರೆ ಪುತ್ರ ವಿಜಯೇಂದ್ರ ಅವರನ್ನೂ ಮಾಡಬೇಕು ಎಂಬ ಷರತ್ತು ಮುಂದಿಟ್ಟಿದ್ದರು.

ADVERTISEMENT

ಪುತ್ರನಿಗೆ ಟಿಕೆಟ್ ನಿರಾಕರಿಸಿದ್ದು ಹೈಕಮಾಂಡ್‌ ತೀರ್ಮಾನ. ಅದಕ್ಕೆ ಯಡಿಯೂರಪ್ಪ ಹೇಗೆ ಹೊಣೆ?

ಟಿಕೆಟ್ ಕೊಡಿಸಿ ಓಡಾಡಿ ಗೆಲ್ಲಿಸುವುದಾಗಿ ಹೇಳಿ ಯಡಿಯೂರಪ್ಪ ವರ್ಷದ ಹಿಂದೆ ಕಾಂತೇಶನನ್ನು ಹಾವೇರಿಗೆ ಕಳಿಸಿದ್ದರು. ಈಗ ನಂಬಿಕೆ ದ್ರೋಹ ಮಾಡಿದ್ದಾರೆ. ಚುನಾವಣಾ ಸಮಿತಿ ತೀರ್ಮಾನಕ್ಕೆ ಮುನ್ನವೇ ಚಿಕ್ಕಮಗಳೂರು–ಉಡುಪಿ ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆ ಹೆಸರನ್ನು ಯಡಿಯೂರಪ್ಪ ಘೋಷಿಸಿದ್ದರು. ಕಾರ್ಯಕರ್ತರಿಂದ ಅಲ್ಲಿ ವಿರೋಧ ವ್ಯಕ್ತವಾಗಿದ್ದಕ್ಕೆ ಬೆಂಗಳೂರು ಉತ್ತರಕ್ಕೆ ಕೊಡಿಸಿದರು. ತಾವು ಇಷ್ಟಪಟ್ಟ ಅಭ್ಯರ್ಥಿಗೆ ಟಿಕೆಟ್ ಕೊಡಿಸಲು ಹೈಕಮಾಂಡ್ ಬೇಡ. ಆದರೆ, ಈಶ್ವರಪ್ಪನ ಮಗನ ವಿಚಾರದಲ್ಲಿ ಅತ್ತ ಕೈತೋರುವುದು ಏಕೆ? ಅನಾರೋಗ್ಯದ ಕಾರಣ ಇರಿಸಿದರೂ ಬಸವರಾಜ ಬೊಮ್ಮಾಯಿಗೆ ಬಲವಂತವಾಗಿ ಟಿಕೆಟ್‌ ಕೊಟ್ಟಿದ್ದಾರೆ. ಅದರ ಹಿಂದೆ ಕಾಂತೇಶನಿಗೆ ಟಿಕೆಟ್ ತಪ್ಪಿಸುವ ತಂತ್ರ ಅಡಗಿದೆ.

 ಹಿಂದುತ್ವದ ಪರ ಇರುವವರನ್ನು ಬದಿಗೆ ಸರಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದೀರಿ, ಪಕ್ಷದ ವರಿಷ್ಠರು ನಿಮ್ಮ ರಕ್ಷಣೆಗೆ ಬರಲಿಲ್ಲವೇಕೆ?

