ADVERTISEMENT

ಸೋನಿಯಾ – ಸುಷ್ಮಾ ಸಮರದ ನೆಲ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 19:30 IST
Last Updated 12 ಮಾರ್ಚ್ 2014, 19:30 IST

ಬಳ್ಳಾರಿ: ಒಂದೂವರೆ ದಶಕದ ಹಿಂದೆ, ಅಂದರೆ 1999ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಬಿಜೆಪಿಯ ಸುಷ್ಮಾ ಸ್ವರಾಜ್ ಅವರ ಸ್ಪರ್ಧೆ­-ಯಿಂದಾಗಿ ರಾಷ್ಟ್ರದಾದ್ಯಂತ ಸುದ್ದಿಯಾಗಿತ್ತು ಬಳ್ಳಾರಿ ಲೋಕಸಭೆ ಕ್ಷೇತ್ರ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಲ್ಲಿನ ಗಣಿ ದೂಳು ಇಡೀ ದೇಶದಲ್ಲಿಯೇ ಇನ್ನೊಂದು ರೀತಿಯ ಸುದ್ದಿಗೆ ಕಾರಣವಾಗಿದೆ. ಘಟಾನುಘಟಿ ರಾಜಕಾರಣಿಗಳು,  ಮಾಜಿ ಮಂತ್ರಿ, ಹಾಲಿ ಶಾಸಕರು,  ಅಧಿಕಾರಿಗಳು ಜೈಲು ಸೇರುವಂತೆ ಮಾಡಿದೆ.

ಒಂದು ಕಾಲದಲ್ಲಿ ಇದು ಕಾಂಗ್ರೆಸ್‌ ಪಾಲಿಗೆ ಭದ್ರ ಕ್ಷೇತ್ರ. ಹೀಗಾಗಿ ಆ ಪಕ್ಷದಿಂದ ಸ್ಪರ್ಧಿಸಿದ್ದ ‘ಅನಾಮಿಕರೂ’ ಇಲ್ಲಿ ಅನಾಯಾಸ­ವಾಗಿ ಗೆದ್ದು ಬಂದಿದ್ದರು. ಕಾಂಗ್ರೆಸ್‌ಗೆ ಎದುರಾಗಿ ಸ್ಪರ್ಧಿಸಿದ್ದ ಘಟಾನುಘಟಿಗಳೂ ಇಲ್ಲಿ ಸೋಲುಂಡಿದ್ದರು. ಬ್ರಿಟಿಷರಿಂದ ‘ರಾವ್‌ಬಹದ್ದೂರ್‌’ ಪದವಿ ಪಡೆದಿದ್ದ ವೈ.ಮಹಾಬಳೇಶ್ವರಪ್ಪ ಹಾಗೆ ಸೋತವರಲ್ಲಿ ಪ್ರಮುಖರು. ಅದೂ ಒಮ್ಮೆ ಅಲ್ಲ.  ನಾಲ್ಕು ಬಾರಿ (ಪಕ್ಷೇತರರಾಗಿ  1952, 1957ರಲ್ಲಿ ಮತ್ತು  ಸ್ವತಂತ್ರ ಪಕ್ಷದ ಅಭ್ಯರ್ಥಿಯಾಗಿ 1967, 1971ರಲ್ಲಿ).

ಅವರು ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಗೆ ಕಾರಣವಾದ ವೀರಶೈವ ವಿದ್ಯಾವರ್ಧಕ ಸಂಘದ ಸಂಸ್ಥಾಪಕರಲ್ಲಿ ಒಬ್ಬರು. ಅಂಥವರನ್ನೂ ಬಳ್ಳಾರಿ ಜನ ಕೈ ಹಿಡಿದಿರಲಿಲ್ಲ. ಆದರೆ, ಮುಂದೆ ಅದೇ ವೀರಶೈವ ವಿದ್ಯಾವರ್ಧಕ ಸಂಘದ ಗುಮಾಸ್ತರಾಗಿದ್ದ ಕೋಳೂರು ಬಸವನಗೌಡ 2000ರಲ್ಲಿ ಸೋನಿಯಾ ರಾಜೀನಾಮೆಯಿಂದಾಗಿ ನಡೆದಿದ್ದ ಉಪ ಚುನಾವಣೆ­ಯಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದರು.

