ADVERTISEMENT

ಜೋಶಿಗೆ 2 ಲಕ್ಷ ‌ಮತಗಳ ಅಂತರದಿಂದ ಗೆಲುವು: ಮಲ್ಕಾಪುರೆ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 12:13 IST
Last Updated 14 ಏಪ್ರಿಲ್ 2019, 12:13 IST

ಹುಬ್ಬಳ್ಳಿ: ಮುಂಬೈ ಕರ್ನಾಟಕದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಪಡೆಯುತ್ತಾರೆ. ಉತ್ತಮ ಕೆಲಸ ಮಾಡಿರುವ ಪ್ರಹ್ಲಾದ ಜೋಶಿ ಈ ಬಾರಿ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದು ವಿಧಾನ ಪರಿಷತ್‌ ಸದಸ್ಯ ರಘುನಾಥ ಮಲ್ಕಾಫುರೆ ಭವಿಷ್ಯ ನುಡಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹೈದರಾಬಾದ್‌ ಕರ್ನಾಟಕದ ಐದು ಕ್ಷೇತ್ರಗಳ ಪೈಕಿ ರಾಯಚೂರು ಮತ್ತು ಕಲಬುರ್ಗಿಯಲ್ಲಿ ಕಾಂಗ್ರೆಸ್‌ ಸಂಸದರಿದ್ದಾರೆ. ಈ ಬಾರಿ ಅವರು ಅಧಿಕಾರ ಕಳೆದುಕೊಳ್ಳುವುದು ಖಚಿತ. ಸೋಲಿಲ್ಲದ ಸರದಾರ ಎಂದು ಬೀಗುತ್ತಿರುವ ಮಲ್ಲಿಕಾರ್ಜುನ ಖರ್ಗೆಗೆ ಮತದಾರರು ಈ ಸಲ ಕಹಿ ನೀಡಲಿದ್ದಾರೆ’ ಎಂದರು.

‘ಕಲಬುರ್ಗಿ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಅನೇಕ ಹಿರಿಯ ನಾಯಕರಿದ್ದರೂ ಅವರು ಪ್ರಿಯಾಂಕ ಖರ್ಗೆ ಮಾತು ಕೇಳಬೇಕಾಗಿದೆ. ಪ್ರತಿ ಕೆಲಸದಲ್ಲೂ ಪ್ರಿಯಾಂಕ ಖರ್ಗೆ ಮೂಗು ತೂರಿಸುತ್ತಿರುವುದರಿಂದ ಆ ಪಕ್ಷದ ನಾಯಕರಿಗೆ ಉಸಿರುಗಟ್ಟಿಸುವ ವಾತಾವರಣವಿದೆ. ಆದ್ದರಿಂದ ಅನೇಕರು ಪಕ್ಷ ತೊರೆಯುತ್ತಿದ್ದಾರೆ. ಇದರಿಂದ ಮಲ್ಲಿಕಾರ್ಜುನ ಖರ್ಗೆಗೆ ಸೋಲು ಉಂಟಾಗಲಿದೆ’ ಎಂದರು.

ADVERTISEMENT

‘ನಮ್ಮ ಪಕ್ಷದಲ್ಲಿ ಹಿಂದುಳಿದ ವರ್ಗದವರಿಗೆ ಪ್ರಾಧಾನ್ಯತೆ ಸಿಗುತ್ತಿಲ್ಲ ಎಂದು ಸಿದ್ದರಾಮಯ್ಯ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಪಿ.ಸಿ. ಮೋಹನ್‌, ನಳಿನ್ ಕುಮಾರ ಕಟೀಲು ಹಿಂದುಳಿದವರಲ್ಲವೇ? ಹಿಂದುಳಿದವರಿಗೆ ಟಿಕೆಟ್‌ ಕೊಟ್ಟು ಸುಮ್ಮನಾಗುವುದಷ್ಟೇ ಅಲ್ಲ. ಗೆಲ್ಲುವ ಕ್ಷೇತ್ರಗಳಲ್ಲಿ ಅವರಿಗೆ ಟಿಕೆಟ್‌ ಕೊಡಬೇಕು’ ಎಂದರು.

ನಾಳೆ ಸಭೆ:

ಹಿಂದುಳಿದ ವರ್ಗಗಳ ಕಾರ್ಯಕರ್ತರ ಜೊತೆ ಚರ್ಚಿಸಲು ಏ. 16ರಂದು ಹುಬ್ಬಳ್ಳಿಯ ಗೋಕುಲ ಗಾರ್ಡನ್‌ (ಬೆಳಿಗ್ಗೆ 11ಕ್ಕೆ), ನವಲಗುಂದ (ಮ. 3ಕ್ಕೆ) ಮತ್ತು ಕುಂದಗೋಳದಲ್ಲಿ (ಸಂಜೆ 6ಕ್ಕೆ) ಸಭೆ ಜರುಗಲಿದೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಸಹ ವಕ್ತಾರ ತ್ರಿವಿಕ್ರಮ ಜೋಶಿ, ರಾಜ್ಯ ಉಪಾಧ್ಯಕ್ಷ ಮಾ. ನಾಗರಾಜ, ಒಬಿಸಿ ಮೋರ್ಚಾದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಸಿ. ಕುರ್ಲಗೇರಿ, ಮಾಧ್ಯಮ ಸಂಚಾಲಕ ಹನುಮಂತಪ್ಪ ದೊಡ್ಡಮನಿ, ಮುಖಂಡರಾದ ಸಿ.ಎನ್‌. ಶಾಗೊಟಿ, ಬಸವರಾಜ ಕರಡಿಕೊಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.