ADVERTISEMENT

ಘಟಬಂಧನ್ನೇ ಇಲ್ಲ, ಮಹಾಘಟಬಂಧನ್‌ ಇನ್ನೆಲ್ಲಿ: ಎಸ್.ಎಂ.ಕೃಷ್ಣ ಲೇವಡಿ

'ಸೋಲುವ ಭೀತಿಯಿಂದ ವಯನಾಡ್‌ನಿಂದ ರಾಹುಲ್‌ ಸ್ಪರ್ಧೆ'

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 10:01 IST
Last Updated 5 ಏಪ್ರಿಲ್ 2019, 10:01 IST
   

ಹಾಸನ: 'ದೇಶದಲ್ಲಿ ಘಟಬಂಧನ್ನೇ ಇಲ್ಲ, ಮಹಾ ಘಟಬಂಧನ್‌ ಇನ್ನೆಲ್ಲಿ ಬಂತು’ ಎಂದು ಬಿಜೆಪಿ ಹಿರಿಯ ನಾಯಕ ಎಸ್.ಎಂ.ಕೃಷ್ಣ ಲೇವಡಿ ಮಾಡಿದರು.

ಉತ್ತರ ಪ್ರದೇಶದಲ್ಲಿ ಬಿಎಸ್‌ ಪಿ ಮತ್ತು ಸಮಾಜವಾದಿ ಪಕ್ಷ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್‌ಗೆ ಎರಡು ಸ್ಥಾನ ನೀಡಿವೆ. ಕೆಲ ರಾಜ್ಯಗಳಲ್ಲಿ ಕಾಂಗ್ರೆಸ್‌ ಮುಕ್ತ ಘಟಬಂಧನ್‌ ನಡೆಯುತ್ತಿದೆ. ಪ್ರಾದೇಶಿಕ ಪಕ್ಷಗಳಿಂದ ಕಾಂಗ್ರೆಸ್‌ ದೂರ ಆಗುತ್ತಿರುವುದು ಕಾಣುತ್ತಿದೆ. ಘಟಬಂಧನ್‌ ಎಲ್ಲಿ, ಮೋದಿಯ ವರ್ಚಸ್ಸು ಎಲ್ಲಿ. ದೈತ್ಯರು ಮತ್ತು ಕುಬ್ಜರ ನಡುವೆ ಹೋಲಿಕೆ ಮಾಡಿದಂತೆ ಆಗುತ್ತದೆ. ರಾಜ್ಯ ಸರ್ಕಾರ ಕಾರ್ಯವೈಖರಿ ಬಗ್ಗೆ ಲೋಕಸಭಾ ಚುನಾವಣೆಯಲ್ಲಿ ತಮ್ಮ ತೀರ್ಮಾನ ಕೊಡುತ್ತಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸೋಲುವ ಭೀತಿಯಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಅಮೇಠಿ ಜತೆಗೆ ಕೇರಳದ ವಯನಾಡ್‌ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿರಬಹುದು ಎಂದು ಊಹೆ ಮಾಡಬಹುದು. 2014ರಲ್ಲಿ ಸ್ಮತಿ ಇರಾನಿ ವಿರುದ್ಧ ರಾಹುಲ್‌ 1.10 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬಳಿಕ ಸ್ಮತಿ ಅವರು ಅಮೇಠಿಯನ್ನು ತನ್ನ ಕಾರ್ಯಕ್ಷೇತ್ರ ಮಾಡಿಕೊಂಡಿದ್ದಾರೆ. ಹೀಗಾಗಿ ರಾಹುಲ್‌ ವಯನಾಡ್‌ನಿಂದಲೂ ಸ್ಪರ್ಧಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಪ್ರಜಾಪ್ರಭುತ್ವದಲ್ಲಿ ಟೀಕೆ ಮಾಡುವ ಹಕ್ಕು ಇದೆ. ಮೋದಿ ವಿರುದ್ಧ ಮಾತನಾಡುವವರನ್ನ ದೇಶದ್ರೋಹಿ ಎನ್ನುತ್ತಾರೆ ಎಂಬುದು ಅವರ ಕಲ್ಪನೆ. ಮೋದಿ ಸಹ ಇದನ್ನ ಒಪ್ಪುವುದಿಲ್ಲ. ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಕೊಳ್ಳಲಾಗುತ್ತಿದೆ ಎಂಬ ಆರೋಪದಲ್ಲಿ ಆಧಾರ ಇಲ್ಲ. ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಹಾಸನ ಮತ್ತು ಮಂಡ್ಯದಲ್ಲಿಯೇ ಐಟಿ ದಾಳಿ ಮಾಡಿರುವುದಕ್ಕೆ ಅಧಿಕಾರಿಗಳನ್ನೇ ಕೇಳಬೇಕು. ಇದಕ್ಕೆ ಉತ್ತರ ಕೊಡಲು ಅಶಕ್ತ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ದುರುದ್ದೇಶದಿಂದ ಹೆಲಿಕಾಪ್ಟರ್‌ ಬಳಕೆಗೆ ತಡೆ ಹಿಡಿದಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತ್ರಿಕ್ರಿಯಿಸಿ, ಅವರಿಗೆ ಹೆಲಿಕಾಫ್ಟರ್‌ ಕೊಂಡುಕೊಳ್ಳುವಷ್ಟು ಸಾಮರ್ಥ್ಯ ಇದೆ ಎಂದು ಟಾಂಗ್ ನೀಡಿದರು.

ದೇವೇಗೌಡರು ಇದೇ ಕೊನೆ ಚುನಾವಣೆ ಎಂದು ಹೇಳಿಕೊಂಡು ಎರಡು ಅವಧಿಗೆ ಸ್ಪರ್ಧಿಸಿದ್ದೀರಲ್ಲಾ ಎಂಬ ಪ್ರಶ್ನೆಗೆ, ‘ನನ್ನ ಕೊನೆ ಚುನಾವಣೆ ಎಂದು ಮೊದಲೇ ಹೇಳಿದ್ದರಿಂದ ಸ್ಪರ್ಧಿಸಲಿಲ್ಲ. ಆದರೆ, ’ಅವರ (ದೇವೇಗೌಡ) ಡಿಕ್ಷನರಿಯಲ್ಲಿ ಕೊನೆ ಚುನಾವಣೆ ಅರ್ಥ ಏನೆಂಬುದು ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿರುವ ಕಡೆ ಪ್ರಚಾರಕ್ಕೆ ಹೋಗುತ್ತಿರುವೆ. ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡುವ ಕುರಿತು ರಾಜ್ಯ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.