ADVERTISEMENT

ಗಾಳಿ ಮಾತು: ಟಿಕೆಟ್‌ ‘ಕೈ’ ತಪ್ಪಿದರೆ ‘ಅಖಂಡ’ ಪಕ್ಷೇತರ; ಬೆನ್ನಿಗೆ ಬಿಜೆಪಿ?

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 18:56 IST
Last Updated 1 ಏಪ್ರಿಲ್ 2023, 18:56 IST
ಅಖಂಡ ಶ್ರೀನಿವಾಸಮೂರ್ತಿ
ಅಖಂಡ ಶ್ರೀನಿವಾಸಮೂರ್ತಿ   

ಬೆಂಗಳೂರು: ಎಸ್‌ಸಿ ಮೀಸಲು ಕ್ಷೇತ್ರವಾದ ಪುಲಕೇಶಿನಗರದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಗಲಭೆ ಬೆಂಬಿಡದ ಭೂತದಂತೆ ಕಾಡುತ್ತಿದೆ. 2018ರ ಚುನಾವಣೆಯಲ್ಲಿ ಜೆಡಿಎಸ್‌ನ ಬಿ. ಪ್ರಸನ್ನ ಕುಮಾರ್ ವಿರುದ್ಧ ಅತಿ ಹೆಚ್ಚು 81,626 ಮತಗಳಿಂದ ಗೆಲುವು ಸಾಧಿಸಿದ್ದ ಅಖಂಡಗೆ ಇನ್ನೂ ಟಿಕೆಟ್‌ ಖಚಿತವಾಗಿಲ್ಲ!

ಟಿಕೆಟ್‌ ಕೈ ತಪ್ಪಿದರೆ ಪಕ್ಷೇತರನಾಗಿ ಕಣಕ್ಕಿಳಿದು ‘ಶಕ್ತಿ ಪ್ರದರ್ಶನ’ಕ್ಕೆ ಅಖಂಡ ತಯಾರಾಗುತ್ತಿದ್ದಾರೆ. ಅಷ್ಟೇ ಅಲ್ಲ, ಪಕ್ಷದಿಂದ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸದೆ ‌ಬೆನ್ನಿಗೆ ನಿಲ್ಲಲು ಬಿಜೆಪಿ ತಯಾರಾಗಿದೆ ಎಂಬ ಸುದ್ದಿಯೂ ಹಬ್ಬಿದೆ.

2020ರ ಆಗಸ್ಟ್‌ನಲ್ಲಿ ‌ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿಯಲ್ಲಿ ನಡೆದ ಅಹಿತಕರ ಘಟನೆಗೆ ಕಾರಣರಾಗಿ ಜೈಲು ಸೇರಿದ ತಮ್ಮ ಸಮುದಾಯದವರ ಜೊತೆಗೆ ಅಖಂಡ ನಿಲ್ಲಲಿಲ್ಲವೆಂದು ಮುಸ್ಲಿಂ ಸಮುದಾಯ ಅಸಮಾಧಾನಗೊಂಡಿದೆ. ಅಲ್ಲದೆ, ಆ ಸೇಡನ್ನು ಚುನಾವಣೆಯಲ್ಲಿ ಸಮುದಾಯ ತೋರಿಸಬಹುದು ಎಂಬ ಕಾರಣಕ್ಕೆ ಅಖಂಡ ಅವರಿಗೆ ಟಿಕೆಟ್‌ ನಿರಾಕರಿಸಲಾಗುತ್ತಿದೆ ಎನ್ನಲಾಗಿದೆ.

ADVERTISEMENT

ಟಿಕೆಟ್‌ ನೀಡುವ ವಿಷಯದಲ್ಲಿ ಸಿದ್ದರಾಮಯ್ಯ ಮತ್ತು ಶಾಸಕ ಜಮೀರ್‌ ಅಹ್ಮದ್‌ ಖಾನ್ ಅವರು ಅಖಂಡ ಪರ ಇದ್ದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಹಮತ ತೋರಿಲ್ಲ ಎಂದೂ ಹೇಳಲಾಗಿದೆ. ‌ಅಲ್ಲದೆ, ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ಜಮೀರ್‌, ‘ಅಖಂಡಗೆ ಟಿಕೆಟ್‌ ನೀಡದೇ ಇದ್ದರೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ’ ಎಂದು ಪಕ್ಷದ ನಾಯಕರ ಬಳಿ ಹೇಳಿಕೊಂಡಿದ್ದಾರೆ ಎಂದೂ ಹೇಳಲಾಗಿದೆ.

ಟಿಕೆಟ್‌ ಸಿಗದೆ ಪಕ್ಷೇತರನಾಗಿ ಅಖಂಡ ಕಣಕ್ಕಿಳಿದರೆ, ‘ಮುಸ್ಲಿಂ ಮುಖಂಡರ ಮಾತು ಕೇಳಿ ದಲಿತ ಶಾಸಕನಿಗೆ ಕಾಂಗ್ರೆಸ್‌ ನಾಯಕರು ಟಿಕೆಟ್‌ ತಪ್ಪಿಸಿದ್ದಾರೆ’ ಎಂದು ರಾಜ್ಯವಿಡೀ ಪ್ರಚಾರ ಮಾಡಲು ಬಿಜೆಪಿಯಲ್ಲಿ ಚರ್ಚೆ ನಡೆದಿದೆ. ಆ ಮೂಲಕ, ಮೀಸಲಾತಿ ವಿಚಾರದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿರುವ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಕೂಡಾ ಕಮಲ ನಾಯಕರು ಮುಂದಾಗಿದ್ದಾರೆ ಎಂದೂ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.