ಮಂಗಳೂರು: ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಆಯ್ಕಗೆ ಭಾನುವಾರ ನಡೆದ ಆಂತರಿಕ ಚುನಾವಣೆಯಲ್ಲಿ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ, ಮತ್ತೊಬ್ಬ ಸ್ಪರ್ಧಿ ಯು.ಕೆ.ಮೋನು ಅವರನ್ನು ಪರಾಭವಗೊಳಿಸಿದರು.
598 ಮಂದಿಗೆ ಮತದಾನದ ಅವಕಾಶ ಇತ್ತು. 547 ಮಂದಿ ಮತ ಚಲಾಯಿಸಿದರು. 7 ಮತಗಳು ತಿರಸ್ಕೃತಗೊಂಡವು. ಜನಾರ್ದನ ಪೂಜಾರಿ ಅವರು 478 ಮತಗಳನ್ನು ಗಳಿಸಿದ್ದು, ಯು.ಕೆ.ಮೋನು 62 ಮತಗಳನ್ನು ಪಡೆಯಲಷ್ಟೇ ಶಕ್ತರಾದರು.
ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಅವರ ಪುತ್ರ ಹರ್ಷ ಮೊಯಿಲಿ ನಾಮಪತ್ರ ಸಲ್ಲಿಸುವ ಮೂಲಕ ಆಂತರಿಕ ಚುನಾವಣೆಯಲ್ಲೇ ತ್ರಿಕೋನ ಸ್ಪರ್ಧೆ ಉಂಟಾಗಿತ್ತು. ಹರ್ಷ ಮೊಯಿಲಿ ಅವರ ನಾಮಪತ್ರ ತಿರಸ್ಕೃತಗೊಂಡು ಜನಾರ್ದನ ಪೂಜಾರಿ ಮತ್ತು ಯು.ಕೆ.ಮೋನು ನಡುವೆ ನೇರ ಸ್ಪರ್ಧೆ ಉಂಟಾಗಿತ್ತು.
ನಗರದ ರೊಜಾರಿಯೊ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬೆಳಿಗ್ಗೆ 10ರಿಂದ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿತು. 11 ಗಂಟೆಗೆ ನಡೆದ ಸಭೆಯಲ್ಲಿ ಮತ ಯಾಚಿಸಲು ಇಬ್ಬರೂ ಅಭ್ಯರ್ಥಿಗಳಿಗೆ 7 ನಿಮಿಷ ಅವಕಾಶ ನೀಡಲಾಯಿತು. 11.35ಕ್ಕೆ ಆರಂಭವಾದ ವಿಧಾನಸಭಾ ಕ್ಷೇತ್ರವಾರು ಮತದಾನ ಪ್ರಕ್ರಿಯೆ 12.30ರ ಸುಮಾರಿಗೆ ಮುಕ್ತಾಯವಾಯಿತು. ಮಧ್ಯಾಹ್ನ 2 ಗಂಟೆಗೆ ಫಲಿತಾಂಶ ಹೊರಬಿದ್ದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.