ADVERTISEMENT

LS Polls: ಜಮ್ಮು ಕಾಶ್ಮೀರದ 3ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಿದ ಪಿಡಿಪಿ

ಪಿಟಿಐ
Published 7 ಏಪ್ರಿಲ್ 2024, 11:07 IST
Last Updated 7 ಏಪ್ರಿಲ್ 2024, 11:07 IST
   

ಶ್ರೀನಗರ: ಲೋಕಸಭಾ ಚುನಾವಣೆ ನಡೆಯಲಿರುವ ಮೂರು ಕ್ಷೇತ್ರಗಳಿಗೆ ಜಮ್ಮು ಕಾಶ್ಮೀರದ ಪೀಪಲ್ಸ್‌ ಡೆಮಾಕ್ರೆಟಿಕ್‌ ‍ಪಕ್ಷ (ಪಿಡಿಪಿ) ತನ್ನ ಅಭ್ಯರ್ಥಿಗಳ ಹೆಸರನ್ನು ಇಂದು ಪ್ರಕಟಿಸಿದೆ.

ಪಕ್ಷದ ಸಂಸದೀಯ ಮಂಡಳಿ ಅಧ್ಯಕ್ಷ ಸರ್ತಾಜ್‌ ಮಾದ್ನಿ ಈ ಕುರಿತು ಮಾತನಾಡಿ, ‘ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರನ್ನು ಅನಂತ್‌ನಾಗ್‌ ಜಿಲ್ಲೆಯಿಂದ ಕಣಕ್ಕಿಳಿಸಲಾಗಿದೆ. ಯುವ ಮುಖಂಡ ವಾಹೀದ್‌ ಪರ್ರಾ ಶ್ರೀನಗರ ಕ್ಷೇತ್ರದಿಂದ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಮಿರ್‌ ಫಯಾಜ್‌ ಅವರು ಬಾರಾಮುಲ್ಲಾ ಕ್ರೇತ್ರದಿಂದ ಸ್ಪರ್ಧಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಭಾನುವಾರ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ. ಅಲ್ಲದೆ ತಮ್ಮ ಪಕ್ಷವು ಉದಮ್‌ಪುರ್ ಮತ್ತು ಜಮ್ಮುವಿನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಲಿದೆ ಎಂದು ಇದೇ ವೇಳೆ ತಿಳಿಸಿದ್ದಾರೆ.

ADVERTISEMENT

ಜಮ್ಮು ಕಾಶ್ಮಿರದ ವಿವಿಧ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಇದೇ 26ರಂದು ಚುನಾವಣೆ ನಡೆಯಲಿದೆ. 

ವಿಶೇಷ  ಮಹಿಳಾ ಕಾರ್ಯಾಚರಣೆ ತಂಡ ನಿಯೋಜನೆ

ಲೋಕಸಭಾ ಚುನಾವಣೆ ಸನ್ನಿಹಿತವಾದ ಕಾರಣ ಜಮ್ಮು ಕಾಶ್ಮೀರದ ವಿವಿಧ ಲೋಕಸಭಾ ಕ್ಷೇತ್ರಗಳಿಗೆ ವಿಶೇಷ ಮಹಿಳಾ ಕಾರ್ಯಾಚರಣೆ ತಂಡವನ್ನು ನಿಯೋಜನೆ ಮಾಡಲಾಗಿದೆ.

ಒಟ್ಟು 8 ಮಂದಿ ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.   

‘ಸ್ವಯಂಚಾಲಿತ ಶಸ್ತ್ರಾಸ್ತ್ರಗಳು, ಬುಲೆಟ್‌ ಪ್ರೂಫ್‌ನ ಜಾಕೆಟ್‌ ಸಹಿತ ಇವರು ನಗರದ ವಿವಿಧೆಡೆ ವಾಹನಗಳ ತಪಾಸಣೆ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಎಲ್ಲಾ ಮಹಿಳಾ ಅಧಿಕಾರಿಗಳನ್ನು ಜಮ್ಮುವಿಗೆ ನಿಯೋಜನೆ ಮಾಡುವ ಮೊದಲು ಮೂರು ತಿಂಗಳು ತರಬೇತಿ ಕೊಡಲಾಗಿದೆ. ಇದು ಮಹಿಳಾ ಸಬಲೀಕರಣಕ್ಕೆ ಒಂದು ಉದಾಹರಣೆಯಾಗಿದೆ. ಪುರುಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವಾಗ ಎದುರಾಗುವ ಸವಾಲುಗಳನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು ಮಹಿಳೆಯರ ಉಪಸ್ಥಿತಿಯು ನಮಗೆ ಸಹಾಯ ಮಾಡುತ್ತದೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಕಾಮೇಶ್ವರ್‌ ಪುರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.