ADVERTISEMENT

ಚುನಾವಣೆ: ಲಿಂಗಭೇದದ ಹೀಯಾಳಿಕೆ, ಸ್ತ್ರೀದ್ವೇಷದ ಸುತ್ತ...

ಪಿಟಿಐ
Published 7 ಏಪ್ರಿಲ್ 2024, 15:30 IST
Last Updated 7 ಏಪ್ರಿಲ್ 2024, 15:30 IST
ಹೇಮಾ ಮಾಲಿನಿ
ಹೇಮಾ ಮಾಲಿನಿ   

ನವದೆಹಲಿ: ಚುನಾವಣೆಯ ಸಮಯ ಎಂದರೆ, ಅದು ಪಕ್ಷಾತೀತವಾಗಿ ದೇಶದಾದ್ಯಂತ ಮಹಿಳಾ ರಾಜಕಾರಣಿಗಳನ್ನು ಗುರಿಯಾಗಿಸಿಕೊಂಡು ಲಿಂಗಭೇದದ ಹೀಯಾಳಿಕೆಯ ಮಾತುಗಳು ಕೇಳಿಬರುವ ಕಾಲ. 2024ರ ಲೋಕಸಭಾ ಚುನಾವಣೆಯಲ್ಲೂ ಹೇಮಾ ಮಾಲಿನಿ, ಕಂಗನಾ ರನೌತ್ ಮತ್ತು ಮಮತಾ ಬ್ಯಾನರ್ಜಿಯವರ ವಿರುದ್ಧ ಅಂತಹದ್ದೇ ಹೇಳಿಕೆಗಳು ಹೊರಬಿದ್ದಿವೆ.

ಹೇಮಾ ಮಾಲಿನಿ ಕುರಿತು ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲಾ ಕಳೆದ ತಿಂಗಳ ಕೊನೆಯಲ್ಲಿ ಹರಿಯಾಣದ ರ್‍ಯಾಲಿಯಲ್ಲಿ ಆಡಿದರೆನ್ನಲಾದ ಮಾತುಗಳು ಭಾರಿ ವಿವಾದಕ್ಕೆ ಕಾರಣವಾಗಿದ್ದವು. ಈ ಸಂಬಂಧ ಕ್ರಮ ಜರುಗಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗವು ಚುನಾವಣಾ ಆಯೋಗಕ್ಕೆ ಸೂಚಿಸಿದೆ. 

ಮಥುರಾ ಸಂಸದೆ ಹೇಮಾ ಮಾಲಿನಿ ಒಬ್ಬ ತಾರೆಯಾಗಿ, ಪತ್ನಿಯಾಗಿ, ಸೊಸೆಯಾಗಿ ಹಲವು ಬಾರಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗುರಿಯಾಗಿದ್ದಾರೆ. 

ADVERTISEMENT

ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರೀನೆತ್ ಮತ್ತು ಎಚ್‌.ಎಸ್‌.ಅಹಿರ್, ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ ಅವರನ್ನು ಕ್ಷೇತ್ರದೊಂದಿಗೆ ಸಮೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್‌ಗಳು ತೀವ್ರ ವಿವಾದಕ್ಕೆ ಗುರಿಯಾಗಿದ್ದವು. ಶ್ರೀನೆತ್, ಅದನ್ನು ತಾನು ಪೋಸ್ಟ್ ಮಾಡಿರಲಿಲ್ಲ ಎಂದು ವಿವಾದಾತ್ಮಕ ಪೋಸ್ಟ್ ಅಳಿಸಿಹಾಕಿದ್ದರು. ಮಮತಾ ಬ್ಯಾನರ್ಜಿ ಅವರ ಪೋಷಕರ ಬಗ್ಗೆ ಆಡಿದ್ದ ಮಾತಿಗೆ ಬಿಜೆಪಿ ಮುಖಂಡ ದಿಲೀಪ್ ಘೋಷ್ ಕ್ಷಮೆಯಾಚಿಸಿದ್ದರು. ಚುನಾವಣಾ ಆಯೋಗವು ಶ್ರೀನೆತ್ ಮತ್ತು ಘೋಷ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಘೋಷ್ ಅವರು ಮಮತಾ ಬಗ್ಗೆ ಹಿಂದೆಯೂ ಇಂಥ ಹೇಳಿಕೆ ನೀಡಿದ್ದರು. 