ಯಡಿಯೂರಪ್ಪ ಮೇಲಿನವರಿಗೆ (ಹೈಕಮಾಂಡ್) ಮಂಕುಬೂದಿ ಎರಚಿದ್ದಾರೆ. ಯಡಿಯೂರಪ್ಪ ತೀರ್ಮಾನ ಸರಿಯಾಗಿರುತ್ತೆ ಎಂಬ ಲೆಕ್ಕದಲ್ಲಿ ಹೈಕಮಾಂಡ್‌ ಇದೆ. ಇವರು ಹೇಳಿದ್ದನ್ನೇ ಕೇಳಬೇಕು ಅಂದುಕೊಂಡಿದ್ದಾರೆ. ಮಕ್ಕಳನ್ನು ಬೆಳೆಸಲು ಈ ಅವಕಾಶ ಬಳಸಿಕೊಳ್ಳುತ್ತಿದ್ದಾರೆ. ಟಿಕೆಟ್ ಹಂಚಿಕೆಯಲ್ಲಿ ಶೋಭಾ ಕರಂದ್ಲಾಜೆ ರೀತಿ ಪ್ರತಾಪ ಸಿಂಹನಿಗೆ, ಸಿ.ಟಿ.ರವಿಗೆ ಟಿಕೆಟ್ ಕೊಡಲಿಲ್ಲ. ರಾಜ್ಯದಲ್ಲಿ ಕುರುಬ ಸಮುದಾಯದವರಿಗೆ ಟಿಕೆಟ್ ಕೊಟ್ಟಿಲ್ಲ. ನಮ್ಮ ಓಟು ಬೇಡವೇ ಎಂದು ಹಲವರು ಫೋನ್‌ ಮಾಡಿ ಕೇಳುತ್ತಿದ್ದಾರೆ. ಚುನಾವಣೆ ಫಲಿತಾಂಶದ ನಂತರ ಯಡಿಯೂರಪ್ಪ ಏನೇನು ಅನ್ಯಾಯ ಮಾಡಿದ್ದಾರೆ ಎಂಬುದು ಮೇಲಿನವರಿಗೂ ಗೊತ್ತಾಗಲಿದೆ.

ಎದೆಯೊಳಗೆ ನರೇಂದ್ರ ಮೋದಿ ಇದ್ದಾರೆ ಅನ್ನುತ್ತೀರಿ. ಶಿವಮೊಗ್ಗಕ್ಕೆ ಬಂದರೂ ಪ್ರಧಾನಿ ನಿಮ್ಮನ್ನು ಕರೆದು
ಮಾತಾಡಲಿಲ್ಲವಲ್ಲ?

ಅವರ ಲೆಕ್ಕದಲ್ಲಿ ಈಗ ನಾನು ಪಕ್ಷೇತರ ಸ್ಪರ್ಧಿ. ಹೀಗಾಗಿ ಕರೆದು ಮಾತಾಡಿರಲಿಕ್ಕಿಲ್ಲ. ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಕಾರ್ಯಕರ್ತರು ನನ್ನ ವಿಚಾರ ಪ್ರಸ್ತಾಪಿಸಿದಾಗ ಈಶ್ವರಪ್ಪ ಅವರಿಗೆ ಕರೆ ಮಾಡಿ ಮಾತನಾಡುವೆ ಎಂದು ಹೇಳಿದ್ದಾರಂತೆ.

ಪಕ್ಷದಲ್ಲಿ ಈ ಬೆಳವಣಿಗೆ ಕಂಡರೂ ಆರ್‌ಎಸ್‌ಎಸ್‌ ಮೌನ ವಹಿಸಿರುವುದೇಕೆ, ಹಿರಿಯರ ಹಿಡಿತ ತಪ್ಪಿದೆಯೇ?

