ADVERTISEMENT

ಐಟಿ, ಇಡಿ ದುರುಪಯೋಗ ಸಲ್ಲ: ನರೇಂದ್ರ ಮೋದಿ ವಿರುದ್ಧ ಪರಮೇಶ್ವರ್‌ ಗರಂ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 14:36 IST
Last Updated 13 ಏಪ್ರಿಲ್ 2019, 14:36 IST
ಜಿ.ಪರಮೇಶ್ವರ್‌
ಜಿ.ಪರಮೇಶ್ವರ್‌   

ಹಾಸನ: ರಾಜಕೀಯ ದುರುದ್ದೇಶಕ್ಕಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್ ಮುಖಂಡರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿಸಲಾಗುತ್ತಿದೆ. ಬಿಜೆಪಿ ತನ್ನ ಸ್ವಾರ್ಥಕ್ಕೆ ಈ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌ ಹೇಳಿದರು.

ಐಟಿ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದ ಸಿ.ಎಂ ಕುಮಾರಸ್ವಾಮಿ, ದಿನೇಶ್‌ ಗುಂಡೂರಾವ್‌, ಡಿ.ಕೆ.ಶಿವಕುಮಾರ್ ಹಾಗೂ ತಮಗೂ ನೋಟಿಸ್‌ ನೀಡಲಾಗಿದೆ. ಇದು ಬಿಜೆಪಿಯ ದಬ್ಬಾಳಿಕೆ ಆಗಿದ್ದು, ಧ್ವನಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಕಾಂಗ್ರೆಸ್‌ ಅವಧಿಯಲ್ಲಿ ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳು, ಯೋಜನೆ ಹಾಗೂ ಅಭಿವೃದ್ಧಿ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಬಿಜೆಪಿ ಮತ್ತೊಮ್ಮೆ ಮೋದಿ ಎಂಬ ಅಜೆಂಡಾ ಮುಂದಿಟ್ಟುಕೊಂಡು ಮತ ಕೇಳಲು ಮುಂದಾಗಿದೆ. ಐದು ವರ್ಷಗಳಿಂದ ಜನತೆಗೆ ಅವರು ಕೊಟ್ಟಿರುವ ಕಾರ್ಯಕ್ರಮಗಳು ಏನು? ಮೋದಿಗೆ ಮತ ಕೊಡಬೇಕೋ ಅಥವಾ ದೇಶದ ಅಭಿವೃದ್ಧಿ ಹಾಗೂ ಸಿದ್ಧಾಂತಕ್ಕೆ ಮತ ಕೊಡಬೇಕಾ ಎಂಬುದಕ್ಕೆ ಜನರು ಉತ್ತರಿಸುವರು ಎಂದು ಹೇಳಿದರು.

ADVERTISEMENT

ಭಾರತ ಬಹುದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಚುನಾವಣೆ ಬಂದಿದ್ದು, ಈ ಚುನಾವಣೆಯನ್ನ ಇಡೀ ವಿಶ್ವವೇ ಗಮನಿಸುತ್ತಿದೆ. ಒಂದು ದಾರಿ ಅಭಿವೃದ್ಧಿ ಕಡೆಯಾದರೆ, ಮತ್ತೊಂದು ಸರ್ವಾಧಿಕಾರದ ಧೋರಣೆ ಉದ್ದೇಶ ಇಟ್ಟುಕೊಂಡು ಸಮಾಜ ವಿಭಜಿಸಲು ಹೊರಟಿರುವ ದಾರಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರತ್ಯೇಕ ಪ್ರತ್ಯೇಕ ಲಿಂಗಾಯತ ಹಾಗೂ ವೀರಶೈವ ಧರ್ಮದ ವಿಚಾರ ಸಂಬಂಧ ಗೃಹ ಸಚಿವ ಎಂ.ಬಿ.ಪಾಟೀಲ್ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಡುವಿನ ವಾಕ್ಸಮರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್‌, ಅದು ಅವರ ವೈಯಕ್ತಿಕ ಅಭಿಪ್ರಾಯ. ಪ್ರತ್ಯೇಕ ಲಿಂಗಾಯತ ಹಾಗೂ ವೀರಶೈವ ಧರ್ಮದ ಹೋರಾಟಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗಲೇ ಹೇಳಿದ್ದೆ. ಇದೀಗ ಚುನಾವಣೆ ನಡೆಯುತ್ತಿರುವುದು ದೇಶದ ಹಿತಕ್ಕಾಗಿ. ಇದರ ಬಗ್ಗೆ ಮೊದಲು ಯೋಚಿಸೋಣ ಎಂದು ನುಡಿದರು.

ಮೂರು ದಶಕಗಳ ರಾಜಕಾರಣ ಅನುಭವದಲ್ಲಿ ಅಭಿವೃದ್ಧಿ, ಸಾಮಾಜಿಕ ನ್ಯಾಯದ ಕಡೆ ತೀರ್ಪು ಬರುತ್ತಿದೆ. ಹಾಸನ ಕ್ಷೇತ್ರದ ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್ ಬಹುಮತಗಳಿಂದ ಗೆಲುವು ಸಾಧಿಸುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಮೈತ್ರಿ ಸರ್ಕಾರ ಬೀಳುತ್ತದೆ ಎಂಬ ಯಡಿಯೂರಪ್ಪ ಹೇಳಿಕೆಗೆ ಕಿಡಿಕಾರಿದ ಅವರು, ಮುಂದಿನ ನಾಲ್ಕು ವರ್ಷ ಸರ್ಕಾರ ಸುಭದ್ರವಾಗಿರುತ್ತದೆ. ಬಿಜೆಪಿ ಅಸ್ಥಿರಗೊಳಿಸಲು ಯತ್ನಿಸಿದರೂ ಯಶಸ್ಸು ಸಿಗುವುದಿಲ್ಲ. ಕಳೆದ ಅವಧಿಗೆ ಹೋಲಿಸಿದರೆ ಈ ಬಾರಿ ಬಿಜೆಪಿಗೆ ಕಡಿಮೆ ಸ್ಥಾನ ಬರಲಿದೆ ಎಂದು ವಿಶ್ಲೇಷಿಸಿದರು.

ಮೈತ್ರಿಯಿಂದ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರರಲ್ಲಿ ಸ್ವಲ್ಪ ಮಟ್ಟಿಗೆ ಅಸಮಾಧಾನ ಇದೆ. ದೇಶದ ಹಿತದೃಷ್ಟಿಯಿಂದ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ತುಮಕೂರಿನಲ್ಲಿ ದೇವೇಗೌಡರು ಗೆಲುವು ಸಾಧಿಸುತ್ತಾರೆ. ಹೇಮಾವತಿ ನದಿ ನೀರಿಗೆ ಅಡ್ಡಿ ಪಡಿಸಿದ್ದರು ಎಂದು ಬಿಜೆಪಿ ಅಪ್ರಪಚಾರ ಮಾಡುತ್ತಿದೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ, ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಆನಂದ್, ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್, ಮುಖಂಡರಾದ ಎಚ್.ಸಿ.ಮಹದೇವಪ್ಪ, ಎಚ್‌.ಕೆ.ಜವರೇಗೌಡ, ಎಚ್‌.ಕೆ.ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.