ಭಾರತದ ರಾಜಕಾರಣದ ದೊಡ್ಡ ನಾಯಕಿಯರಾದ ಸೋನಿಯಾ ಗಾಂಧಿ, ಮಾಯಾವತಿ, ಮಮತಾ ಬ್ಯಾನರ್ಜಿ, ಸ್ಮೃತಿ ಇರಾನಿ, ಜಯಪ್ರದಾ, ಪ್ರಿಯಾಂಕಾ ಗಾಂಧಿ ವಾದ್ರಾ ಎಲ್ಲರೂ ಲಿಂಗಭೇದದ ಹೀಯಾಳಿಕೆಗೆ ಗುರಿಯಾದವರೇ.      

ರಾಜಕಾರಣದಲ್ಲಿ ಸ್ತ್ರೀ ದ್ವೇಷ ಕುರಿತು ಮಾತನಾಡಿರುವ ರಂಜನಾ ಕುಮಾರಿ, ‘ಮಹಿಳೆಯ ದೇಹದ ಬಗ್ಗೆ ಮಾತನಾಡುವ ಮೂಲಕ ಆಕೆಯನ್ನು ಕುಗ್ಗುವಂತೆ ಮಾಡುವುದು ಒಂದು ಸಾಮಾನ್ಯ ತಂತ್ರವಾಗಿದೆ’ ಎಂದು ಹೇಳುತ್ತಾರೆ. 

2019ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿಯೂ ಹಲವರು ತಮ್ಮ ಮಹಿಳಾ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಇಂಥವೇ ಸ್ತ್ರೀದ್ವೇಷದ, ಹೀಯಾಳಿಕೆಯ ಮಾತುಗಳನ್ನು ಆಡಿದ್ದರು.

ಕೇಂದ್ರ ಸಚಿವರಾಗಿದ್ದ ಅಶ್ವಿನಿ ಚೌಬೆ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರಿಗೆ ‘ಮುಸುಕಿನಿಂದ (ಘೂಂಘಟ್‌) ಆಚೆ ಬಾರದಂತೆ’ ಸಲಹೆ ನೀಡಿದ್ದರು. ಬಿಜೆಪಿ ಮುಖಂಡ ವಿನಯ್ ಕಟಿಯಾರ್, ‘ರಾಹುಲ್ ಗಾಂಧಿ ತಂದೆ ರಾಜೀವ್ ಗಾಂಧಿ ಎಂಬುದಕ್ಕೆ ಪುರಾವೆ ನೀಡಲು ಸಾಧ್ಯವೇ’ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಕೇಳಿದ್ದರು. ಕಟಿಯಾರ್ ಇನ್ನೊಮ್ಮೆ ಪ್ರಿಯಾಂಕಾ ಗಾಂಧಿ ಬಗ್ಗೆ ಮಾತನಾಡುತ್ತಾ, ‘ರಾಜಕಾರಣದಲ್ಲಿ ಇನ್ನೂ ಅನೇಕ ಸುಂದರ ತಾರಾ ಪ್ರಚಾರಕರಿದ್ದಾರೆ’ ಎಂದು ಹೇಳಿಕೆ ನೀಡಿದ್ದರು. ಬಿಜೆಪಿಯ ಗೋಪಾಲ ಶೆಟ್ಟಿ ಅವರು ನಟಿ, ರಾಜಕಾರಣಿ ಊರ್ಮಿಳಾ ಮಾತೊಂಡ್ಕರ್ ಬಗ್ಗೆ ಮಾತನಾಡುತ್ತಾ, ‘ಆಕೆಯ ಸೌಂದರ್ಯದಿಂದಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಕ್ಕಿದೆ’ ಎಂದಿದ್ದರು.

ಬಿಎಸ್‌ಪಿ ನಾಯಕಿ ಮಾಯಾವತಿ ಅವರನ್ನು ‘ಲೈಂಗಿಕ ಕಾರ್ಯಕರ್ತೆಗಿಂತಲೂ ಕೀಳು’ ಎಂದಿದ್ದ ಉತ್ತರ ಪ್ರದೇಶ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ದಯಾಶಂಕರ್ ಸಿಂಗ್, ದಲಿತ ನಾಯಕಿ ಹಣಕ್ಕಾಗಿ ಪಕ್ಷದ ಟಿಕೆಟ್ ಮಾರಿಕೊಳ್ಳುತ್ತಾರೆ ಎಂದು ಆರೋಪಿಸಿದ್ದರು. ಅವರ ಹೇಳಿಕೆಗೆ ಪಕ್ಷದ ಕೇಶವ್ ಪ್ರಸಾದ್ ಮೌರ್ಯ ಮತ್ತು ಅರುಣ್ ಜೇಟ್ಲಿ ಅವರು ಸಂಸತ್‌ನಲ್ಲಿ ಕ್ಷಮೆ ಯಾಚಿಸಿದ್ದರು.