ಈ ಕ್ಷೇತ್ರದಲ್ಲಿ ಸಂಡೂರು ರಾಜಮನೆತನದ ಎಂ.ವೈ. ಘೋರ್ಪಡೆ­ಯವರೂ ಸೋತಿದ್ದಾರೆ.  ಜಿಲ್ಲೆಯ ಪ್ರಭಾವಿ ರಾಜಕಾರಣಿ­ಯಾಗಿದ್ದ ಎನ್‌.ತಿಪ್ಪಣ್ಣ ನಾಲ್ಕು ಬಾರಿ ಪರಾಭವ ಅನುಭವಿಸಿ­ದ್ದಾರೆ. ‘ಮುತ್ಸದ್ಧಿ ರಾಜಕಾರಣಿ’ ಎಂದೇ ಹೆಸರಾ­ಗಿದ್ದ ಎಂ.ಪಿ. ಪ್ರಕಾಶ್‌ ಒಮ್ಮೆ ಸ್ಪರ್ಧಿಸಿದರೂ ಜಯ ದಕ್ಕಿಸಿ­ಕೊಳ್ಳಲಾಗಲಿಲ್ಲ. ತುರ್ತು ಪರಿಸ್ಥಿತಿಯ ನಂತರ 1977ರಲ್ಲಿ ನಡೆದಿದ್ದ ಚುನಾವಣೆ­ಯಲ್ಲಿ ಕಾಂಗ್ರೆಸ್‌ನ ಎಂ.ವೈ. ಘೋರ್ಪಡೆಯವರ ಬೆಂಬಲ­ದಿಂದ  ಸ್ಪರ್ಧಿಸಿದ್ದ ಅವರ ಆಪ್ತ ಕೆ.ಎಸ್‌. ವೀರಭದ್ರಪ್ಪ 1.45 ಲಕ್ಷ ಮತಗಳ ಅಂತರದಲ್ಲಿ ಜಯಶಾಲಿಯಾಗಿದ್ದರು. ವಿಶೇಷ ಎಂದರೆ ಅವರು ಆಗ ಕ್ಷೇತ್ರದಲ್ಲಿ ಅಷ್ಟೇನೂ ಪರಿಚಿತ­ರಾಗಿರಲಿಲ್ಲ.

ಆದರೆ, ಮುಂದೆ 1980ರ ಚುನಾವಣೆಯಲ್ಲಿ ಅರಸು ಕಾಂಗ್ರೆಸ್‌­ನಿಂದ ಸ್ಪರ್ಧಿಸಿದ್ದ   ಎಂ.ವೈ. ಘೋರ್ಪಡೆ ಅವರನ್ನು ಸೋಲಿಸ­ಲೇಬೇಕೆಂದು ಸ್ವತಃ ಇಂದಿರಾ ಗಾಂಧಿ ಅವರೇ ಆಸಕ್ತಿ ತಾಳಿದ್ದರು. ರಾಜಕೀಯಕ್ಕೆ ಅಪರಿಚಿತರಾಗಿದ್ದ ಅವರ ಸೋದರ ರಣಜಿತ್‌ ಘೋರ್ಪಡೆ ಅವರಿಗೆ ಟಿಕೆಟ್‌ ನೀಡಿ ಗೆಲ್ಲಿಸಿದ್ದರು.

