ADVERTISEMENT

ಮೌಲ್ವಿಗಳಿಂದ ಮತ ಜಾಗೃತಿ

ಶ್ರೀಪಾದ ಯರೇಕುಪ್ಪಿ
Published 15 ಮಾರ್ಚ್ 2014, 19:30 IST
Last Updated 15 ಮಾರ್ಚ್ 2014, 19:30 IST

ಬೆಳಗಾವಿ:  ‘ಪ್ರತಿಯೊಬ್ಬರೂ ಮತ­ದಾನ ಮಾಡಲೇಬೇಕು. ಸಂವಿಧಾನ ನೀಡಿರುವ ಹಕ್ಕನ್ನು ಚಲಾಯಿಸಲೇ­ಬೇಕು. ನಿಮಗಿಷ್ಟವಾದ ಪಕ್ಷಕ್ಕೆ, ಅಭ್ಯರ್ಥಿಗೆ ಮತ ಹಾಕಿ. ಮತದಾನ­ದಿಂದ ಯಾರೂ ದೂರ ಉಳಿಯಬಾರದು...’

ಇದು ಮತದಾರರಲ್ಲಿ ಜಾಗೃತಿ ಉಂಟುಮಾಡುವ ಚುನಾವಣಾ ಆಯೋಗದ ‘ಸ್ವೀಪ್‌’ ಕಾರ್ಯಕ್ರಮದ ಘೋಷವಾಕ್ಯವಲ್ಲ. ಮುಸ್ಲಿಂ ಸಮಾ­ಜದ ಧರ್ಮಗುರುಗಳು ನೀಡುತ್ತಿರುವ ಸಂದೇಶವಿದು. ಮತದಾರರ ಜಾಗೃತಿಗಾಗಿ ಇಸ್ಲಾಂ ಧರ್ಮಗುರುಗಳು ಪ್ರತಿನಿತ್ಯವೂ ಮತದಾನದ ಮಹತ್ವವನ್ನು ಸಾರುತ್ತಿದ್ದಾರೆ.

‘ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೋ? ಇಲ್ಲವೋ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಹೆಸರು ಇರದಿದ್ದರೆ ಕೂಡಲೇ ನೋಂದಾಯಿಸಿ­ಕೊಳ್ಳಬೇಕು. ಕಡ್ಡಾಯ­ವಾಗಿ ಮತ ಚಲಾಯಿಸಬೇಕು. ಬೇರೆ ಊರಿಗೆ ಹೋದವರು ಸಹ ಮತದಾನಕ್ಕೆ ಬರಬೇಕು’ ಎಂದು ಧರ್ಮಗುರುಗಳು ಪ್ರತಿ ಶುಕ್ರವಾರ ಮಸೀದಿಗಳಲ್ಲಿ ನಡೆಯುವ (ಜುಮ್ಮಾ) ನಮಾಜ್‌ ಸಂದರ್ಭದಲ್ಲಿ ಸಂದೇಶ ನೀಡುತ್ತಿದ್ದಾರೆ.

‘ರಾಜ್ಯದಾದ್ಯಂತ ಎಲ್ಲ ಮಸೀದಿ­ಗಳಲ್ಲೂ  ಮತದಾರರ ಜಾಗೃತಿ ಕಾರ್ಯ­ಕ್ರಮ ನಡೆಯುತ್ತಿದೆ. ಮತ­ದಾನದ ಹಕ್ಕಿನಿಂದ ಯಾರೊಬ್ಬರೂ ವಂಚಿತರಾಗಬಾರದು ಎಂಬ ಉದ್ದೇಶ­ದಿಂದ ಈ ಸಂದೇಶ ನೀಡಲಾಗುತ್ತಿದೆ’ ಎಂದು ಇಲ್ಲಿನ ಪೊಲೀಸ್‌ ಮುಖ್ಯ ಕಚೇರಿಯ ಶಾಹಿ ಮಸೀದಿಯ ಇಮಾಮ್‌್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಡ್ಡಾಯವಾಗಿ ಮತ ಹಾಕಬೇಕು ಎಂದು ಮಾತ್ರ ಹೇಳುತ್ತಿದ್ದೇವೆ. ಇಂತಹದೇ ಪಕ್ಷಕ್ಕೆ, ಅಭ್ಯರ್ಥಿಗೆ ಮತ ಹಾಕಿ ಎಂದು ಎಲ್ಲಿಯೂ ಹೇಳುತ್ತಿಲ್ಲ. ರಾಷ್ಟ್ರದ ಪ್ರಗತಿಗೆ ಪೂರಕವಾದ ಹಾಗೂ ಸಮಾಜದ ಅಭಿವೃದ್ಧಿಗೆ ನೆರವಾಗುವ, ಸಾಮಾಜಿಕ ಕಳಕಳಿ ಹೊಂದಿರು­ವವರನ್ನು ಆಯ್ಕೆ ಮಾಡಬೇಕು ಎಂದು ಮನವರಿಕೆ ಮಾಡಿಕೊಡಲಾಗುತ್ತಿದೆ’ ಎಂದು ಅವರು ಹೇಳಿದರು.

‘ಮಸೀದಿಗಳಲ್ಲಿ ನಾವು ಯಾವುದೇ ಪಕ್ಷದ ಪರ ಪ್ರಚಾರ ಮಾಡುತ್ತಿಲ್ಲ. ಸಂವಿಧಾನ ನೀಡಿರುವ ಹಕ್ಕನ್ನು ಚಲಾ­ಯಿಸುವಂತೆ ಸಮಾಜ ಬಾಂಧವರಿಗೆ ತಿಳಿಸುತ್ತಿದ್ದೇವೆ. ದೇಶದ ಅಭಿವೃದ್ಧಿ­ಯಲ್ಲಿ ನಮ್ಮದೂ ಪಾಲು ಇರಲಿ ಎಂಬ ಉದ್ದೇಶದಿಂದ ಈ ಕೆಲಸ ಮಾಡುತ್ತಿದ್ದೇವೆ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.