ADVERTISEMENT

ಜೆಡಿಎಸ್‌ಗೆ ನಿಷ್ಠಾವಂತರ ಶಾಪ: ಜ್ಯೋತಿರೆಡ್ಡಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2014, 19:30 IST
Last Updated 30 ಮಾರ್ಚ್ 2014, 19:30 IST
ಮಾಜಿ ಶಾಸಕಿ, ಜೆಡಿಎಸ್‌ನ ಜ್ಯೋತಿ ರೆಡ್ಡಿ ಅವರು ಭಾನುವಾರ ಬೆಂಗಳೂರಿನಲ್ಲಿ ಬಿಜೆಪಿ ಸೇರಿದರು. ಶಾಸಕರಾದ ಎಸ್‌.ಆರ್‌. ವಿಶ್ವನಾಥ್‌, ಆರ್‌. ಅಶೋಕ ಮತ್ತಿತರರು ಚಿತ್ರದಲ್ಲಿದ್ದಾರೆ. –ಪ್ರಜಾವಾಣಿ ಚಿತ್ರ
ಮಾಜಿ ಶಾಸಕಿ, ಜೆಡಿಎಸ್‌ನ ಜ್ಯೋತಿ ರೆಡ್ಡಿ ಅವರು ಭಾನುವಾರ ಬೆಂಗಳೂರಿನಲ್ಲಿ ಬಿಜೆಪಿ ಸೇರಿದರು. ಶಾಸಕರಾದ ಎಸ್‌.ಆರ್‌. ವಿಶ್ವನಾಥ್‌, ಆರ್‌. ಅಶೋಕ ಮತ್ತಿತರರು ಚಿತ್ರದಲ್ಲಿದ್ದಾರೆ. –ಪ್ರಜಾವಾಣಿ ಚಿತ್ರ   

ಬೆಂಗಳೂರು: ಜೆಡಿಎಸ್‌ಗೆ ಕೇವಲ ಹಣಬಲ ಇರುವವರನ್ನು ಸೇರಿಸಿಕೊಳ್ಳ­ಲಾಗುತ್ತಿದ್ದು, ನಿಷ್ಠಾವಂತ­­ರನ್ನು ಕಡೆಗಣಿಸ­ಲಾಗಿದೆ. ನಿಷ್ಠಾವಂತರ ನೋವಿನ ಶಾಪ ಆ ಪಕ್ಷಕ್ಕೆ ತಟ್ಟುವುದು ಖಚಿತ ಎಂದು ಬಿಜೆಪಿಗೆ ಸೇರ್ಪಡೆಯಾದ ಗೌರಿ­ಬಿದನೂರಿನ ಮಾಜಿ ಶಾಸಕಿ ಎನ್‌. ಜ್ಯೋತಿ ರೆಡ್ಡಿ ನುಡಿದರು.

ಭಾನುವಾರ ನಗರದ ಬಿಜೆಪಿ ಕಚೇರಿಯಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದ ನಂತರ ಸುದ್ದಿ­ಗಾರ­ರೊಂದಿಗೆ  ಮಾತನಾಡಿದ ಅವರು, ‘ಸುಮಾರು 28 ವರ್ಷಗಳ ಕಾಲ ಜನತಾ ಪರಿವಾರದಲ್ಲಿದ್ದೆ. ಯಾವುದೇ ಕಾರಣಕ್ಕೂ ಪಕ್ಷ ಬದಲಾಯಿಸಿರಲಿಲ್ಲ. ಆದರೆ, ಹಣ ಬಲ ಇರುವವರಿಗೆ ಆದ್ಯತೆ ದೊರೆತ ಕಾರಣ ಮನನೊಂದು ಜೆಡಿಎಸ್‌ ತ್ಯಜಿಸಿರುವೆ’ ಎಂದು ತಿಳಿಸಿದರು.

‘ರಿಯಲ್‌ ಎಸ್ಟೇಟ್‌ನಲ್ಲಿ ತೊಡಗಿ­ದ್ದವರು ಪಕ್ಷಕ್ಕೆ ಬಂದು ವಾತಾವರಣ­ವನ್ನೇ ಹಾಳು ಮಾಡಿದ್ದಾರೆ. ಈ ವ್ಯಕ್ತಿಗಳಿಂದ  ಗ್ರಾಮೀಣ ಪ್ರದೇಶದಲ್ಲಿನ ಯುವಕರು  ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹವರಿಗೆ ಪಕ್ಷದಲ್ಲಿ ಆದ್ಯತೆ ನೀಡಬಾರದು ಎಂದು ವರಿಷ್ಠರ ಗಮನಕ್ಕೆ ತಂದಿದ್ದೆ. ಆದರೆ, ನನ್ನ ಮಾತಿಗೆ ಬೆಲೆ ದೊರೆ­ಯಲಿಲ್ಲ. ಪಕ್ಷದ ಕಾರ್ಯಕರ್ತರು ಸಹ ಇವರನ್ನು ಮಾನಸಿಕವಾಗಿ ಒಪ್ಪಿಕೊಂಡಿಲ್ಲ’ ಎಂದು ಜೆಡಿಎಸ್‌ಗೆ ಇತ್ತೀಚೆಗೆ ಸೇರಿರುವ  ಮುಖಂಡ ಜೈಪಾಲ ರೆಡ್ಡಿ ಅವರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.

ತತ್ವ–ಸಿದ್ದಾಂತ ಕಡೆಗಣಿಸಿರುವ ಜೆಡಿಎಸ್‌, ದೀನ ದಲಿತರ ಮತ್ತು ರೈತರ ವಿರುದ್ಧವಾಗಿ ಕೆಲಸ ಮಾಡು­ತ್ತಿದೆ. ಕೆಲವರು ಮಾತ್ರ ಇಡೀ ಪಕ್ಷವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ ಎಂದು ಟೀಕಿಸಿದರು.

ಮಾಜಿ ಸಚಿವ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್‌. ಬಚ್ಚೇಗೌಡ ಮಾತನಾಡಿ, ‘ಜ್ಯೋತಿ ರೆಡ್ಡಿ ಅವರ ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರಿಂದ ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದಾರೆ. ಇದರಿಂದ ಪಕ್ಷಕ್ಕೆ ಮತ್ತಷ್ಟು ಬಲ ದೊರೆತಿದೆ’ ಎಂದರು.

ಇದೇ ವೇಳೆ ಕೆಎಂಎಫ್‌ ಮಾಜಿ ನಿರ್ದೇಶಕ ನಾಗರಾಜ ರೆಡ್ಡಿ ಸಹ ಬಿಜೆಪಿ ಸೇರಿದರು. ಚಿಕ್ಕ­­ಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿನಾರಾಯಣ ರೆಡ್ಡಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.