ADVERTISEMENT

ಮತದಾನ ಪ್ರಮಾಣ ಶೇ 1.42ರಷ್ಟು ಏರಿಕೆ

ರಾಜ್ಯದಲ್ಲಿರುವ 28 ಲೋಕಸಭಾ ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಲ್ಲಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 20:33 IST
Last Updated 24 ಏಪ್ರಿಲ್ 2019, 20:33 IST
   

ಬೆಂಗಳೂರು: ಲೋಕಸಭೆಯ 28 ಕ್ಷೇತ್ರಗಳ ಸರಾಸರಿ ಮತದಾನದ ಪ್ರಮಾಣ ಶೇ 68.62ರಷ್ಟಾಗಿದ್ದು, 2014ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಶೇ 1.42ರಷ್ಟು ಮತದಾನ ಏರಿಕೆಯಾಗಿದೆ.

ಒಟ್ಟು 18 ಕ್ಷೇತ್ರಗಳಲ್ಲಿ ಮತದಾನ ಪ್ರಮಾಣದಲ್ಲಿ ಏರಿಕೆಯಾಗಿದೆ. ಎರಡನೇ ಹಂತದಲ್ಲಿ ನಡೆದ 14 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಏರಿಕೆಯಾಗಿದೆ. ಮೊದಲ ಹಂತದಲ್ಲೂ 8 ಕ್ಷೇತ್ರಗಳಲ್ಲಿ ಏರಿಕೆ ಕಂಡಿದೆ. ಮತದಾನ ಏರಿಕೆಯಾಗಿರುವ ಬಹುತೇಕ ಕ್ಷೇತ್ರಗಳನ್ನು ಬಿಜೆಪಿ ಸಂಸದರೇ ಪ್ರತಿನಿಧಿಸುತ್ತಿರುವುದು ವಿಶೇಷ.

ಮಂಡ್ಯದಲ್ಲಿ ಅತೀ ಹೆಚ್ಚು ಶೇ 8.76 ರಷ್ಟು ಏರಿಕೆಯಾಗಿದ್ದರೆ, ಉತ್ತರ ಕನ್ನಡದಲ್ಲಿ ಶೇ 5.09, ತುಮಕೂರಿನಲ್ಲಿ ಶೇ 4.64, ಚಿತ್ರದುರ್ಗದಲ್ಲಿ ಶೇ 4.58,ಧಾರವಾಡದಲ್ಲಿ ಶೇ 4.41 ಮತ್ತು ಶಿವಮೊಗ್ಗದಲ್ಲಿ ಶೇ 4.07ರಷ್ಟು ಮತದಾನ ಪ್ರಮಾಣ ಏರಿಕೆಯಾಗಿದೆ.

ADVERTISEMENT

ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಗುಲಬರ್ಗಾ, ಬೀದರ್, ಕೊಪ್ಪಳ, ಹಾವೇರಿ, ಉಡುಪಿ ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಕೋಲಾರ ಕ್ಷೇತ್ರಗಳಲ್ಲಿ ಶೇ 1.6ರಿಂದ ಶೇ 3.62ರವರೆಗೆ ಏರಿಕೆಯಾಗಿದೆ.

ಬೆಳಗಾವಿ, ರಾಯಚೂರು, ಬಳ್ಳಾರಿ, ದಾವಣಗೆರೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಕುಸಿದಿದೆ.

₹ 88.27 ಕೋಟಿ ಮೌಲ್ಯದ ವಸ್ತು ವಶ: ಚುನಾವಣೆ ಸಂದರ್ಭದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹39.40 ಕೋಟಿ ನಗದು, ₹37.81 ಕೋಟಿ ಮೌಲ್ಯದ ಮದ್ಯ ಸೇರಿ ಒಟ್ಟಾರೆ ₹88.27 ಕೋಟಿ ಮೌಲ್ಯದ ವಸ್ತುಗಳನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ.

ಫ್ಲೈಯಿಂಗ್ ಸ್ಕ್ವಾಡ್‌, ಸ್ಪಾಟಿಕ್ ಸರ್ವೆಲೆನ್ಸ್‌ ಸ್ಕ್ವಾಡ್, ಅಬಕಾರಿ ಮತ್ತು ವಾಣಿಜ್ಯ ತೆರಿಗೆ ಇಲಾಖೆ 3,849 ತಂಡಗಳು ಈ ಕಾರ್ಯಾಚರಣೆ ನಡೆಸಿವೆ ಎಂದು ಆಯೋಗ ತಿಳಿಸಿದೆ.

ಹೊಸಕೋಟೆಯಲ್ಲಿ ಶೇ 87.81 , ಬೊಮ್ಮನಹಳ್ಳಿಯಲ್ಲಿ ಶೇ 47

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಮತದಾನದ ಪ್ರಮಾಣ ಗಮನಿಸಿದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ ಶೇ 87.81 ಮತದಾನವಾಗಿದೆ. ‌‌

ಮಂಡ್ಯ ಕ್ಷೇತ್ರದ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಶೇ 86.54, ದಕ್ಷಿಣ ಕನ್ನಡದ ಸುಳ್ಯ ಕ್ಷೇತ್ರದಲ್ಲಿ ಶೇ 84.21, ಚಿಕ್ಕಬಳ್ಳಾಪುರದ ದೇವನಹಳ್ಳಿ ಕ್ಷೇತ್ರದಲ್ಲಿ ಶೇ 84.17, ಕೋಲಾರದ ಮಾಲೂರು ಕ್ಷೇತ್ರದಲ್ಲಿ ಶೇ 83.84ರಷ್ಟು ಮತದಾನವಾಗಿದೆ. 28 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ 80ಕ್ಕಿಂತ ಹೆಚ್ಚು ಮತದಾನವಾಗಿದೆ.

ಬೆಂಗಳೂರು ‌ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ ಶೇ 47ರಷ್ಟು ಮತದಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.