ADVERTISEMENT

ಚುನಾವಣಾ ವಾಹನಕ್ಕೆ ಜಿಪಿಎಸ್‌ ಕಣ್ಗಾವಲು

ಜಿಲ್ಲಾಧಿಕಾರಿ ಕಚೇರಿಲ್ಲಿದೆ ನಿಯಂತ್ರಣಾ ಕೊಠಡಿ

ಜಿ.ಬಿ.ನಾಗರಾಜ್
Published 28 ಮಾರ್ಚ್ 2019, 19:31 IST
Last Updated 28 ಮಾರ್ಚ್ 2019, 19:31 IST
ವಿನೋತ್ ಪ್ರಿಯಾ, ಜಿಲ್ಲಾಧಿಕಾರಿ.
ವಿನೋತ್ ಪ್ರಿಯಾ, ಜಿಲ್ಲಾಧಿಕಾರಿ.   

ಚಿತ್ರದುರ್ಗ: ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಬಳಸುವ ವಾಹನಗಳ ಮೇಲೆ ನಿಗಾ ಇಡಲು ಹಾಗೂ ಪಾರದರ್ಶಕ ಚುನಾವಣೆ ನಡೆಸುವ ಉದ್ದೇಶದಿಂದ ಜಿಪಿಎಸ್‌ (ಗ್ಲೋಬಲ್ ಪೊಸಿಷನಿಂಗ್‌ ಸಿಸ್ಟಮ್‌) ಕಣ್ಗಾವಲು ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಈ ವ್ಯವಸ್ಥೆ ದೇಶದ ಎಲ್ಲೆಡೆ ಜಾರಿಗೆ ಬರುತ್ತಿದೆ. ರಾಜ್ಯದಲ್ಲಿ ಅತಿ ವೇಗವಾಗಿ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡ ಕೀರ್ತಿ ಮಾತ್ರ ಚಿತ್ರದುರ್ಗಕ್ಕೆ ಸಂದಿದೆ.

ಚುನಾವಣಾ ಕರ್ತವ್ಯಕ್ಕೆ ಜಿಲ್ಲೆಯಲ್ಲಿ 195 ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿ 129 ಸರ್ಕಾರಿ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ. 66 ಖಾಸಗಿ ವಾಹನಗಳಿಗೆ ಈ ಉಪಕರಣ ಅಳವಡಿಸುವ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಯುತ್ತಿದೆ. ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳುವ ಪೊಲೀಸ್‌ ಇಲಾಖೆಯ ವಾಹನಗಳಿಗೂ ಇದನ್ನು ಅಳವಡಿಸಲು ಚುನಾವಣಾಧಿಕಾರಿ ಮುಂದಾಗಿದ್ದಾರೆ.

ADVERTISEMENT

ಸಿಬ್ಬಂದಿ ಮೇಲೆ ನಿಗಾ:ಚುನಾವಣಾ ಅಕ್ರಮವನ್ನು ತಡೆಗಟ್ಟುವ ಉದ್ದೇಶದಿಂದ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ. ವಿಚಕ್ಷಣಾ ದಳ, ಸೆಕ್ಟರ್‌ ಅಧಿಕಾರಿಗಳ ತಂಡ ಹಾಗೂ ವಿಡಿಯೊ ಕಣ್ಗಾವಲು ತಂಡಗಳನ್ನು ರಚಿಸಲಾಗಿದೆ. ಈ ತಂಡಗಳಿಗೆ ನೀಡಿದ ವಾಹನದ ಮೇಲೆ ನಿಗಾ ಇಡಲು ಈ ವ್ಯವಸ್ಥೆ ರೂಪಿಸಲಾಗಿದೆ.

ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಆರು ತಾಲ್ಲೂಕಗಳಲ್ಲಿ 25 ವಿಚಕ್ಷಣಾ ದಳ (ಫ್ಲಯಿಂಗ್‌ ಸ್ಕ್ವಾಡ್‌) ರಚಿಸಲಾಗಿದೆ. ಪ್ರತಿ ದಳದಲ್ಲಿ 3 ಸಿಬ್ಬಂದಿಯಂತೆ 75 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಈ ತಂಡ ಸಂಚರಿಸುವ ಪ್ರತಿ ಮಾಹಿತಿಯೂ ದಾಖಲಾಗುತ್ತಿದೆ.

ರಾಜಕೀಯ ಪಕ್ಷಗಳ ಪ್ರಚಾರದ ವೈಖರಿಯನ್ನು ದಾಖಲು ಮಾಡುವ ಉದ್ದೇಶದಿಂದ ವಿಡಿಯೊ ಕಣ್ಗಾವಲು ತಂಡಗಳಿವೆ. ಹೋಬಳಿಗೊಂದರಂತೆ ಒಟ್ಟು 18 ತಂಡಗಳಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇವರು ಭೇಟಿ ನೀಡಿದ ಸ್ಥಳ, ಓಡಾಡುತ್ತಿರುವ ಮಾರ್ಗ ಚುನಾವಣಾಧಿಕಾರಿಗಳಿಗೆ ಗೊತ್ತಾಗುತ್ತದೆ.

ನಿಯಂತ್ರಣ ಕೊಠಡಿ:ವಾಹನಕ್ಕೆ ಅಳವಡಿಸಿದ ಜಿಪಿಎಸ್‌ ನಿಯಂತ್ರಿಸುವ ಕೊಠಡಿಯನ್ನು ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿ ತೆರೆಯಲಾಗಿದೆ. ಐಎಂಎ ಸಂಖ್ಯೆ ಹಾಗೂ ಯುನಿಟ್‌ ಐಡಿಯ ಮೂಲಕ ವಾಹನವು ನಿಯಂತ್ರಣಾ ಕೊಠಡಿಯ ಸಂಪರ್ಕ ಹೊಂದಿರುತ್ತದೆ. ‘ಲೈವ್‌ ಲೊಕೇಷನ್‌’ ರೀತಿಯಲ್ಲಿ ಇದು ಕಾಣಿಸುತ್ತದೆ. ಕೊಠಡಿಯ ದೊಡ್ಡ ಪರದೆಯ ಮೇಲೆ ದಿನದ 24 ಗಂಟೆ ಬಿತ್ತರವಾಗುತ್ತದೆ. ಸಂಬಂಧಿಸಿದ ಹಿರಿಯ ಅಧಿಕಾರಿಗಳು ಕುಳಿತಲ್ಲೇ ಎಲ್ಲ ಚಟುವಟಿಕೆಗಳನ್ನು ಗಮನಿಸಲು ಸುಲಭವಾಗಿದೆ.

ಪ್ರತಿ ವಾಹನ ಸಂಚರಿಸಿದ ಮಾರ್ಗ, ನಿಲುಗಡೆ ಮಾಡಿದ ಸ್ಥಳ, ಸಮಯ ಸೇರಿ ಎಲ್ಲ ಮಾಹಿತಿಯೂ ಲಭ್ಯವಾಗುತ್ತದೆ. ನಿಯಂತ್ರಣ ಕೊಠಡಿಯ ಉಪಕರಣದಲ್ಲಿ ದಾಖಲಾಗುತ್ತದೆ. ದೂರು ವಿಚಾರಣೆಗೆ ಇದು ಸಾಕ್ಷ್ಯವಾಗುತ್ತದೆ.

ಇವಿಎಂ ಸುರಕ್ಷತೆ:ವಿದ್ಯುನ್ಮಾನ ಮತಯಂತ್ರದ (ಇವಿಎಂ) ವಿಶ್ವಾಸಾರ್ಹತೆಯ ಬಗ್ಗೆ ಇರುವ ಅನುಮಾನಗಳನ್ನು ಹೋಗಲಾಡಿಸುವ ಕೆಲಸವನ್ನು ಚುನಾವಣಾ ಆಯೋಗ ಮಾಡುತ್ತಿದೆ. ಇವಿಎಂ ಜೊತೆಗೆ ಮತ ಖಾತರಿ ಯಂತ್ರ (ವಿ.ವಿ. ಪ್ಯಾಟ್‌) ಪ್ರಾತ್ಯಕ್ಷಿಕೆ ನೀಡುತ್ತಿದೆ. ಭದ್ರತಾ ಕೊಠಡಿಗಳಿಂದ ಇವುಗಳನ್ನು ಕೊಂಡೊಯ್ಯುವ ಹಾಗೂ ಸುರಕ್ಷಿತವಾಗಿ ಮರಳಿ ತರುವುದನ್ನು ಗಮನಿಸಲು ಜಿ‍ಪಿಎಸ್‌ ಸಹಕಾರಿಯಾಗಿದೆ.

ಮತದಾನದ ದಿನ ಮತಯಂತ್ರಗಳು ಮತಗಟ್ಟೆ ತಲುಪಿದ ಸಮಯ ಹಾಗೂ ನಿಯಂತ್ರಣ ಕೊಠಡಿಗೆ ಸುರಕ್ಷಿತವಾಗಿ ಬರುವುದನ್ನು ಖಚಿತಪಡಿಸಿಕೊಳ್ಳಲು ಇದು ನೆರವಾಗಲಿದೆ. ಚುನಾವಣಾ ಸಿಬ್ಬಂದಿ ಮೋಸ ಮಾಡಲು, ಸುಳ್ಳು ಹೇಳಲು ಇದರಿಂದ ಸಾಧ್ಯವಿಲ್ಲ.

ಸ್ಥಳಕ್ಕೆ ತೆರಳಲು ನೆರವು:ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ದೂರು ಪಡೆಯಲು ಆಯೋಗವು ‘ಸಿ–ವಿಜಿಲ್‌’ ಆ್ಯಪ್‌ ರೂಪಿಸಿದೆ. ಚುನಾವಣಾ ಅಕ್ರಮ ನಡೆದ ಸ್ಥಳಕ್ಕೆ ಸಿಬ್ಬಂದಿಯನ್ನು ಅತಿ ವೇಗವಾಗಿ ಕಳುಹಿಸಲು ಹಾಗೂ ತಲುಪಿರುವ ಬಗ್ಗೆ ಖಚಿತ ಮಾಹಿತಿ ಪಡೆಯಲು ಇದು ನೆರವಾಗುತ್ತಿದೆ.

ಹಣ ಹಂಚಿಕೆ, ಮದ್ಯ ವಿತರಣೆ, ಉಡುಗೊರೆಗಳನ್ನು ನೀಡುತ್ತಿದ್ದರೆ ಸಾರ್ವಜನಿಕರು ಫೋಟೊ ಅಥವಾ ವಿಡಿಯೊ ಸಮೇತ ‘ಸಿ–ವಿಜಿಲ್‌’ ಆ್ಯಪ್‌ಗೆ ದೂರು ನೀಡಬಹುದು. ಘಟನೆ ನಡೆದ ಸ್ಥಳದ ಸಮೀಪದಲ್ಲಿರುವ ವಿಚಕ್ಷಣಾ ದಳಕ್ಕೆ ಈ ಮಾಹಿತಿಯನ್ನು ರವಾನೆ ಮಾಡಲಾಗುತ್ತದೆ. ದೂರು ದಾಖಲಾದ 15 ನಿಮಿಷದಲ್ಲಿ ಕ್ರಮ ಜರುಗಿಸಲು ಸಾಧ್ಯವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.