ADVERTISEMENT

ಭಾಷಣಕ್ಕೆ ಅಲೆ ಸೃಷ್ಟಿ ಆಗದು: ಬಿ.ಎನ್‌.ಚಂದ್ರಪ್ಪ

ಕಾಂಗ್ರೆಸ್‌ ಅಭ್ಯರ್ಥಿ

ಜಿ.ಬಿ.ನಾಗರಾಜ್
Published 3 ಮೇ 2019, 17:06 IST
Last Updated 3 ಮೇ 2019, 17:06 IST
ಬಿ.ಎನ್‌.ಚಂದ್ರಪ್ಪ
ಬಿ.ಎನ್‌.ಚಂದ್ರಪ್ಪ   

* ಐದು ವರ್ಷ ಸಂಸದರಾಗಿದ್ದ ನಿಮ್ಮನ್ನು ಮತದಾರರು ಏಕೆ ಪುನರಾಯ್ಕೆ ಮಾಡಬೇಕು?

2014ರಿಂದ ಈವರೆಗೆ ಮತದಾರರ ನಂಬಿಕೆಗೆ ದ್ರೋಹ ಆಗದ ರೀತಿಯಲ್ಲಿ ನಡೆದುಕೊಂಡಿದ್ದೇನೆ. ಕಳಂಕ, ಜಾತಿವಾದ ಇಲ್ಲದೇ ಕೆಲಸ ಮಾಡಿದ್ದೇನೆ. ಕ್ಷೇತ್ರದ ಪರಿಚಯ, ಲೋಕಸಭೆಯ ಅನುಭವ ಇದೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಜನ ನನ್ನ ಕೈಹಿಡಿಯಬೇಕು ಎಂಬ ಅಪೇಕ್ಷೆ ಹೊಂದಿದ್ದೇನೆ.

* ಕಣ್ಣಿಗೆ ಕಾಣುವಂತಹ ಅಭಿವೃದ್ಧಿಯನ್ನು ಸಂಸದರು ಮಾಡಿಲ್ಲ ಎಂಬ ಆರೋಪವಿದೆ?

ADVERTISEMENT

ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕೆ ಮೇಸ್ತ್ರಿಯ ರೀತಿ ಕೆಲಸ ಮಾಡಿದ್ದೇನೆ. ವಿ.ವಿ.ಸಾಗರಕ್ಕೆ ಭದ್ರೆ ಇನ್ನಷ್ಟೇ ಹರಿದು ಬರಲಿದ್ದಾಳೆ. ತುಂಗ–ಭದ್ರಾ ಜಲಾಶಯದ ಹಿನ್ನೀರಿನಿಂದ ಕುಡಿಯುವ ನೀರು ತರಲಾಗುತ್ತಿದೆ. ಪಾಸ್‌ಪೋರ್ಟ್‌ ಸೇವಾ ಕೇಂದ್ರ ಸ್ಥಾಪನೆ ಆಗಿದೆ. ಇವು ಬಿಜೆಪಿ ಕಣ್ಣಿಗೆ ಕಾಣುತ್ತಿಲ್ಲ. ಟೀಕೆ ಮಾಡುವುದನ್ನು ಬಿಟ್ಟು ಬಹಿರಂಗ ಚರ್ಚೆಗೆ ಬರಲಿ.

* ಭದ್ರೆ, ಬರ, ರೈಲು ಮಾರ್ಗ ಪ್ರತಿ ಚುನಾವಣೆಯ ವಸ್ತುಗಳಾಗುತ್ತಿವೆ. ಇವು ಏಕೆ ಈಡೇರುತ್ತಿಲ್ಲ?

ನೇರ ರೈಲು ಮಾರ್ಗಕ್ಕೆ ಅನುಮೋದನೆ ನೀಡುವಾಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಸ್ವಲ್ಪ ಯೋಚಿಸಬೇಕಿತ್ತು. ರೈಲ್ವೆ ಆದಾಯ ಪಡೆಯುವ ಕೇಂದ್ರ ಸರ್ಕಾರ ಮಾರ್ಗ ನಿರ್ಮಾಣಕ್ಕೆ ಮುಂದಾಗಬೇಕಿತ್ತು. ಭೂಸ್ವಾಧೀನ ಮಾಡಿಕೊಟ್ಟು ವೆಚ್ಚದ ಅರ್ಧ ಭಾಗವನ್ನು ರಾಜ್ಯ ಸರ್ಕಾರವೇ ಭರಿಸಬೇಕು ಎಂಬುದು ಅವೈಜ್ಞಾನಿಕ. ಭದ್ರಾ ಯೋಜನೆ ಸಾಕಾರಗೊಂಡಿದ್ದು, ಬರ ನೀಗಲಿದೆ.

* ಚುನಾವಣೆ ರಂಗೇರುತ್ತಿದ್ದಂತೆ ನಿಮ್ಮ ಜಾತಿಯ ವಿಚಾರ ಚರ್ಚೆಯಾಗುತ್ತಿದೆ. ನೀವು ಮಾದಿಗರಲ್ಲ ಎಂಬ ಮಾತು ಕೇಳಿಬರುತ್ತಿದೆ..

