ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ, 32 ವರ್ಷದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಇದೇ ಮೊದಲ ಬಾರಿಗೆ ಚುನಾವಣಾ ರಾಜಕಾರಣದ ಅಖಾಡಕ್ಕೆ ಇಳಿದಿದ್ದಾರೆ. ರಾಜಕಾರಣಕ್ಕೆ ಬಂದಿರುವುದೇಕೆ, ಇದುವರೆಗಿನ ಅನುಭವ ಹೇಗಿದೆ, ಆಕಾಂಕ್ಷೆಗಳೇನು, ಶ್ರೀರಕ್ಷೆ ಯಾರದು ಎಂಬಿತ್ಯಾದಿ ವಿಷಯಗಳ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.
* ನನ್ನ ಆಕಾಂಕ್ಷೆಗಳಿಗೂ–ರಾಜಕೀಯಕ್ಕೂ ಹೊಂದುವುದಿಲ್ಲ, ಆದ್ದರಿಂದ ರಾಜಕೀಯಕ್ಕೆ ಬರುವುದಿಲ್ಲ ಎಂದಿದ್ದ ನೀವು ಈಗ ಪ್ರವೇಶಿಸಿದ್ದೀರಿ?
ಆಗ ನನಗೆ ವಾತಾವರಣ ಸರಿ ಇರಲಿಲ್ಲ ಎನಿಸಿತ್ತು. ಆತ್ಮವಿಶ್ವಾಸ ಬೇಕು, ಪಕ್ವತೆ ಬೇಕು ಎನಿಸಿತ್ತು. ಈಗ ಸಿದ್ಧವಾಗಿದ್ದೇನೆ ಎನಿಸಿದ್ದರಿಂದ ಬಂದಿದ್ದೇನೆ. ವಯಸ್ಸಾಗುತ್ತಾ ಬದಲಾವಣೆಗಳು ಸಹಜ. ಒಳ್ಳೆಯ ಕೆಲಸ ಮಾಡಬಹುದೆಂದು ಯೋಚಿಸಿ ಇಲ್ಲಿಗೆ ಬಂದೆ. ಅನುಮಾನಗಳು ಹೋಗಿ, ಈಗ ಸ್ಪಷ್ಟತೆ ಬಂದಿದೆ. ನನ್ನ ತತ್ವಗಳೇನು ಎನ್ನುವುದು ಗೊತ್ತಾಗಿದೆ. ನನಗಿರುವ ಹಿನ್ನೆಲೆಯೂ ಅನುಕೂಲ ಆಗುತ್ತದೆಂದು ತಿಳಿದು ರಾಜಕೀಯಕ್ಕೆ ಪ್ರವೇಶಿಸಿದ್ದೇನೆ.
* ಬಯಸಿ ಬಂದಿದ್ದಾ ಅಥವಾ ಯಾರದ್ದಾದರೂ ಒತ್ತಾಯವಿತ್ತಾ?
ಆಸೆಯೂ ಇತ್ತು; ಬಿಜೆಪಿಯಿಂದಲೂ ಆಹ್ವಾನವಿತ್ತು. ಎರಡೂ ಸರಿಯಾದ ಸಮಯಕ್ಕೆ ಹೊಂದಾಣಿಕೆ ಆಗಿದ್ದರಿಂದ ‘ಲಗ್ನ’ ಕೂಡಿಬಂದಿದೆ ಎನಿಸಿತು.
* ರಾಜಕೀಯಕ್ಕೆ ಬರಲು ಮನಸ್ಸು ಮಾಡಿದ್ದು, ತಯಾರಿ ಆರಂಭಿಸಿದ್ದು ಯಾವಾಗ?
ಒಂದು ವರ್ಷದ ಹಿಂದೆ ಮನಸ್ಸು ಬಂತು. ಈಗ ಒಳ್ಳೆಯ ಅವಕಾಶ ಬಂದಿದೆ ಎನಿಸಿತು. ಆಗಿನಿಂದಲೇ ಸಿದ್ಧತೆ, ಅಧ್ಯಯನ ಮಾಡುತ್ತಿದ್ದೆ. ಕಲಿಕೆ ನಿರಂತರವಾಗಿ ಇರುತ್ತದೆ.
