ADVERTISEMENT

ಎಂಥಾ ಮಾತು!

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 20:55 IST
Last Updated 23 ಏಪ್ರಿಲ್ 2024, 20:55 IST
   

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು ಅಧಿಕಾರದಲ್ಲಿದ್ದಾಗ ಬಡ್ತಿಯಲ್ಲಿ ಮೀಸಲಾತಿಯನ್ನು ಕೊನೆಗೊಳಿಸಿತು ಎಂದು ನಾನು ಎಸ್‌ಸಿ, ಎಸ್‌ಟಿ ಸಮುದಾಯಗಳ ಜನರಿಗೆ ನೆನಪಿಸಲು ಬಯಸುತ್ತೇನೆ. ಈ ವರ್ಗಗಳ ಜನ ತಮ್ಮ ಮೀಸಲಾತಿಯನ್ನು ಅಂತ್ಯಗೊಳಿಸಲು ನೋಡಿದ ಪಕ್ಷಕ್ಕೆ ಮತ ನೀಡಿ ಅದನ್ನು ವ್ಯರ್ಥ ಮಾಡುತ್ತಾರೆಯೇ. ಸಮಾಜವಾದಿ ಪಕ್ಷಕ್ಕೆ ಎಸ್‌ಸಿ, ಎಸ್‌ಟಿ ಜನ ಮೀಸಲಾತಿಯ ಸಂಪೂರ್ಣ ಪ್ರಯೋಜನ ಪಡೆಯುವುದು ಬೇಕಿಲ್ಲ. ರಾಜ್ಯಸಭೆಯಲ್ಲಿ ಬಡ್ತಿ ಮೀಸಲಾತಿ ತಿದ್ದುಪಡಿ ಮಸೂದೆ ಮಂಡಿಸಿದಾಗ ಎಸ್‌ಪಿ ಸಂಸದರು ಅದನ್ನು ಹರಿದುಹಾಕಿದ್ದರು. ಅಂಥ ‍ಪಕ್ಷವು ದಲಿತರಿಗೆ ಮತ್ತು ಶೋಷಿತರಿಗೆ ಒಳಿತನ್ನು ಮಾಡುವುದೇ?

–ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

***

ADVERTISEMENT

ಪ್ರಧಾನಿಯು ತಮ್ಮ ಗಮನವನ್ನು ಉತ್ತರ ಭಾರತದಿಂದ ದಕ್ಷಿಣದೆಡೆಗೆ ಹರಿಸಿದ್ದು, ದಕ್ಷಿಣ ಭಾರತದಲ್ಲಿ ಬೀದಿ ಬೀದಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಏಕೆಂದರೆ, ಬಿಜೆಪಿಯು ಉತ್ತರ ಭಾರತದ ಕ್ಷೇತ್ರಗಳಲ್ಲಿ ಭಾರಿ ನಷ್ಟ ಅನುಭವಿಸುತ್ತಿದೆ. ಆ ನಷ್ಟವನ್ನು ಸರಿದೂಗಿಸಲು ಅವರು ದಕ್ಷಿಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತದ ಹಗಲುಗನಸನ್ನು ಜನ ದಕ್ಷಿಣ ಭಾರತದಿಂದ ಬೇರುಸಮೇತ ಕಿತ್ತೊಗೆಯಲಿದ್ದಾರೆ.

–ಅಲ್ಕಾ ಲಂಬಾ, ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

***

ಯುಪಿಎ ಅಧಿಕಾರ ಅವಧಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ₹26 ಸಾವಿರ ಇತ್ತು. ಪ್ರಧಾನಿ ನರೇಂದ್ರ ಮೋದಿ ಅಧಿಕಾರಾವಧಿಯಲ್ಲಿ ₹74 ಸಾವಿರ ಆಗಿದೆ. ಹೆಣ್ಣು ಮಕ್ಕಳು ಚಿನ್ನದ ಬದಲು, ಕಬ್ಬಿಣದ ಸರ ಮಾಡಿಸಿಕೊಳ್ಳುವ ಸ್ಥಿತಿ ಇದೆ. ಬೆಲೆ ಏರಿಕೆ ಕುರಿತು ಯುಪಿಎ ವಿರುದ್ಧ ಬಿಜೆಪಿಯವರು ನಿತ್ಯ ಪ್ರತಿಭಟಿಸುತ್ತಿದ್ದರು. ಈಗ ಮೋದಿಯವರ ಅವಧಿಯಲ್ಲೇ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಗಗನಕ್ಕೇರಿದೆ

–ಶಿವಾನಂದ ಪಾಟೀಲ, ಸಕ್ಕರೆ ಸಚಿವ

***

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಧಾನಿಯನ್ನು ನೇರವಾಗಿ ಆಯ್ಕೆ ಮಾಡುವ ಅಧಿಕಾರ ಜನರಿಗಿಲ್ಲ. ಸ್ಥಳೀಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ, ಕ್ಷೇತ್ರದ ಅಭಿವೃದ್ಧಿಗೆ ದುಡಿಯುವ ಪ್ರತಿನಿಧಿಗಳನ್ನು ಸಂಸತ್‌ಗೆ ಆಯ್ಕೆ ಮಾಡಬೇಕು. ಅಂತಹ ಎಲ್ಲ ಲೋಕಸಭಾ ಸದಸ್ಯರು ಸೇರಿ ಪ್ರಧಾನಿಯನ್ನು ಆಯ್ಕೆ ಮಾಡುತ್ತಾರೆ. ಪ್ರಧಾನಿ ಆಗುವವರ ಮುಖ ನೋಡಿ ಮತಚಲಾಯಿಸಿದರೆ ಕಂಗನಾ ರಣಾವತ್, ಗೌತಮ್‌ ಗಂಭೀರ್, ತೇಜಸ್ವಿಸೂರ್ಯ, ಹೇಮಮಾಲಿನಿ, ರಾಮನ ವೇಷ ಹಾಕುವ ವಿದೂಷಕರು ಸಂಸತ್‌ ಪ್ರವೇಶಿಸಿಬಿಡುತ್ತಾರೆ. ನಟಿಮಣಿಯೊಬ್ಬರು ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು 2014ರಲ್ಲಿ ಅನ್ನುತ್ತಾರೆ. ಹಾಗೆ ಹೇಳಿದ್ದಕ್ಕಾಗಿಯೇ ಅವರಿಗೆ ಲೋಕಸಭಾ ಟಿಕೆಟ್‌ ನೀಡಲಾಗಿದೆ. ಈಗ ಮಹಾಪ್ರಭುವಿನ ಆಸ್ಥಾನಕ್ಕೆ ಮೈಸೂರಿನ ಮಹಾಪ್ರಭುಗಳು ಹೊಗಳುಭಟರಾಗಿ ಹೋಗುತ್ತಿದ್ದಾರೆ. ಇಂಥವರು ದೇಶದ ಬಡವರು, ಅವರ ಶಿಕ್ಷಣ, ಆರೋಗ್ಯದ ಬಗ್ಗೆ ಯೋಚಿಸುತ್ತಾರೆಯೇ?

–ಪ್ರಕಾಶ್‌ ರಾಜ್‌, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.