ಬಿಜೆಪಿ ವಿಚಾರ ಬಂದಾಗ ಆರ್‌ಎಸ್‌ಎಸ್‌ ಅಭಿಪ್ರಾಯ ನೀಡಿ ಹಿಂದೆ ಸರಿಯುತ್ತದೆಯೇ ವಿನಾ ಡಿಕ್ಟೇಟ್ ಮಾಡುವುದಿಲ್ಲ. ಇಲ್ಲಿ ಹಿರಿಯರು ಅನ್ನಿಸಿಕೊಂಡವರೇ ದಾರಿ ತಪ್ಪಿದ್ದಾರೆ. ಕುಟುಂಬದ ಹಿರಿತನ ಕೊಟ್ಟಾಗ ಎಲ್ಲರನ್ನೂ ಸಮಾನವಾಗಿ ಕಾಣುವುದು ಬಿಟ್ಟು ತನಗೆ ಬೇಕಾದವರಿಗೆ, ಮಕ್ಕಳಿಗೆ ಪ್ರಾಮುಖ್ಯತೆ ಕೊಡುತ್ತಿರುವ ಕಾರಣ ಮನೆಗೆ ಈ ಸ್ಥಿತಿ ಬಂದಿದೆ. ನನ್ನ ಹೋರಾಟ ಸರಿ ಇದ್ದರೆ ಆರ್‌ಎಸ್‌ಎಸ್‌ ನನ್ನ ಬೆಂಬಲಕ್ಕೆ, ಯಡಿಯೂರಪ್ಪ ಕುಟುಂಬ ಸರಿ ಅನ್ನಿಸಿದರೆ ಅವರ ಜೊತೆ ನಿಲ್ಲುತ್ತದೆ.

ಕಾಂತೇಶ ಅವರಿಗೆ ವಿಧಾನಪರಿಷತ್‌ಗೆ ಅವಕಾಶ ಕಲ್ಪಿಸುವ ಭರವಸೆ ಸಿಕ್ಕಿದೆಯಂತಲ್ಲ?

ನಾನು ಅಭ್ಯರ್ಥಿ ಆಗುವೆ ಎಂದು ಹೇಳುತ್ತಿದ್ದಂತೆಯೇ
ಜೂನ್‌ನಲ್ಲಿ ಪರಿಷತ್‌ನ 3 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಒಂದು ಸ್ಥಾನ ಕಾಂತೇಶನಿಗೆ ಕೊಡಿಸುವೆ ಎಂದು ಯಡಿಯೂರಪ್ಪ ಹೇಳಿ ಕಳುಹಿಸಿದ್ದರು. ನಮಗೆ ಮೋಸ ಆದ ನಂತರ ಏನನ್ನೂ ಕೇಳಬಾರದೆಂದೇ ತೀರ್ಮಾನಿಸಿದ್ದೇನೆ. ಈ ಹಿಂದೆ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದಾಗಲೂ ರಾಜ್ಯಪಾಲ ಆಗುವ ಅವಕಾಶ ತಿರಸ್ಕರಿಸಿದ್ದೆ.

ಶಿವಮೊಗ್ಗ ಕ್ಷೇತ್ರದಲ್ಲಿ ನಿಮ್ಮ ಸ್ಪರ್ಧೆ ಕಾಂಗ್ರೆಸ್‌ಗೆ ಅನುಕೂಲವಾಗುವುದಲ್ಲವೇ?

ಈಡಿಗ ಸಮುದಾಯದವರು ನಮ್ಮ ಜೊತೆ ಇದ್ದಾರೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಲಿಂಗಾಯತರು ನಮ್ಮ ಜೊತೆ ಇದ್ದಾರೆ ಎಂಬುದು ಯಡಿಯೂರಪ್ಪ ಅಭಿಮತ. ಆದರೆ ನನ್ನ ಜೊತೆ ಎಲ್ಲ ಹಿಂದೂಗಳೂ ಇದ್ದಾರೆ. ಹೀಗಾಗಿ ಕಾಂಗ್ರೆಸ್‌ಗೆ ಅನುಕೂಲದ ಪ್ರಶ್ನೆ ಇಲ್ಲ. ಅದೃಶ್ಯ ಮತದಾರರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಸಹಾಯ ಬೇಕಾ ಎಂದು ಕೇಳುತ್ತಿದ್ದಾರೆ. ಹೀಗಾಗಿ ನಿಶ್ಚಿತವಾಗಿಯೂ ಗೆಲುವು ಸಾಧಿಸುವೆ. ಎರಡು ತಿಂಗಳಲ್ಲಿ ಮತ್ತೆ ಬಿಜೆಪಿ ಸೇರುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.