* ರಾಜವಂಶಸ್ಥ ಎಂಬ ವರ್ಚಸ್ಸು ನಿಮ್ಮ ಕೈಹಿಡಿಯುವುದೆಂದು ಅನ್ನಿಸಿದೆಯೇ?
ಅದು ಸಂಬಂಧವಿರುವುದು ಅರಮನೆಗಷ್ಟೆ. ದತ್ವು ಸ್ವೀಕಾರ ಪ್ರಕ್ರಿಯೆ ಮುಗಿದ ನಂತರ ನಾನೆಲ್ಲಿಯೂ ರಾಜ, ಯುವರಾಜ ಎಂಬ ಪದವಿಯನ್ನಾಗಲಿ, ಪದಗಳನ್ನಾಗಿ ಬಳಸಿಲ್ಲ. ಆದರೆ, ಜನರಿಗೂ–ಅರಮನೆಗೂ ಭಾವನಾತ್ಮಕ ಸಂಬಂಧವಿದೆ. ಅಂದಿನ ಕಾಲದಲ್ಲಿ ರಾಜರು ಒಳ್ಳೆಯ ಕೆಲಸ ಮಾಡಿದ್ದರಿಂದ ಅರಮನೆಗೆ ಗೌರವ ಕೊಡುತ್ತಾರೆಯೇ ಹೊರತು ಪದವಿಗಲ್ಲ. ಚುನಾವಣೆಯಲ್ಲಿ ಯೋಗ್ಯತೆಯನ್ನು ಆಧರಿಸಿಯೇ ಜನ ನಿರ್ಧಾರ ಮಾಡುತ್ತಾರೆ. ವರ್ಚಸ್ಸಿನಿಂದ ಸಹಾಯ ಅಗುತ್ತಿರುವುದು ಹೌದು. ಸ್ವಸಾಮರ್ಥ್ಯದ ಮೇಲೆಯೇ ಗೆಲ್ಲಬೇಕಾಗುತ್ತದೆ.
* ನರೇಂದ್ರ ಮೋದಿ ಅಲೆ ನಿಮ್ಮನ್ನು ಗೆಲುವಿನತ್ತ ಕರೆದೊಯ್ಯಬಲ್ಲುದೇ?
ಸಂಪೂರ್ಣವಾದ ವಿಶ್ವಾಸವಿದೆ. ಇಡೀ ಜಗತ್ತಿನಲ್ಲಿ ಅಂತಹ ಒಳ್ಳೆಯ ನಾಯಕ ಸಿಗುವುದು ಅಪರೂಪ. ಅಂಥವರು ಬರಲು ಅದೆಷ್ಟು ಶತಮಾನಗಳು ಬೇಕಾಗುತ್ತವೆಯೋ? ಅವರೇ ನನಗೆ ಸ್ಫೂರ್ತಿ. ಅಂಥ ನಾಯಕತ್ವದೊಂದಿಗೆ ಕೆಲಸ ಮಾಡಬೇಕೆಂದು ಅನಿಸಿದ್ದರಿಂದಲೇ ರಾಜಕೀಯಕ್ಕೆ ಬಂದೆ. ಒಳ್ಳೆಯ ನಾಯಕರು ಇರುವಾಗ, ಅಲೆ ಇದ್ದೇ ಇರುತ್ತದೆ. ಅದನ್ನು ಧನಾತ್ಮಕವಾಗಿ ಉಪಯೋಗಿಸಿಕೊಂಡರೆ ಇಡೀ ದೇಶಕ್ಕೆ ಒಳಿತಾಗುತ್ತದೆ.
ಚುನಾವಣೆಯಲ್ಲಿ ನಿಮ್ಮ ಶಕ್ತಿ ಏನು?
