ADVERTISEMENT

ಕಾಂಗ್ರೆಸ್‌ನಿಂದ ಎಲ್ಲಾ ರೀತಿಯಲ್ಲಿ ತೊಂದರೆ: ಡಾ.ಉಮೇಶ ಜಾಧವ ಆರೋಪ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 12:23 IST
Last Updated 5 ಏಪ್ರಿಲ್ 2019, 12:23 IST
ಡಾ.ಉಮೇಶ ಜಾಧವ
ಡಾ.ಉಮೇಶ ಜಾಧವ   

ಕಲಬುರ್ಗಿ: ‘ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟಾಗಿನಿಂದ ನಾಮಪತ್ರ ಸಲ್ಲಿಸುವವರೆಗೂ ಕಾಂಗ್ರೆಸ್‌ನವರು ಎಲ್ಲಾ ರೀತಿಯಲ್ಲಿ ತೊಂದರೆ ಕೊಟ್ಟಿದ್ದಾರೆ’ ಎಂದು ‘ಗುಲಬರ್ಗಾ’ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಆರೋಪಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೊದಲು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ವಿಧಾನಸಭೆ ಅಧ್ಯಕ್ಷರಿಗೆ ಪತ್ರ ಬರೆದರು. ರಾಜೀನಾಮೆ ಸಲ್ಲಿಸಿದ ಬಳಿಕ ಅಂಗೀಕಾರ ಮಾಡದಂತೆ ಒತ್ತಡ ಹೇರಿದರು. ಜಾಧವ ರಾಜೀನಾಮೆ ಅಂಗೀಕಾರವಾಗಲ್ಲ, ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬರುವುದಿಲ್ಲ ಎಂದು ಹೇಳುವ ಮೂಲಕ ಕ್ಷೇತ್ರದ ಜನರಲ್ಲಿ ಗೊಂದಲ ಸೃಷ್ಟಿಸಿದರು. ಆದರೆ, ಕೆ.ಆರ್.ರಮೇಶಕುಮಾರ್ ಅವರು ರಾಜೀನಾಮೆ ಅಂಗೀಕರಿಸುವ ಮೂಲಕ ಸರಿಯಾದ ನ್ಯಾಯ ಒದಗಿಸಿದರು’ ಎಂದರು.

‘ನಾಮಪತ್ರ ಪರಿಶೀಲನೆ ವೇಳೆ ಕಾಂಗ್ರೆಸ್ ಪಕ್ಷದವರು ತಕರಾರು ಎತ್ತಿದರು. ಜಾಧವ ಯಾವ ಸಮುದಾಯದವರು ಸರಿಯಾಗಿ ನೋಡಿದ್ದೀರಾ ಎಂದು ಪ್ರಶ್ನಿಸಿದರು. ಅಲ್ಲದೆ, ನಾಮಪತ್ರ ತಿರಸ್ಕರಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ನನ್ನ ಪರ ವಕೀಲರು ಸರಿಯಾದ ಉತ್ತರ ನೀಡಿದರು. ಕಾಂಗ್ರೆಸ್‌ನವರು ಎಷ್ಟೇ ತೊಂದರೆ ಕೊಟ್ಟರೂ ನಾನು ಹೆದರುವುದಿಲ್ಲ. ಸಂವಿಧಾನಬದ್ಧವಾಗಿ ಹೋರಾಟ ಮಾಡುತ್ತೇನೆ’ ಎಂದು ತಿಳಿಸಿದರು.

ADVERTISEMENT

‘ನಾನು ವೃತ್ತಿಯಿಂದ ವೈದ್ಯ. ನನ್ನಂತವನಿಗೇ ತೊಂದರೆ ಕೊಡುತ್ತಿದ್ದಾರೆ. ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. 40 ವರ್ಷಗಳಲ್ಲಿ ಜನ ಸಾಮಾನ್ಯರಿಗೆ ಎಷ್ಟು ತೊಂದರೆ ಕೊಟ್ಟಿರಬಹುದು. ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ತಂಡ 40 ವರ್ಷಗಳಿಂದ ಇದೇ ಕೆಲಸವನ್ನು ಮಾಡಿಕೊಂಡು ಬಂದಿದೆ’ ಎಂದು ದೂರಿದರು.

‘ಈ ಬಗ್ಗೆ ನಾನು ಯಾರಿಗೂ ದೂರು ಕೊಡುವುದಿಲ್ಲ. ಜನರೇ ಅವರಿಗೆ ಉತ್ತರ ಕೊಡುತ್ತಾರೆ. ಚುನಾವಣಾ ಅಧಿಕಾರಿ ಬದಲಾಯಿಸುವಂತೆ ಮನವಿ ಮಾಡಿದ್ದೆವು. ಆದರೆ, ಈ ಬಗ್ಗೆ ಪೂರಕ ದಾಖಲೆಗಳನ್ನು ಕೇಳುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.