ADVERTISEMENT

‘ರಾಷ್ಟ್ರಪತಿಗೆ ಪತ್ರ ಪ್ರಚಾರದ ತಂತ್ರ’

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 5:33 IST
Last Updated 25 ಏಪ್ರಿಲ್ 2019, 5:33 IST
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ   

ನವದೆಹಲಿ: ‘ರಕ್ಷಣಾ ಪಡೆಗಳನ್ನು ರಾಜಕೀಯ ಪಕ್ಷಗಳು ತಮ್ಮ ಪ್ರಚಾರಕ್ಕೆ ಬಳಕೆ ಮಾಡುವುದನ್ನು ತಡೆಯಬೇಕು ಎಂದು ಒತ್ತಾಯಿಸಿ ನಿವೃತ್ತ ಸೇನಾಧಿಕಾರಿಗಳು ರಾಷ್ಟ್ರಪತಿಗೆ ಪತ್ರ ಬರೆದಿರುವುದರ ಹಿಂದೆ ಕಾಂಗ್ರೆಸ್‌ನ ಚುನಾವಣಾ ತಂತ್ರ ಅಡಗಿದೆ. 2014ರ ಚುನಾವಣೆಯ ಸಂದರ್ಭದಲ್ಲೂ ಕಾಂಗ್ರೆಸ್‌ ಇಂಥ ತಂತ್ರವನ್ನು ಅನುಸರಿಸಿತ್ತು’ ಎಂದು ಬಿಜೆಪಿ ಮುಖಂಡ, ಕೇಂದ್ರದ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

‘ಇದು ಸಹಿ ಅಭಿಯಾನದ ಹೆಸರಿನಲ್ಲಿ ಚುನಾವಣಾ ಪ್ರಚಾರ ನಡೆಸುವ ಕಾಂಗ್ರೆಸ್‌ನ ತಂತ್ರ’ ಎಂದು ಬಣ್ಣಿಸಿದ ಜೇಟ್ಲಿ, ‘ಇಂಥ ಮನವಿ ಪತ್ರಗಳಿಗೆ ಸಹಿ ಹಾಕಲು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸಾಕಷ್ಟು ಜನರು ಸಿದ್ಧರಿರುತ್ತಾರೆ. ಶೈಕ್ಷಣಿಕ ಕ್ಷೇತ್ರದಲ್ಲಿರುವವರು, ಅರ್ಥಶಾಸ್ತ್ರಜ್ಞರು, ಕಲಾವಿದರು, ಮಾಜಿ ಅಧಿಕಾರಿಗಳು ಮಾತ್ರವಲ್ಲ ಈಗ ಕೆಲವು ಮಾಜಿ ಸೈನಿಕರೂ ಇಂಥ ಮನವಿಗಳಿಗೆ ಸಹಿ ಹಾಕುತ್ತಿದ್ದಾರೆ. ಇನ್ನೂ ಕೆಲವರ ಅನುಮತಿಯನ್ನು ಪಡೆಯದೆಯೇ ಹೆಸರು ಹಾಕಿ ಸಹಿ ಮಾಡಲಾಗುತ್ತಿದೆ’ ಎಂದು ಜೇಟ್ಲಿ ಆರೋಪಿಸಿದರು.

‘ಕಾಲ್ಪನಿಕ ವಿಚಾರಗಳನ್ನು ಇಟ್ಟುಕೊಂಡು ಒಂದು ಜನಪ್ರಿಯ ಸರ್ಕಾರವನ್ನು ಉರುಳಿಸಲು ಸಾಧ್ಯವಿಲ್ಲ. ಅದಕ್ಕೆ ಗಟ್ಟಿಯಾದ ವಿಚಾರಗಳು ಬೇಕಾಗುತ್ತವೆ. ನಮ್ಮ ಸರ್ಕಾರದ ವಿರುದ್ಧ ಅಂಥ ಯಾವುದೇ ಆರೋಪಗಳು ಇಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.