ADVERTISEMENT

ವರುಣ ತಾಲ್ಲೂಕು ಕೇಂದ್ರವಾಗಲಿದೆ: ಸಿಎಂ ಬಸವರಾಜ ಬೊಮ್ಮಾಯಿ ಭರವಸೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2023, 12:39 IST
Last Updated 17 ಏಪ್ರಿಲ್ 2023, 12:39 IST
ವರುಣ ಕ್ಷೇತ್ರದಲ್ಲಿ ವಿ.ಸೋಮಣ್ಣ ನಾಮಪತ್ರ ಸಲ್ಲಿಕೆ ವೇಳೆ ನಡೆದ ರೋಡ್‌ ಶೋ
ವರುಣ ಕ್ಷೇತ್ರದಲ್ಲಿ ವಿ.ಸೋಮಣ್ಣ ನಾಮಪತ್ರ ಸಲ್ಲಿಕೆ ವೇಳೆ ನಡೆದ ರೋಡ್‌ ಶೋ   

ಮೈಸೂರು: ‘ಮುಂದೆ ನಮ್ಮದೇ ಸರ್ಕಾರ ಬರುತ್ತದೆ. ನಮ್ಮ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲೇ ವರುಣಕ್ಕೆ ತಾಲ್ಲೂಕು ಕೇಂದ್ರ ಘೋಷಿಸಿ, ಕಚೇರಿಯನ್ನೂ ಮಂಜೂರು ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ವಿ.ಸೋಮಣ್ಣ ನಾಮಪತ್ರ ಸಲ್ಲಿಕೆಗೆ ಮುನ್ನ ನಂಜನಗೂಡು–ಚಾಮರಾಜನಗರ ರಸ್ತೆಯ ಗೋಳೂರು ವೃತ್ತದ ಸಮೀಪ ಸೋಮವಾರ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ವರುಣ ಕ್ಷೇತ್ರಕ್ಕೆ ತಾಲ್ಲೂಕು ಕೇಂದ್ರವೇ ಇಲ್ಲ ಎಂದು ಕೇಳಿ ಬಹಳ ಅಚ್ಚರಿಯಾಯಿತು. ಮುಂಚೆಯೇ ಹೇಳಿದ್ದರೆ, ತಾಲ್ಲೂಕು ಕೇಂದ್ರವೆಂದು ಮಾಡಿಯೇ ಇಲ್ಲಿಗೆ ಬರುತ್ತಿದೆ’ ಎಂದರು.

ADVERTISEMENT

‘2008ರಿಂದಲೂ ವರುಣ ಕ್ಷೇತ್ರವಾಗಿದೆ. ಆದರೆ, ಮಹಾನಾಯಕರು ಇದ್ದರೂ ತಾಲ್ಲೂಕು ಕೇಂದ್ರ ಆಗಿಲ್ಲ. ಜನರು ಮೈಸೂರು, ನಂಜನಗೂಡು ಹಾಗೂ ತಿ.ನರಸೀ‍ಪುರಕ್ಕೆ ಅಲೆದಾಡಬೇಕಾಗಿದೆ. ಇದೆಂತಹ ವ್ಯವಸ್ಥೆ? ಇದನ್ನು ಬದಲಾಯಿಸಬೇಕಿದೆ. ಇದಕ್ಕಾಗಿಯೇ ಸೋಮಣ್ಣ ಅವರನ್ನು ವರಿಷ್ಠರು ಕಳುಹಿಸಿಕೊಟ್ಟಿದ್ದಾರೆ’ ಎಂದರು.

ವಿಕ್ಟರಿ ಸೋಮಣ್ಣ:

‘ಇಲ್ಲಿ ಸೇರಿರುವ ಜನಸಾಗರವನ್ನು ನೋಡಿ ವರುಣ ವರ್ಣಮಯವಾಗಿರುವುದು ಸಾಬೀತಾಗಿದೆ. ಇಷ್ಟು ವರ್ಷ ವರುಣ ಹೆಸರು ಮೈಸೂರು ಜಿಲ್ಲೆ ದಾಟಿ ಹೋಗಿರಲೇ ಇಲ್ಲ. ಒಬ್ಬ ವ್ಯಕ್ತಿ–ಶಕ್ತಿ (ವಿ.ಸೋಮಣ್ಣ) ಬಂದಿದ್ದರಿಂದ ದೇಶದಾದ್ಯಂತ ಪ್ರಸಿದ್ಧಿ ಗಳಿಸಿದೆ. ವಿ.ಸೋಮಣ್ಣ ಎಂದರೆ ವಿಕ್ಟರಿ (ಜಯ) ಸೋಮಣ್ಣ’ ಎಂದು ಹೇಳಿದರು.

‘ರಾಜ್ಯದಲ್ಲಿ ಹಲವರು ದೀನ–ದಲಿತರ, ಹಿಂದುಳಿದ ವರ್ಗದವರ ಹೆಸರು ಹೇಳಿ ಅಧಿಕಾರ ಪಡೆದು ಹಿಂದುಳಿದವರನ್ನು ಹಿಂದೆ ಇಟ್ಟು ತಾವು ಮುಂದೆ ಹೋಗಿದ್ದಾರೆ. ಹಿಂದುಳಿದ ವರ್ಗದವರು ಹಾಗೂ ಪರಿಶಿಷ್ಟರಿಗೆ ಅನ್ಯಾಯ ಮಾಡಿದ್ದಾರೆ. ಇದು ಬದಲಾಗಬೇಕು. ಕೇವಲ ಭಾಷಣದಿಂದ ಸಾಮಾಜಿಕ ನ್ಯಾಯ, ಅನ್ನ, ನ್ಯಾಯ–ಗೌರವ ಸಿಗುವುದಿಲ್ಲ. ಕಾಂಗ್ರೆಸ್‌ನವರೇ ದೀನದಲಿತರಿಗೆ ಏನು ಕೊಟ್ಟಿದ್ದೀರಿ?’ ಎಂದು ಆಕ್ರೋಶದಿಂದ ಕೇಳಿದರು.

