ಬಾಲಸಿನೊರ್/ಗುಜರಾತ್ (ಪಿಟಿಐ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ನಾಜಿ ನಿರಂಕುಶಾಧಿಕಾರಿ ಅಡಾಲ್ಫ್ ಹಿಟ್ಲರ್‌ಗೆ ಹೋಲಿಸಿ, ಗುಜರಾತ್‌ನಲ್ಲಿ ರೈತರ ಭೂಮಿಯನ್ನು ಸರ್ಕಾರವೇ ಕದಿಯುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತ್‌ನಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಎರಡು ರೀತಿಯ ನಾಯಕರಿದ್ದಾರೆ. ಒಂದು ರೀತಿಯ ನಾಯಕರು ಗಾಂಧೀಜಿಯ ತರಹದವರಾಗಿದ್ದು, ಅವರು ಜನರ ನಡುವೆ ಹೋಗುತ್ತಾರೆ, ಅವರಲ್ಲಿ ಸಿದ್ಧಾಂತವಿರುತ್ತದೆ ಮತ್ತು ಜನರಿಂದ ಅವರು ಜ್ಞಾನ ಪಡೆದುಕೊಳ್ಳುತ್ತಾರೆ.
ಇನ್ನೊಂದು ರೀತಿಯ ನಾಯಕರಿಗೆ ಅತ್ಯುತ್ತಮ ಉದಾಹರಣೆ ಹಿಟ್ಲರ್. ಜನರ ಬಳಿಗೆ ಹೋಗುವ ಅಗತ್ಯ ಇಲ್ಲ, ಎಲ್ಲ ಜ್ಞಾನವೂ ತಮ್ಮಲ್ಲೇ ಇದೆ ಎಂದು ಹಿಟ್ಲರ್ ಭಾವಿಸಿದ್ದ. ಇಂತಹ ನಾಯಕರು ತಾವು ಅದು ಮಾಡಿದ್ದೇವೆ, ಇದು ಮಾಡಿದ್ದೇವೆ ಎಂದು ಹೇಳುತ್ತಾರೆ. ಅವರಿಗೆ ಜನರ ಬಳಿಗೆ ಹೋಗುವ ಅಗತ್ಯವೇ ಕಾಣುವುದಿಲ್ಲ ಎಂದು ರಾಹುಲ್ ವಿವರಿಸಿದರು. ‘ಮೊದಲ ವರ್ಗಕ್ಕೆ ಸೇರಲು ನಾನು ಬಯಸುತ್ತೇನೆ. ಅದಕ್ಕಾಗಿಯೇ ನಿಮ್ಮ ಮಾತು ಕೇಳಲು ಬಂದಿದ್ದೇನೆ. ನಾನು ಮಹಾತ್ಮ ಗಾಂಧಿ ಅವರನ್ನು ಅನುಸರಿಸಲು ಯತ್ನಿಸುತ್ತಿದ್ದೇನೆ’ ಎಂದರು.
ಭ್ರಷ್ಟಾಚಾರದ ಬಗ್ಗೆ ಮಾತು ಯಾಕೆ?: ಭ್ರಷ್ಟಾಚಾರದ ವಿರುದ್ಧ ಮಾತನಾಡುವವರು ಮೂವರು ಭ್ರಷ್ಟ ಸಚಿವರನ್ನು ಸಂಪುಟದಲ್ಲಿ ಯಾಕೆ ಇರಿಸಿಕೊಂಡಿದ್ದಾರೆ ಎಂದು ಮೋದಿ ಅವರನ್ನು ಪರೋಕ್ಷವಾಗಿ ರಾಹುಲ್ ಕುಟುಕಿದರು. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿಯನ್ನು ಯಾಕೆ ಮತ್ತೆ ಪಕ್ಷಕ್ಕೆ ಸೇರಿಸಿಕೊಂಡರು ಎಂದು ಪ್ರಶ್ನಿಸಿದರು.
ಎಲ್ಲರೂ ಕಾವಲುಗಾರರು
ಭ್ರಷ್ಟಾಚಾರದ ವಿರುದ್ಧ ಕಾವಲು ಕಾಯುತ್ತೇನೆ ಎಂದ ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ರಾಹುಲ್, ‘ಬ್ರಿಟಿಷರು ಕೂಡ ಈ ದೇಶಕ್ಕೆ ಕಾವಲುಗಾರರೆಂದು ಹೇಳಿಕೊಂಡೇ ಬಂದರು. ಆದರೆ ಕಾಂಗ್ರೆಸ್ ಅವರನ್ನು ಓಡಿಸಿತು. ನಮಗೆ ಒಬ್ಬ ಕಾವಲುಗಾರ ಬೇಡ. ದೇಶದ ಪ್ರಜೆಗಳೆಲ್ಲರೂ ಕಾವಲುಗಾರರಾಗಬೇಕು’ ಎಂದು ಅವರು ಪ್ರತಿಪಾದಿಸಿದರು.
ಕಾಂಗ್ರೆಸ್ ಪರದೇಶಿ: ಬಿಜೆಪಿ
ಅಹಮದಾಬಾದ್: ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಮಾಡಿರುವ ಟೀಕೆಗೆ ಗುಜರಾತ್ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಇಷ್ಟೆಲ್ಲ ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಭ್ರಷ್ಟಾಚಾರ ತಡೆಗೆ ಏನು ಮಾಡಿದೆ ಎಂದು ಪ್ರಶ್ನಿಸಿದೆ.
ಈಗಿನ ಕಾಂಗ್ರೆಸನ್ನು ವಿದೇಶಿ ಕಾಂಗ್ರೆಸ್ ಎಂದು ಗುಜರಾತ್ ಬಿಜೆಪಿ ವಕ್ತಾರ ವಿಜಯ್ ರೂಪಾನಿ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ನವರು ಗಾಂಧಿ, ಸರ್ದಾರ್ ಪಟೇಲ್ ಪರಂಪರೆಯನ್ನು ಎಂದೋ ಮೂಲೆಗೆ ತಳ್ಳಿದ್ದಾರೆ. ಈಗವರಿಗೆ ಅಧಿಕಾರ ಹಿಡಿಯುವುದಷ್ಟೇ ಮುಖ್ಯ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.