ಪಕ್ಷ, ಕ್ಷೇತ್ರದ ಜನ, ಚಾಮುಂಡೇಶ್ವರಿ ದೇವಿ. ಇವರೆಲ್ಲರೂ ಹಿಂದೆ ಇರುವಾಗ ಏನೇ ಸಂಕಷ್ಟ ಬಂದರೂ ಅದು ಬಹಳ ಚಿಕ್ಕದೇ. ನನ್ನ ಸಾಮರ್ಥ್ಯ ಹಾಗೂ ಯೋಗ್ಯತೆಯ ಬಗ್ಗೆ ಅರಿವಿದೆ; ವಿಶ್ವಾಸವೂ ಬಂದಿದೆ.
* ಪ್ರಚಾರಕ್ಕೆ ಪತ್ನಿ, ತಾಯಿ ಬರುತ್ತಾರೆಯೇ?
ನನ್ನನ್ನೂ ಸಾಮಾನ್ಯ ಅಭ್ಯರ್ಥಿ ಎಂದೇ ನೋಡಿ. ಸಾಮಾನ್ಯನಾಗಿಯೇ ಕೆಲಸ ಮಾಡುತ್ತಿದ್ದೇನೆ. ಕುಟುಂಬದವರು ಅಗತ್ಯವಿದ್ದರೆ ಬರುತ್ತಾರೆ. ಅಭ್ಯರ್ಥಿ ಆತನ ಸಾಮರ್ಥ್ಯದ ಮೇಲೆ ಗೆಲ್ಲಬೇಕು. ಕುಟುಂಬ, ಗಿಮಿಕ್‌ಗಳು, ಸ್ಟಾರ್ ಪ್ರಚಾರ... ಇದೆಲ್ಲವೂ ತಪ್ಪೇನಿಲ್ಲ. ಆದರೆ, ನನ್ನ ಸಾಮರ್ಥ್ಯ, ಯೋಗ್ಯತೆಯಿಂದ ಗೆಲ್ಲಬೇಕು.
* ಜನರು ನಿಮಗೇ ಏಕೆ ಮತ ಕೊಡಬೇಕು?
ಮಗ, ಸಹೋದರನ ರೀತಿ ಎಲ್ಲರೂ ಸ್ವಾಗತಿಸಿದ್ದಾರೆ. ಅದಕ್ಕೆ ಚಿರಋಣಿಯಾಗಿದ್ದೇನೆ. ಆ ಋಣ ತೀರಿಸಲು ಅವಕಾಶ ಕೊಡಬೇಕು. ಮೈಸೂರು ಹಾಗೂ ಕೊಡಗು ಜಿಲ್ಲೆಗಳ ಅಭಿವೃದ್ಧಿ ಮತ್ತು ಅಲ್ಲಿನವರು ಕೃಷಿ ಮತ್ತು ಪ್ರವಾಸೋದ್ಯಮ ಕ್ಷೇತ್ರವನ್ನು ಅವಲಂಬಿಸಿರುವ ಅರಿವಿದೆ. ಇದಕ್ಕೆ ಅರಮನೆಯು ಹಿಂದಿನಿಂದಲೂ ಪ್ರೋತ್ಸಾಹ ನೀಡುತ್ತಲೇ ಬಂದಿದೆ. ಸುಸ್ಥಿರ ಪ್ರಗತಿಯ ಬಗ್ಗೆ ನನ್ನಲ್ಲೂ ಒಂದಷ್ಟು ಪರಿಕಲ್ಪನೆಗಳಿವೆ. ಹೀಗಾಗಿ, ಸಂಸದನಾಗಲು ನಾನೇ ಸೂಕ್ತ ಎಂದು ಭಾವಿಸುತ್ತೇನೆ.
* ಅರಮನೆಯಿಂದ ಹೊರ ಬಂದಿರುವ ನಿಮಗೆ ಸಾಮಾನ್ಯ ಜನರ ಕಷ್ಟಗಳು ಅರಿವಿಗೆ ಬರುತ್ತಿವೆಯೇ?
ಬೀದಿಗಿಳಿದಿರುವುದರಿಂದ ಎಲ್ಲರೂ ಬಂದು ನನ್ನಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಹಿಂದೆಯೂ ಕೇಳುತ್ತಿದ್ದೆವು. ‘ಭೇರುಂಡ’, ‘ಕಲಿಸು ಪ್ರತಿಷ್ಠಾನ’ ಸೇರಿದಂತೆ ನಮ್ಮದೇ ಆದ ವಿವಿಧ ಸಂಸ್ಥೆಗಳ ಮೂಲಕ ಜನರಿಗೆ ಸ್ಪಂದಿಸುತ್ತಿದ್ದೇವೆ. ಸಮಸ್ಯೆಗಳನ್ನು ದೊಡ್ಡ ಮಟ್ಟದಲ್ಲಿ ಪರಿಹರಿಸಲು ಅಧಿಕಾರ ಬೇಕು. ಎಲ್ಲರ ಪ್ರತಿನಿಧಿಯಾಗಿ ಸಂಸದರ ಕಾರ್ಯವ್ಯಾಪ್ತಿಯಲ್ಲಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ.
* ಜನರ ಪ್ರತಿಕ್ರಿಯೆ ಹೇಗಿದೆ?
ಎರಡೂ ಜಿಲ್ಲೆಗಳಲ್ಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಹಿಂದೆಯೂ ದೊರೆಯುತ್ತಿತ್ತು; ನನ್ನ ‘ರಾಜಕೀಯದ ಅವತಾರ’ಕ್ಕೂ ಬೆಂಬಲ ಸಿಗುತ್ತಿದೆ. ಅದನ್ನು ಮತವಾಗಿ ಪರಿವರ್ತಿಸಲು ಪಕ್ಷದಿಂದ ಕೆಲಸ ನಡೆದಿದೆ.
* ಮೈತ್ರಿ ಪಕ್ಷವಾದ ಜೆಡಿಎಸ್‌ನವರ ಸಹಕಾರ ತೃಪ್ತಿಕರವಾಗಿದೆಯೇ?
ಇದೆ. ಈಚೆಗೆ ನಾಯಕರ ಸಭೆಯನ್ನೂ ನಡೆಸಲಾಗಿದೆ. ಸಮನ್ವಯ–ಹೊಂದಾಣಿಕೆ ಸಂಪೂರ್ಣವಾಗಿ ಬಂದಿದೆ. ಮೈತ್ರಿ ಅಭ್ಯರ್ಥಿ ಎಂದು ಹೇಳಿಕೊಂಡೇ ಪ್ರಚಾರ ಮಾಡುತ್ತಿದ್ದೇವೆ.
* ಪ್ರತಾಪ ಸಿಂಹ ಅವರಿಗೆ ಟಿಕೆಟ್ ಕೈತಪ್ಪಿದ್ದರಿಂದ ಒಕ್ಕಲಿಗ ಸಮಾಜದಲ್ಲಿರುವ ಅಸಮಾಧಾನ ಬಿಜೆಪಿಗೆ ಒಳೇಟು ಕೊಡಲಿದೆ ಎಂಬ ಮಾತಿದೆಯಲ್ಲಾ?
ಸಂಸದರೂ ನನ್ನೊಂದಿಗೆ ಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಒಳೇಟು ಬೀಳುವುದಿಲ್ಲ.
* ಕಾಂಗ್ರೆಸ್ ಒಕ್ಕಲಿಗಾಸ್ತ್ರ ಪ್ರಯೋಗಿಸುತ್ತಿದೆಯಲ್ಲಾ?
ನನಗೆ ಯಾವುದೇ ಜಾತಿ ಇಲ್ಲ. ಎಲ್ಲ ಜಾತಿಗೂ ಸೇರಿದ ವಂಶ ನಮ್ಮದು. ‘ಒಂದು ಸಮಾಜ; ಒಂದು ದೇಶ’ಕ್ಕಾಗಿ ಎಲ್ಲರೂ ಮತ ಚಲಾಯಿಸುತ್ತಾರೆ ಎಂಬ ವಿಶ್ವಾಸವಿದೆ.
* ಮೈಸೂರು–ಕೊಡಗು ಅಭಿವೃದ್ಧಿಗೆ ನಿಮ್ಮ ಮುನ್ನೋಟವೇನು?