ಅಕ್ಕಿ ಬ್ಲಾಕ್‌ ಮಾರ್ಕೆಟ್‌ ದಂಧೆಗೆ ಹೋಗುತ್ತಿದೆ:

‘ಅನ್ನಭಾಗ್ಯದ ಅಕ್ಕಿ ಪ್ರಧಾನಿ ನರೇಂದ್ರ ಮೋದಿ ಅವರದ್ದು. ಗೋಣಿಚೀಲ ಮಾತ್ರ ಸಿದ್ದರಾಮಣ್ಣನದ್ದು. 2013ರಲ್ಲಿ ಪ್ರತಿಯೊಬ್ಬರಿಗೂ 10 ಕೆ.ಜಿ. ಅಕ್ಕಿ ಕೊಡುತ್ತಿದ್ದೆವು. ಇವರು ಬಂದ ಮೇಲೆ 2014ರಿಂದ 5 ಕೆ.ಜಿ.ಗೆ ಇಳಿಸಿದ್ದರು. ಚುನಾವಣೆ ಹತ್ತಿರ ಬಂದಾಗ 2 ಕೆ.ಜಿ. ಹೆಚ್ಚಿಸಿದರು. ಇವರು ಬರುವುದಕ್ಕೆ ಮುಂಚೆ ಅಕ್ಕಿಯೇ ಇರಲಿಲ್ಲವಾ, ಅನ್ನವೇ ಇರಲಿಲ್ಲವಾ? ಅನ್ನಭಾಗ್ಯದ ಅಕ್ಕಿ ಬಡವರ ಮನೆಗೆ ಹೋಗುತ್ತಿಲ್ಲ. ಬ್ಲಾಕ್‌ ಮಾರ್ಕೆಟ್ ದಂಧೆ ಮಾಡುತ್ತಿರುವವರ ಮಿಲ್‌ಗಳಿಗೆ ಹೋಗುತ್ತಿದೆ. ಪಾಲಿಶ್ ಆಗಿ ಮತ್ತೆ ಹೋಟೆಲ್‌ಗಳಿಗೆ ಬರುತ್ತಿದೆ. ಅನ್ನಭಾಗ್ಯ ಬಡವರಿಗೆ ದೌರ್ಭಾಗ್ಯವಾಗಿ, ಬ್ಲಾಕ್‌ ಮಾರ್ಕೆಟ್‌ನವರಿಗೆ ಸೌಭಾಗ್ಯವಾಗಿದೆ. ಇದು ಕಾಂಗ್ರೆಸ್‌ನ ನೀತಿ’ ಎಂದು ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್‌ ಸರ್ಕಾರವಿದ್ದಾಗ ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರವಿತ್ತು. ನೀರಾವರಿ ಇಲಾಖೆಯಲ್ಲಿ ಕೆಲಸವನ್ನೇ ಮಾಡದೆ ಬಿಲ್‌ ತೆಗೆದಿದ್ದರು. ಎಲ್ಲೆಡೆ ಭ್ರಷ್ಟಾಚಾರವೇ ಅವರ ಆಡಳಿತವಾಗಿತ್ತು. ಈಗ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಕೆಲಸ ಮಾಡದೇ ಬಿಲ್‌ ತೆಗೆದಿರುವುದು ಲೋಕಾಯುಕ್ತದಲ್ಲಿ ತನಿಖಾ ಹಂತದಲ್ಲಿದೆ. ಅವರ ಸರ್ಕಾರವಿದ್ದಾಗ ಶೇ. 100ರಷ್ಟು ಕಮಿಷನ್‌ ವ್ಯವಹಾರವಿತ್ತು’ ಎಂದು ದೂರಿದರು.

‘ಕೆಲವು ನಾಯಕರು ನಮ್ಮ ಪಕ್ಷ ಬಿಟ್ಟು ಹೋಗಿದ್ದಾರೆ. ಆ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.ಮತದಾರರು ಬಿಟ್ಟು ಹೋಗಿಲ್ಲ. ನಮ್ಮಿಂದ ಬಿಟ್ಟು ಹೋದವರ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಭ್ಯರ್ಥಿ ವಿ.ಸೋಮಣ್ಣ, ಸಂಸದರಾದ ವಿ.ಶ್ರೀನಿವಾಸ‍ ಪ್ರಸಾದ್, ಪ್ರತಾಪ ಸಿಂಹ ಇದ್ದರು.

ಕಟ್ಟಿ ಹಾಕುವುದು ಗೊತ್ತಿದೆ

ಹದ್ದು ಮೇಲೆಲ್ಲಾ ಹಾರಾಡಿ ಕೊನಗೆ ಕಾಳು ತಿನ್ನಲು ಭೂಮಿಗೆ ಇಳಿಯುವಂತೆ ವರುಣಕ್ಕೆ ಬಂದಿರುವ ಸಿದ್ದರಾಮಯ್ಯ ಅವರನ್ನು ಈ ಚುನಾವಣೆಯಲ್ಲಿ ಹೇಗೆ ಕಟ್ಟಿ ಹಾಕಬೇಕು ಎಂಬುದು ನಮಗೆ ಗೊತ್ತಿದೆ.

–ವಿ.ಶ್ರೀನಿವಾಸ ಪ್ರಸಾದ್, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.