ADVERTISEMENT

ಮುಖಾಮುಖಿ: ಮಂಡಿ (ಹಿಮಾಚಲ ಪ್ರದೇಶ)

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 20:44 IST
Last Updated 14 ಏಪ್ರಿಲ್ 2024, 20:44 IST
ಕಂಗನಾ ರನೌತ್‌
ಕಂಗನಾ ರನೌತ್‌   

ಕಂಗನಾ ರನೌತ್‌
(ಬಿಜೆಪಿ)

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲೊಂದಾದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ಸಿನಿಮಾ ನಟಿ ಕಂಗನಾ ರನೌತ್‌ ಅವರನ್ನು ಕಣಕ್ಕಿಳಿಸಿದೆ. ವಿವಾದಕ್ಕೆ ಕಾರಣವಾಗುವ ಹೇಳಿಕೆಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿದ್ದ ಕಂಗನಾ ಅವರು ಹಲವು ವರ್ಷಗಳಿಂದಲೂ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಧ್ವನಿ ಎತ್ತುತ್ತಿದ್ದವರು. ಬಲಪಂಥೀಯ ಸಿದ್ಧಾಂತದ ಕಂಗನಾ ಅವರನ್ನು ಈ ಬಾರಿ ಚುನಾವಣಾ ರಾಜಕೀಯಕ್ಕಿಳಿಸುವ ಮೂಲಕ ಬಿಜೆಪಿಯು ಇಲ್ಲಿ ಅದೃಷ್ಟ ಪರೀಕ್ಷೆ ನಡೆಸಲು ಮುಂದಾಗಿದೆ. ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ವಿಚಾರವಾಗಿ ಕಂಗನಾ ಅವರು ಆಗ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಉದ್ಧವ್‌ ಠಾಕ್ರೆ ಅವರನ್ನು ಕಟುವಾಗಿ ಟೀಕಿಸಿದ್ದರು. ಇದು ಮಹಾರಾಷ್ಟ್ರ ಸರ್ಕಾರ ಮತ್ತು ಕಂಗನಾ ನಡುವಿನ ಜಿದ್ದಾಜಿದ್ದಿಗೂ ಕಾರಣವಾಗಿತ್ತು. ಬಳಿಕ ಕೇಂದ್ರ ಸರ್ಕಾರವು ಕಂಗನಾ ಅವರಿಗೆ ಸಿಆರ್‌ಪಿಎಫ್‌ ಭದ್ರತೆ ಒದಗಿಸಿತ್ತು.

..............

ADVERTISEMENT

ವಿಕ್ರಮಾದಿತ್ಯ ಸಿಂಗ್‌
(ಕಾಂಗ್ರೆಸ್‌)

ಕಂಗನಾ ಅವರನ್ನು ಮಣಿಸಲು ಹಿಮಾಚಲ ಪ್ರದೇಶದ ಸಚಿವ ವಿಕ್ರಮಾದಿತ್ಯ ಸಿಂಗ್‌ ಅವರನ್ನು ಕಾಂಗ್ರೆಸ್‌ ಪಕ್ಷವು ಅಖಾಡಕ್ಕಿಳಿಸಿದೆ. ಶಿಮ್ಲಾ ಗ್ರಾಮೀಣ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ವಿಕ್ರಮಾದಿತ್ಯ ಅವರು, ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್‌ ಹಾಗೂ ಕಾಂಗ್ರೆಸ್‌ ಹಿಮಾಚಲ ಪ್ರದೇಶ ರಾಜ್ಯ ಘಟಕದ ಅಧ್ಯಕ್ಷೆ ಪ್ರತಿಭಾ ಸಿಂಗ್‌ ಅವರ ಪುತ್ರರಾಗಿದ್ದಾರೆ. 2021ರಲ್ಲಿ ಈ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಪ್ರತಿಭಾ ಸಿಂಗ್‌ ಅವರು 8,766 ಮತಗಳ ಅಂತರದಿಂದ ಬಿಜೆಪಿಯ ಬ್ರಿಗೇಡಿಯರ್‌ ಕುಶಾಲ್‌ ಠಾಕೂರ್‌ ಅವರನ್ನು ಪರಾಭವಗೊಳಿಸಿದ್ದರು. ವೀರಭದ್ರ ಸಿಂಗ್‌ ಕೂಡ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ತಂದೆ ಹಾಗೂ ತಾಯಿಯನ್ನು ಗೆಲ್ಲಿಸಿದ್ದ ಈ ಕ್ಷೇತ್ರದ ಮತದಾರರು ಮಗನ ಕೈ ಬಿಡಲಾರರು ಎಂಬುದು ಕಾಂಗ್ರೆಸ್‌ ನಾಯಕರ ವಿಶ್ವಾಸವಾಗಿದೆ.

ವಿಕ್ರಮಾದಿತ್ಯ ಸಿಂಗ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.