ನಾನೊಬ್ಬ ಮಾನವತಾವಾದಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಜಾತ್ಯತೀತ ತತ್ವದ ಮೇಲೆ ನಂಬಿಕೆ ಇಟ್ಟಿದ್ದೇನೆ. ಬಸವಣ್ಣ, ಕನಕದಾಸರು ಸೇರಿ ದಾರ್ಶನಿಕರು ಓಡಾಡಿದ ನೆಲದಲ್ಲಿ ಜಾತಿ ರಾಜಕೀಯ ಮಾಡುವುದು ಕೆಟ್ಟ ಸಂಪ್ರದಾಯ. ಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಜಾತಿಯಲ್ಲಿ ಒಡಕು ಸೃಷ್ಟಿಸುತ್ತಿರುವುದು ಹೀನ ಮನಸ್ಥಿತಿ. ಜನಿಸಿದ ಕಾರಣಕ್ಕೆ ಆಕಸ್ಮಿಕವಾಗಿ ಜಾತಿ ಹಣೆಪಟ್ಟಿ ಅಂಟಿದೆ. ನಾನು ಪಕ್ಕಾ ಮಾದಿಗ. ಮಾಚಾಳ ಎಂಬುದನ್ನು ನಿರೂಪಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ.

* ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಯಾವ ರೀತಿಯ ಪರಿಕಲ್ಪನೆಯನ್ನು ಮತದಾರರ ಮುಂದಿಟ್ಟು ಮತಯಾಚನೆ ಮಾಡುತ್ತಿದ್ದೀರಿ?

ಮೋದಿ ಅವರಂತೆ ದೇವಲೋಕ, ಚಂದ್ರಲೋಕವನ್ನು ಧರೆಗೆ ಇಳಿಸುತ್ತೇನೆ ಎಂಬ ಸುಳ್ಳು ಆಶ್ವಾಸನೆ ನೀಡುವುದಿಲ್ಲ. ಒಂದೂವರೆ ತಿಂಗಳಲ್ಲಿ ವಿ.ವಿ.ಸಾಗರಕ್ಕೆ ಬರಲಿರುವ ಭದ್ರಾ ನೀರಲ್ಲಿ ಕೆರೆ–ಕಟ್ಟೆ ತುಂಬಿಸಬೇಕಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಿಸುತ್ತೇನೆ. ನಿರುದ್ಯೋಗ ಹೋಗಲಾಡಿಸಲು ದೊಡ್ಡ ಕೈಗಾರಿಕೆ ತರಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.

* ಮೋದಿ ಅಲೆಯನ್ನು ಎದುರಿಸಿ ಗೆಲುವು ಸಾಧಿಸುವ ವಿಶ್ವಾಸವಿದೆಯೇ?

ನಮ್ಮ ಕ್ಷೇತ್ರದಲ್ಲಿ ಮೋದಿ ಅಲೆ ಇಲ್ಲ ಎಂಬುದನ್ನು ಘಂಟಾಘೋಷವಾಗಿ ಹೇಳಬಲ್ಲೆ. ಭಾಷಣ ಮಾಡಿದ ಮಾತ್ರಕ್ಕೆ ಅಲೆ ಸೃಷ್ಟಿಯಾಗುವುದಿಲ್ಲ. ಕ್ಷೇತ್ರದಲ್ಲಿ ನಡೆದ 16 ಚುನಾವಣೆಯಲ್ಲಿ 11 ಬಾರಿ ಕಾಂಗ್ರೆಸ್‌ ಗೆದ್ದಿದೆ. ಆಕಸ್ಮಿಕವಾಗಿ ಒಮ್ಮೆ ಬಿಜೆಪಿಗೆ ಗೆದ್ದಿದೆ. ಜಾತಿವಾದಿಗಳಿಗೆ ಚಿತ್ರದುರ್ಗದ ಜನ ಪ್ರವೇಶ ನೀಡುವುದಿಲ್ಲ. ಮೋದಿ ಹೇಳುತ್ತಿರುವ ಸುಳ್ಳು ಜನರಿಗೆ ಅರ್ಥವಾಗಿದೆ. ಇಲ್ಲಿ ಯಾರ ಗಾಳಿಯೂ ಬಿಸುತ್ತಿಲ್ಲ.

* ‘ಮೈತ್ರಿ’ ಏರ್ಪಟ್ಟಿದ್ದರಿಂದ ಬಲ ಬಂದಿದೆ ಎಂದು ಬೀಗುತ್ತಿದ್ದೀರಿ. ಕಾಂಗ್ರೆಸ್‌–ಜೆಡಿಎಸ್‌ ಮತಗಳು ಒಗ್ಗೂಡುವ ಬಗ್ಗೆ ಅನುಮಾನವಿದೆ ಅಲ್ಲ?

ಈ ಬಗ್ಗೆ ಅನುಮಾನವೇ ಬೇಡ. ಎರಡು ಪಕ್ಷದ ಮತಗಳು ಖಂಡಿತ ಒಗ್ಗೂಡುತ್ತವೆ. ಜಾತ್ಯತೀತ ತತ್ವದಡಿ ಕೆಲಸ ಮಾಡುವ ಜೆಡಿಎಸ್‌ ಬಗ್ಗೆ ವಿಶ್ವಾಸವಿದೆ. ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಅನ್ಯಾಯ ಮಾಡದಂತೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಸೂಚನೆ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆ ಉಂಟಾಗುವ ಯಾವ ಕೆಲಸವನ್ನು ಎರಡೂ ಪಕ್ಷ ಮಾಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.