ಸ್ಪರ್ಧೆಯಿಂದ ಹಿಂದೆ ಸರಿದರು: 1952ರಿಂದ 1962ರವರೆಗೆ ಸತತ ಮೂರು ಚುನಾವಣೆಗಳಲ್ಲಿ ಗೆದ್ದು ‘ಹ್ಯಾಟ್ರಿಕ್’ ಸಾಧಿಸಿದ್ದ ಸ್ವಾತಂತ್ರ್ಯ ಹೋರಾಟಗಾರ, ಕಾಂಗ್ರೆಸ್‌ ಸಂಸದೀಯ ಮಂಡಳಿ ಕಾರ್ಯದರ್ಶಿಯಾಗಿದ್ದ ಟೇಕೂರ್‌ ಸುಬ್ರಹ್ಮಣ್ಯಂ ಅವರು, ‘ಇನ್ನು ರಾಜಕೀಯ ಸಾಕು’ ಎಂದು 1967ರ ಚುನಾವಣೆ ಕಣದಿಂದ ಹಿಂದೆ ಸರಿದಿದ್ದರು. ಆಗ ಬೆಂಗಳೂರಿನಲ್ಲಿದ್ದ ಶಿಕ್ಷಣ ತಜ್ಞ ಡಾ.ವಿ.ಕೆ. ಆರ್‌.ವಿ. ರಾವ್ ಅವರನ್ನು ಇಲ್ಲಿಂದ ಕಣಕ್ಕಿಳಿಸಿ, ಗೆದ್ದ ಮೊದಲ ಬಾರಿಯೇ ಕೇಂದ್ರದಲ್ಲಿ ಶಿಕ್ಷಣ ಖಾತೆ ನೀಡಲಾಗಿತ್ತು. ಮುಂದೆ 1971ರಲ್ಲಿ ನಡೆದಿದ್ದ ಚುನಾವಣೆ­ಯಲ್ಲೂ ರಾವ್‌ ಜಯಿಸಿದ್ದರು.

1996ರ ಚುನಾವಣೆಯೊಂದಿಗೇ ಮುಂಚೂಣಿ ರಾಜಕಾರಣ ಪ್ರವೇಶಿಸಿ ಗೆದ್ದಿದ್ದ ಕೆ.ಸಿ. ಕೊಂಡಯ್ಯ, 1998ರಲ್ಲಿ ಎದುರಾದ ಮಧ್ಯಂತರ ಚುನಾವಣೆಯಲ್ಲೂ ಗೆದ್ದಿದ್ದರು. 1999ರ ಚುನಾವಣೆಯಲ್ಲಿ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗಾಗಿ ‘ಕ್ಷೇತ್ರ ತ್ಯಾಗ’ ಮಾಡಿ, ರಾಜ್ಯಸಭೆ ಸದಸ್ಯರಾದರು.

1999ರ ಚುನಾವಣೆಯಲ್ಲಿ ಸೋನಿಯಾ ಬಳ್ಳಾರಿ ಮಾತ್ರ­ವಲ್ಲದೆ ಉತ್ತರ ಪ್ರದೇಶದ ಅಮೇಠಿಯಲ್ಲಿಯೂ ಸ್ಪರ್ಧಿಸಿ ಗೆದ್ದಿದ್ದರು. ಅಮೇಠಿ ಉಳಿಸಿಕೊಂಡು ಬಳ್ಳಾರಿ ಕ್ಷೇತ್ರದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದರಿಂದ ನಡೆದ ಉಪ ಚುನಾವಣೆಯಲ್ಲಿಯೂ ಕಾಂಗ್ರೆಸ್‌ಗೇ ಜಯ ಲಭಿಸಿತ್ತು.

ಆದರೆ, ‘ಸೋತರೂ ಪರವಾಗಿಲ್ಲ. ಪ್ರತಿ ವರ್ಷ ನಡೆಯುವ ವರಮಹಾಲಕ್ಷ್ಮಿ ಪೂಜೆಗೆ  ತವರು ಮನೆಯಂತಿರುವ ಬಳ್ಳಾರಿಗೆ ಬರುತ್ತೇನೆ’ ಎಂದು ವಾಗ್ದಾನ ಮಾಡಿದ್ದ ಸುಷ್ಮಾ, ದಶಕದ ಕಾಲ ಮಾತಿನಂತೆ ನಡೆದುಕೊಂಡ ಪರಿಣಾಮ ಮುಂದಿನ ಎರಡು ಚುನಾವಣೆಗಳಲ್ಲಿ ಮತದಾರರು ಬಿಜೆಪಿಯತ್ತ ವಾಲಿ ಕಾಂಗ್ರೆಸ್ಸನ್ನು ಸೋಲಿಸಿದ್ದರು.

