ADVERTISEMENT

ಮತದಾರನ ತಲಾ ವೆಚ್ಚ 20 ಪಟ್ಟು ಹೆಚ್ಚು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST

ನವದೆಹಲಿ: ದೇಶದಲ್ಲಿ ಮೊದಲ ಬಾರಿಗೆ ನಡೆದ (1952) ಸಾರ್ವತ್ರಿಕ ಚುನಾವಣೆಯಲ್ಲಿ ಕೇಂದ್ರ ಸರ್ಕಾರವು ಒಬ್ಬ ಮತದಾರನಿಗೆ 60 ಪೈಸೆ ವೆಚ್ಚ ಮಾಡಿತ್ತು. ಆದರೆ, 2009ರ ವೇಳೆಗೆ ಈ ವೆಚ್ಚದಲ್ಲಿ 20ಪಟ್ಟು ಹೆಚ್ಚಳ-­ವಾಗಿತ್ತು.

ಕಳೆದ ಲೋಕಸಭಾ ಚುನಾ­ವಣೆ­ಯಲ್ಲಿ ಪ್ರತಿ ಮತದಾರನಿಗೆ ಕೇಂದ್ರ ಸರ್ಕಾರ ರೂ. 12 ಖರ್ಚು ಮಾಡಿದೆ.

ಮುಂಬರುವ ಚುನಾವಣೆಯಲ್ಲಿ ವೆಚ್ಚ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ. ಜಾಗೃತಿ ಕಾರ್ಯಕ್ರಮಗಳು, ಮತ­ದಾನಕ್ಕೆ ಮುಂಚಿತವಾಗಿ ಮತಪತ್ರಗಳ ಹಂಚಿಕೆ ಹಾಗೂ ಮೊದಲ ಬಾರಿಗೆ ಜಾರಿಗೆ ತರಲು ಉದ್ದೇಶಿಸಲಾಗಿರುವ ಮತ­ಚಲಾವಣೆ ದೃಢೀಕರಣ ರಸೀದಿ ಯೋಜನೆ ಸೇರಿದಂತೆ ಹಲವು ಮತದಾರ ಸ್ನೇಹಿ ಕಾರ್ಯಕ್ರಮಗಳನ್ನು ನಡೆಸುತ್ತಿ­ರುವುದರಿಂದ ಖರ್ಚಿನ ಪ್ರಮಾಣ ಇನ್ನಷ್ಟು ಹಿಗ್ಗಬಹುದು.

‘ಪ್ರಜಾಪ್ರಭತ್ವ ವ್ಯವಸ್ಥೆಯ ರಚನೆ ಹಾಗೂ ಮೌಲ್ಯಗಳನ್ನು ಇನ್ನಷ್ಟು ಬಲ­ಪಡಿಸುವ ಉದ್ದೇಶದಿಂದ ಈ ಕಾರ್ಯ­ಕ್ರಮಗಳನ್ನು ಆಯೋಜಿಸಿ­ಲಾಗಿದೆ. ಪ್ರಜಾ­ಪ್ರಭುತ್ವ ವ್ಯವಸ್ಥೆಯ ಚಟುವಟಿಕೆಗಳು ಹೆಚ್ಚಿರುವುದರಿಂದ ವೆಚ್ಚಗಳ ಪ್ರಮಾಣ ಏರಿಕೆಯಾಗಿದೆ’ ಎಂದು ಚುನಾವಣಾ ಆಯೋಗ  ಹೇಳಿದೆ.

ಲೋಕಸಭಾ ಚುನಾವಣೆಯ ಎಲ್ಲಾ ವೆಚ್ಚಗಳನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ. ಆದರೆ, ಕಾನೂನು ಮತ್ತು ಸುವ್ಯವಸ್ಥೆಯ ಖರ್ಚು ಭರ

ಿಸುವ ಹೊಣೆ ಆಯಾ ರಾಜ್ಯಗಳದ್ದು.

ಚುನಾವಣಾ ವೆಚ್ಚಗಳ ಬಗ್ಗೆ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಂಕಿ ಸಂಖ್ಯೆಗಳ ಪ್ರಕಾರ, ಮೊದಲ ಲೋಕಸಭೆಯಿಂದ 15ನೇ ಲೋಕಸಭೆಯವರೆಗೆ ಪ್ರತಿ ಮತದಾರನ ಮೇಲಿನ ವೆಚ್ಚದಲ್ಲಿ ಭಾರಿ ಪ್ರಮಾಣ­ದಲ್ಲಿ ಏರಿಕೆಯಾಗಿದೆ.

1952ರಲ್ಲಿ ನಡೆದಿದ್ದ ಮೊದಲ ಚುನಾವಣೆಗೆ ರೂ. 10.45 ಕೋಟಿ ಖರ್ಚಾಗಿತ್ತು. 2009ರಲ್ಲಿ  ಇದು  ರೂ. 846.67 ಕೋಟಿಗೆ ಹೆಚ್ಚಿತ್ತು. ವೆಚ್ಚದ ವಿಷಯದಲ್ಲಿ 2004­ರ ಲೋಕಸಭೆ ಅತಿ ದುಬಾರಿ. ಆ ವರ್ಷ ಸರ್ಕಾರ ರೂ. 1,114 ಕೋಟಿ  (ಪ್ರತಿ ಮತದಾರನಿಗೆ ರೂ. 17) ವಿನಿಯೋಗಿಸಿತ್ತು.

1977ರ ವರಗೆಗೆ  ಪ್ರತಿ ಮತದಾರನ ಖರ್ಚು ಒಂದು ರೂಪಾಯಿ ಒಳಗಡೆಯೇ ಇತ್ತು. ಕುತೂಹಲಕಾರಿ ಅಂಶ ಎಂದರೆ, ಮೊದಲ ಚುನಾವಣೆಗೆ ಹೋಲಿಸಿದರೆ ನಂತರದ ನಾಲ್ಕು ಚುನಾವಣೆಗಳಲ್ಲಿ ಈ ವೆಚ್ಚ ಕಡಿಮೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT