ADVERTISEMENT

ಲೋಕಸಭೆ ಚುನಾವಣೆ: ಕೊಯಮತ್ತೂರು ಕ್ಷೇತ್ರದಿಂದ ಅಣ್ಣಾಮಲೈ ಸ್ಪರ್ಧೆ

ಪಿಟಿಐ
Published 21 ಮಾರ್ಚ್ 2024, 23:51 IST
Last Updated 21 ಮಾರ್ಚ್ 2024, 23:51 IST
 ಕೆ. ಅಣ್ಣಾಮಲೈ
 ಕೆ. ಅಣ್ಣಾಮಲೈ   

ನವದೆಹಲಿ: ತಮಿಳುನಾಡಿನ ಒಂಬತ್ತು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಗುರುವಾರ ಪ್ರಕಟಿಸಿದೆ.

ಕೊಯಮತ್ತೂರು ಕ್ಷೇತ್ರದಿಂದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಹಾಗೂ ಚೆನ್ನೈ ದಕ್ಷಿಣ ಕ್ಷೇತ್ರದಿಂದ ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳ್‌ ಇಸೈ ಸೌಂದರ್‌ರಾಜನ್ ಸ್ಪರ್ಧಿಸಲಿದ್ದಾರೆ. ಬಿಜೆಪಿ ಈವರೆಗೆ 272 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದಂತಾಗಿದೆ. 

ಕೇಂದ್ರ ಸಚಿವ ಎಲ್‌.ಮುರುಗನ್ ಅವರು ನೀಲಗಿರಿ ಮೀಸಲು ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಮಾದಿಗ ಸಮುದಾಯಕ್ಕೆ ಸೇರಿದ ಮುರುಗನ್‌ ಅವರು ಈ ಹಿಂದೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರು. ಬಳಿಕ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಾಗಿತ್ತು. ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದಿಂದ ಅವರು ಆಯ್ಕೆಯಾಗಿದ್ದಾರೆ. 

ADVERTISEMENT

ತಮಿಳ್‌ ಇಸೈ ಅವರು ಸೋಮವಾರವಷ್ಟೇ ರಾಜ್ಯ‍ಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದರು. ತಮಿಳ್‌ ಇಸೈ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ತೂತ್ತುಕುಡಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿ, ಡಿಎಂಕೆಯ ಕನಿಮೊಳಿ ಎದುರು ಪರಾಭವಗೊಂಡಿದ್ದರು. ಕೊಯಮತ್ತೂರು ಕ್ಷೇತ್ರದಲ್ಲಿ 2019ರಲ್ಲಿ ಕಾಂಗ್ರೆಸ್‌ ಜಯ ಗಳಿಸಿತ್ತು. ಈ ಸಲ ಕ್ಷೇತ್ರವನ್ನು ಡಿಎಂಕೆಗೆ ಬಿಟ್ಟುಕೊಟ್ಟಿದೆ.

ಕೇಂದ್ರದ ಮಾಜಿ ಸಚಿವ ಪೊನ್‌ ರಾಧಾಕೃಷ್ಣನ್‌ ಅವರು ಕನ್ಯಾಕುಮಾರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಡಿಎಂಕೆ ಮಾಜಿ ನಾಯಕ ಹಾಗೂ ಹಾಲಿ ಸಂಸದ ಟಿ.ಆರ್.ಪರಿವೆಂಧರ್‌ ಅವರು ಪೆರಂಬಲೂರಿನಿಂದ ಕಣಕ್ಕಿಳಿಯಲಿದ್ದಾರೆ. 

2019ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಒಂದೇ ಒಂದು ಸ್ಥಾನವನ್ನು ಗೆದ್ದಿರಲಿಲ್ಲ. ರಾಜ್ಯದ 39 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಏಪ್ರಿಲ್‌ 19ರಂದು ಮತದಾನ ನಡೆಯಲಿದೆ. 

ತಮ್ಮೇಶಗೌಡ ಬಿಜೆಪಿ ರಾಜ್ಯ ಕಾರ್ಯದರ್ಶಿ

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿಯನ್ನಾಗಿ ತಮ್ಮೇಶಗೌಡ ಅವರನ್ನು ನೇಮಕ ಮಾಡಲಾಗಿದೆ.

ಅಲ್ಲದೇ, ಲೋಕಸಭಾ ಚುನಾವಣಾ ನಿರ್ವಹಣಾ ಸಮಿತಿಗೆ ಸದಸ್ಯರನ್ನಾಗಿ ವಿಧಾನಪರಿಷತ್‌ ಸದಸ್ಯರಾದ ಎನ್‌.ರವಿಕುಮಾರ್‌, ಭಾರತಿಶೆಟ್ಟಿ ಮತ್ತು ಎಸ್‌.ಕೇಶವಪ್ರಸಾದ್‌ ಅವರನ್ನು ನೇಮಿಸಲಾಗಿದೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷಬಿ.ವೈ.ವಿಜಯೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.