ADVERTISEMENT

ಸರ್ಕಾರಿ ಕಾರು ಮರಳಿಸದ ನಡಹಳ್ಳಿ!

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 18:59 IST
Last Updated 1 ಏಪ್ರಿಲ್ 2023, 18:59 IST
ಎ.ಎಸ್.ಪಾಟೀಲ ನಡಹಳ್ಳಿ
ಎ.ಎಸ್.ಪಾಟೀಲ ನಡಹಳ್ಳಿ   

ಬೆಂಗಳೂರು: ದೇವರಹಿಪ್ಪರಗಿಯ ಬಿಜೆಪಿ ಶಾಸಕರೂ ಆಗಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌. ಪಾಟೀಲ ನಡಹಳ್ಳಿ ಅವರು ನಿಗಮದಿಂದ ನೀಡಿದ್ದ ಸರ್ಕಾರಿ ಕಾರನ್ನು ಚುನಾವಣಾ ನೀತಿಸಂಹಿತೆ ಜಾರಿಯಾದ ಬಳಿಕವೂ ತಮ್ಮ ಬಳಿಯಲ್ಲೇ ಉಳಿಸಿಕೊಂಡಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಬುಧವಾರ ವೇಳಾಪಟ್ಟಿ ಪ್ರಕಟಿಸಿತ್ತು. ಆ ಕ್ಷಣದಿಂದಲೇ ಮಾದರಿ ಚುನಾವಣಾ ನೀತಿಸಂಹಿತೆ ಜಾರಿಯಾಗಿದೆ. ಸಚಿವರು, ನಿಗಮ, ಮಂಡಳಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ನೀಡಿದ್ದ ಸರ್ಕಾರಿ ವಾಹನಗಳನ್ನು ಬುಧವಾರದಿಂದಲೇ ಹಿಂಪಡೆಯಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಬಹುತೇಕರು ಮಾರ್ಗ ಮಧ್ಯದಲ್ಲೇ ಸರ್ಕಾರಿ ಕಾರು ತ್ಯಜಿಸಿದ್ದರು.

ನಡಹಳ್ಳಿ ಅವರಿಗೆ ಕೆಎ–04, ಎಂವೈ– 3528 ನೋಂದಣಿ ಸಂಖ್ಯೆಯ ಟೊಯೊಟಾ ಇನ್ನೋವಾ ಕಾರು ಹಾಗೂ ಕೆಎ–04 ಎಂಎಚ್‌–8844 ನೋಂದಣಿ ಸಂಖ್ಯೆಯ ಟೊಯೊಟಾ ಕೊರೊಲ್ಲಾ ಕಾರನ್ನು ನಿಗಮದಿಂದ ನೀಡಲಾಗಿತ್ತು. ನೀತಿಸಂಹಿತೆ ಜಾರಿಯಾಗಿ ರುವ ಕಾರಣದಿಂದ ಎರಡೂ ಕಾರು ಗಳನ್ನು ಹಿಂದಿರುಗಿಸುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ವಿಜಯ‍ಪುರ ಜಿಲ್ಲಾಧಿಕಾರಿಯವರ ಮೂಲಕ ನಡಹಳ್ಳಿ ಅವರಿಗೆ ಅಂದೇ ಪತ್ರ ಕಳುಹಿಸಿದ್ದರು.

ADVERTISEMENT

ಅದಕ್ಕೆ ಉತ್ತರಿಸಿರುವ ನಡಹಳ್ಳಿ ಅವರ ಆಪ್ತ ಸಹಾಯಕ, ‘ಅಧ್ಯಕ್ಷರ ಕಾರ್ಯಾವಧಿ ಇನ್ನೂ ಇರುವುದರಿಂದ ವಾಹನವನ್ನು ಹಿಂಪಡೆಯಲು ಸಾಧ್ಯವಿಲ್ಲ. ನೀತಿಸಂಹಿತೆ ನಿಯಮಗಳಿಗೆ ಅನುಗುಣವಾಗಿ ವಾಹನ ಬಳಕೆ ಮಾಡದೇ ಅಧ್ಯಕ್ಷರ ಬೆಂಗಳೂರಿನ ಮನೆಯ ಕೆಳಮಹಡಿಯ ನಿಲುಗಡೆ ಪ್ರದೇಶದಲ್ಲಿ ನಿಲ್ಲಿಸಲಾಗಿದೆ. ಈ ವಿಷಯವನ್ನು ನಿಮ್ಮ ಗಮನಕ್ಕೆ ತರುವಂತೆ ಅಧ್ಯಕ್ಷರು ನಿರ್ದೇಶನ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.