ADVERTISEMENT

ಶಿರೋಮಣಿ ಅಕಾಲಿ ದಳದೊಂದಿಗೆ ಮೈತ್ರಿ ವಿಫಲ: ಪಂಜಾಬ್‌ನಲ್ಲಿ BJP ಏಕಾಂಗಿ ಸ್ಪರ್ಧೆ

ಪಿಟಿಐ
Published 26 ಮಾರ್ಚ್ 2024, 14:39 IST
Last Updated 26 ಮಾರ್ಚ್ 2024, 14:39 IST
...
...   

ಚಂಡೀಗಢ: ಪಂಜಾಬ್‌ನಲ್ಲಿ ಏಕಾಂಗಿಯಾಗಿ ಚುನಾವಣೆ ಎದುರಿಸುವುದಾಗಿ ಬಿಜೆಪಿ ಘೋಷಿಸಿದೆ. ಈ ಮೂಲಕ ಶಿರೋಮಣಿ ಅಕಾಲಿ ದಳದೊಂದಿಗೆ (ಎಸ್‌ಎಡಿ) ಪುನರ್ ಮೈತ್ರಿಯ ದಿಕ್ಕಿನಲ್ಲಿ ಮಾತುಕತೆ ಅಂತ್ಯವಾಗಿರುವುದನ್ನು ಬಿಜೆಪಿ ಸೂಚಿಸಿದೆ.

ಈ ಬಗ್ಗೆ ‘ಎಕ್ಸ್‌’ ವೇದಿಕೆಯಲ್ಲಿ ವಿಡಿಯೊ ಸಂದೇಶ ಪೋಸ್ಟ್ ಮಾಡಿರುವ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸುನೀಲ್ ಜಾಖಡ್‌, ‘ಜನರು, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಪ್ರತಿಕ್ರಿಯೆ ಆಧರಿಸಿ ಈ ತೀರ್ಮಾನಕ್ಕೆ ಬಂದಿದ್ದೇನೆ. ಯುವಜನರು, ರೈತರು, ವ್ಯಾಪಾರಿಗಳು, ಕಾರ್ಮಿಕರು ಮತ್ತು ಶೋಷಿತ ಜನರ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಗಡಿ ರಾಜ್ಯದಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳು ಹೆಚ್ಚಾಗಿವೆ. ಪಂಜಾಬ್‌ನಲ್ಲಿ 13 ಲೋಕಸಭಾ ಕ್ಷೇತ್ರಗಳಿದ್ದು, ಒಂದೇ ಹಂತದಲ್ಲಿ ಜೂನ್ 1 ರಂದು ಮತದಾನ ನಡೆಯಲಿದೆ. 

ADVERTISEMENT

‘ಎಸ್‌ಎಡಿ ಜತೆಗೆ ಮಾತುಕತೆ ನಡೆಯುತ್ತಿದೆ. ಎನ್‌ಡಿಎ ಕೂಟದ ಎಲ್ಲ ಪಕ್ಷಗಳೂ ಒಂದಾಗಬೇಕು ಎನ್ನುವುದು ನಮ್ಮ ಬಯಕೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾರದ ಹಿಂದೆ ಹೇಳಿದ್ದರು. 

ಪಂಜಾಬ್‌ನ 13 ಲೋಕಸಭಾ ಸ್ಥಾನಗಳ ಪೈಕಿ ಐದರಿಂದ ಆರು ಕ್ಷೇತ್ರ ಬಿಟ್ಟುಕೊಡುವಂತೆ ಬಿಜೆಪಿ ಒತ್ತಾಯಿಸಿತ್ತು. ಆದರೆ, ಅದಕ್ಕೆ ಅಕಾಲಿ ದಳ ಒಪ್ಪಿಲ್ಲ. ಹೀಗಾಗಿಯೇ ಮೈತ್ರಿ ಮಾತುಕತೆ ಮುರಿದುಬಿದ್ದಿದೆ ಎನ್ನಲಾಗುತ್ತಿದೆ.       

ಈ ಬಗ್ಗೆ ಸುಖ್‌ಬೀರ್ ಸಿಂಗ್ ಬಾದಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 2020ರ ಸೆಪ್ಟೆಂಬರ್‌ನಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಎಸ್‌ಎಡಿ, ಎನ್‌ಡಿಎ ಕೂಟದಿಂದ ಹೊರಹೋಗಿತ್ತು.

‘ರಾಜಕೀಯಕ್ಕಿಂತ ಮೌಲ್ಯಗಳಿಗೆ ಹೆಚ್ಚು ಬೆಲೆ’ 

ಲೋಕಸಭಾ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುವ ಬಗ್ಗೆ ಎಸ್‌ಎಡಿ ಶುಕ್ರವಾರ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಸೂಚನೆ ನೀಡಿತ್ತು. ಪಕ್ಷವು ರಾಜಕೀಯಕ್ಕಿಂತ ಮೌಲ್ಯಗಳಿಗೆ ಹೆಚ್ಚು ಬೆಲೆ ಕೊಡುವುದಾಗಿ ಪಕ್ಷವು ಹೇಳಿತ್ತು. ಸಭೆಯಲ್ಲಿ ಸಿಖ್ ಕೈದಿಗಳ ಬಗ್ಗೆ ನಿರ್ಣಯ ಕೈಗೊಂಡಿದ್ದ ಎಸ್‌ಎಡಿ ಅವಧಿ ಪೂರೈಸಿರುವ ‘ಬಂಧಿ ಸಿಖ್ಖರ’ ಬಿಡುಗಡೆಗಾಗಿ ‘ಷರತ್ತುರಹಿತ ಲಿಖಿತ ಬದ್ಧತೆ’ ನೀಡುವಂತೆ ನಿರ್ಣಯದಲ್ಲಿ ಒತ್ತಾಯಿಸಿತ್ತು. ಜತೆಗೆ ರೈತರ ಮತ್ತು ರೈತ ಕಾರ್ಮಿಕರ ಪರ ನಿಲ್ಲುವುದನ್ನು ಮುಂದುವರೆಸುವುದಾಗಿ ತಿಳಿಸಿದ್ದ ಎಸ್‌ಎಡಿ ಬಿಜೆಪಿ ಸರ್ಕಾರವು ಅವರಿಗೆ ನೀಡಿದ್ದ ಎಲ್ಲ ಭರವಸೆಗಳನ್ನು ಪೂರೈಸಬೇಕೆಂದು ಬೇಡಿಕೆ ಇಟ್ಟಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.