1952 ರಿಂದ 1999ರ ವರೆಗೆ ನಡೆದ ಚುನಾವಣೆಗಳಲ್ಲಿ ಸತತ­ವಾಗಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದ ಈ ‘ಭದ್ರ­ಕೋಟೆ’ ಛಿದ್ರವಾಗಿತ್ತು. ಇದರ ಹಿಂದೆ, ‘ಮತ ನೀಡಿ ಗೆಲ್ಲಿಸಿದ ಜನರಿಗೆ ಅಭಿನಂದನೆ ಸಲ್ಲಿಸಲೂ ಸೋನಿಯಾ ಬರಲಿಲ್ಲ’  ಎಂಬ ಬಿಜೆಪಿ ಮುಖಂಡರ ಪ್ರಚಾರವೂ ಸಾಕಷ್ಟು ಕೆಲಸ ಮಾಡಿತ್ತು.


ಸುಷ್ಮಾ ‘ನಾಮಬಲ’ದಿಂದಲೇ 2004ರಲ್ಲಿ ನಡೆದಿದ್ದ ವಿಧಾನ­ಸಭೆ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಬಿ.ಶ್ರೀರಾಮುಲು ಜಯಿಸುವ ಮೂಲಕ ಬಿಜೆಪಿ ಪ್ರಾಬಲ್ಯ ಮೆರೆಯುವಂತೆ ಮಾಡಿದ್ದಲ್ಲದೆ, ರೆಡ್ಡಿ ಸಹೋದರರೊಂದಿಗೆ ಪಕ್ಷವನ್ನು ಬಲಪಡಿಸಿ, ಜೆಡಿಎಸ್‌– ಬಿಜೆಪಿ ಸಮ್ಮಿಶ್ರ ಸರ್ಕಾರ­ದಲ್ಲಿ ಸಚಿವರೂ ಆದರು.

ADVERTISEMENT

ಆದರೆ 2008ರಲ್ಲಿ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಶ್ರೀರಾಮುಲು ಹಾಗೂ ರೆಡ್ಡಿ ಸಹೋದರರು ಸಚಿವರಾಗಿದ್ದರೂ 2009ರ ಲೋಕಸಭೆ ಚುನಾವಣೆಯಲ್ಲಿ ರಾಮುಲು ಸೋದರಿ ಜೆ.ಶಾಂತಾ ಇಲ್ಲಿ ಗೆಲ್ಲಲು ಬಹಳ ಪ್ರಯಾಸಪಡಬೇಕಾಯಿತು.
ಆ ಚುನಾವಣೆಯಲ್ಲಿ  ಕಾಂಗ್ರೆಸ್‌ ಅಭ್ಯರ್ಥಿ, ಒಡಿಶಾ ಹೈ­ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ,  ಚಿತ್ರದುರ್ಗದ ಮಾಜಿ ಸಂಸದ ಎನ್‌.ವೈ. ಹನುಮಂತಪ್ಪ (ಈ ಸಲವೂ ಅವರೇ ಕಾಂಗ್ರೆಸ್‌ ಅಭ್ಯರ್ಥಿ) 2,245 ಅತ್ಯಲ್ಪ ಮತಗಳ ಅಂತರದಲ್ಲಿ ಸೋಲುಂಡಿದ್ದರು.

‘ಬಿಜೆಪಿ ಸರ್ಕಾರವೇ ಅಸ್ತಿತ್ವದಲ್ಲಿ ಇರುವುದರಿಂದ ಆಡಳಿತ ಯಂತ್ರದ ದುರುಪಯೋಗವಾಗಿದೆ. ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ’ ಎಂದು ಆರೋಪಿಸಿ ಆಗ ಹನುಮಂತಪ್ಪ ಪರ ಏಜೆಂಟ್‌  ಹೈಕೋರ್ಟ್‌ ಮೊರೆ ಹೋಗಿದ್ದರಿಂದ ಮರು ಎಣಿಕೆಯೂ ನಡೆದಿತ್ತು. ಆದರೆ, ಮೊದಲು ಹೊರ ಬಿದ್ದಿದ್ದ ಫಲಿತಾಂಶಕ್ಕೂ, ಮೂರು ವರ್ಷಗಳ ನಂತರ ನಡೆದ ಮರು ಎಣಿಕೆಯ ಫಲಿತಾಂಶಕ್ಕೂ ವ್ಯತ್ಯಾಸ ಕಂಡುಬರದೇ ಜೆ.ಶಾಂತಾ ಅವರ ಸಂಸತ್‌ ಸದಸ್ಯತ್ವ ಅಬಾಧಿತವಾಗಿ ಮುಂದುವರಿದಿತ್ತು.