2022ರಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಲಿಂಗಭೇದ ಹೀಯಾಳಿಕೆಗಾಗಿ ಕಾಂಗ್ರೆಸ್‌ನ ಅಜಯ್ ರಾಯ್ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಕೇವಲ ವಿರೋಧ ಪಕ್ಷಗಳ ಮಹಿಳೆಯರ ಬಗ್ಗೆ ಅಷ್ಟೇ ಅಲ್ಲ, ತಮ್ಮದೇ ಪಕ್ಷದವರ ಬಗೆಗೂ ಹೀಯಾಳಿಕೆಯ ಮಾತುಗಳನ್ನಾಡಿದವರು ಇದ್ದಾರೆ. 2013ರಲ್ಲಿ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, ಆಗ ಸಂಸದೆಯಾಗಿದ್ದ ಮೀನಾಕ್ಷಿ ನಟರಾಜನ್‌ ಅವರನ್ನು ಕುರಿತು, ‘ಶೇ 100ರಷ್ಟು ಪರಿಶುದ್ಧವಾದ ವಸ್ತು’ ಎಂದಿದ್ದು ಎಲ್ಲ ಪಕ್ಷಗಳಿಂದಲೂ ವ್ಯಾಪಕ ಟೀಕೆಗೆ ಗುರಿಯಾಗಿತ್ತು.    

‘ಆಧುನಿಕ ಸಮಾಜಕ್ಕೆ ಅಗತ್ಯವಾದ ಲಿಂಗ ಸಮಾನತೆ ಮತ್ತು ಬಹುತ್ವ ಭಾರತದಲ್ಲಿ ಇನ್ನೂ ಎಳವೆಯಲ್ಲಿವೆ ಮತ್ತು ಏರುಪೇರಿನಿಂದ ಕೂಡಿವೆ’ ಎಂದು ದೆಹಲಿ ವಿಶ್ವವಿದ್ಯಾಲಯದ ಜೀಸಸ್ ಮತ್ತು ಮೇರಿ ಕಾಲೇಜಿನ ರಾಜಕೀಯ ಶಾಸ್ತ್ರ ಪ್ರಾಧ್ಯಾಪಕಿ ಸುಶೀಲಾ ರಾಮಸ್ವಾಮಿ ಹೇಳುತ್ತಾರೆ.

ಹೀಗೆ ಮಹಿಳಾ ರಾಜಕಾರಣಿಗಳು ತಮ್ಮದೇ ಪಕ್ಷದವರಿಂದ, ವಿರೋಧಿಗಳಿಂದ, ಮತದಾರರಿಂದ ನಿರಂತರವಾಗಿ ಲಿಂಗಭೇದದ ಹೀಯಾಳಿಕೆಗೆ ಗುರಿಯಾದ ನಿದರ್ಶನಗಳು ಹೇರಳವಾಗಿದ್ದು, ಅವರ ಸಾಧನೆಯನ್ನು ಅವರ ಲಿಂಗತ್ವಕ್ಕಷ್ಟೇ ಸೀಮಿತಗೊಳಿಸಲಾಗುತ್ತಿದೆ.     

ವಿವಾದಿತ ಹೇಳಿಕೆಗಳು..

  • ಮಹಿಳೆ ಅಡುಗೆ ಮಾಡುವುದಕ್ಕೆ ಲಾಯಕ್ಕು

  • ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್ ಶಾಸಕ (ಬಿಜೆಪಿಯ ಗಾಯತ್ರಿ ಸಿದ್ದೇಶ್ವರ ಅವರ ಸ್ಪರ್ಧೆಯ ಬಗ್ಗೆ) 

  • ಹೇಮಾ ಮಾಲಿನಿ ಅವರ ಕೆನ್ನೆಯಷ್ಟು ನುಣುಪಾದ ರಸ್ತೆಗಳನ್ನು ನಿರ್ಮಿಸುತ್ತೇನೆ

  • ಲಾಲು ಪ್ರಸಾದ್, ಆರ್‌ಜೆಡಿ ಮುಖ್ಯಸ್ಥ

  • ಮಮತಾ ಬ್ಯಾನರ್ಜಿ ತಮ್ಮ ಒಂದು ಕಾಲು ಕಾಣುವಂತೆ ಸೀರೆ ಉಟ್ಟಿದ್ದಾರೆ. ನಾನು ಎಂದೂ ಯಾರೂ ಆ ರೀತಿ ಸೀರೆ ಉಟ್ಟಿದ್ದನ್ನು ಕಂಡಿಲ್ಲ. ಅದರ ಬದಲು ಬರ್ಮುಡಾ ಧರಿಸಿದರೆ ಎಲ್ಲರೂ ಸ್ಪಷ್ಟವಾಗಿ ನೋಡಬಹುದಿತ್ತು

