ADVERTISEMENT

ಕ್ಷೇತ್ರ ಮಹಾತ್ಮೆ: ಉಧಂಪುರ (ಜಮ್ಮು ಮತ್ತು ಕಾಶ್ಮೀರ)

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 23:30 IST
Last Updated 13 ಏಪ್ರಿಲ್ 2024, 23:30 IST
ಉಧಂಪುರ
ಉಧಂಪುರ   

ಜಮ್ಮು ಮತ್ತು ಕಾಶ್ಮೀರದ ಉಧಂಪುರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆಗೆ ವೇದಿಕೆ ಸಜ್ಜಾಗಿದೆ. ಇಲ್ಲಿಂದ ಎರಡು ಬಾರಿ ಗೆಲುವಿನ ನಗೆ ಬೀರಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಅವರನ್ನೇ ಬಿಜೆಪಿಯು ಮೂರನೇ ಬಾರಿಯೂ ಕಣಕ್ಕಿಳಿಸಿದೆ. ಜಿತೇಂದ್ರ ಸಿಂಗ್‌ ಅವರ ಗೆಲುವಿನ ಓಟಕ್ಕೆ ತಡೆಯೊಡ್ಡಲು ಕಾಂಗ್ರೆಸ್‌ ಪಕ್ಷವು ಚೌಧರಿ ಲಾಲ್‌ ಸಿಂಗ್‌ ಅವರನ್ನು ಅಖಾಡಕ್ಕಿಳಿಸಿದೆ. ಈ ಇಬ್ಬರು ಪ್ರಬಲ ಅಭ್ಯರ್ಥಿಗಳಿಗೆ ಪೈಪೋಟಿ ನೀಡಲು ಗುಲಾಂ ನ‌ಬಿ ಆಜಾದ್‌ ಅವರ ಡೆಮಾಕ್ರಟಿಕ್ ಪ್ರೋಗ್ರೆಸಿವ್‌ ಆಜಾದ್‌ ಪಕ್ಷವು (ಡಿಪಿಎಪಿ) ಮಾಜಿ ಸಚಿವ ಜಿ.ಎಂ. ಸರೂರಿ ಅವರನ್ನು ಸ್ಪರ್ಧೆಗಿಳಿಸಿದೆ. ಸಂವಿಧಾನದ 370ನೇ ವಿಧಿಯ ಅಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ವಿಷಯವೇ ಈ ಬಾರಿ ಇಲ್ಲಿ ಪ್ರಮುಖ ಚುನಾವಣಾ ವಿಚಾರವಾಗಿದೆ. ಪಿಡಿಪಿಯು ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿರುವುದು ಚೌಧರಿ ಲಾಲ್‌ ಸಿಂಗ್‌ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸರೂರಿ ಅವರು 2022ರಲ್ಲಿ ಕಾಂಗ್ರೆಸ್‌ ತೊರೆದು ಡಿಪಿಎಪಿ ಸೇರಿದ್ದರು. 2019ರ ಚುನಾವಣೆಯಲ್ಲಿ ಜಿತೇಂದ್ರ ಸಿಂಗ್‌ ಅವರು 3,57,252 ಮತಗಳ ಅಂತರದಿಂದ ಕಾಂಗ್ರೆಸ್‌ನ ವಿಕ್ರಮಾದಿತ್ಯ ಸಿಂಗ್‌ ಅವರನ್ನು ಮಣಿಸಿದ್ದರು. ಚೌಧರಿ ಲಾಲ್‌ ಸಿಂಗ್‌ ಅವರು 2014ರಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರಿದ್ದರು. 2018ರಲ್ಲಿ ಬಿಜೆಪಿಯನ್ನೂ ತೊರೆದು ‘ಡೋಗ್ರಾ ಸ್ವಾಭಿಮಾನ್‌ ಸಂಘಟನ್‌ ಪಕ್ಷ’ ಸ್ಥಾಪಿಸಿದ್ದರು. ಕಳೆದ ತಿಂಗಳಷ್ಟೇ ಕಾಂಗ್ರೆಸ್‌ಗೆ ಮರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.