ಎರಡು ಚುನಾವಣೆಗಳಲ್ಲಿ ಗೆಲುವಿನ ರುಚಿ ಕಂಡಿರುವ ಬಿಜೆಪಿಗೆ, 2011ರ ನಂತರ ಕಂಡುಬಂದ ಬೆಳವಣಿಗೆಗಳಿಂದಾಗಿ ಜಿಲ್ಲೆ­­ಯಲ್ಲಿ ಅಸ್ತಿತ್ವವೇ ಇಲ್ಲದಂತಾಗಿದೆ. ಪಕ್ಷ ತ್ಯಜಿಸಿ ಪ್ರತ್ಯೇಕ ಪಕ್ಷ ಸ್ಥಾಪಿಸಿರುವ ಬಿ.ಶ್ರೀರಾಮುಲು ಅವರಿಗೇ ಮಣೆ ಹಾಕುತ್ತಿದೆ.
ಅತ್ತ, ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷವನ್ನು ಬಿಜೆಪಿ ಜತೆ ವಿಲೀನಗೊಳಿಸಲು ಹಾತೊರೆಯುತ್ತಿರುವ ಶ್ರೀರಾಮುಲು ಅವರಿಗೆ ಬಿಜೆಪಿಯೇ ಅನಿವಾರ್ಯ ಆಯ್ಕೆಯಾಗಿದೆ. ಆದರೆ ಒಂದು ಕಾಲದ ‘ಗಾಡ್‌ಮದರ್‌’ ಸುಷ್ಮಾ ಸ್ವರಾಜ್‌ ಅವರ ವಿರೋಧ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಚುನಾವಣೆ ಘೊಷಣೆಯಾದರೂ ಅಧಿಕೃತ ಅಭ್ಯರ್ಥಿ ಘೋಷಿಸ­ದಿರುವ ಬಿಜೆಪಿ, ಶ್ರೀರಾಮುಲು ಬರುವುದನ್ನು ಕಾದಂತಿದೆ. ಒಂದೊಮ್ಮೆ ಹೈಕಮಾಂಡ್‌ ಸಮ್ಮತಿ ಸೂಚಿಸ­ದಿದ್ದರೆ, ಕೊಪ್ಪಳ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿರುವ ಜಿಲ್ಲೆಯ ಸಿರುಗುಪ್ಪದ ಮಾಜಿ ಶಾಸಕ ಎಂ.ಎಸ್‌. ಸೋಮಲಿಂಗಪ್ಪ ಅವರಿಗೆ ಸ್ಪರ್ಧೆಗೆ ಅಣಿಯಾಗಿರುವಂತೆ ತಿಳಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಳೆದ ಚುನಾವಣೆಯಲ್ಲಿ ಜಯಿಸಿದ್ದ ಶಾಂತಾ, ಸೋದರನ ಪಕ್ಷದೊಂದಿಗೆ ಗುರುತಿಸಿ­ಕೊಂಡಿ­ರು­ವುದರಿಂದ ಮತ್ತೆ ಕಣಕ್ಕಿಳಿ­ಯುವ ಆಲೋಚನೆ­ಯನ್ನೇ ಕೈ­ಬಿಟ್ಟಿದ್ದಾರೆ. ಒಂದೊಮ್ಮೆ ಶ್ರೀರಾಮುಲು ಬಿಜೆಪಿ ಸೇರ್ಪಡೆ ಯತ್ನಕ್ಕೆ ಹಿನ್ನಡೆ­ಯಾಗಿ ತಾವು ಸ್ಥಾಪಿ­ಸಿ­­­ರುವ ಪಕ್ಷ­ದಿಂ­ದಲೇ ಕಣಕ್ಕಿಳಿ­ಯು­ವಂ­ತಾ­ದಲ್ಲಿ ಕ್ಷೇತ್ರದ ಸ್ಪರ್ಧಾ ಚಿತ್ರಣವೇ ಬದಲಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.