  • ದಿಲೀಪ್ ಘೋಷ್, ಬಿಜೆಪಿ ಮುಖಂಡ (2021ರ ವಿಧಾನಸಭಾ ಚುನಾವಣೆಯ ವೇಳೆ ಮಮತಾ ಬ್ಯಾನರ್ಜಿ ಕಾಲಿಗೆ ಪ್ಲಾಸ್ಟರ್ ಹಾಕಿದ್ದ ರೀತಿಗೆ ಪ್ರತಿಕ್ರಿಯೆ)

  • ನಾನು ಆಕೆಯನ್ನು ರಾಮ್‌ಪುರಕ್ಕೆ ಕರೆತಂದೆ. ನಾನು ಯಾರಿಗೂ ಆಕೆಯನ್ನು ಮುಟ್ಟಲು ಬಿಡಲಿಲ್ಲ ಎನ್ನುವುದನ್ನು ನೀವೇ ನೋಡಿದ್ದೀರಿ. ಆಕೆಯ ನಿಜವಾದ ಮುಖವನ್ನು ಕಾಣಲು ನಿಮಗೆ 17 ವರ್ಷ ಬೇಕಾಯಿತು. ಆದರೆ, 17 ದಿನದಲ್ಲಿ ನಾನು ಆಕೆ ಖಾಕಿ ಒಳಉಡುಪು ಧರಿಸುತ್ತಾಳೆ ಎನ್ನುವುದನ್ನು ಕಂಡುಕೊಂಡಿದ್ದೆ

  • ಆಜಂ ಖಾನ್, ಸಮಾಜವಾದಿ ಪಕ್ಷದ ಮುಖಂಡ (ಜಯಪ್ರದಾ ಬಗ್ಗೆ, 2019ರ ಚುನಾವಣಾ ರ್‍ಯಾಲಿಯಲ್ಲಿ)

‘ಪುರುಷ ಪ್ರಧಾನ ವ್ಯವಸ್ಥೆಯೇ ಮೂಲ ಕಾರಣ’

‘ಮಹಿಳಾ ರಾಜಕಾರಣಿಗಳ ವಿರುದ್ಧ ಲಿಂಗಭೇದದ ಹೀಯಾಳಿಕೆಯ ಭಾಷೆಯನ್ನು ಬಳಸುವುದರ ಬೇರುಗಳು ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಮಹಿಳೆಯರಿಗೆ ಅಸಮಾನ ಅವಕಾಶ ಸೃಷ್ಟಿಗೆ ಕಾರಣವಾಗಿರುವ ಪುರುಷ ಪ್ರಧಾನ ವ್ಯವಸ್ಥೆಯಲ್ಲಿವೆ’ ಎನ್ನುವುದು ದೆಹಲಿ ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರ ಪ್ರಾಧ್ಯಾಪಕಿ ಸುಶೀಲಾ ರಾಮಸ್ವಾಮಿ ಅವರ ಅಭಿಪ್ರಾಯ. ‘ಸರಿಯಾದ ಶಿಕ್ಷಣ ಪಾಲನೆ ಅರಿವಿನ ಕೊರತೆಯು ಅವಾಸ್ತವಿಕವಾದ ಪುರುಷ ಶ್ರೇಷ್ಠತೆಯ ವಿಕೃತ ಗ್ರಹಿಕೆಗೆ ಕಾರಣವಾಗಿದೆ. ನಮ್ಮಲ್ಲಿ ಉದಾರವಾದಿ ರಾಜಕೀಯ ವ್ಯವಸ್ಥೆ ಇದೆ. ಆದರೆ ಅದಕ್ಕೆ ಪೂರಕವಾಗಿ ಉದಾರವಾದಿ ಸಮಾಜ ರೂಪುಗೊಳ್ಳುವುದು ಒಂದು ನಿರಂತರ ಪ್ರಕ್ರಿಯೆಯಾಗಿದ್ದು ಅದಕ್ಕೆ ಸಮಯ ಹಿಡಿಯುತ್ತದೆ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.