ADVERTISEMENT

ಸೋತ ವ್ಯಕ್ತಿ ಚಿತ್ರದುರ್ಗದ BJP ಅಭ್ಯರ್ಥಿ: ಆಕಾಂಕ್ಷಿಯಾಗಿದ್ದ ರಘುಚಂದನ್‌ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 7:22 IST
Last Updated 28 ಮಾರ್ಚ್ 2024, 7:22 IST
ರಘುಚಂದನ್
ರಘುಚಂದನ್   

ಚಿತ್ರದುರ್ಗ: ತೀವ್ರ ಕುತೂಹಲ ಕೆರಳಿಸಿದ್ದ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಘೋಷಣೆಯಾದ ಬೆನ್ನಲ್ಲೇ ಕ್ಷೇತ್ರದಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಟಿಕೆಟ್‌ ಸಿಗುವ ಹುಮ್ಮಸ್ಸಿನಲ್ಲಿದ್ದ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ಎಂ.ಸಿ.ರಘುಚಂದನ್‌ ಗುರುವಾರ ಬಹಿರಂಗವಾಗಿ ಪಕ್ಷದ ನಡೆ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಆಕ್ರೋಶ ಹೊರಹಾಕಿದರು.

‘ಪಕ್ಷದ ಹೈಕಮಾಂಡ್ ಗೋವಿಂದ ಕಾರಜೋಳ ಅವರನ್ನು ಕಣಕ್ಕಿಳಿಸಿರುವುದು ಖಂಡನೀಯ. ಶುಕ್ರವಾರ ಬೆಂಬಲಿಗರ ಸಭೆ ಕರೆದು ಮುಂದಿನ ತೀರ್ಮಾನ ಪ್ರಕಟಿಸಲಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ಚಿತ್ರದುರ್ಗ ಆಶ್ರಯ ಇಲ್ಲದವರಿಗೆ ನಿರಾಶ್ರಿತರ ಕೇಂದ್ರ ಆಗಿದೆ. ಮೂಡಿಗೆರೆ, ಆನೇಕಲ್‌ ಸೋತವರನ್ನು ಸಂಸದರನ್ನಾಗಿ ಮಾಡಲಾಗಿದೆ. ಇದೀಗ ಮುಧೋಳದಲ್ಲಿ ಸೋತ ವ್ಯಕ್ತಿಯನ್ನು ಕರೆತಂದು ಅಭ್ಯರ್ಥಿ ಮಾಡಿದ್ದಾರೆ. ಗಂಡು ಮೆಟ್ಟಿದ ನಾಡಲ್ಲಿ ಗಂಡಸರೇ ಇಲ್ಲವಾ?' ಎಂದು ಅವರು ಪ್ರಶ್ನಿಸಿದರು.

‘ಪಕ್ಷದ ತೀರ್ಮಾನ ನಿಜಕ್ಕೂ ಮನಸ್ಸಿಗೆ ತುಂಬಾ ನೋವು ತಂದಿದೆ. ಪಕ್ಷ ಯಾರಿಗೆ ಕೊಟ್ಟರು ಸ್ಥಳೀಯ ಅಭ್ಯರ್ಥಿಗೆ ಮನ್ನಣೆ ನೀಡಬೇಕಿತ್ತು. ಮತ ಹಾಕಲು ಮಾತ್ರ ಕಾರ್ಯಕರ್ತರು ಬೇಕು ಆದರೆ ಅಧಿಕಾರಕ್ಕೆ ಮಾತ್ರ ಬೇಡ್ವಾ?. ಇದು ಚಿತ್ರದುರ್ಗ ಸ್ವಾಭಿಮಾನದ ಪ್ರಶ್ನೆ, ಸಭೆ ಬಳಿಕ ಮುಂದಿನ ಹೆಜ್ಜೆ ಇಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.