ಚನ್ನರಾಯಪಟ್ಟಣ: ಎಲ್ಲಾ ವರ್ಗದವರ ಹಿತ ಕಾಪಾಡುವ ನಾಯಕ ಈ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಸಂಸದ ಎಚ್.ಡಿ. ದೇವೇಗೌಡ ಹೇಳಿದರು.
ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ‘ಜೆಡಿಎಸ್ ಕಾರ್ಯ ಕರ್ತರ ಸಭೆ’ಯಲ್ಲಿ ಮಾತನಾಡಿದ ಅವರು, ದೇಶದ ಐಕ್ಯತೆ, ಸಮಗ್ರತೆ ಕಾಪಾಡುವ ಹೃದಯ ವೈಶಾಲ್ಯತೆ ನಾಯಕನಿಗಿರಬೇಕು. ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ, ಕಾಂಗ್ರೆಸ್‌ಗೆ ಪರ್ಯಾಯವಾಗಿ ಇತರೆ ರಾಜಕೀಯ ಪಕ್ಷಗಳು ಪ್ರಬಲ ವಾಗುತ್ತಿವೆ.
ಮಂಡ್ಯ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸೋತ ನಂತರ ಜೆಡಿಎಸ್ ಸಂಘಟನೆ ಕ್ಷೀಣಿಸಿತು ಎಂದು ವಿರೋಧಿಗಳು ಭಾವಿಸಿದ್ದಾರೆ. ಲಕ್ಷಾಂತರ ಕಾರ್ಯಕರ್ತರ ಬೆಂಬಲ ಇರುವರೆಗೆ ಇದು ಅಸಾಧ್ಯ ಎಂದರು.
ನರೇಂದ್ರ ಮೋದಿಗೆ ಈ ದೇಶವನ್ನು ಆಳಿದ ಅನುಭವವಿಲ್ಲ. ಎಲ್ಲಾ ವರ್ಗದವರ ಹಿತ ಕಾಪಾಡುವ ಶಕ್ತಿ ಇಲ್ಲ. ಗುಜರಾತ್ ರಾಜ್ಯದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಜನತೆ ಒಂದು ತಿಂಗಳು ಧರಣಿ ನಡೆಸಿದರೂ ಅತ್ತ ತಲೆಹಾಕಲಿಲ್ಲ. ಇಂಥ ನಾಯಕ ನನ್ನು ಕಾರ್ಪೋರೇಟ್ ವಲಯ ಪ್ರಧಾನಿಯನ್ನಾಗಿ ಬಿಂಬಿಸುತ್ತಿದೆ ಎಂದು ದೂರಿದ ಅವರು, ಇನ್ನೊಬ್ಬರ ಬಗ್ಗೆ ವಿನಾಕಾರಣ ಟೀಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ನರೇಂದ್ರ ಮೋದಿ ಅವರನ್ನು ಟೀಕಿಸಿದರು.
ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ತೃತೀಯರಂಗವನ್ನು ದೇಶದಲ್ಲಿ ಒಗ್ಗೂಡಿಸಿರುವ ದೇವೇಗೌಡ ಅವರು ಭವಿಷ್ಯದಲ್ಲಿ ಪ್ರಮಖ ಸ್ಥಾನ ಪಡೆಯಲಿದ್ದಾರೆ. ಇವರಿಗೆ ರಾಜಕೀಯ ಶಕ್ತಿ ತುಂಬಬೇಕು ಎಂದರು.
ಮುಖಂಡರಾದ ರಾಜಶೇಖರ್ ಮಾತನಾಡಿದರು. ಮುಖಂಡರಾದ ಪಟೇಲ್ ಶಿವರಾಂ, ಬಿ.ವಿ. ಕರೀಗೌಡ, ರಾಜೇಗೌಡ, ಅಂಬಿಕಾರಾಮಕೃಷ್ಣ, ಕುಸುಮಾ ಬಾಲಕೃಷ್ಣ, ದೇವಿಕಾ, ಹೇಮಾವತಿ ಕೃಷ್ಣನಾಯಕ್, ಶಿಲ್ಪಾ ಶ್ರೀನಿವಾಸ್, ಶಿವಶಂಕರ್‌ಕುಂಟೆ, ಬಿ.ಸಿ. ಮಂಜುನಾಥ್, ಪರಮದೇವರಾಜೇಗೌಡ, ವಿ.ಎನ್. ರಾಜಣ್ಣ, ಕೆಂಪನಂಜೇಗೌಡ ,ಸಿ.ಜಿ. ಮಂಜಣ್ಣ ಇತರರು ಇದ್ದರು.
ಕಣ್ಣೀರು ಸುರಿಸಿದ ದೇವೇಗೌಡ
ಚನ್ನರಾಯಪಟ್ಟಣ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ‘ಜೆಡಿಎಸ್ ಕಾರ್ಯಕರ್ತರ ಸಭೆ’ಯಲ್ಲಿ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.
ಹಾಸನ ಲೋಕಾಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಒಳ ಒಪ್ಪಂದವಾಗಿದೆ. ಸಕಲೇಶಪುರದಲ್ಲಿ ಈಚೆಗೆ ಬಿಜೆಪಿ , ಕಾಂಗ್ರೆಸ್ ನಾಯಕರು ಸೇರಿ ಚರ್ಚಿಸಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದ ಅವರು, ಜೆಡಿಎಸ್ ಕಾರ್ಯಕರ್ತರ ಬೆಂಬಲ ಇರುವರೆಗೆ ಯಾರಿಗೂ ಹೆದರುವುದಿಲ್ಲ ಎಂದರು. ಒಂದು ಹಂತದಲ್ಲಿ ಭಾವೋದ್ವೇಗಕ್ಕೆ ಒಳಗಾಗಿ ಗದ್ಗದಿತರಾಗಿ ಕಣ್ಣೀರಿಟ್ಟರು. ನಂತರ ಸಾವರಿಸಿಕೊಂಡು ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ನೀರಾವರಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ದೊರಕಿಸುತ್ತಿಲ್ಲ. ಇವರಿಗೆ ಇದರ ಇತಿಹಾಸ ಗೊತ್ತಿದೆಯೇ ಎಂದು ಪ್ರಶ್ನಿಸಿದರು.
‘ನೀವು’ ಅಳಬೇಡಿ. ’ನಿಮ್ಮ’ ಬೆಂಬಲಕ್ಕೆ ನಾವಿದ್ದೇವೆ ಎಂದು ಕಾರ್ಯಕರ್ತರು ಧೈರ್ಯ ತುಂಬಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.