ADVERTISEMENT

ತನಿಖಾ ಸಂಸ್ಥೆ ದುರ್ಬಳಕೆ: ಚುನಾವಣಾ ಆಯೋಗದ ಮಧ್ಯಪ್ರವೇಶಕ್ಕೆ ಟಿಎಂಸಿ ಮನವಿ

ಪಿಟಿಐ
Published 29 ಮಾರ್ಚ್ 2024, 14:25 IST
Last Updated 29 ಮಾರ್ಚ್ 2024, 14:25 IST
.
.   

ನವದೆಹಲಿ : ಬಿಜೆಪಿಯು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ನಾಯಕರು, ಈ ಕುರಿತು ಭಾರತೀಯ ಚುನಾವಣಾ ಆಯೋಗವು ಮಧ್ಯಪ್ರವೇಶಿಸಬೇಕು ಎಂದು ಕೋರಲಿದ್ದಾರೆ.

ಈ ಸಂಬಂಧ ಟಿಎಂಸಿ ನಾಯಕರು ಸೋಮವಾರ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ತಮ್ಮ ಕಳವಳ ವ್ಯಕ್ತಪಡಿಸಲಿದ್ದಾರೆ.

ಚುನಾವಣಾ ಆಯೋಗದ ಕಚೇರಿಯ ಹೊರಗೆ ಸುದ್ದಿಗಾರರ ಜತೆ ಮಾತನಾಡಿದ ಪಶ್ಚಿಮ ಬಂಗಾಳದ ಸಚಿವೆ ಶಶಿ ಪಂಜಾ ಅವರು, ‘ಚುನಾವಣೆ ಘೋಷಣೆಗೂ ಮುನ್ನ ಜಾರ್ಖಂಡ್‌ ಮಾಜಿ ಸಿ.ಎಂ ಹೇಮಂತ್‌ ಸೊರೇನ್‌ ಅವರನ್ನು ಬಂಧಿಸಲಾಯಿತು. ಅಲ್ಲದೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಬಳಿಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಬಂಧಿಸಲಾಗಿದೆ. ಇದರಿಂದ ನಾವು ವಿಚಲಿತರಾಗಿದ್ದೇವೆ’ ಎಂದು ಹೇಳಿದರು. 

ADVERTISEMENT

ನೀತಿ ಸಂಹಿತೆ ಜಾರಿಯಾದ ಬಳಿಕ ಇವುಗಳ ನಿಯಂತ್ರಣದ ಅಧಿಕಾರ ಚುನಾವಣಾ ಆಯೋಗಕ್ಕೆ ಬರುತ್ತದೆ. ಹಾಗಾಗಿ ಆಯೋಗವು ತನ್ನ ಅಧಿಕಾರವನ್ನು ಚಲಾಯಿಸಬೇಕು ಎಂದು ಅವರು ವಿನಂತಿಸಿದರು.

‘ಜಾರಿ ನಿರ್ದೇಶನಾಲಯ (ಇ.ಡಿ), ಸಿಬಿಐ ಮತ್ತು ಎನ್‌ಐಎಯಂತಹ ಕೇಂದ್ರೀಯ ಸಂಸ್ಥೆಗಳು ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡಿವೆ. ಅವುಗಳನ್ನು ಪ್ರತಿಪಕ್ಷಗಳ ವಿರುದ್ಧ ಅಸ್ತ್ರವಾಗಿ ಬಳಸಲಾಗುತ್ತಿದೆ. ಈ ಕುರಿತು ನಮ್ಮ ಕಳವಳ ವ್ಯಕ್ತಪಡಿಸಲು ಆಯೋಗದ ಸಮಯ ಕೋರಿದ್ದೇವೆ. ನಮ್ಮ ಭೇಟಿಗೆ ಸೋಮವಾರ ಅವಕಾಶ ನೀಡಲಾಗಿದೆ’ ‌‌ಎಂದು ಪಂಜಾ ತಿಳಿಸಿದರು.

ಈ ಸಂಸ್ಥೆಗಳು ಪಶ್ಚಿಮ ಬಂಗಾಳದ ಟಿಎಂಸಿ ನಾಯಕರು ಮತ್ತು ಕಾರ್ಯಕರ್ತರಿಗೂ ಸಮನ್ಸ್‌ ನೀಡುತ್ತಿವೆ. ಇದರಿಂದ ಚುನಾವಣಾ ಪ್ರಚಾರಕ್ಕೆ ಅಡ್ಡಿ ಎದುರಾಗಿದೆ ಎಂದು ಆರೋಪಿಸಿದ ಅವರು, ಈ ಕುರಿತು ಚುನಾವಣಾ ಆಯೋಗ ಮಧ್ಯ ಪ್ರವೇಶಿಸಬೇಕು ಎಂದು ಕೋರಿದರು.

ರಾಜ್ಯಸಭೆಯಲ್ಲಿ ಟಿಎಂಸಿ ಸಂಸದೀಯ ಪಕ್ಷದ ನಾಯಕ ಡೆರೆಕ್‌ ಒಬ್ರಾಯನ್, ಸಂಸದರಾದ ಡೋಲಾ ಸೇನ್‌, ಸಾಕೇತ್ ಗೋಖಲೆ, ಸಾಗರಿಕಾ ಘೋಷ್‌ ಅವರು ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.