ADVERTISEMENT

ಜಸ್ವಂತ್‌ಗೂ ಸಿಗಲಿಲ್ಲ ಕೇಳಿದ ಟಿಕೆಟ್‌

ಅಡ್ವಾಣಿ ಆಪ್ತ ಪಕ್ಷೇತರರಾಗಿ ಸ್ಪರ್ಧಿಸುವ ವದಂತಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 19:30 IST
Last Updated 21 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ರಾಜಸ್ತಾನದ ಬಾರ್ಮೇರ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದ ಬಿಜೆಪಿ  ನಾಯಕ ಜಸ್ವಂತ್‌ ಸಿಂಗ್‌ ಅವರಿಗೆ ಪಕ್ಷ ಟಿಕೆಟ್‌ ನಿರಾಕರಿಸಿದೆ. ಬದಲಿಗೆ ಕರ್ನಲ್‌ ಸೋನಾರಾಂ ಚೌಧರಿ ಅವರಿಗೆ ಟಿಕೆಟ್‌ ನೀಡಲಾಗಿದೆ.

ಮಧ್ಯಪ್ರದೇಶದ ಭೋಪಾಲ್‌ನಿಂದ ಕಣಕ್ಕಿಳಿಯಲು ಬಯಸಿದ್ದ ಎಲ್‌.ಕೆ. ಅಡ್ವಾಣಿ ಅವರನ್ನು ಗುಜರಾತ್‌ನ ಗಾಂಧಿ­ನಗರದಿಂದಲೇ ಸ್ಪರ್ಧಿಸುವಂತೆ ಒತ್ತಡ ಹೇರಿದ ಒಂದೇ ದಿನದ ನಂತರ ಅಡ್ವಾಣಿ ಅವರಿಗೆ ನಿಕಟವಾಗಿರುವ ಜಸ್ವಂತ್‌ ಸಿಂಗ್‌ ಅವರಿಗೂ ಟಿಕೆಟ್‌ ಕೈತಪ್ಪಿದೆ.

ಜಸ್ವಂತ್‌ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳಿದ್ದರೂ ಅದು ದೃಢ­ಪಟ್ಟಿಲ್ಲ. ಬಿಜೆಪಿ ಟಿಕೆಟ್‌ ನೀಡಿರುವ ಚೌಧರಿ ಇತ್ತೀಚೆಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದವರು. ಜಸ್ವಂತ್‌ (76) ಪ್ರಸ್ತುತ ಡಾರ್ಜ­ಲಿಂಗ್‌ ಸಂಸದರಾಗಿದ್ದಾರೆ. ಇದು ತಮ್ಮ ಕೊನೆಯ ಚುನಾವಣೆ-­ಯಾ­ಗಿದ್ದು ತವರು ಕ್ಷೇತ್ರದಿಂದ ಸ್ಪರ್ಧಿಸಲು ಬಯಸುವುದಾಗಿ ಜಸ್ವಂತ್‌ ಹೇಳಿದ್ದರು.

ಜಿನ್ನಾ ಹೊಗಳಿಕೆ ತಂದ ಸಮಸ್ಯೆ: ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ ಜಸ್ವಂತ್‌ ಅವರು ಹಣಕಾಸು, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗ­ಳಂತಹ ಮಹತ್ವದ ಸಚಿವರಾಗಿ ಕೆಲಸ ಮಾಡಿದ್ದರು. ಪಾಕಿಸ್ತಾನಕ್ಕೆ ಭೇಟಿ ನೀಡಿದ ನಂತರ ಆ ದೇಶದ ಸ್ಥಾಪಕ ಮಹಮ್ಮದ್‌ ಆಲಿ ಜಿನ್ನಾ ಅವರನ್ನು ಹೊಗಳಿ ಪುಸ್ತಕ ಬರೆದ ನಂತರ ಜಸ್ವಂತ್‌ ಅವರಿಗೆ ಪಕ್ಷದಲ್ಲಿ ಸಮಸ್ಯೆ ಆರಂಭವಾಗಿತ್ತು.

ಪುಸ್ತಕದ ಬಗ್ಗೆ ವಿವಾದ ಉಂಟಾದ ಬಳಿಕ ಸ್ವಲ್ಪ ಅವಧಿಗೆ ಜಸ್ವಂತ್‌ ಅವರನ್ನು ಪಕ್ಷದಿಂದ ಹೊರಗೆ ಹಾಕಲಾಗಿತ್ತು. ಸರ್ದಾರ್ ಪಟೇಲ್‌ ಅವರ ವಿರುದ್ಧ ಕೆಲವು ಉಲ್ಲೇಖಗಳಿವೆ ಎಂಬ ಕಾರಣಕ್ಕೆ ಗುಜರಾತ್‌ನಲ್ಲಿ ಪುಸ್ತಕವನ್ನು ನಿಷೇಧಿಸಲಾಗಿತ್ತು. ಜಸ್ವಂತ್‌ 2004ರಿಂದ 2009ರ ಅವಧಿಗೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷ ನಾಯಕರಾಗಿದ್ದರು ಮತ್ತು 2012ರಲ್ಲಿ ಉಪರಾಷ್ಟ್ರಪತಿ ಹುದ್ದೆಗೆ ಎನ್‌ಡಿಎಯ ಅಭ್ಯರ್ಥಿಯೂ ಆಗಿದ್ದರು.

ಸಮೀಕರಣ ಬದಲು
ರಾಜಸ್ತಾನದಲ್ಲಿ ಭಾರಿ ಬಹುಮತ­ದೊಂದಿಗೆ ವಸುಂ­ಧರಾ ರಾಜೆ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದ­ರೊಂದಿಗೆ ಅಲ್ಲಿನ ರಾಜಕೀಯ ಸಮೀ­ಕರಣವೇ ಬದಲಾಗಿದೆ. ಹಾಗಾಗಿಯೇ ಪಕ್ಷ ಜಸ್ವಂತ್‌ ಅವರಿಗೆ ಟಿಕೆಟ್‌ ನಿರಾಕರಿಸಿ ಜಾಟ್‌ ನಾಯಕ ಚೌಧರಿ ಅವರಿಗೆ ಟಿಕೆಟ್‌ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT