ADVERTISEMENT

ಈಶ್ವರಪ್ಪ ಬಾಯಿ ಸ್ವಚ್ಛಕ್ಕೆ ಹಾರ್ಪಿಕ್‌–ಕಡ್ಡಿಪೊರಕೆ ಕೊರಿಯರ್‌: ರೂಬೆನ್‌ ಮೊಸಸ್

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 14:01 IST
Last Updated 13 ಏಪ್ರಿಲ್ 2019, 14:01 IST
ರೂಬೆನ್‌ ಮೊಸಸ್‌
ರೂಬೆನ್‌ ಮೊಸಸ್‌   

ಚಿಕ್ಕಮಗಳೂರು: ‘ಕ್ರಿಶ್ಚಿಯನ್ನರು ಈ ದೇಶಕ್ಕೆ ನಿಷ್ಠರಲ್ಲ, ಮುಸ್ಲಿಮರು–ಕ್ರಿಶ್ಚಿಯನ್ನರ ಕೋಟಾದಡಿ ಟಿಕೆಟ್‌ ಹಂಚಿಕೆಯಾಗ ಕೂಡದು, ದೇಶಕ್ಕೆ ನಿಷ್ಠರಾಗಿರುವವರಿಗೆ ಮಾತ್ರ ಟಿಕೆಟ್‌ ನೀಡಬೇಕು ಎಂದು ಬಿಜೆಪಿ ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಹರಕು ಬಾಯಿ ಸ್ವಚ್ಛಗೊಳಿಸಿಕೊಳ್ಳಲು ಹಾರ್ಪಿಕ್‌, ಕಡ್ಡಿಪೊರಕೆಯನ್ನು ಅವರಿಗೆ ಕೋರಿಯರ್‌ ಮಾಡುತ್ತೇವೆ’ ಎಂದು ಕಾಂಗ್ರೆಸ್‌ ಬ್ಲಾಕ್‌ ವಕ್ತಾರ ರೂಬೆನ್‌ ಮೊಸಸ್‌ ಇಲ್ಲಿ ಶನಿವಾರ ಕುಟುಕಿದರು.

‘ಈಶ್ವರಪ್ಪ ಅವರ ಹೇಳಿಕೆ ಕ್ರಿಶ್ಚಿಯನ್ನರಿಗೆ ನೋವುಂಟು ಮಾಡಿದೆ. ಅವರು ನಾಲಗೆಯನ್ನು ಹರಿಯಬಿಡೆದ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ತಾಕೀತು ಮಾಡಿದರು.‘ದೇಶದಲ್ಲಿ ಅಲ್ಪಸಂಖ್ಯಾತರು ಇಲ್ಲದಿದ್ದರೆ ಬಿಜೆಪಿ ಇರುತ್ತಿರಲಿಲ್ಲ. ಅಲ್ಪಸಂಖ್ಯಾತರಿಂದ ಬಿಜೆಪಿ ರಾಜಕೀಯ ಲಾಭ ಪಡೆಯುತ್ತಿದೆ. ಧರ್ಮ ಧರ್ಮಗಳ ನಡುವೆ ವಿಷಬೀಜ ಬಿತ್ತಿ ಸೌಹಾರ್ದ ಹಾಳುಗೆಡವಿದೆ’ ಎಂದು ದೂಷಿಸಿದರು.

‘ಕ್ರಿಶ್ಚಿಯನ್ನರು ಶಾಂತಿ, ಸಹಬಾಳ್ವೆ, ಸೌಹಾರ್ದ ಪ್ರಿಯರು. ದೇಶದಲ್ಲಿ ಶಿಕ್ಷಣ, ಸಮಾಜ ಸೇವೆ, ಆರೋಗ್ಯ ಮೊದಲಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದಲ್ಲಿ ಸೌಹಾರ್ದ ನೆಲೆಸಿದರೆ ಬಿಜೆಪಿ ಹಿಂದುತ್ವ ಹೆಸರಿನಲ್ಲಿ ರಾಜಕೀಯ ಮಾಡಲು ಸಾಧ್ಯವಾಗುವುದಿಲ್ಲ. ಕುಚೋದ್ಯದ ಹೇಳಿಕೆ ನೀಡಿರುವ ಈಶ್ವರಪ್ಪ ಅವರು ಹಾರ್ಪಿಕ್‌ ನಿಂದ ಬಾಯಿ ಸ್ವಚ್ಛ ಮಾಡಿಕೊಳ್ಳಬೇಕು. ಒಳ್ಳೆಯ ಮಾತುಗಳನ್ನು ಆಡಬೇಕು’ ಎಂದರು.

ADVERTISEMENT

‘ಶಾಸಕ ಸಿ.ಟಿ.ರವಿ ಅವರು ಈಚೆಗೆ ಪ್ರಚಾರ ಸಭೆಯೊಂದರಲ್ಲಿ ಅವಾಚ್ಯ ಪದಗಳನ್ನು ಬಳಸಿರುವ ‘ವಿಡಿಯೋ’ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ರವಿ ವಿರುದ್ಧ ಜಿಲ್ಲಾ ಚುನಾವಣಾಧಿಕಾರಿಗೆ ದೂರು ಸಲ್ಲಿಸುತ್ತೇವೆ’ ಎಂದು ತಿಳಿಸಿದರು.

ಮುಖಂಡರಾದ ಸಿಲ್ವರ್‌ಸ್ಟರ್‌, ಸುರೇಖಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.