ADVERTISEMENT

ಆಯೋಗದ ವಿರುದ್ಧ ಸಚಿವರ ಕಿಡಿ

ಜಿಲ್ಲಾ ಪಂಚಾಯ್ತಿ ಸಿಇಒಗಳ ಸಭೆ ನಡೆಸಲು ಸಿಗದ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 20:23 IST
Last Updated 27 ಏಪ್ರಿಲ್ 2019, 20:23 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಬೆಂಗಳೂರು: ಕುಡಿಯುವ ನೀರಿನ ಸಮಸ್ಯೆ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಸಲು ಅವಕಾಶ ನೀಡದ ಚುನಾವಣಾ ಆಯೋಗದ ಕ್ರಮಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೃಷ್ಣ ಬೈರೇಗೌಡ ಕಿಡಿಕಾರಿದ್ದಾರೆ.

ಬರ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಕೃಷ್ಣ ಬೈರೇಗೌಡ ಅವರು ಸಿಇಒಗಳ ಜತೆಗೆ ಶನಿವಾರ ಸಭೆ ನಡೆಸಲು ನಿರ್ಧರಿಸಿದ್ದರು. ಇದಕ್ಕೆ ಆಯೋಗ ಒಪ್ಪಿಗೆ ನೀಡಿರಲಿಲ್ಲ. ಆದರೆ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಆಯೋಗ ಒಪ್ಪಿಗೆ ನೀಡಿತ್ತು.

‘ಅನೇಕ ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದೆ. ಆದರೆ, ಗ್ರಾಮೀಣಾಭಿವೃದ್ಧಿ ಸಚಿವನಾಗಿ ಕಾರ್ಯನಿರ್ವಹಿಸಲು ಆಯೋಗ ಅವಕಾಶ ನೀಡುತ್ತಿಲ್ಲ. ಏಕೆ’ ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಉತ್ತಮ ಆಡಳಿತಕ್ಕಾಗಿ ಕಾನೂನು ಹಾಗೂ ನಿಯಮಗಳು ಇರುವುದಲ್ಲವೇ. ಅದರ ಉದ್ದೇಶ ನಾಗರಿಕರ ಹಿತ ಕಾಯುವುದು ಅಲ್ಲವೇ’ ಎಂದು ಅವರು ಪ್ರಶ್ನಿಸಿದ್ದಾರೆ.

ಎರಡು ವಾರಗಳ ಹಿಂದೆಯೇ ಸಭೆ ನಿಗದಿಯಾಗಿತ್ತು. ಇದು ಪ್ರತಿ ತಿಂಗಳ ಪ್ರಗತಿ ಪರಿಶೀಲನಾ ಸಭೆಯ ಭಾಗ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

‘ಲೋಕಸಭಾ ಚುನಾವಣೆ ಘೋಷಣೆಯಾಗುವ ಮುನ್ನವೇ ಮುಂಗಾರು–ಹಿಂಗಾರಿನಲ್ಲಿ ಬರಪೀಡಿತ ತಾಲ್ಲೂಕಿಗೆ ₹50 ಲಕ್ಷ, ಹಿಂಗಾರಿನ ಬರಪೀಡಿತ ತಾಲ್ಲೂಕಿಗೆ ₹25 ಲಕ್ಷ ಹಾಗೂ ಉಳಿದ ತಾಲ್ಲೂಕಿಗೆ ₹10 ಲಕ್ಷ ಅನುದಾನ ಬಿಡುಗಡೆ ಮಾಡಿದ್ದೆವು. ಎಷ್ಟು ಹಣ ವೆಚ್ಚವಾಗಿದೆ ಎಂಬುದನ್ನು ಪರಿಶೀಲನೆ ನಡೆಸಬೇಕಿತ್ತು. ಅದಕ್ಕಾಗಿ ಸಭೆ ಕರೆದಿದ್ದೆವು. ಇದು ‌ನೀತಿ ಸಂಹಿತೆಯ ಉಲ್ಲಂಘನೆ ಹೇಗಾಗುತ್ತದೆ’ ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.