ಪ್ರಕೃತಿಯ ಬಗೆಗೆ ಕಾಳಜಿಯನ್ನಿಟ್ಟುಕೊಂಡು ‘ಸಾವಯವ ಅಭಿವೃದ್ಧಿ’ (ಆರ್ಗ್ಯಾನಿಕ್ ಡೆವಲಪ್‌ಮೆಂಟ್) ಮಾಡುವುದು ನನ್ನ ಆಶಯ. ಅದಕ್ಕೆ ಪೂರಕವಾದ ಯೋಜನೆಗಳು ಬೇಕಾಗುತ್ತವೆ. ಮೈಸೂರನ್ನು ಮೈಸೂರಾಗಿ ಕೊಡಗನ್ನು ಕೊಡಗಾಗಿಯೇ ಉಳಿಸಬೇಕು. ಪರಂಪರೆಯನ್ನೂ ಕಾಪಾಡಿಕೊಳ್ಳಬೇಕು. ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ಅಗತ್ಯವಿಲ್ಲ. ಸಮಸ್ಯೆಗಳಿಗೆ ಕಾರಣವಾಗುವ ಅಭಿವೃದ್ಧಿ ಬೇಕಾಗುವುದಿಲ್ಲ. ಸೂಕ್ತ ಅಭಿವೃದ್ಧಿ ಅವಶ್ಯ.
* ನೀವು ಜನಸಾಮಾನ್ಯರಿಗೆ ಸುಲಭವಾಗಿ ಸಿಗುವುದಿಲ್ಲ ಎಂಬ ದೂರಿದೆಯಲ್ಲಾ?
ಪ್ರತಿಪಕ್ಷದ ಉದ್ದೇಶವೇ ವಿರೋಧಿಸುವುದು. ಸಂಸದ ಎನಿಸಿಕೊಂಡವರು ಮನೆಯಲ್ಲಿ ಕುಳಿತುಕೊಂಡಿರಲು ಆಗುವುದಿಲ್ಲ. ಅರಮನೆಯೂ ಒಂದು ಮನೆಯೇ. ಸಂಸದರು ಕೆಲಸ ಮಾಡಲೇಬೇಕಾಗುತ್ತದೆ. ಆಯ್ಕೆಯಾದ ನಂತರ ಜನರೇನು ಯಾರನ್ನೂ ಸುಮ್ಮನೆ ಬಿಟ್ಟುಬಿಡುವುದಿಲ್ಲ. ಆಯ್ಕೆಯಾದ ದಿನದಿಂದಲೇ ಕೆಲಸ–ಹೊಣೆಗಾರಿಕೆ ಶುರುವಾಗುತ್ತದೆ. ಈಗಿನ ವ್ಯವಸ್ಥೆಗೆ ತಕ್ಕಂತೆ ಎಲ್ಲವೂ ನಡೆಯುತ್ತದೆ.
* ಈ ಚುನಾವಣೆಯು ಎಸಿ (ಹವಾನಿಯಂತ್ರಿತ ವ್ಯವಸ್ಥೆ) ಕೊಠಡಿಯ ರಾಜವಂಶಸ್ಥ– ಸಾಮಾನ್ಯನ ನಡುವಿನ ಹೋರಾಟ ಎಂಬ ವಿಶ್ಲೇಷಣೆ ಇದೆಯಲ್ಲಾ?
ಆಯ್ಕೆಯಾದವರು ಎ.ಸಿ ರೂಂನಲ್ಲಿ ಕುಳಿತೂ ಕೆಲಸ ಮಾಡಬಹುದು. ಆಚೆ ಬಂದೂ ನಿರ್ವಹಿಸಬಹುದು. ಬಿಸಿಲಲ್ಲೂ ಕೆಲಸ ಮಾಡುತ್ತೇನೆ. ಎಲ್ಲರೂ ಭಾವಿಸಿದಂತೆ ಇಡೀ ಅರಮನೆಯಲ್ಲಿ ಎ.ಸಿ ಇಲ್ಲ. ನಾವು ಮಲಗುವ ಕೊಠಡಿಯಲ್ಲಷ್ಟೇ ಇದೆ. ಈಗ ಎಲ್ಲ ಪಕ್ಷಗಳ ಕಚೇರಿಯಲ್ಲೂ ಎ.ಸಿ ಇದೆಯಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.